ಪದ್ಯ ೧೪: ಪಾಂಡವರು ಯಾರ ಆಶ್ರಮಗಳಿಗೆ ಭೇಟಿ ನೀಡಿದರು?

ಕೇಳಿದನು ನೃಪ ಋಷ್ಯಶೃಂಗ ವಿ
ಶಾಲ ಕಥೆಯ ಕಳಿಂಗ ದೇಶದ
ಕೂಲವತಿಗಳ ಮಿಂದು ಗಂಗಾಜಲಧಿ ಸಂಗಮದ
ಮೇಲೆ ವೈತರಣಿಯ ವರೋತ್ತರ
ಕೂಲವನು ದಾಂಟಿದನು ನೃಪಕುಲ
ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ (ಅರಣ್ಯ ಪರ್ವ, ೧೦ ಸಂಧಿ, ೧೪ ಪದ್ಯ)

ತಾತ್ಪರ್ಯ:
ಋಷ್ಯಶೃಂಗನ ಕಥೆಯನ್ನು ಧರ್ಮಜನು ಕೇಳಿದನು. ಬಳಿಕ ಪಾಂಡವರು ಪರಿವಾರದೊಡನೆ ಕಳಿಂಗ ದೇಶದ ನದಿಗಳಲ್ಲಿ ಸ್ನಾನ ಮಾಡಿ, ಗಂಗಾಸಾಗರ ಸಂಗಮಕ್ಕೆ ಹೋದರು, ವೈತರಣಿಯನ್ನು ದಾಟಿ ಕ್ಷತ್ರಿಯ ಕುಲಕ್ಕೆ ಕಾಲಯಮನಂತಿದ್ದ ಪರಶುರಾಮನ ಆಶ್ರಮಕ್ಕೆ ಬಂದರು.

ಅರ್ಥ:
ಕೇಳು: ಆಲಿಸು; ನೃಪ: ರಾಜ; ವಿಶಾಲ: ವಿಸ್ತಾರ; ಕಥೆ: ವೃತ್ತಾಮ್ತ; ದೇಶ: ರಾಷ್ಟ್ರ; ಕೂಲವತಿ: ನದಿ; ಮಿಂದು: ಮುಳುಗು; ಜಲ: ನೀರು; ಜಲಧಿ: ಸಾಗರ; ಸಂಗಮ: ಸಮಾಗಮ; ವರ: ಶ್ರೇಷ್ಠ; ಕೂಲ:ದಡ; ದಾಂಟು: ಪಾರುಮಾಡು, ಹಾಯ್ದುಹೋಗು; ನೃಪ: ರಾಜ; ಕುಲ; ವಂಶ; ಯಮ: ಮೃತ್ಯುದೇವತೆ; ಕಾಲ: ಸಮಯ; ಕಾಲಯಮ: ರೇಣುಕಾಸುತ: ಪರಶುರಾಮ; ಆಶ್ರಯ: ರಕ್ಷಣೆ;

ಪದವಿಂಗಡಣೆ:
ಕೇಳಿದನು +ನೃಪ +ಋಷ್ಯಶೃಂಗ+ ವಿ
ಶಾಲ +ಕಥೆಯ +ಕಳಿಂಗ +ದೇಶದ
ಕೂಲವತಿಗಳ+ ಮಿಂದು +ಗಂಗಾಜಲಧಿ +ಸಂಗಮದ
ಮೇಲೆ +ವೈತರಣಿಯ +ವರೋತ್ತರ
ಕೂಲವನು +ದಾಂಟಿದನು +ನೃಪಕುಲ
ಕಾಲಯಮನಾಶ್ರಯಕೆ +ಬಂದರು +ರೇಣುಕಾಸುತನ

ಅಚ್ಚರಿ:
(೧) ಪರಶುರಾಮರನ್ನು ಪರಿಚಯಿಸುವ ಪರಿ – ನೃಪಕುಲ ಕಾಲಯಮನಾಶ್ರಯಕೆ ಬಂದರು ರೇಣುಕಾಸುತನ