ಪದ್ಯ ೫: ಯುಧಿಷ್ಠಿರನು ಭೀಮನನ್ನು ಎಲ್ಲಿ ಭೇಟಿಯಾದನು?

ಸೆಳೆದು ತಕ್ಕೈಸಿದನು ತಾವರೆ
ಗೊಳದ ತೋಟಿಯ ಹದಕೆ ಕಂಪಿಸಿ
ಬಳಿಕ ಕಪಿದರ್ಶನದ ಕೌತೂಹಲಕೆ ಭುಲ್ಲವಿಸಿ
ನಳಿನಗಂಧದ ಗಾಢತರ ಸುಖ
ದೊಳಗೆ ಹೊಂಪುಳಿಯೋಗಿ ಭೂಪತಿ
ತಿಲಕನಿದ್ದನು ಗಂಧಮಾದನ ಗಿರಿಯ ತಪ್ಪಲಲಿ (ಅರಣ್ಯ ಪರ್ವ, ೧೨ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮಜನು ಭೀಮನನ್ನು ನೋಡಿ ಸೆಳೆದು ಪ್ರೀತಿಯಿಂದ ತಬ್ಬಿಕೊಂಡು ನಡೆದುದನ್ನು ಕೇಳಿದನು, ಸರೋವರದಲ್ಲಿ ನಡೆದ ಕದನವನ್ನು ಕೇಳಿ ನಡುಗಿ, ಹನುಮನ ದರ್ಶನದ ವಿವರವನ್ನು ಕೇಳಿ ಆಶ್ಚರ್ಯಭರಿತನಾದನು. ಸೌಗಂಧಿಕ ಪುಷ್ಪ ಪರಿಮಳವನ್ನು ಆಘ್ರಾಣಿಸಿ ಸುಖದಿಂದ ಹಿಗ್ಗಿದನು, ಆಗ ಅವರು ಗಂಧಮಾದನ ಗಿರಿಯ ತಪ್ಪಲಲ್ಲಿದ್ದರು.

ಅರ್ಥ:
ಸೆಳೆ: ಜಗ್ಗು, ಎಳೆ, ಆಕರ್ಷಿಸು; ತಕ್ಕೆ: ಅಪ್ಪುಗೆ, ಆಲಿಂಗನ; ತಾವರೆ: ಕಮಲ; ಕೊಳ: ಸರೋವರ; ತೋಟಿ: ಕಾದಾಟ; ಹದ: ಸ್ಥಿತಿ, ರೀತಿ; ಕಂಪಿಸು: ನಡುಗು; ಬಳಿಕ: ನಂತರ; ಕಪಿ: ಹನುಮ; ದರ್ಶನ: ನೋಟ; ಕೌತೂಹಲ: ಆಶ್ಚರ್ಯ; ಭುಲ್ಲವಿಸು: ಉತ್ಸಾಹಗೊಳ್ಳು; ನಳಿನ: ಕಮಲ; ಗಂಧ: ಸುವಾಸನೆ; ಗಾಢ: ಹೆಚ್ಚಳ, ಅತಿಶಯ; ಸುಖ: ನೆಮ್ಮದಿ, ಸಂತಸ; ಹೊಂಪುಳಿ: ಹಿಗ್ಗು, ಸಂತೋಷ; ಭೂಪತಿ: ರಾಜ; ತಿಲಕ: ಶ್ರೇಷ್ಠ;

ಪದವಿಂಗಡಣೆ:
ಸೆಳೆದು+ ತಕ್ಕೈಸಿದನು+ ತಾವರೆ
ಕೊಳದ +ತೋಟಿಯ +ಹದಕೆ +ಕಂಪಿಸಿ
ಬಳಿಕ +ಕಪಿ+ದರ್ಶನದ+ ಕೌತೂಹಲಕೆ+ ಭುಲ್ಲವಿಸಿ
ನಳಿನ+ಗಂಧದ +ಗಾಢತರ+ ಸುಖ
ದೊಳಗೆ+ ಹೊಂಪುಳಿಯೋಗಿ +ಭೂಪತಿ
ತಿಲಕನಿದ್ದನು +ಗಂಧಮಾದನ+ ಗಿರಿಯ +ತಪ್ಪಲಲಿ

ಅಚ್ಚರಿ:
(೧) ಪ್ರೀತಿಯನ್ನು ತೋರಿಸುವ ಪರಿ – ಸೆಳೆದು ತಕ್ಕೈಸಿದನು

ಪದ್ಯ ೨೦: ಯುಧಿಷ್ಠಿರನು ಯಾವ ಅರಣ್ಯಪ್ರದೇಶಕ್ಕೆ ಬಂದನು?

ಅರಸಬಂದನು ಗಂಧಮಾದನ
ಗಿರಿಯತಪ್ಪಲಿಗಗ್ನಿಹೋತ್ರದ
ಪರಮಋಷಿಗಳು ಮಡದಿ ಸಕಲ ನಿಯೋಗಿ ಜನಸಹಿತ
ಸರಸಿನೆರೆಯವು ಸ್ನಾನಪಾನಕೆ
ತರುಲತಾವಳಿಗಳು ಯುಧಿಷ್ಠಿರ
ನರಮನೆಯ ಸೀವಟಕೆ ಸಾಲವು ನೃಪತಿ ಕೇಳೆಂದ (ಅರಣ್ಯ ಪರ್ವ, ೧೦ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜನಮೇಜಯ ಕೇಳು, ಯುಧಿಷ್ಠಿರನು ಗಂಧಮಾದನ ಗಿರಿಯ ತಪ್ಪಲಿಗೆ ಅಗ್ನಿಹೋತ್ರಿಗಳಾದ ಬ್ರಾಹ್ಮಣರು, ದ್ರೌಪದಿ ಮತ್ತು ನಿಯೋಗಿಗಳೊಡನೆ ಬಂದನು. ಅಲ್ಲಿನ ಸರೋವರಗಳು ಆ ಸಮೂಹಕ್ಕೆ ಸ್ನಾನಪಾನಗಳಿಗೆ ಸಾಕಾಗಲಿಲ್ಲ. ಅಲ್ಲಿನ ಮಗರಿಡಗಳು ಧರ್ಮರಾಯನ ಪರಿವಾರದವರಿಗೆ ಸಾಕಾಗಲಿಲ್ಲ.

ಅರ್ಥ:
ಅರಸ: ರಾಜ; ಬಂದನು: ಆಗಮಿಸು; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಪಕ್ಕದ ಪ್ರದೇಶ; ಅಗ್ನಿಹೋತ್ರ: ಅಗ್ನಿಯನ್ನು ಉದ್ದೇಶಿಸಿ ಮಾಡುವ ಹೋಮ; ಪರಮ: ಶ್ರೇಷ್ಠ; ಋಷಿ: ಮುನಿ; ಮಡದಿ: ಹೆಂದತಿ; ಸಕಲ: ಎಲ್ಲಾ; ನಿಯೋಗ: ಸೇರು, ಕೆಲಸ; ಸಹಿತ: ಜೊತೆ; ಸರಸಿ: ನೀರು; ಸ್ನಾನ: ಅಭ್ಯಂಜನ; ಪಾನ: ಕುಡಿ; ತರು: ಮರ; ಲತೆ: ಬಳ್ಳಿ; ಆವಳಿ: ಸಾಲು; ಅರಮನೆ: ಆಲಯ; ಸೀವಟ: ಹಿಂಡು, ಹಣ್ಣಿನ ರಸ; ಸಾಲವು: ಕಡಿಮೆಯಾಗು; ನೃಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸ+ಬಂದನು +ಗಂಧಮಾದನ
ಗಿರಿಯ+ತಪ್ಪಲಿಗ್+ಅಗ್ನಿಹೋತ್ರದ
ಪರಮ+ಋಷಿಗಳು +ಮಡದಿ +ಸಕಲ +ನಿಯೋಗಿ +ಜನಸಹಿತ
ಸರಸಿನೆರೆಯವು +ಸ್ನಾನ+ಪಾನಕೆ
ತರು+ಲತಾವಳಿಗಳು +ಯುಧಿಷ್ಠಿರನ್
ಅರಮನೆಯ+ ಸೀವಟಕೆ +ಸಾಲವು +ನೃಪತಿ +ಕೇಳೆಂದ

ಅಚ್ಚರಿ:
(೧) ಅರಸ, ನೃಪತಿ – ಸಮನಾರ್ಥಕ ಪದ

ಪದ್ಯ ೧೯: ಧರ್ಮಜನು ಯಾವ ವನಕ್ಕೆ ಹೊರಟನು?

ಕೇಳಲಷ್ಟಾವಕ್ರ ಚರಿತವ
ಹೇಳಿದನು ಲೋಮಶ ಮುನೀಂದ್ರ ನೃ
ಪಾಲಕಂಗರುಹಿದನು ಪೂರ್ವಾಪರದ ಸಂಗತಿಯ
ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು ಗಂಧಮಾದನ
ಶೈಲವನದಲಿ ವಾಸವೆಂದವನೀಶ ಹೊರವಂಟ (ಅರಣ್ಯ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಅಷ್ಟಾವಕ್ರನ ಚರಿತ್ರೆಯನ್ನು ಹೇಳೆಂದು ಕೇಳಲು ಲೋಮಶನು ಆ ಕಥೆಯನ್ನೆಲ್ಲವನ್ನೂ ಹೇಳಿದನು. ಪಾಂಡವರಿದ್ದ ಅಡವಿಯಲ್ಲಿ ಹಣ್ಣು ಹೂವುಗಳು ಪಕ್ಷಿ ಮೃಗಗಳು ಸವೆದು ಹೋಗಲು, ಗಂಧಮಾದನಗಿರಿಯ ವನಕ್ಕೆ ಹೋಗೋಣವೆಂದು ಧರ್ಮಜನು ಹೊರಟನು.

ಅರ್ಥ:
ಕೇಳು: ಆಲಿಸು; ಚರಿತ: ಕಥೆ; ಮುನಿ: ಋಷಿ; ನೃಪಾಲ: ರಾಜ; ಅರುಹು: ತಿಳಿಸು, ಹೇಳು; ಪೂರ್ವಾಪರ: ಹಿಂದು ಮುಂದು; ಸಂಗತಿ: ವಿಷಯ; ಭಾಳಡವಿ: ದೊಡ್ಡ ಕಾಡು; ಬಯಲು: ಬರಿದಾದ ಜಾಗ; ಖಗ: ಪಕ್ಷಿ; ಮೃಗ: ಪ್ರಾಣಿ; ಜಾಲ: ಗುಂಪು; ಸವೆ: ಉಂಟಾಗು; ಶೈಲ: ಬೆಟ್ಟ; ವಾಸ: ಜೀವಿಸು; ಅವನೀಶ: ರಾಜ; ಹೊರವಂಟ: ತೆರಳು;

ಪದವಿಂಗಡಣೆ:
ಕೇಳಲ್+ಅಷ್ಟಾವಕ್ರ +ಚರಿತವ
ಹೇಳಿದನು +ಲೋಮಶ +ಮುನೀಂದ್ರ +ನೃ
ಪಾಲಕಂಗ್+ಅರುಹಿದನು +ಪೂರ್ವಾಪರದ+ ಸಂಗತಿಯ
ಭಾಳಡವಿ+ ಬಯಲಾಯ್ತು +ಖಗ+ಮೃಗ
ಜಾಲ +ಸವೆದುದು +ಗಂಧಮಾದನ
ಶೈಲವನದಲಿ +ವಾಸವೆಂದ್+ಅವನೀಶ +ಹೊರವಂಟ

ಅಚ್ಚರಿ:
(೧) ಅಡವಿಯು ಬರಡಾಯಿತು ಎಂದು ಹೇಳಲು – ಭಾಳಡವಿ ಬಯಲಾಯ್ತು ಖಗಮೃಗ
ಜಾಲ ಸವೆದುದು

ಪದ್ಯ ೪೫: ಕೈಲಾಸ ಪರ್ವತವು ಎಲ್ಲಿದೆ?

ದೇವಕೂಟದ ಜಠರವೆಂಬಿವು
ಭಾವಿಸಲು ಮಾಲ್ಯವತದಿಕ್ಕೆಲ
ನಾವಿಧದಿ ಕೈಲಾಸ ಪರ್ವತ ಗಂಧಮಾದನವು
ಭೂವಳಯದಲಿ ಪುಣ್ಯವಂತರು
ಭಾವಿಸುವೊಡಾ ಈಶ ದಿಕ್ಕಿನ
ದೀವಕೂಟಡ ನಿಕರ ಪಡುವಣ ಗಿರಿಯ ಪ್ರಾಂತ್ಯದಲಿ (ಅರಣ್ಯ ಪರ್ವ, ೮ ಸಂಧಿ, ೪೫ ಪದ್ಯ)

ತಾತ್ಪರ್ಯ:
ಮಾಲ್ಯವಂತ ಪರ್ವತದ ಎರಡು ಕಡೆಯೂ ದೇವ್ಕೂಟದ ಜಠರದಂತಿರುವ ಕೈಲಾಸ ಗಂಧಮಾದನವೆಂಬ ಪರ್ವತಗಳಿವೆ. ದೇವಗಿರಿಯ ಈಶಾನ್ಯ ದಿಕ್ಕಿನಲ್ಲಿ ಪುಣ್ಯವಂತರು ಸೇರುವ ಗಿರಿಗಳ ಪ್ರಾಂತ್ಯವಿದೆ.

ಅರ್ಥ:
ದೇವ: ಸುರರು; ಕೂಟ: ಗುಂಪು; ಜಠರ: ಹೊಟ್ಟೆ; ಭಾವಿಸು: ತಿಳಿ; ಇಕ್ಕೆಲ: ಎರಡು ಕಡೆ; ಭೂವಳಯ: ಭೂಪ್ರದೇಶ; ಪುಣ್ಯ: ಸದಾಚಾರ; ಭಾವಿಸು: ತಿಳಿ, ಗೊತ್ತುಪಡಿಸಿಕೊಳ್ಳು; ಈಶನ್ಯ:ಉತ್ತರದಿಕ್ಕಿಗೂ ಪೂರ್ವ ದಿಕ್ಕಿಗೂ ಮಧ್ಯೆ ಇರುವ ದಿಕ್ಕು; ಈಶ: ಒಡೆಯ; ದಿಕ್ಕು: ದಿಶೆ; ದೇವಕೂಟ: ಸುರರ ಗುಂಪು; ನಿಕರ: ಗುಂಪು; ಪಡುವಣ: ಪಶ್ಚಿಮ; ಗಿರಿ: ಬೆಟ್ಟ; ಪ್ರಾಂತ್ಯ: ರಾಜ್ಯ;

ಪದವಿಂಗಡಣೆ:
ದೇವಕೂಟದ +ಜಠರವೆಂಬಿವು
ಭಾವಿಸಲು +ಮಾಲ್ಯವತದ್+ಇಕ್ಕೆಲ
ನಾವಿಧದಿ+ ಕೈಲಾಸ +ಪರ್ವತ +ಗಂಧಮಾದನವು
ಭೂವಳಯದಲಿ+ ಪುಣ್ಯವಂತರು
ಭಾವಿಸುವೊಡ್+ಆ+ ಈಶ+ ದಿಕ್ಕಿನ
ದೇವಕೂಟಡ +ನಿಕರ +ಪಡುವಣ+ ಗಿರಿಯ +ಪ್ರಾಂತ್ಯದಲಿ

ಅಚ್ಚರಿ:
(೧) ದೇವಕೂಟ – ೧, ೬ ಸಾಲಿನ ಮೊದಲ ಪದ
(೨) ಕೈಲಾಸ ಪರ್ವತದ ವಿವರ – ಮಾಲ್ಯವತದಿಕ್ಕೆಲನಾವಿಧದಿ ಕೈಲಾಸ ಪರ್ವತ ಗಂಧಮಾದನವು

ಪದ್ಯ ೩೮: ಕೀಲಕಾದ್ರಿಗಳಾವುವು?

ಮಂದರಾಚಲ ಮೂಡ ತೆಂಕಲು
ಗಂಧಮಾದನ ವಿಮಳ ಪಶ್ಚಿಮ
ದಿಂದ ಬಡಗ ಸುಪಾರ್ಶ್ವವೆಂಬಿವು ಕೀಲಕಾದ್ರಿಗಳು
ನಂದನವು ಬಡಗಣದು ಪಡುವಣ
ಚಂದವಹ ವೈಭ್ರಾಜ ತೆಂಕಲು
ಗಂಧಮಾದನ ಚೈತ್ರರಥ ಮೂಡಣದು ಕೇಳೆಂದ (ಅರಣ್ಯ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಮಂದರಾಚಲವು ಪೂರ್ವಕ್ಕೆ, ಗಂಧಮಾದನ ದಕ್ಷಿಣಕ್ಕೆ, ವಿಮಲಾದ್ರಿಯು ಪಶ್ಛಿಮಕ್ಕೆ ಮತ್ತು ಸುಪಾರ್ಶ್ವ ಗಿರಿಯು ಉತ್ತರಕ್ಕೆ , ಇವೇ ಕೀಲಾದ್ರಿಗಳು, ಇದರೊಂದಿಗೆ ಉತ್ತರದಲ್ಲಿ ನಂದನ, ಪಶ್ಚಿಮದಲ್ಲಿ ವಿಅಭ್ರಾಜ, ದಕ್ಷಿಕ್ಕೆ ಗಂಧಮಾದನ ಮತ್ತು ಪೂರ್ವದಲ್ಲಿ ಚೈತ್ರರಥವೆಂಬ ಉದ್ಯಾನಗಳಿವೆ.

ಅರ್ಥ:
ಅಚಲ: ಬೆಟ್ಟ; ಮೂಡಣ: ಪೂರ್ವ; ತೆಂಕಲ: ದಕ್ಷಿಣ; ಬಡಗಲು: ಉತ್ತರ; ಅದ್ರಿ: ಬೆಟ್ಟ; ಪಡುವಣ: ಪಶ್ಚಿಮ; ನ

ಪದವಿಂಗಡಣೆ:
ಮಂದರಾಚಲ+ ಮೂಡ +ತೆಂಕಲು
ಗಂಧಮಾದನ +ವಿಮಳ +ಪಶ್ಚಿಮ
ದಿಂದ +ಬಡಗ +ಸುಪಾರ್ಶ್ವವೆಂಬಿವು+ ಕೀಲಕಾದ್ರಿಗಳು
ನಂದನವು +ಬಡಗಣದು +ಪಡುವಣ
ಚಂದವಹ+ ವೈಭ್ರಾಜ +ತೆಂಕಲು
ಗಂಧಮಾದನ +ಚೈತ್ರರಥ+ ಮೂಡಣದು +ಕೇಳೆಂದ

ಅಚ್ಚರಿ:
(೧) ಕೀಲಾದ್ರಿಗಳ ಹೆಸರು – ಮಂದರ, ಗಂಧಮಾದನ, ವಿಮಳ, ಸುಪಾರ್ಶ್ವ

ಪದ್ಯ ೪೮: ಸಮುದ್ರತೀರದಿಂದ ಅರ್ಜುನನ ಸೈನ್ಯ ಎಲ್ಲಿಗೆ ಹೊರಟಿತು?

ಎಡಕಡೆಯಲೊಂಬತ್ತು ಸಾವಿರ
ನಡುನೆಲನನಾಕರಿಸಿ ಮೂಡಣ
ಕಡೆಗೆ ತಿರುಗಿತು ಗಂಧಮಾದನ ಗಿರಿಯನೇರಿಳಿದು
ನಡೆದಿಳಾವೃತದೊಳಗೆ ಬಿಟ್ಟುದು
ಪಡೆಸುರಾದ್ರಿಯನುಳುಹಿ ಬಲದಲಿ
ನಡೆಯಲತಿದೂರದಲಿ ಕಂಡರು ಮಂದರಾಚಲವ (ಸಭಾ ಪರ್ವ, ೩ ಸಂಧಿ, ೪೮ ಪದ್ಯ)

ತಾತ್ಪರ್ಯ:
ಎಡಪಕ್ಕದಲ್ಲಿ ಒಂಬತ್ತು ಸಾವಿರ ಯೋಜನ ಪ್ರದೇಶದಲ್ಲಿ ಹಣವನ್ನು ತೆಗೆದುಕೊಂಡು ಪೂರ್ವಕ್ಕೆ ತಿರುಗಿ ಗಂಧಮಾದನ ಪರ್ವತವನ್ನು ಹತ್ತಿ ಇಳಿದು, ಇಳಾವೃತಕ್ಕೆ ಬಂದು, ಪರ್ವತವನ್ನು ಬಿಟ್ಟು ಬಲಕ್ಕೆ ಹೋಗಿ, ದೂರದಲ್ಲಿ ಮಂದರ ಪರ್ವತವನ್ನು ನೋಡಿದರು.

ಅರ್ಥ:
ಎಡ: ವಾಮಭಾಗ; ಸಾವಿರ: ಸಹಸ್ರ; ನಡು: ಮಧ್ಯೆ; ನೆಲ: ಭೂಮಿ; ಆಕರಿಸು: ಸಂಗ್ರಹಿಸು; ಮೂಡಣ: ಪೂರ್ವ; ಕಡೆ:ಪಕ್ಕ, ಕೊನೆ; ತಿರುಗು: ಸುತ್ತು; ಗಿರಿ: ಬೆಟ್ಟ; ಏರು: ಹತ್ತು; ಇಳಿ: ಕೆಳಗೆ ಬಾ; ನಡೆದು: ಓಡಾಡಿ; ಪಡೆ: ಸೈನ್ಯ; ಅದ್ರಿ: ಬೆಟ್ಟ; ಸುರ: ದೇವತೆ; ಉಳುಹು: ಉಳಿಸು; ಬಲ: ಸೈನ್ಯ, ಬಲಭಾಗ; ದೂರ: ಬಹಳ ಅಂತರ; ಅಚಲ: ಬೆಟ್ಟ;

ಪದವಿಂಗಡಣೆ:
ಎಡಕಡೆಯಲ್+ಒಂಬತ್ತು +ಸಾವಿರ
ನಡುನೆಲನನ್+ಆಕರಿಸಿ+ ಮೂಡಣ
ಕಡೆಗೆ +ತಿರುಗಿತು +ಗಂಧಮಾದನ+ ಗಿರಿಯನ್+ಏರಿಳಿದು
ನಡೆದ್+ಇಳಾವೃತದೊಳಗೆ+ ಬಿಟ್ಟುದು
ಪಡೆಸುರಾದ್ರಿಯನ್+ಉಳುಹಿ +ಬಲದಲಿ
ನಡೆಯಲ್+ಅತಿದೂರದಲಿ +ಕಂಡರು +ಮಂದರಾಚಲವ

ಅಚ್ಚರಿ:
(೧) ಮೂಡಣ, ಎಡ (ಪಡುವಣ) – ವಿರುದ್ಧ ಪದಗಳು
(೨) ಗಿರಿ, ಅಚಲ, ಅದ್ರಿ – ಸಮನಾರ್ಥಕ ಪದ

ಪದ್ಯ ೪೧: ಗಂಧಮಾದನ ಪ್ರದೇಶವನ್ನು ಅರ್ಜುನನು ಹೇಗೆ ಗೆದ್ದನು?

ಹರಿದು ಹತ್ತಿತು ಗಂಧಮಾದನ
ಗಿರಿಯ ಸುತ್ತಣ ಯಕ್ಷ ವಿದ್ಯಾ
ಧರರನಂಜಿಸಿ ಕೊಂಡನಲ್ಲಿಯ ಸಾರವಸ್ತುಗಳ
ಗಿರಿಯನಿಳಿದರು ಜಂಬುನೇರಿಲ
ಮರನ ಕಂಡರು ಗಗನ ಚುಂಬಿತ
ವೆರಡು ಸಾವಿರ ಯೋಜನಾಂತದೊಳತಿ ವಿಳಾಸದಲಿ (ಸಭಾ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅರ್ಜುನನ ಸೈನ್ಯವು ಮುಂದುವರೆದು ಗಂಧಮಾದನ ಬೆಟ್ಟವನ್ನು ಹತ್ತಿ ಆ ಸುತ್ತಲಲ್ಲಿದ್ದ ಯಕ್ಷ ವಿದ್ಯಾಧರರನು ಹೆದರಿಸಿ ಅವರಲ್ಲಿದ್ದ ರತ್ನಾಭರಣಗಳನ್ನು ತೆಗೆದುಕೊಂಡನು. ಗಂಧಮಾದನ ಪರತದಿಂದಿಳಿದು ಎರಡು ಸಾವಿರ ಯೋಜನ ಪ್ರಾಂತದಲ್ಲಿ ಆಗಸವನ್ನು ಚುಂಬಿಸುವ ಒಂದು ಜಂಬುನೇರಲ ಮರವನ್ನು ಕಂಡನು.

ಅರ್ಥ:
ಹರಿ: ಚೂರುಮಾಡು; ಹತ್ತು: ಮೇಲೇರು; ಗಿರಿ: ಬೆಟ್ಟ; ಸುತ್ತಣ: ಸುತ್ತಲು; ಅಂಜಿಸು: ಹೆದರಿಸು; ಸಾರ: ಶ್ರೇಷ್ಠವಾದ; ವಸ್ತು: ಸಾಮಗ್ರಿ; ಇಳಿ: ಕೆಳಗಡೆ ಬಾ; ಮರ: ವೃಕ್ಷ; ಕಂಡರು: ನೋಡು; ಗಗನ: ಆಗಸ; ಚುಂಬಿತ: ಮುಟ್ಟಿದ; ಯೋಜನ: ಅಳತೆಯ ಪ್ರಮಾಣ; ವಿಳಾಸ: ಸ್ಥಳ;

ಪದವಿಂಗಡಣೆ:
ಹರಿದು +ಹತ್ತಿತು +ಗಂಧಮಾದನ
ಗಿರಿಯ +ಸುತ್ತಣ +ಯಕ್ಷ +ವಿದ್ಯಾ
ಧರರನ್+ಅಂಜಿಸಿ +ಕೊಂಡನಲ್ಲಿಯ +ಸಾರ+ವಸ್ತುಗಳ
ಗಿರಿಯನ್+ಇಳಿದರು+ ಜಂಬುನೇರಿಲ
ಮರನ +ಕಂಡರು +ಗಗನ +ಚುಂಬಿತವ್
ಎರಡು+ ಸಾವಿರ +ಯೋಜನಾಂತದೊಳತಿ+ ವಿಳಾಸದಲಿ

ಅಚ್ಚರಿ:
(೧) ಗಿರಿ- ೨, ೪ ಸಾಲಿನ ಮೊದಲ ಪದ
(೨) ಹತ್ತು, ಇಳೀ – ವಿರುದ್ಧ ಪದಗಳು