ಪದ್ಯ ೨೫: ಭೀಷ್ಮರು ಯಾವ ಅಭಿಪ್ರಾಯವನ್ನು ಹೇಳಿದರು?

ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಗಳನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಕ್ಕುವುದು ಲೇಸಲ್ಲೆಂದನಾ ಭೀಷ್ಮ (ಅರಣ್ಯ ಪರ್ವ, ೧೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ಭೀಮನು ಮಹಾ ಸಾಹಸಿ, ನೀವೋ ಎಲ್ಲೆ ಕಟ್ಟಿನಲ್ಲಿ ಇರುವವರಲ್ಲ. ಚತುರಂಗ ಸೈನ್ಯವು ತಪೋವನಗಳನ್ನು ತುಳಿದು ಹಾಕುತ್ತದೆ. ನಿಮ್ಮ ಪರಿವಾರದ ಹೆಂಗಳೆಯರು ಋಷಿಗಳನ್ನು ಅಪಹಾಸ್ಯ ಮಾಡುತ್ತಾರೆ. ಕೈ ಕೈ ಜೋಡಿಸಿ ಯುದ್ಧವು ಸಂಭವಿಸುತ್ತದೆ, ಅದು ಒಳಿತಲ್ಲ ಎಂದು ಭೀಷ್ಮರು ಹೇಳಿದರು.

ಅರ್ಥ:
ಅವಗಡ: ಅಸಡ್ಡೆ; ನಿಸ್ಸೀಮ: ಪರಾಕ್ರಮಿ; ನಿವಹ: ಗುಂಪು; ನಿಲ್ಲು: ತಡೆ; ತುಡುಕು: ಸೆಣಸು; ತುಳಿ: ಮೆಟ್ಟು; ತಪೋವನ: ತಪ್ಪಸ್ಸಿಗಾಗಿ ಮೀಸಲಿಟ್ಟ ಅರಣ್ಯ; ವಿವಿಧ: ಹಲವಾರು; ಋಷಿ: ಮುನಿ; ಏಡಿಸು: ಅವಹೇಳನ ಮಾಡು; ಯುವತಿ: ಹೆಣ್ಣು; ಮೆಟ್ಟು: ತುಳಿತ; ಬವರ: ಕಾಳಗ, ಯುದ್ಧ; ಗಂಟಿಕ್ಕು: ಕಟ್ಟು, ಸಮಸ್ಯೆ; ಲೇಸು: ಒಳಿತು;

ಪದವಿಂಗಡಣೆ:
ಅವಗಡೆಯನ್+ಆ+ ಭೀಮ+ ನೀವೆಂಬ್
ಅವರು +ನಿಸ್ಸೀಮರು +ಚತುರ್ಬಲ
ನಿವಹ+ ನಿಲ್ಲದು+ ತುಡುಕುವುದು+ ತುಳಿವುದು +ತಪೋವನವ
ವಿವಿಧ +ಋಷಿಗಳನ್+ಏಡಿಸುವರ್+ಈ
ಯುವತಿಯರು +ಕೈಕಾಲು +ಮೆಟ್ಟಿನ
ಬವರ+ ಗಂಟಕ್ಕುವುದು +ಲೇಸಲ್ಲೆಂದನಾ +ಭೀಷ್ಮ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತುಡುಕುವುದು ತುಳಿವುದು ತಪೋವನವ