ಪದ್ಯ ೬೫: ದ್ರೌಪದಿಯು ಗಾಂಧಾರಿಗೆ ಏನು ಹೇಳಿದಳು?

ಮರೆದೆನಾಗಳೆ ವಿಗಡ ವಿಧಿಯೆ
ಚ್ಚರಿಸಿದರೆ ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ
ಹೆರರನೆಂಬುದು ಖೂಳತನವೇ
ನರಿಯದವರೇ ಪಾಂಡುಸುತರೆಂ
ದುರುಬೆಯಲಿ ಬಿನ್ನವಿಸಿದಳು ಗಾಂಧಾರಿಗಬುಜಾಕ್ಷಿ (ಸಭಾ ಪರ್ವ, ೧೬ ಸಂಧಿ, ೬೫ ಪದ್ಯ)

ತಾತ್ಪರ್ಯ:
ದ್ರೌಪದಿಯು ಗಾಂಧಾರಿಯನ್ನು ಉದ್ದೇಶಿಸುತ್ತಾ, ಹಿಂದಿನದೆಲ್ಲವನ್ನೂ ನಾನು ಮರೆತಿದ್ದೇನೆ, ನನ್ನ ಪೂರ್ವಕರ್ಮದ ಪ್ರಾರಬ್ಧವಾಗಿ ಪರಿಣಮಿಸಿದಾಗ ಹರಿಭಕ್ತಿಯಿಂದ ನಾನು ಪಾರಾದೆ. ನಮ್ಮ ಪ್ರಾರಬ್ಧಕ್ಕೆ ಇನ್ನೊಬ್ಬರನ್ನು ನಿಂದಿಸುವುದು ನೀಚತನ. ಪಾಂಡವರೇನೂ ತಿಳಿಗೇಡಿಗಳಲ್ಲ ಎಂದು ದ್ರೌಪದಿಯು ಹೇಳಿದಳು.

ಅರ್ಥ:
ಮರೆದೆ: ನೆನಪಿನಿಂದ ಹೊರಹಾಕು; ವಿಗಡ: ಭೀಕರ; ವಿಧಿ:ಆಜ್ಞೆ, ಆದೇಶ, ನಿಯಮ; ಎಚ್ಚರ: ಹುಷಾರಾಗಿರುವಿಕೆ; ಹರಿ: ವಿಷ್ಣು; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಮುಖ: ಆನನ; ಮುರಿ: ಸೀಳು; ಪೂರ್ವ: ಹಿಂದಿನ; ದುಷ್ಪ್ರಾರಬ್ಧ: ಹಿಂದೆ ಮಾಡಿದ ಕೆಟ್ಟ ಪಾಪದ ಫಲ; ಕರ್ಮ: ಕೆಲಸ, ಕಾರ್ಯ; ಫಲ: ಪ್ರಯೋಜನ; ಹೆರರ: ಬೇರೆಯವರ; ಖೂಳ: ದುಷ್ಟ; ಅರಿ: ತಿಳಿ; ಸುತ: ಮಗ; ಉರುಬು:ಅತಿಶಯವಾದ ವೇಗ; ಬಿನ್ನಹ: ಮನ್ನಿಸು; ಅಬುಜಾಕ್ಷಿ: ಕಮಲದಂತ ಕಣ್ಣುಳ್ಳವಳು; ಅಕ್ಷಿ: ಕಣ್ಣು;

ಪದವಿಂಗಡಣೆ:
ಮರೆದೆನ್+ಆಗಳೆ +ವಿಗಡ +ವಿಧಿ
ಎಚ್ಚರಿಸಿದರೆ +ಹರಿಭಕ್ತಿ+ ಮುಖದಲಿ
ಮುರಿದುದ್+ಎಮ್ಮಯ +ಪೂರ್ವ +ದುಷ್ಪ್ರಾರಬ್ಧ+ ಕರ್ಮಫಲ
ಹೆರರನ್+ಎಂಬುದು +ಖೂಳತನವೇನ್
ಅರಿಯದವರೇ+ ಪಾಂಡುಸುತರ್
ಎಂದ್+ಉರುಬೆಯಲಿ +ಬಿನ್ನವಿಸಿದಳು+ ಗಾಂಧಾರಿಗ್+ಅಬುಜಾಕ್ಷಿ

ಅಚ್ಚರಿ:
(೧) ಭಗವಂತನ ಆರಾಧನೆಯ ಮುಖ್ಯತೆಯನ್ನು ಹೇಳುವ ಪರಿ – ಹರಿಭಕ್ತಿ ಮುಖದಲಿ
ಮುರಿದುದೆಮ್ಮಯ ಪೂರ್ವ ದುಷ್ಪ್ರಾರಬ್ಧ ಕರ್ಮಫಲ

ಪದ್ಯ ೬೨: ಧೃತರಾಷ್ಟ್ರನು ಧರ್ಮಜನಿಗೆ ಏನು ಹೇಳಿದನು?

ಪಾಲಿಸವನಿಯನೆನ್ನ ಮಕ್ಕಳ
ಖೂಳತನವನು ಮನಕೆ ತಾರದಿ
ರಾಲಿಸದಿರಪರಾಧಿ ವಾಚಾಳರ ವಚೋತ್ತರವ
ಕಾಲದೇಶಾಗಮನದ ನಿಗಮದ
ಡಾಳವರಿದೈಹಿಕ ಪರತ್ರ ವಿ
ಟಾಳಿಸದೆ ನಡೆಕಂದಯೆಂದನು ಮರಳಿ ತೆಗೆದಪ್ಪಿ (ಸಭಾ ಪರ್ವ, ೧೬ ಸಂಧಿ, ೬೨ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು, ನನ್ನ ಮಕ್ಕಳ ನೀಚತನವನ್ನು ಮರೆತು ಭೂಮಿಯನ್ನು ಪಾಲಿಸು. ಅಪರಾಧಿಗಳು ಬಾಯಿಬಡಿಕರೂ ಆದವರ ಮಾತನ್ನು ಕೇಳಬೇಡ. ಕಾಲ, ದೇಶ, ಆಗಮ, ವೇದಗಳ ರೀತಿ ಕ್ರಮಗಳಿಗನುಸಾರವಾಗಿ, ಈ ಲೋಕ ಪರಲೋಕಗಳ ಸೌಖ್ಯಕ್ಕೆ ತೊಂದರೆಯಾಗದಂತೆ ನಡೆ, ಎಂದು ಹೇಳಿ ಧರ್ಮಜನನ್ನು ಮತ್ತೆ ಆಲಿಂಗಿಸಿಕೊಂಡನು.

ಅರ್ಥ:
ಪಾಲಿಸು: ರಕ್ಷಿಸು, ಕಾಪಾಡು; ಅವನಿ: ಭೂಮಿ; ಮಕ್ಕಳು: ಸುತರು; ಖೂಳ: ದುಷ್ಟ, ದುರುಳ; ಮನ: ಮನಸ್ಸು; ತರು: ತೆಗೆದುಕೊಂಡು ಬರು; ಆಲಿಸು: ಮನಸ್ಸಿಟ್ಟು ಕೇಳು; ಅಪರಾಧ: ತಪ್ಪು; ವಾಚಾಳ: ಅತಿ ಮಾತಾಡುವವ; ವಚೋತ್ತರ: ಶ್ರೇಷ್ಠವಾದ ಮಾತು; ಕಾಲ: ಸಮಯ; ದೇಶ: ರಾಷ್ಟ್ರ; ಆಗಮ: ಸೇರುವುದು, ಬರುವುದು; ನಿಗಮ: ವೇದ, ಶ್ರುತಿ; ಡಾಳ: ಹೊಳಪು, ಪ್ರಭೆ; ದೈಹಿಕ: ಶರೀರಕ್ಕೆ ಸಂಬಂಧಿಸಿದ; ಪರತ್ರ: ಮುಕ್ತಿ; ವಿಟಾಳಿಸು: ಹರಡು; ನಡೆ: ಮುಂದೆಹೋಗು; ಕಂದ: ಮಗು; ಮರಳಿ: ಪುನಃ; ಅಪ್ಪು: ತಬ್ಬಿಕೋ;

ಪದವಿಂಗಡಣೆ:
ಪಾಲಿಸ್+ಅವನಿಯನ್+ಎನ್ನ +ಮಕ್ಕಳ
ಖೂಳತನವನು +ಮನಕೆ +ತಾರದಿರ್
ಆಲಿಸದಿರ್+ಅಪರಾಧಿ +ವಾಚಾಳರ +ವಚೋತ್ತರವ
ಕಾಲ+ದೇಶ+ಆಗಮನದ+ ನಿಗಮದ
ಡಾಳವರಿ+ದೈಹಿಕ+ ಪರತ್ರ+ ವಿ
ಟಾಳಿಸದೆ +ನಡೆ+ಕಂದಯೆಂದನು+ ಮರಳಿ+ ತೆಗೆದಪ್ಪಿ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಆಲಿಸದಿರಪರಾಧಿ ವಾಚಾಳರ ವಚೋತ್ತರವ

ಪದ್ಯ ೨೩: ಶಲ್ಯನು ದುರ್ಯೋಧನನಿಗೆ ಯಾವುದರ ಅರಿವಿಲ್ಲ ಎಂದು ಜರಿದನು?

ಖೂಳನನು ಹಿಡಿತಂದು ಧರಣೀ
ಪಾಲರಲಿ ಸರಿಮಾಡಿ ರಾಜ್ಯದ
ಮೇಲೆ ನಿಲಿಸಿದೆ ಬಳಿಕ ಬಂದುದು ಖೂಳತನ ನಿನಗೆ
ಕೀಳು ಮೇಲಿನ ಸೀಮೆ ನಿನ್ನಲಿ
ಬೀಳುಕೊಂಡುದು ಸಾಕು ನಮಗಿ
ನ್ನಾಳುತನವೇಕೆನುತ ಧಿಮ್ಮನೆ ನಿಂದನಾ ಶಲ್ಯ (ಕರ್ಣ ಪರ್ವ, ೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ದುರ್ಯೋಧನ, ನೀನು ನೀಚನನ್ನು ಕರೆತಂದು ಅವನಿಗೆ ರಾಜ್ಯದ ಪಟ್ಟವನ್ನು ಕಟ್ಟಿ ರಾಜರಿಗೆ ಸಮನೆಂದು ಪುರಸ್ಕರಿಸಿ, ಬಳಿಕ ಅವನ ನೀಚತನ ನಿನಗೆ ಬಂದಿದೆ. ಕೀಳು ಮೇಲು ಎನ್ನ್ವ ಅರಿವು ನಿನ್ನನ್ನು ಬಿಟ್ಟು ಹೋಗಿದೆ, ಸಾಕು ನಮಗಿನ್ನೇಕೆ ಶೂರತನ, ಹೀಗೆ ಹೇಳಿ ಶಲ್ಯನು ಖತಿಗೊಂಡು ಧಿಮ್ಮನೆ ನಿಂತನು.

ಅರ್ಥ:
ಖೂಳ: ದುಷ್ಟ; ಹಿಡಿ: ಬಂಧಿಸಿ; ಧರಣೀಪಾಲ: ರಾಜ; ಸರಿಮಾಡಿ: ಸಮಾನ; ರಾಜ್ಯ: ದೇಶ; ನಿಲಿಸು: ಸ್ಥಾಪಿಸು; ಬಳಿಕ: ನಂತರ; ಬಂದುದು: ತಿಳಿದು, ಗೊತ್ತುಮಾಡು; ಕೀಳು: ನೀಚ; ಮೇಲು: ಶ್ರೇಷ್ಠ; ಸೀಮೆ: ಎಲ್ಲೆ, ಗಡಿ; ಬೀಳುಕೊಂಡು: ತೊರೆದು; ಸಾಕು: ನಿಲ್ಲಿಸು; ಆಳುತನ: ಶೂರ, ದಿಟ್ಟ; ಧಿಮ್ಮನೆ: ಅನುಕರಣ ಶಬ್ದ; ನಿಂದು: ನಿಲ್ಲು;

ಪದವಿಂಗಡಣೆ:
ಖೂಳನನು +ಹಿಡಿತಂದು +ಧರಣೀ
ಪಾಲರಲಿ+ ಸರಿಮಾಡಿ +ರಾಜ್ಯದ
ಮೇಲೆ +ನಿಲಿಸಿದೆ +ಬಳಿಕ +ಬಂದುದು +ಖೂಳತನ+ ನಿನಗೆ
ಕೀಳು +ಮೇಲಿನ +ಸೀಮೆ +ನಿನ್ನಲಿ
ಬೀಳುಕೊಂಡುದು +ಸಾಕು +ನಮಗಿನ್
ಆಳುತನವೇಕ್+ಎನುತ +ಧಿಮ್ಮನೆ +ನಿಂದನಾ +ಶಲ್ಯ

ಅಚ್ಚರಿ:
(೧) ಕೀಳು, ಮೇಲು – ವಿರುದ್ಧ ಪದಗಳು

ಪದ್ಯ ೮೧: ಕುಂತಿಯ ವಿವೇಕ ನುಡಿಗಳು ಗಾಂಧಾರಿಯ ಮನಸ್ಸನ್ನು ಬದಲಿಸಿತೆ?

ಕೇಳಿದಳು ಗಾಂಧಾರಿ ಕುಂತೀ
ಲೋಲಲೋಚನೆ ನುಡಿದ ನುಡಿಗಳ
ನೇಳಿದವ ಮಾಡಿದಪೆ ಐರಾವತದ ನೋಂಪಿಯಲಿ
ಬಾಲೆ ನಿನ್ನನು ಕರೆಸ ಮರೆದುದು
ಖೂಳತನವಾಯ್ತೆನುತ ದುಗುಡವ
ತಾಳಿ ಬಾರೆನು ತಂಗಿ ನೀ ಹೋಗೆಂದಳಿಂದುಮುಖಿ (ಆದಿ ಪರ್ವ, ೨೧ ಸಂಧಿ, ೮೧ ಪದ್ಯ)

ತಾತ್ಪರ್ಯ:
ಕುಂತಿಯ ವಿವೇಕಯುಕ್ತ ಮಾತುಗಳನ್ನು ಗಾಂಧಾರಿ ಕೇಳಿದಳು ಆದರೆ ಗಾಂಧಾರಿಗೆ ಕುಂತಿಯು ತನಗೆ ಅಪಹಾಸ್ಯಮಾದುತ್ತಿದ್ದಾಳೆ ಎಂದೆ ಗೋಚರಿಸಿತು, ಹಿಂದೆ ತಾನು ಮಾಡಿದ ಐರಾವತ ವ್ರತಕ್ಕೆ ಕುಂತಿಯನ್ನು ಆಹ್ವಾನಿಸದ್ದು ಬಹಳ ದೊಡ್ಡ ತಪ್ಪಾಯಿತು, ಎಂದು ಆಕೆ ದುಃಖಭರಿತಳಾಗಿ, ಕುಂತಿ ನೀನು ಹೋಗು ನಾನು ಬರುವುದಿಲ್ಲ ಎಂದು ಹೇಳಿದಳು.

ಅರ್ಥ:
ಕೇಳು: ಆಲಿಸು; ಲೋಲ: ಅತ್ತಿತ್ತ ಅಲುಗಾಡುವ, ಪ್ರೀತಿ; ಲೋಚನ: ಕಣ್ಣು; ನುಡಿ: ಮಾತಾಡು; ನುಡಿ: ಮಾತು; ಏಳಿದ: ಅವಮಾನ, ತಿರಸ್ಕಾರ; ಮಾಡು: ಆಚರಿಸು, ನಿರ್ವಹಿಸು; ನೋಂಪು: ವ್ರತ; ಬಾಲೆ: ಹುಡುಗಿ; ಕರೆ: ಆಮಂತ್ರಿಸು; ಮರೆ: ಜ್ಞಾಪಕಕ್ಕೆ ಇಲ್ಲದಿರುವ; ಖೂಳ:ದುರುಳ, ದುಷ್ಟ; ದುಗುಡ: ದುಃಖ; ತಾಳಿ: ಧರಿಸು; ತಂಗಿ: ಸೋದರಿ;ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಕೇಳಿದಳು +ಗಾಂಧಾರಿ +ಕುಂತೀ
ಲೋಲ+ಲೋಚನೆ +ನುಡಿದ +ನುಡಿಗಳನ್
ಏಳಿದವ+ ಮಾಡಿದಪೆ+ ಐರಾವತದ+ ನೋಂಪಿಯಲಿ
ಬಾಲೆ +ನಿನ್ನನು +ಕರೆಸ +ಮರೆದುದು
ಖೂಳತನವಾಯ್ತ್+ಎನುತ +ದುಗುಡವ
ತಾಳಿ +ಬಾರೆನು +ತಂಗಿ +ನೀ +ಹೋಗೆಂದಳ್+ಇಂದುಮುಖಿ

ಅಚ್ಚರಿ:
(೧) ನುಡಿದ ನುಡಿಗಳ ನೇಳಿದಳು – “ನ” ಕಾರದ ತ್ರಿವಳಿ ಪದ
(೨) ಗಾಂಧಾರಿಯ ಕೋಪ ಕಡಿಮೆಯಾಯಿತೆಂದು ತೋರುವ ಪದಗಳು – ಕುಂತಿಯನ್ನು ಸಂಭೋದಿಸುವ ಬಗೆ, ಬಾಲೆ, ತಂಗಿ