ಪದ್ಯ ೪೮: ಅಭಿಮನ್ಯುವನ್ನು ಯುದ್ಧಕ್ಕೆ ಕಳಿಸಿದುದನ್ನು ಕಂಡು ದೇವತೆಗಳು ಏನೆಂದರು?

ಲಲಿತ ಚಂದ್ರಿಕೆಗೇಕೆ ದವಾ
ನಳನ ಖಾಡಾಖಾಡಿ ಸುರಲತೆ
ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ
ನಳಿನ ನಾಳವು ಗಜದ ಕೈಯೊಡ
ನಳವಿಗೊಡಲಂತರವೆ ಪಾಪಿಗ
ಳೆಳಮಗನ ನೂಕಿದರು ಕಾಳೆಗಕೆಂದುದಮರಗಣ (ದ್ರೋಣ ಪರ್ವ, ೪ ಸಂಧಿ, ೪೮ ಪದ್ಯ)

ತಾತ್ಪರ್ಯ:
ದೇವತೆಗಳು ಅಭಿಮನ್ಯುವು ಯುದ್ಧಕ್ಕೆ ಬರುವುದನ್ನು ಕಂಡು ಮರುಗಿದರು, ಸುಂದರವಾದ ಬೆಳುದಿಂಗಳಿಗೆ ದಾವಾನಲನೊಡನೆ ಮಲ್ಲಯುದ್ಧವಾಗಿದೆಯೆಲ್ಲಾ, ಕಲ್ಪಲತೆಯ ಎಳೆಯಕುಡಿ ವಜ್ರಧಾರೆಗಳನ್ನು ತಡೆದು ಹಿಂದಕ್ಕೊತ್ತೀತೇ? ಕಮಲ ಪುಷ್ಪನಾಳವು ಆನೆಯೊಡನೆ ಹೋರಾಡಿಗೆದ್ದೀತೇ? ಈ ಪಾಪಿಗಳು ಎಳೆವಯಸ್ಸಿನ ಮಗನನ್ನು ಯುದ್ಧಕ್ಕೆ ನೂಕಿದರು ಎಂದು ಜರಿದರು.

ಅರ್ಥ:
ಲಲಿತ: ಚೆಲುವಾದ; ಚಂದ್ರಿಕೆ: ಬೆಳದಿಂಗಳು; ದಾವಾನಳ: ಜೋರಾದ ಬೆಂಕಿ; ಅನಲ: ಬೆಂಕಿ; ಖಾಡಾಖಾಡಿ: ಮಲ್ಲಯುದ್ಧ; ಸುರಲತೆ: ದೇವಲೋಕದ ಬಳ್ಳಿ; ಎಳೆ: ಚಿಕ್ಕ; ಕುಡಿ: ಚಿಗುರು; ಮುರಿ: ಸೀಳು; ಒತ್ತು: ಮುತ್ತು, ಚುಚ್ಚು; ವಜ್ರ: ಗಟ್ಟಿಯಾದ; ಧಾರೆ: ವರ್ಷ; ನಳಿನ: ಕಮಲ; ನಾಳ: ಒಳಗೆ ಟೊಳ್ಳಾಗಿರುವ ದಂಟು; ಗಜ: ಆನೆ; ಕೈ: ಹಸ್ತ; ಅಳವು: ಶಕ್ತಿ; ಅಂತರ: ದೂರ; ಪಾಪಿ: ದುಷ್ಟ; ಎಳಮಗ: ಚಿಕ್ಕವಯಸ್ಸಿನವ; ನೂಕು: ತಳ್ಳು; ಕಾಳೆಗ: ಯುದ್ಧ; ಅಮರಗಣ: ದೇವತೆಗಳ ಗುಂಪು;

ಪದವಿಂಗಡಣೆ:
ಲಲಿತ +ಚಂದ್ರಿಕೆಗೇಕೆ +ದವಾ
ನಳನ +ಖಾಡಾಖಾಡಿ +ಸುರಲತೆ
ಎಳೆಯ+ ಕುಡಿ+ ಮುರಿದ್+ಒತ್ತಲಾಪುದೆ +ವಜ್ರಧಾರೆಗಳ
ನಳಿನ +ನಾಳವು +ಗಜದ +ಕೈಯೊಡನ್
ಅಳವಿಗೊಡಲಂತರವೆ+ ಪಾಪಿಗಳ್
ಎಳ+ಮಗನ +ನೂಕಿದರು+ ಕಾಳೆಗಕೆಂದುದ್+ಅಮರಗಣ

ಅಚ್ಚರಿ:
(೧) ಉಪಮಾನಗಳ ಪ್ರಯೋಗ – ಲಲಿತ ಚಂದ್ರಿಕೆಗೇಕೆ ದವಾನಳನ ಖಾಡಾಖಾಡಿ; ಸುರಲತೆ
ಯೆಳೆಯ ಕುಡಿ ಮುರಿದೊತ್ತಲಾಪುದೆ ವಜ್ರಧಾರೆಗಳ; ನಳಿನ ನಾಳವು ಗಜದ ಕೈಯೊಡ
ನಳವಿಗೊಡಲಂತರವೆ

ಪದ್ಯ ೨೫: ಯಾವ ರೀತಿಯ ಯುದ್ಧವು ನಡೆಯಿತು?

ಒದೆದುದಬುಧಿಯನಬುಧಿಯೆನೆ ಹೊ
ಕ್ಕುದು ಚತುರ್ಬಲ ಹೊಯ್ದು ತಲೆಯೊ
ತ್ತಿದುದು ಕೇಶಾಕೇಶಿ ಖಾಡಾಖಾಡಿಯಲಿ ಭಟರು
ಕೆದರಿತರಿಬಲ ಮತ್ತೆ ಹೊದರೆ
ದ್ದುದು ವಿಘಾತಿಯಲಳಿದು ಹುರಿಗೊಂ
ಡೊದಗಿ ಹಾಣಾಹಾಣಿಯಲಿ ಹೊಯ್ದಾಡಿತುಭಯಬಲ (ದ್ರೋಣ ಪರ್ವ, ೨ ಸಂಧಿ, ೨೫ ಪದ್ಯ)

ತಾತ್ಪರ್ಯ:
ಸಮುದ್ರವು ಸಮುದ್ರವನ್ನು ಒದೆಯಿತೋ ಎಂಬಂತೆ ಚತುರಂಗ ಸೈನ್ಯವು ತಲೆಗೆ ತಲೆಯೊತ್ತಿ ಖಾಡಾಖಾಡಿಯಿಂದ ಯುದ್ಧಾರಂಭಮಾಡಿತು. ಶತ್ರುಸೈನ್ಯಗಳು ಚದುರಿ ಚಲ್ಲಾಪಿಲ್ಲಿಯಾಗಿ ಮತ್ತೆ ಜೊತೆಗೂಡಿ ಹಾಣಾಹಾಣಿಯಿಂದ ಕಾದಿದವು.

ಅರ್ಥ:
ಒದೆ: ತುಳಿ, ಮೆಟ್ಟು, ನೂಕು; ಅಬುಧಿ: ಸಾಗರ; ಹೊಕ್ಕು: ಸೇರು; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಹೊಯ್ದು: ಹೋರಾಡು; ತಲೆ: ಶಿರ; ಒತ್ತು: ಮುತ್ತು, ಚುಚ್ಚು; ಕೇಶ: ಕೂದಲು; ಕೇಶಾಕೇಶಿ: ಕೂದಲು ಹಿಡಿದು ಯುದ್ಧ; ಖಾಡಾಖಾಡಿ: ದ್ವಂದ್ವಯುದ್ಧ, ಮಲ್ಲಯುದ್ಧ; ಭಟ: ಸೈನಿಕ; ಕೆದರು: ಹರಡು; ಅರಿಬಲ: ವೈರಿಸೈನ್ಯ; ಹೊದರು: ಗುಂಪು, ಸಮೂಹ; ಎದ್ದು: ಮೇಲೇಳು; ವಿಘಾತ: ನಾಶ, ಧ್ವಂಸ; ಅಳಿ: ನಾಶ; ಹುರಿ: ಕಾಯಿಸು; ಒದಗು: ಲಭ್ಯ, ದೊರೆತುದು; ಹಾಣಾಹಾಣಿ: ಒಬ್ಬನು ತನ್ನ ಹಣೆಯಿಂದ ಇನ್ನೊಬ್ಬನ ಹಣೆಗೆ ಹೊಡೆದು ಮಾಡುವ ಯುದ್ಧ; ಹೊಯ್ದಾಡು: ಹೋರಾಡು; ಉಭಯ: ಎರಡು; ಬಲ: ಸೈನ್ಯ;

ಪದವಿಂಗಡಣೆ:
ಒದೆದುದ್+ಅಬುಧಿಯನ್+ಅಬುಧಿ+ಎನೆ +ಹೊ
ಕ್ಕುದು +ಚತುರ್ಬಲ +ಹೊಯ್ದು +ತಲೆ+
ಒತ್ತಿದುದು +ಕೇಶಾಕೇಶಿ +ಖಾಡಾಖಾಡಿಯಲಿ +ಭಟರು
ಕೆದರಿತ್+ಅರಿಬಲ+ ಮತ್ತೆ +ಹೊದರ್
ಎದ್ದುದು +ವಿಘಾತಿಯಲ್+ಅಳಿದು +ಹುರಿಗೊಂಡ್
ಒದಗಿ +ಹಾಣಾಹಾಣಿಯಲಿ +ಹೊಯ್ದಾಡಿತ್+ಉಭಯಬಲ

ಅಚ್ಚರಿ:
(೧) ಉಪಮಾನದ ಪ್ರಯೋಗ – ಒದೆದುದಬುಧಿಯನಬುಧಿಯೆನೆ
(೨) ಯುದ್ಧದ ಪರಿ – ಕೇಶಾಕೇಶಿ – ಕೂದಲು ಹಿಡಿದೆಳೆದು ಮಾಡುವ ಕದನ; ಖಾಡಾಕಾಡಿ – ಖಡ್ಗಕ್ಕೆ ಖಡ್ಗವನ್ನೋಡ್ಡಿ ಮಾಡುವ ಕದನ, ಹಾಣಾಹಾಣಿ – ಹಣೆಗೆ ಹಣೆಯನ್ನು ಕೊಟ್ಟು ಮಾಡುವ ಯುದ್ಧ;

ಪದ್ಯ ೮೨: ಓಕುಳಿಯಾಟವನ್ನು ಯಾರು ಆಡಿದರು?

ಕನಕಮಣಿಗಳ ತೊಟ್ಟು ಜಾಜಿಯ
ನನೆಯ ಕಂಚುಳಿಕೆಯಲಿ ಮದನನ
ಮೊನೆಯ ಖಾಡಾಖಾಡಿಕಾತಿಯರೈದೆ ಹೊಯ್ಹೊಯ್ದು
ದನುಜಹರನರಸಿಯರು ಕುಂತೀ
ತನಯರರಸಿಯರೊಡನೆ ಮತ್ಸ್ಯನ
ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು (ವಿರಾಟ ಪರ್ವ, ೧೧ ಸಂಧಿ, ೮೨ ಪದ್ಯ)

ತಾತ್ಪರ್ಯ:
ಚಿನ್ನ, ರತ್ನಗಳ ಆಭರಣಗಲನ್ನು ಇಟ್ಟು, ಜಾಜಿಯ ಮೊಗ್ಗಿನ ಬಣ್ಣದ ಕುಪ್ಪಸತೊಟ್ಟು, ಮನ್ಮಥನ ದಂಡಿನಂತೆ ಮನೋಹರ ರೂಪವುಳ್ಳ ಶ್ರೀಕೃಷ್ಣನ ಹೆಂಡತಿ, ಪಾಂಡವರ ಅರಸಿ, ಮತ್ಸ್ನ್ಯನ ಪಾಂಚಾಲನ ಪತ್ನಿಯರು ಓಕುಳಿಯಾಟವನ್ನಾಡಿದರು.

ಅರ್ಥ:
ಕನಕ: ಚಿನ್ನ; ಮಣಿ: ಬೆಲೆಬಾಳುವ ರತ್ನ; ತೊಟ್ಟು: ಧರಿಸು; ಜಾಜಿ: ಮಾಲತೀ ಪುಷ್ಪ; ನನೆ: ಮೊಗ್ಗು, ಮುಗುಳು; ಕಂಚುಳಿಕೆ: ಕುಪ್ಪಸ, ಅಂಗಿ; ಮದನ: ಮನ್ಮಥ; ಮೊನೆ: ಹರಿತವಾದುದು; ಖಾಡಾಖಾಡಿ: ಮಲ್ಲಯುದ್ಧ; ಕಾತಿ: ಗರತಿ, ಮುತ್ತೈದೆ; ಐದು: ಬಂದು ಸೇರು; ಹೊಯ್ದು: ಹೊಡೆದು; ದನುಜಹರ: ರಾಕ್ಷಸರನ್ನು ಸಂಹಾರ ಮಾಡಿದ (ಕೃಷ್ಣ); ಅರಸಿ: ರಾಣಿ; ತನಯ: ಮಕ್ಕಳು; ವನಿತೆ: ಹೆಣ್ಣು; ಓಕುಳಿ: ಬಣ್ಣದ ನೀರು; ಆಡು: ಕ್ರೀಡೆ;

ಪದವಿಂಗಡಣೆ:
ಕನಕ+ಮಣಿಗಳ+ ತೊಟ್ಟು +ಜಾಜಿಯ
ನನೆಯ +ಕಂಚುಳಿಕೆಯಲಿ +ಮದನನ
ಮೊನೆಯ +ಖಾಡಾಖಾಡಿ+ಕಾತಿಯರ್+ಐದೆ +ಹೊಯ್ಹೊಯ್ದು
ದನುಜಹರನ್+ಅರಸಿಯರು +ಕುಂತೀ
ತನಯರ್+ಅರಸಿಯರೊಡನೆ+ ಮತ್ಸ್ಯನ
ವನಿತೆಯರು +ಪಾಂಚಾಲಿನಿಯರ್+ಓಕುಳಿಯನ್+ಆಡಿದರು

ಅಚ್ಚರಿ:
(೧) ಓಕುಳಿಯನ್ನು ಆಡಿದ ಪರಿ – ಕನಕಮಣಿಗಳ ತೊಟ್ಟು ಜಾಜಿಯ ನನೆಯ ಕಂಚುಳಿಕೆಯಲಿ ಮದನನ ಮೊನೆಯ ಖಾಡಾಖಾಡಿಕಾತಿಯರೈದೆ ಹೊಯ್ಹೊಯ್ದು

ಪದ್ಯ ೨೭: ಧರ್ಮರಾಯನು ಕೊನೆಯದಾಗಿ ಯಾರನ್ನು ಸೋತನು?

ಆಡಿದನು ಯಮಸೂನು ಮಿಗೆ ಹೋ
ಗಾಡಿದನು ಮನುಮಥನ ಖಾಡಾ
ಖಾಡಿಕಾತಿಯನಕಟ ಮದನನ ಮಂತ್ರದೇವತೆಯ
ಕೂಡೆ ತಿವಿದನು ಕಟ್ಟಿದನು ಕಳಿ
ದೋಡಿಸಿದ ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನ ಚಿತ್ತಭಿತ್ತಿಯಲಿ (ಸಭಾ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಧರ್ಮರಾಯನು ಆಟವಾಡಿ ಮನ್ಮಥನ ಕಟ್ಟಾಳಾದ, ಮದನಮಂತ್ರದ ಅಭಿಮಾನದೇವತೆಯಾದ ದ್ರೌಪದಿಯನ್ನೂ ಸೋತನು. ಶಕುನಿಯು ತಾನು ಆತದಲ್ಲಿ ಕಡಿದ ಕಾಯಿಗಳನ್ನು ಕುಟ್ಟಿ, ಧರ್ಮಜನ ಮನಸ್ಸಿನಲ್ಲಿ ಅವನಸೋಲನ್ನು ಚಿತ್ರಿಸಿದನು.

ಅರ್ಥ:
ಆಡು: ಕ್ರೀಡಿಸು; ಸೂನು: ಮಗ; ಮಿಗೆ: ಮತ್ತೆ; ಹೋಗಾಡು: ಕಳೆದುಹಾಕು; ಮನುಮಥ: ಮನ್ಮಥ; ಖಾಡಾಖಾಡಿ: ಕೈಕೈ ಯುದ್ಧ; ಕಾತಿ: ಗರತಿ, ಮುತ್ತೈದೆ; ಅಕಟ: ಅಯ್ಯೋ; ಮದನ: ಮನ್ಮಥ; ಮಂತ್ರ: ವಿಚಾರ, ವಶೀಕರಿಸಿಕೊಳ್ಳುವುದಕ್ಕಾಗಿ ಹೇಳುವ ಆಯಾ ದೇವತೆಯ ಸಾಮರ್ಥ್ಯವುಳ್ಳ ವಾಕ್ಯ ಸಮೂಹ; ದೇವತೆ: ದೇವಿ; ಕೂಡೆ: ಜೊತೆ; ತಿವಿ: ಹೊಡೆತ, ಗುದ್ದು, ಚುಚ್ಚು; ಕಟ್ಟು: ಬಂಧಿಸು; ಕಳಿ: ಕಳೆದುಹೋಗು, ಸಾಯು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸೋಲು: ಪರಾಭವ; ಖೋಡಿ: ದುರುಳತನ; ಚಿತ್ರಿಸು: ಆಕೃತಿಯನ್ನು ತೋರುವ; ಅರಸ: ರಾಜ; ಚಿತ್ತ: ಮನಸ್ಸು; ಭಿತ್ತಿ: ಮುರಿಯುವ, ಒಡೆಯುವ;

ಪದವಿಂಗಡಣೆ:
ಆಡಿದನು +ಯಮಸೂನು +ಮಿಗೆ +ಹೋ
ಗಾಡಿದನು+ ಮನುಮಥನ+ ಖಾಡಾ
ಖಾಡಿಕಾತಿಯನ್+ಅಕಟ +ಮದನನ +ಮಂತ್ರ+ದೇವತೆಯ
ಕೂಡೆ +ತಿವಿದನು +ಕಟ್ಟಿದನು +ಕಳಿ
ದೋಡಿಸಿದ+ ಸಾರಿಗಳ +ಸೋಲದ
ಖೋಡಿಯನು +ಚಿತ್ರಿಸಿದನ್+ಅರಸನ +ಚಿತ್ತ+ಭಿತ್ತಿಯಲಿ

ಅಚ್ಚರಿ:
(೧) ದ್ರೌಪದಿಯನ್ನು ವಿವರಿಸುವ ಬಗೆ – ಮನುಮಥನ ಖಾಡಾಖಾಡಿಕಾತಿಯನಕಟ ಮದನನ ಮಂತ್ರದೇವತೆಯ
(೨) ಶಕುನಿಯು ಧರ್ಮರಾಯನು ಸೋತನೆಂದು ಹೇಳುವ ಪರಿ – ಸಾರಿಗಳ ಸೋಲದ
ಖೋಡಿಯನು ಚಿತ್ರಿಸಿದನರಸನ ಚಿತ್ತಭಿತ್ತಿಯಲಿ

ಪದ್ಯ ೬: ಯುಧಿಷ್ಠಿರನು ಎಷ್ಟು ಹಣವನ್ನು ಸೋತನು?

ಹೂಡು ಸಾರಿಯ ರೇಖೆ ರೇಖೆಗೆ
ಮಾಡಿದರ್ಬುದ ಧನ ಸುಯೋಧನ
ನಾಡಿ ನೋಡಲಿ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆಡಿದನು ಯಮಸೂನು ಖಾಡಾ
ಖಾಡಿಯಲಿ ಸಾರಿಗಳೊಡನೆ ಹೋ
ಗಾಡಿದನು ಭಂಡಾರವನು ಭೂಪಾಲ ಕೇಳೆಂದ (ಸಭಾ ಪರ್ವ, ೧೫ ಸಂಧಿ, ೬ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಧರ್ಮಜನು ಕಾಯಿಗಳನ್ನು ಹೂಡಿದನು. ಒಂದೊಂದು ರೇಖೆಗೆ ಒಂದು ಅರ್ಬುದ ಹಣವನ್ನು ಪಣವಾಗಿ ಇಟ್ಟು, ದುರ್ಯೋಧನನು ಆಡಿನೋಡಲಿ, ದಾಳವನ್ನು ಹಾಕು ಎಂದು ಹೇಳಿ ಕಾಯಿಗಳನ್ನು ನಡೆಸಿದ ಯುಧಿಷ್ಠಿರನು ತನ್ನ ಭಂಡಾರವನ್ನೇ ಸೋತನು.

ಅರ್ಥ:
ಹೂಡು: ಜೋಡಿಸು, ಸೇರಿಸು, ಆರಂಭಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ರೇಖೆ: ಗೆರೆ; ಅರ್ಬುದ: ಹತ್ತುಕೋಟಿ; ಧನ: ಐಶ್ವರ್ಯ; ನೋಡು: ವೀಕ್ಷಿಸು; ಹಾಯ್ಕು: ಧರಿಸು, ತೊಡು; ಹಾಸಂಗಿ: ಜೂಜಿನ ದಾಳ, ಲೆತ್ತ; ಸೂನು: ಮಗ; ಖಾಡಾಖಾಡಿ: ಕೈ ಕೈಯುದ್ಧ; ಹೋಗಾಡು: ನಾಶ, ಅಳಿವು; ಭಂಡಾರ: ಬೊಕ್ಕಸ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹೂಡು +ಸಾರಿಯ +ರೇಖೆ +ರೇಖೆಗೆ
ಮಾಡಿದ್+ಅರ್ಬುದ +ಧನ +ಸುಯೋಧನನ್
ಆಡಿ +ನೋಡಲಿ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆಡಿದನು +ಯಮಸೂನು +ಖಾಡಾ
ಖಾಡಿಯಲಿ +ಸಾರಿಗಳೊಡನೆ +ಹೋ
ಗಾಡಿದನು +ಭಂಡಾರವನು +ಭೂಪಾಲ +ಕೇಳೆಂದ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ಪದ್ಯ ೩೦: ಭೀಮನು ದುಶ್ಯಾಸನನಿಗೆ ಏನು ಹೇಳಿದ?

ರೂಢಿಸಿದ ಭಟ ನೀನು ಹರಿಬವ
ಬೇಡಿ ತೊಡಕಿದೆ ನಾನು ಖಾಡಾ
ಖಾಡಿಯಲಿ ಸಿಗುರಿಲ್ಲ ತೆಗೆ ಹಂಗೇಕೆ ತೆತ್ತಿಗರ
ನೋಡುತಿರಲೀ ಬಲವೆರಡು ಹೋ
ಗಾಡು ನಮ್ಮನು ಮೇಣು ನಿನ್ನನು
ಸೂಡುದರಿವೆನು ಸತ್ವದಳತೆಯ ಕಾಣಲಹುದೆಂದ (ಕರ್ಣ ಪರ್ವ, ೧೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ದುಶ್ಯಾಸನ, ನೀನು ಪ್ರಸಿದ್ಧನಾದ ವೀರ, ನಾನು ನಿನ್ನೊಡನೆ ಕಾಳಗವನ್ನು ಬಯಸಿ ಬಂದಿದ್ದೇನೆ. ನಾವಿಬ್ಬರೂ ಖಾಡಾಖಾಡಿಯಾಗಿ ಹೆಣಗುವಾಗ ನಮ್ಮ ಸೈನ್ಯದ ಹಂಗೇಕೆ? ಎರಡೂ ಸೈನ್ಯಗಳು ನಮ್ಮಿಬ್ಬರ ಕಾಳಗವನ್ನು ನೋಡುತ್ತಿರಲಿ, ನೀನು ನಮ್ಮನ್ನಾದರೂ ಹೋಗಾಡು ಇಲ್ಲವೇ ನಾನು ನಿನ್ನನ್ನು ಕತ್ತರಿಸಿ ಕೆಡಹುತ್ತೇನೆ ಸತ್ವ ಪರೀಕ್ಷೆಯಾಗಲಿ ಎಂದು ಭೀಮನು ದುಶ್ಯಾಸನನಿಗೆ ಹೇಳಿದನು.

ಅರ್ಥ:
ರೂಢಿ: ವಾಡಿಕೆ, ಬಳಕೆ; ಭಟ: ಸೈನಿಕ; ಹರಿಬ:ಕೆಲಸ, ಕಾರ್ಯ; ಬೇಡಿ: ಕೇಳು; ತೊಡಕು: ಸಿಕ್ಕು, ಗೋಜು, ಗೊಂದಲ; ಖಾಡಾಖಾಡಿ: ಮಲ್ಲಯುದ್ಧ; ಸಿಗುರು: ಚೆಕ್ಕೆ; ತೆಗೆ: ಈಚೆಗೆ ತರು; ಹಂಗು: ದಾಕ್ಷಿಣ್ಯ, ಆಭಾರ; ತೆತ್ತಿಗ: ಬಂಧು, ನಂಟ; ನೋಡು: ವೀಕ್ಷಿಸು; ಬಲ: ಸೈನ್ಯ; ಹೋಗಾಡು: ಕಳೆದುಹಾಕು; ಮೇಣ್: ಮತ್ತು; ಸೂಡು: ಕಟ್ಟು, ಕಂತೆ, ಹೊರೆ; ಅರಿ: ತಿಳಿ; ಸತ್ವ: ಸಾರ; ಅಳತೆ: ಪರಿಮಾಣ; ಕಾಣಲು: ತೋರು;

ಪದವಿಂಗಡಣೆ:
ರೂಢಿಸಿದ+ ಭಟ +ನೀನು +ಹರಿಬವ
ಬೇಡಿ +ತೊಡಕಿದೆ+ ನಾನು +ಖಾಡಾ
ಖಾಡಿಯಲಿ +ಸಿಗುರಿಲ್ಲ +ತೆಗೆ +ಹಂಗೇಕೆ +ತೆತ್ತಿಗರ
ನೋಡುತಿರಲೀ +ಬಲವೆರಡು +ಹೋ
ಗಾಡು +ನಮ್ಮನು +ಮೇಣು +ನಿನ್ನನು
ಸೂಡುದ್+ಅರಿವೆನು +ಸತ್ವದಳತೆಯ +ಕಾಣಲ್+ಅಹುದೆಂದ

ಅಚ್ಚರಿ:
(೧) ಪ್ರಸಿದ್ಧ ವೀರ ಎಂದು ಹೇಳಲು – ರೂಢಿಸಿದ ಭಟ ನೀನು

ಪದ್ಯ ೩೮: ಅರ್ಜುನನ ಜೊತೆ ಕರ್ಣನು ಹೇಗೆ ಕಾದುವೆನೆಂದು ಹೇಳಿದನು?

ನರನ ಶರಹತಿಗೆನ್ನ ತನು ಜ
ಝ್ಝರಿತವಾಗಲಿ ನನ್ನ ಕಣೆಯಲ್
ಬರಿಯಲಾತನ ದೇಹ ಖಾಡಾಖಾಡಿ ಯುದ್ಧದಲಿ
ಕರುಳು ಕರುಳಲಿ ತೊಡಕ್ ನೊರೆ ನೆ
ತ್ತರಲಿ ನೆತ್ತರು ಕೂಡಿ ಕಡಿಯಲಿ
ಬೆರಸಿ ಕಡಿ ಪಲ್ಲಟಿಸೆ ಕಾದುವೆನಿಂದು ಹಗೆಯೊಡನೆ (ಕರ್ಣ ಪರ್ವ, ೮ ಸಂಧಿ, ೩೮ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳ ಹೊಡೆತದಿಂದ ನನ್ನ ದೇಹವು ಚೂರುಚೂರಾಗಲಿ, ನನ್ನ ಬಾಣಗಳಿಂದ ಅವನ ದೇಹವು ತುಂಡಾಗಿ ಹೋಗಲಿ, ಮಲ್ಲಯುದ್ಧದಲ್ಲಿ ನನ್ನ ಅವನ ಕರುಳುಗಳು ತೊಡಕು ಹಾಕಿಕೊಂಡು ನೊರೆ ರಕ್ತಗಳು ಹೊರಚಿಮ್ಮಲಿ, ಖಂಡಗಳು ಕೂಡಿ ಹಾರುವಂತೆ ಇಂದು ವೈರಿಯೊಂದಿಗೆ ಕಾದುತ್ತೇನೆ ಎಂದು ಕರ್ಣನು ಹೇಳಿದನು.

ಅರ್ಥ:
ನರ: ಅರ್ಜುನ; ಶರ: ಬಾಣ; ಹತಿ: ಹೊಡೆತ, ಸಂಹಾರ; ತನು: ದೇಹ; ಜಝ್ಝರಿತ: ಭಗ್ನ, ಚೂರುಚೂರು; ಕಣೆ:ಬಾಣ; ಬಿರಿ:ಬಿರುಕು, ಸೀಳು; ದೇಹ: ತನು, ಕಾಯ; ಖಾಡಾಖಾಡಿ: ಮಲ್ಲಯುದ್ಧ; ಯುದ್ಧ: ಕಾಳಗ; ಕರುಳು: ಪಚನಾಂಗ, ಅಂತಃಕರಣ, ಮಮತೆ; ತೊಡಕು: ಸಿಕ್ಕು, ಗೋಜು; ನೊರೆ:ಬುರುಗು; ನೆತ್ತರು: ರಕ್ತ; ಕೂಡಿ:ಸೇರಿ; ಕಡಿ: ತುಂಡು, ಹೋಳು; ಬೆರಸು: ಸೇರಿಸು; ಪಲ್ಲಟ: ಅವ್ಯವಸ್ಥೆ, ತಲೆಕೆಳಗು; ಕಾದು: ಹೋರಾಡು; ಹಗೆ: ವೈರಿ;

ಪದವಿಂಗಡಣೆ:
ನರನ +ಶರಹತಿಗ್+ಎನ್ನ +ತನು +ಜ
ಝ್ಝರಿತವಾಗಲಿ+ ನನ್ನ+ ಕಣೆಯಲ್
ಬರಿಯಲ್+ಆತನ +ದೇಹ +ಖಾಡಾಖಾಡಿ +ಯುದ್ಧದಲಿ
ಕರುಳು +ಕರುಳಲಿ+ ತೊಡಕ್ +ನೊರೆ +ನೆ
ತ್ತರಲಿ +ನೆತ್ತರು +ಕೂಡಿ +ಕಡಿಯಲಿ
ಬೆರಸಿ +ಕಡಿ +ಪಲ್ಲಟಿಸೆ+ ಕಾದುವೆನಿಂದು +ಹಗೆಯೊಡನೆ

ಅಚ್ಚರಿ:
(೧)ಖಾಡಾಖಾಡಿ, ಕರುಳು ಕರುಳಲಿ, ನೆತ್ತರು ನೆತ್ತರಲು, ಜರ್ಝರಿತ – ಪದಗಳ ಬಳಕೆ
(೨) ತನು, ದೇಹ – ಸಮನಾರ್ಥಕ ಪದಗಳು

ಪದ್ಯ ೪೪: ನಿಡುನೋಟ ಮತ್ತು ನಸುನೋಟಗಳ ಯುದ್ಧ ಹೇಗಿತ್ತು?

ಧರಣಿಪತಿ ಕೇಳಖಿಳ ಪೃಥ್ವೀ
ಶ್ವರರ ಬಹಳಾಸ್ಥಾನದಲಿ ಮೊ
ಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
ಅರಸುಗಳ ನಿಡುನೋಟವಲ್ಲಿಯ
ಗರುವೆಯರ ನಸುನೋಟ ತಮ್ಮೊಳು
ಬೆರೆಸಿ ಹೊಯ್ದಾಡಿದವು ಖಾಡಾಖಾಡಿಯಂದದಲಿ (ಆದಿ ಪರ್ವ, ೧೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು (ಅಲ್ಲಲ್ಲಿ ಈ ಕಥೆ ಜನಮೇಜಯನಿಗೆ ಹೇಳುತ್ತಿರುವುದು ಎಂದು ಎಚ್ಚರಿಸಲು ಉಪಯೋಗಿಸುವ ಪದಪುಂಜ), ದ್ರೌಪದಿಯ ಸ್ವಯಂವರದ ಮಂಟಪದಲ್ಲಿ ಭೂಮಿಯ ಎಲ್ಲಾ ಪ್ರತಿಷ್ಠಿತ ರಾಜರ ಸಮಾಗಮವಾಗಿತ್ತು, ಅಲ್ಲಿ ದ್ರೌಪದಿಯ ಸಖೀಸೈನ್ಯ ಮುಂದೆಬರಲು, ಆ ಸೌಂದರ್ಯವತಿಯರನ್ನು ರಾಜರು ನೆಟ್ಟದೃಷ್ಟಿಯನ್ನು ಕದಲದೆ ಅವರನ್ನೇ ನೋಡುತ್ತಿದ್ದರು, ಸಖಿಯರು ಕೂಡ ರಾಜರನ್ನು ಕೊಂಚ ಸಮಯಕ್ಕೆ ನೋಡಿ ಮತ್ತೆ ಮತ್ತೊಬ್ಬ ರಾಜನ ನೋಟಕ್ಕೆ ದೃಷ್ಟಿ ಸೇರಿಸಿ ದೃಷ್ಟಿ ಯುದ್ಧವಾಗುತ್ತಿತ್ತು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಕೇಳು: ಆಲಿಸು; ಅಖಿಳ: ಎಲ್ಲಾ; ಪೃಥ್ವಿ: ಭೂಮಿ; ಪೃಥ್ವೀಶ್ವರ: ರಾಜ; ಬಹಳ: ತುಂಬ; ಆಸ್ಥಾನ: ದರ್ಬಾರು, ರಾಜ ಸಭೆ; ಮೊಹರು: ಮುದ್ರೆ, ಶಿಕ್ಕಾ; ಮೋಹನ: ಆಕರ್ಷಣೆ, ಸುಂದರವಾದ; ಮೋಡಾಮೋಡಿ: ಸೊಗಸಾದ ರೀತಿ, ಕೈಚಳಕ; ಅಬಲೆ: ಹುಡುಗಿ; ಅರಸು: ರಾಜ; ನಿಡುನೋಟ: ನೀಳವಾದ ನೋಟ; ಗರುವೆ: ಚೆಲುವೆ, ಸೊಗಸುಗಾತಿ; ನಸುನೋಟ: ಕೊಂಚ ನೋಟ; ಬೆರೆಸಿ:ಕಲಸಿ; ಹೊಯ್ದಾಡು: ಕಿತಾಡು; ಖಾಡಾಖಾಡಿ: ಖಂಡಿತವಾದುದು, ಸ್ಪಷ್ಟವಾದುದು;

ಪದವಿಂಗಡಣೆ:
ಧರಣಿಪತಿ+ ಕೇಳ್+ಅಖಿಳ +ಪೃಥ್ವೀ
ಶ್ವರರ +ಬಹಳ್+ಆಸ್ಥಾನದಲಿ+ ಮೊ
ಹರಿಸಿದರು+ ಮೋಹನದ +ಮೋಡಾಮೋಡಿಯ+ಅಬಲೆಯರು
ಅರಸುಗಳ+ ನಿಡುನೋಟವ್+ಅಲ್ಲಿಯ
ಗರುವೆಯರ +ನಸುನೋಟ +ತಮ್ಮೊಳು
ಬೆರೆಸಿ+ ಹೊಯ್ದಾಡಿದವು +ಖಾಡಾಖಾಡಿ+ಯಂದದಲಿ

ಅಚ್ಚರಿ:
(೧) ಧರಣಿಪತಿ, ಪೃಥ್ವೀಶ್ವರ, ಅರಸು; ಅಬಲೆ, ಗರುವೆ – ಸಮಾನಾರ್ಥಕ ಪದ
(೨) “ಮೊ” ಕಾರದ ತ್ರಿವಳಿ ಪದ – ಮೊಹರಿಸಿದರು ಮೋಹನದ ಮೋಡಾಮೋಡಿಯಬಲೆಯರು
(೩) ನಿಡುನೋಟ, ನಸುನೋಟ – ನೋಟದ ಬಗೆ, ನೀಳವಾದ ನೋಟ, ಕೊಂಚ (ಸ್ವಲ್ಪ) ನೋಟ
(೪) ಮೋಡಾಮೋಡಿ, ಖಾಡಾಖಾಡಿ – ಪದಗಳ ಬಳಕೆ
(೫) ೧ ಸಾಲಿನ ಮೊದಲ ಮತ್ತು ಕೊನೆಯ ಪದ ಭೂಮಿ ಅರ್ಥವನ್ನು ಕೊಡುವ ಪದಗಳು