ಪದ್ಯ ೩೮: ಕರ್ಣನ ಸ್ಥಿತಿ ಹೇಗಾಯಿತು?

ಜೋಡು ಹರಿದುದು ಸೀಸಕದ ದಡಿ
ಬೀಡೆ ಬಿರಿದುದು ತಲೆಯ ಚಿಪ್ಪಿನ
ಜೋಡು ಜರಿದುದು ಮನಕೆ ಸುರಿದುದು ಸೊಗಡು ರಣರಸದ
ಖೋಡಿ ಖೊಪ್ಪರಿಸಿದುದು ಧೈರ್ಯವ
ನೀಡಿರಿದುದಪದೆಸೆ ವಿಟಾಳಿಸಿ
ಖೇಡತನ ಭುಲ್ಲವಿಸುತಿರ್ದುದು ಭಾನುನಂದನನ (ಅರಣ್ಯ ಪರ್ವ, ೨೦ ಸಂಧಿ, ೩೮ ಪದ್ಯ)

ತಾತ್ಪರ್ಯ:
ಕರ್ಣನ ಕವಚ ಕಳಚಿತು. ಶಿರಸ್ತ್ರಾಣದ ಅಡಿಯು ಬಿರುಕು ಬಿಟ್ಟಿತು. ನೆತ್ತಿಗೆ ಪೆಟ್ಟು ಬಿದ್ದು ಶಿರಸ್ತ್ರಾಣ ಜಾರಿತು. ಯುದ್ಧದ ಸೊಗಡು ಮನಸ್ಸಿಗೆ ನಾಟಿತು. ಸೋಲಿನ ಸುಳಿವು ದೊರೆಯಿತು. ಕೇಡು ಸನ್ನಿಹಿತವಾಗಿ ಧೈರ್ಯವನ್ನು ದಿಕ್ಕಾಪಾಲಾಗಿ ಓಡಿಸಿತು. ಭಯವು ಹೆಚ್ಚಿತು. ಕರ್ಣನು ಕೈಗುಂದಿದನು.

ಅರ್ಥ:
ಜೋಡು: ಕವಚ; ಹರಿ: ಸೀಳು; ಸೀಸಕ: ಶಿರಸ್ತ್ರಾಣ; ಅಡಿ: ಕೆಳಭಾಗ; ಬೀಡೆ: ಬಿರುಕು; ಬಿರಿ: ಸೀಳು; ತಲೆ: ಶಿರ; ಚಿಪ್ಪು: ತಲೆಯ ಮೇಲುಭಾಗ; ಜರಿ: ಜಾರು; ಮನ: ಮನಸ್ಸು; ಸುರಿ: ಮೇಲಿನಿಂದ ಬೀಳು; ಸೊಗಡು: ಕಂಪು, ವಾಸನೆ; ರಣ: ಯುದ್ಧ; ರಸ: ಸಾರ; ಖೋಡಿ: ದುರುಳತನ, ನೀಚತನ; ಖೊಪ್ಪರಿಸು: ಮೀರು, ಹೆಚ್ಚು; ಧೈರ್ಯ: ಕೆಚ್ಚು, ದಿಟ್ಟತನ; ನೀಡು: ಕೊಡು; ಇರಿ: ಚುಚ್ಚು; ಅಪದೆಸೆ: ಕೆಡುಕು; ವಿಟಾಳ:ಅಪವಿತ್ರತೆ, ಮಾಲಿನ್ಯ; ಖೇಡ: ಹೆದರಿದವನು; ಭುಲ್ಲವಿಸು: ಅತಿಶಯಿಸು, ಅಧಿಕಗೊಳ್ಳು; ಭಾನು: ಸೂರ್ಯ; ನಂದನ: ಮಗ;

ಪದವಿಂಗಡಣೆ:
ಜೋಡು +ಹರಿದುದು +ಸೀಸಕದದ್ +ಅಡಿ
ಬೀಡೆ +ಬಿರಿದುದು +ತಲೆಯ +ಚಿಪ್ಪಿನ
ಜೋಡು +ಜರಿದುದು +ಮನಕೆ +ಸುರಿದುದು +ಸೊಗಡು +ರಣರಸದ
ಖೋಡಿ +ಖೊಪ್ಪರಿಸಿದುದು +ಧೈರ್ಯವನ್
ಈಡಿರಿದುದ್+ಅಪದೆಸೆ +ವಿಟಾಳಿಸಿ
ಖೇಡತನ +ಭುಲ್ಲವಿಸುತಿರ್ದುದು +ಭಾನುನಂದನನ

ಅಚ್ಚರಿ:
(೧) ಜೋಡಿ ಅಕ್ಷರದ ಪದಗಳು – ಖೋಡಿ ಖೊಪ್ಪರಿಸಿದುದು; ಭುಲ್ಲವಿಸುತಿರ್ದುದು ಭಾನುನಂದನನ; ಸುರಿದುದು ಸೊಗಡು;

ಪದ್ಯ ೧೩: ಮುನಿಗಳೇಕೆ ಶಪಿಸಿದರು?

ಹೋದ ಕೃತಿಯಂತಿರಲಿ ಸಾಕಿ
ನ್ನಾದರೆಯು ಕೌಂತೇಯರನು ಕರೆ
ದಾದರಿಸಿ ಕೊಡು ಧರೆಯನೆನೆ ಖೊಪ್ಪರಿಸಿ ಖಾತಿಯಲಿ
ಹೊಯ್ದು ತೊಡೆಯನು ಹಗೆಗೆ ಕೊಡುವೆನೆ
ಮೇದಿನಿಯನೆನೆ ರೊಷಶಿಖಿಯಲಿ
ಕಾದುದೀತನ ಹೃದಯ ಶಪಿಸಿದನಂದು ಮೈತ್ರೇಯ (ಅರಣ್ಯ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಮೈತ್ರೇಯ ಮುನಿಗಳು ಕೌರವನ ಆದರಕ್ಕೆ ಸಂತಸಗೊಂಡು, ರಾಜ ಈಗ ನಡೆದದ್ದು ಆಗಿ ಬಿಟ್ಟಿದೆ, ಇನ್ನಾದರೂ ನೀನು ಪಾಂಡವರನ್ನು ಕರೆಸಿ, ಅವರನ್ನು ಗೌರವಿಸಿ, ಅವರ ರಾಜ್ಯವನ್ನು ಅವರಿಗೆ ನೀಡು ಎಂದರು. ಇದನ್ನು ಕೇಳಿದ ಕೌರವನು ಕೆರಳಿ, ಕೋಪಜ್ವಾಲೆಯ ತಾಪದಿಂದ ಉಬ್ಬೆದ್ದು ತನ್ನ ತೊಡೆಯನ್ನು ತಟ್ಟುತ್ತಾ ಶತ್ರುವಿಗೆ ಭೂಮಿಯನ್ನು ಕೊಟ್ಟೇನೇ ಎಂದು ಹೇಳಲು, ಮೈತ್ರೇಯ ಮುನಿಗಳು ಕೋಪಗೊಂಡು ಕೌರವನನ್ನು ಶಪಿಸಿದರು.

ಅರ್ಥ:
ಹೋದ: ನಡೆದ; ಕೃತಿ: ಕೆಲಸ; ಅಂತಿರಲಿ: ಹಾಗಿರಲಿ; ಸಾಕು: ನಿಲ್ಲಿಸು; ಕರೆ: ಬಾರೆಮಾಡು; ಆದರಿಸು: ಗೌರವಿಸು; ಕೊಡು: ನೀಡು; ಧರೆ: ಭೂಮಿ; ಖೊಪ್ಪರಿಸು: ಮೀರು, ಹೆಚ್ಚು; ಖಾತಿ: ಕೋಪ, ಕ್ರೋಧ; ಹೊಯ್ದು: ಹೊಡೆ; ತೊಡೆ: ಊರು; ಹಗೆ: ವೈರಿ; ಕೊಡು: ನೀಡು; ಮೇದಿನಿ: ಭೂಮಿ; ರೋಷ: ಕೋಪ; ಶಿಖಿ: ಬೆಂಕಿ; ಕಾದು: ತಾಪವು ಹೆಚ್ಚಾಗು; ಹೃದಯ: ಎದೆ; ಶಾಪ: ನಿಷ್ಠುರದ ನುಡಿ;

ಪದವಿಂಗಡಣೆ:
ಹೋದ +ಕೃತಿಯಂತಿರಲಿ+ ಸಾಕ್
ಇನ್ನಾದರೆಯು +ಕೌಂತೇಯರನು +ಕರೆದ್
ಆದರಿಸಿ +ಕೊಡು +ಧರೆಯನ್+ಎನೆ +ಖೊಪ್ಪರಿಸಿ+ ಖಾತಿಯಲಿ
ಹೊಯ್ದು +ತೊಡೆಯನು +ಹಗೆಗೆ +ಕೊಡುವೆನೆ
ಮೇದಿನಿಯನ್+ಎನೆ +ರೊಷ+ಶಿಖಿಯಲಿ
ಕಾದುದ್+ಈತನ+ ಹೃದಯ+ ಶಪಿಸಿದನ್+ಅಂದು +ಮೈತ್ರೇಯ

ಅಚ್ಚರಿ:
(೧) ದುರ್ಯೋಧನ ಕೋಪವನ್ನು ತೋರಿದ ಪರಿ – ಖೊಪ್ಪರಿಸಿ ಖಾತಿಯಲಿ ಹೊಯ್ದು ತೊಡೆಯನು ಹಗೆಗೆ ಕೊಡುವೆನೆ ಮೇದಿನಿಯನೆನೆ ರೊಷಶಿಖಿಯಲಿ ಕಾದುದೀತನ ಹೃದಯ

ಪದ್ಯ ೧೩: ಕರ್ಣನ ಸಾಹಸವನ್ನು ಯಾರು, ಹೇಗೆ ತಡೆದರು?

ಧರೆ ನೆನೆದ ದುಷ್ಕೃತವದೇನೆಂ
ದರಸ ಬೆಸಗೊಂಬೈ ನಿರಂತರ
ಸುರಿವ ರುಧಿರಾಸಾರದಲಿ ಕೆಸರೆದ್ದು ಕಳನೊಳಗೆ
ಹರಿವ ಬಿಂಕದ ರಥದ ಗಾಲಿಯ
ಗರುವತನ ಗಾಳಾಯ್ತಲೇ ಖೊ
ಪ್ಪರಿಸಿ ತಗ್ಗಿತು ತೇರು ತಡೆದುದು ಭಟನ ಸಾಹಸವ (ಕರ್ಣ ಪರ್ವ, ೨೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೂಮಿಯು ಮಾಡಿದ ದುಷ್ಕರ್ಮವೇನೆಂದು ಕೇಳುವೆಯಾ ರಾಜ ಧೃತರಾಷ್ಟ್ರ? ಇಷ್ಟುದಿನ ಎಡೆಬಿಡದೆ ಸುರಿದ ರಕ್ತದ ಧಾರೆಯಿಂದ ರಣರಂಗದಲ್ಲಿ ಕೆಸರೆದ್ದು ಚಲಿಸುತ್ತಿದ್ದ ಕರ್ಣನ ರಥದ ಗಾಲಿಗಳ ಬಿಂಕ ಬಯಲಾಗಿ, ರಥವು ಭೂಮಿಯಲ್ಲಿ ಸಿಕ್ಕುಹಾಕಿಕೊಂಡು ಕರ್ಣನ ಸಾಹಸವನ್ನು ತಡೆಯಿತು.

ಅರ್ಥ:
ಧರೆ: ಭೂಮಿ; ನೆನೆ: ತೋಯು; ದುಷ್ಕೃತ: ಕೆಟ್ಟ ಕೆಲಸ; ಅರಸ: ರಾಜ; ಬೆಸ: ಆದೇಶ, ಕೇಳು; ನಿರಂತರ: ಯಾವಾಗಲು; ಸುರಿ: ವರ್ಷಿಸು; ರುಧಿರ: ರಕ್ತ; ಆಸಾರ: ಜಡಿಮಳೆ, ಮುತ್ತಿಗೆ ಹಾಕುವುದು; ಕೆಸರು: ರಾಡಿ, ಪಂಕ; ಕಳ: ರಣರಂಗ; ಹರಿ: ಪ್ರವಾಹ, ನೀರಿನ ಹರಿವು; ಬಿಂಕ: ಗರ್ವ, ಜಂಬ; ರಥ: ಬಂಡಿ; ಗಾಲಿ: ಚಕ್ರ; ಗರುವ: ಸೊಕ್ಕು; ಗಾಳ: ಕೊಕ್ಕೆ, ಕುತಂತ್ರ; ಖೊಪ್ಪರಿಸು: ಮೀರು, ಹೆಚ್ಚು; ತಗ್ಗು: ಕಡಿಮೆಯಾಗು; ತೇರು: ರಥ; ತಡೆ: ನಿಲ್ಲು; ಭಟ: ಸೈನಿಕ; ಸಾಹಸ: ಪರಾಕ್ರಮ;

ಪದವಿಂಗಡಣೆ:
ಧರೆ +ನೆನೆದ +ದುಷ್ಕೃತವದ್+ಏನೆಂದ್
ಅರಸ+ ಬೆಸಗೊಂಬೈ +ನಿರಂತರ
ಸುರಿವ +ರುಧಿರ+ಆಸಾರದಲಿ +ಕೆಸರೆದ್ದು +ಕಳನೊಳಗೆ
ಹರಿವ+ ಬಿಂಕದ +ರಥದ+ ಗಾಲಿಯ
ಗರುವತನ+ ಗಾಳಾಯ್ತಲೇ+ ಖೊ
ಪ್ಪರಿಸಿ+ ತಗ್ಗಿತು+ ತೇರು +ತಡೆದುದು +ಭಟನ+ ಸಾಹಸವ

ಅಚ್ಚರಿ:
(೧) ತ್ರಿವಳಿ ಪದಗಳು – ಗಾಲಿಯ ಗರುವತನ ಗಾಳಾಯ್ತಲೇ; ತಗ್ಗಿತು ತೇರು ತಡೆದುದು

ಪದ್ಯ ೪೮: ದುಶ್ಯಾಸನನ ಮೇಲೆ ಭೀಮನು ಹೇಗೆ ಎರಗಿದನು?

ಹೊಯ್ದು ತರುಬನು ಹಿಡಿದು ತಡೆಗಾ
ಲ್ವೊಯ್ದು ಕೆಡಹಿದನಸಬಡಿದು ಹೊಯ್
ಹೊಯ್ದು ಬಿಡೆ ಖೊಪ್ಪರಿಸಿ ಡೊಕ್ಕರವಿಕ್ಕಿ ರಾಘೆಯಲಿ
ಹಾಯ್ದ ವಾಲಿಗಳುಸುರ ಪಾಳೆಯ
ವೆಯ್ದೆ ಬಿಟ್ಟುದು ಮೂಗಿನಲಿ ಕೈ
ಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನನ್ನು ಹೊಯ್ದು ತಲೆಗೂದಲನ್ನು ಹಿಡಿದು ತಡೆಗಾಲಿನಿಂದ ಹೊಡೆದು ಕೆಡವಿ ಬಟ್ಟೆಯನ್ನು ಬಂಡೆಗೆ ಸೆಳೆದಂತೆ ಬಡಿ ಬಡಿದು, ಪಕ್ಕೆಗಳಲ್ಲಿ ಗುದ್ದಿದನು. ದುಶ್ಯಾಸನನ ಕಣ್ಣಾಲಿಗಳು ಮುಂದೆ ಬಂದವು. ಕಂಠದಲ್ಲಿದ್ದ ಪ್ರಾಣ ವಾಯುಗಳ ಬೀಡು ಮೂಗಿಗೆ ಬಂದವು. ದುಶ್ಯಾಸನನ ರಕ್ತವನ್ನು ತುಡುಕಲು ಭೀಮನು ಅತಿ ಆತುರದಿಂದ ಕೈಚಾಚಿದನು.

ಅರ್ಥ:
ಹೊಯ್ದು: ಹೊಡೆದು; ತುರುಬು: ಕೂದಲು ಗಂಟು; ಹಿಡಿ: ಮುಟ್ಟಿಗೆ, ಮುಷ್ಟಿ; ತಡೆಗಾಲು: ತಡೆಯುತ್ತಿರುವ ಕಾಲು; ಓಯ್ದು: ಒದೆದು; ಕೆಡಹು: ಕೆಳಕ್ಕೆ ಬೀಳಿಸು; ಅಸಗ: ಅಗಸ; ಬಡಿ: ಹೊಡೆ; ಹೊಯ್: ಬಟ್ಟೆಯೊಗೆವಾಗ ಬರುವ ಶಬ್ದ, ಬಡಿ ಬಡಿದು; ಖೊಪ್ಪರಿಸು: ಮೀರು, ಹೆಚ್ಚು; ಡೊಕ್ಕರ: ಗುದ್ದು, ಮಲ್ಲಯುದ್ಧದಲ್ಲಿ ಒಂದು ವರಸೆ; ರಾಘೆ: ಕುದುರೆಯನ್ನು ಹತ್ತಲು ಅದರ ಮಗ್ಗುಲಲ್ಲಿ ನೇತು ಬಿಟ್ಟಿರುವ ಬಳೆ; ಹಾಯ್ದು: ಹೊಡೆ; ಆಲಿ: ಕಣ್ಣು; ಉಸುರು: ವಾಯು; ಪಾಳೆಯ: ಸ್ಥಾನ; ಬಿಟ್ಟುದು: ತೊರೆ; ಮೂಗು: ನಾಸಿಕ; ಕೈ: ಹಸ್ತ; ತುಡುಕು: ಬೇಗನೆ ಹಿಡಿಯುವುದು, ಹಿಡಿ; ಶೋಣಿತ: ರಕ್ತ; ಲಟಕಟ: ಚಕಿತನಾಗು, ಉದ್ರೇಕಗೊಳ್ಳು;

ಪದವಿಂಗಡಣೆ:
ಹೊಯ್ದು +ತರುಬನು +ಹಿಡಿದು +ತಡೆಗಾಲ್
ಒಯ್ದು +ಕೆಡಹಿದನ್+ಅಸಬಡಿದು +ಹೊಯ್
ಹೊಯ್ದು+ ಬಿಡೆ +ಖೊಪ್ಪರಿಸಿ +ಡೊಕ್ಕರವಿಕ್ಕಿ +ರಾಘೆಯಲಿ
ಹಾಯ್ದವ್ + ಆಲಿಗಳ್+ಉಸುರ+ ಪಾಳೆಯವ್
ಎಯ್ದೆ +ಬಿಟ್ಟುದು +ಮೂಗಿನಲಿ +ಕೈಗ್
ಎಯ್ದು+ ತುಡುಕಿದ +ಶೋಣಿತಕೆ+ ಲಟಕಟಿಸಿದನು +ಭೀಮ

ಅಚ್ಚರಿ:
(೧) ಹೊಯ್ದು, ಎಯ್ದು, ಒಯ್ದು – ಪ್ರಾಸ ಪದಗಳು
(೨) ಉಪಮಾನದ ಪ್ರಯೋಗ – ಕೆಡಹಿದನಸಬಡಿದು ಹೊಯ್ ಹೊಯ್ದು;
(೩) ಉಸುರು ನಿಲ್ಲುತ್ತಿತ್ತು ಎಂದು ಹೇಳಲು – ಉಸುರ ಪಾಳೆಯವೆಯ್ದೆ ಬಿಟ್ಟುದು ಮೂಗಿನಲಿ
(೪) ದುಶ್ಯಾಸನ ರಕ್ತವನ್ನು ಕುಡಿಯುವ ಕಾತುರ – ಕೈಗೆಯ್ದು ತುಡುಕಿದ ಶೋಣಿತಕೆ ಲಟಕಟಿಸಿದನು ಭೀಮ