ಪದ್ಯ ೮೩: ಭೀಮನು ದ್ರೌಪದಿಯನ್ನು ಹೇಗೆ ಸಿಂಗರಿಸಿದನು?

ಖಳನ ತೆಳುದೊಗಲುಗಿದು ವಾಸ
ಚ್ಛಲವ ಸಲಿಸಿದನವನ ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು
ತಳುಕಿದನು ಖಳನುರದ ರಕ್ತದ
ತಿಳಕವನು ರಚಿಸಿದನು ಹರುಷದೊ
ಳುಲಿದು ಚೀಚಕವೈರಿ ನೋಡಿದನೊಲಿದು ನಿಜಸತಿಯ (ಕರ್ಣ ಪರ್ವ, ೧೯ ಸಂಧಿ, ೮೩ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನ ತೆಳು ಚರ್ಮವನ್ನು ಸುಲಿದು ಅವಳ ಬಟ್ಟೆಗೆ ಅಂಟಿಸಿದನು. ಹೊಟ್ಟೆಯೊಳಗಿನಿಂದ ಕರುಳನ್ನು ಕಿತ್ತು ಅವಳ ಮುಡಿಗೆ ಮುಡಿಸಿದನು. ಖಳನ ಎದೆಯ ರಕ್ತವನ್ನು ಸೆಳೆದು ಅವಳಿಗೆ ತಿಲಕವನ್ನಿಟ್ಟನು. ಹರ್ಷೋದ್ಗಾರ ಮಾಡುತ್ತಾ ಭೀಮನು ತನ್ನ ಪತ್ನಿಯನ್ನು ಪ್ರೀತಿಯಿಂದ ನೋಡಿದನು.

ಅರ್ಥ:
ಖಳ: ದುಷ್ಟ; ತೆಳು:ಸಣ್ಣ, ಮೆದು; ತೊಗಲು: ಚರ್ಮ; ವಾಸಚ್ಛಲ: ಬಟ್ಟೆಯ ವ್ಯಾಜ, ನೆಪ; ಸಲಿಸು: ದೊರಕಿಸಿ ಕೊಡು; ಜಠರ: ಹೊಟ್ಟೆ; ಒಳ: ಆಂತರ್ಯದ; ಕರುಳು: ಪಚನಾಂಗ; ಉಗಿ: ಹೊರಕ್ಕೆ ತೆಗೆ; ಅಬುಜವದನೆ: ಕಮಲ ಮುಖಿ; ಮುಡಿ: ಶಿರ, ತಲೆ; ಮುಡಿಸು: ತೊಡಿಸು; ತಳುಕು: ಚಲಿಸು, ಅಲ್ಲಾಡು; ಉರ: ಎದೆ, ವಕ್ಷಸ್ಥಳ; ರಕ್ತ: ನೆತ್ತರು; ತಿಳಕ: ಹಣೆಯಲ್ಲಿಡುವ ಬೊಟ್ಟು; ರಚಿಸು: ನಿರ್ಮಿಸು, ಕಟ್ಟು; ಹರುಷ: ಸಂತೋಷ; ಉಲಿ: ಧ್ವನಿಮಾಡು; ಕೀಚಕವೈರಿ: ಭೀಮ; ಒಲಿ: ಸಮ್ಮತಿಸು, ಬಯಸು; ಸತಿ: ಹೆಂಡತಿ;

ಪದವಿಂಗಡಣೆ:
ಖಳನ +ತೆಳು+ ತೊಗಲುಗಿದು+ ವಾಸ
ಚ್ಛಲವ+ ಸಲಿಸಿದನ್+ಅವನ +ಜಠರದೊಳ್
ಒಳ+ಕರುಳನ್+ಉಗಿದ್+ಅಬುಜವದನೆಯ +ಮುಡಿಗೆ +ಮುಡಿಸಿದನು
ತಳುಕಿದನು +ಖಳನುರದ+ ರಕ್ತದ
ತಿಳಕವನು+ ರಚಿಸಿದನು +ಹರುಷದೊಳ್
ಉಲಿದು+ ಕೀಚಕವೈರಿ+ ನೋಡಿದನ್+ಒಲಿದು +ನಿಜ+ಸತಿಯ

ಅಚ್ಚರಿ:
(೧) ದ್ರೌಪದಿಯನ್ನು ಸಿಂಗರಿಸುವ ಪರಿ – ಖಳನುರದ ರಕ್ತದತಿಳಕವನು ರಚಿಸಿದನು; ಜಠರದೊ
ಳೊಳಗರುಳನುಗಿದಬುಜವದನೆಯ ಮುಡಿಗೆ ಮುಡಿಸಿದನು