ಪದ್ಯ ೪೬: ಯುದ್ಧಕ್ಕೆ ಎಲ್ಲರೂ ಹೇಗೆ ಸಿದ್ಧರಾದರು?

ಹರಿಗೆ ಹರಿದವು ಮುಂದೆ ಬಿಲ್ಲಾ
ಳುರವಣಿಸಿದರು ಮೋಹರವ ಮಿ
ಕ್ಕುರುಬಿದರು ಸಬಳಿಗರು ಮುಂಚಿತು ರಣಕೆ ಖಡ್ಗಿಗಳು
ತುರಗ ಕವಿದವು ದಂತಿಘಟೆಗಳು
ತುರುಗಿದವು ರಥ ರಾಜಿ ಮುಂಗುಡಿ
ವರಿದುದವನೀಪತಿಯ ಚೂಣಿಯ ನೃಪರ ಜೋಕೆಯಲಿ (ದ್ರೋಣ ಪರ್ವ, ೧ ಸಂಧಿ, ೪೬ ಪದ್ಯ)

ತಾತ್ಪರ್ಯ:
ಗುರಾಣಿ ಹಿಡಿದ ಸೈನ್ಯ ಮುನ್ನುಗ್ಗಿತು. ಬಿಲ್ಲಾಳುಗಳು ವೇಗವಾಗಿ ಚಲಿಸಿದರು. ಇವರನ್ನು ಹಿಂದಿಟ್ಟು ಸಬಳಿಗರು ಮುಂದಾದರು. ಕತ್ತಿ ಹಿಡಿದವರು ಅವರನ್ನು ಹಿಂದಿಟ್ಟು ನಡೆದರು. ಆನೆ ಕುದುರೆ ರಥಗಳ ಮುಂಚೂಣಿ ದೊರೆಯ ನಿರ್ದೇಶನದಂತೆ ಯುದ್ಧರಂಗಕ್ಕೆ ಬಂದವು.

ಅರ್ಥ:
ಹರಿ: ದಾಳಿ ಮಾಡು, ಮುತ್ತಿಗೆ ಹಾಕು; ಮುಂದೆ: ಎದುರು, ಮುಂಚೂಣೀ; ಬಿಲ್ಲಾಳು: ಬಿಲ್ಲುಗಾರರು; ಉರವಣೆ: ರಭಸ; ಮೋಹರ: ಯುದ್ಧ, ಸೈನ್ಯ; ಮಿಕ್ಕು: ಉಳಿದ; ಉರುಬು: ಅತಿಶಯವಾದ ವೇಗ; ಸಬಳ: ಈಟಿ, ಭರ್ಜಿ; ರಣ: ಯುದ್ಧಭೂಮಿ; ಖಡ್ಗಿ: ಕತ್ತಿಯನ್ನು ಹಿಡಿದವ; ತುರಗ: ಕುದುರೆ; ಕವಿ: ಆವರಿಸು; ದಂತಿಘಟೆ: ಆನೆಯ ಗುಂಪು; ತುರುಗು: ಸಂದಣಿಸು; ರಥ: ಬಂಡಿ; ರಾಜಿ: ಪಂಕ್ತಿ, ಗುಂಪು; ಮುಂಗುಡಿ: ಮುಂದೆ; ಅವನೀಪತಿ: ರಾಜ; ಚೂಣಿ: ಮೊದಲು; ನೃಪ: ರಾಜ; ಜೋಕೆ: ಎಚ್ಚರಿಕೆ;

ಪದವಿಂಗಡಣೆ:
ಹರಿಗೆ +ಹರಿದವು +ಮುಂದೆ +ಬಿಲ್ಲಾಳ್
ಉರವಣಿಸಿದರು +ಮೋಹರವ+ ಮಿಕ್ಕ್
ಉರುಬಿದರು +ಸಬಳಿಗರು +ಮುಂಚಿತು +ರಣಕೆ +ಖಡ್ಗಿಗಳು
ತುರಗ +ಕವಿದವು +ದಂತಿಘಟೆಗಳು
ತುರುಗಿದವು +ರಥ +ರಾಜಿ +ಮುಂಗುಡಿ
ವರಿದುದ್+ಅವನೀಪತಿಯ +ಚೂಣಿಯ +ನೃಪರ +ಜೋಕೆಯಲಿ

ಅಚ್ಚರಿ:
(೧) ಅವನೀಪತಿ, ನೃಪ – ಸಮಾನಾರ್ಥಕ ಪದ
(೨) ಆನೆ ಕುದುರೆಗಳು ಸಜ್ಜಾದ ಪರಿ – ತುರಗ ಕವಿದವು ದಂತಿಘಟೆಗಳು
ತುರುಗಿದವು

ಪದ್ಯ ೧೮: ಏನನ್ನು ತೋರುವೆನೆಂದು ಬೇಡನು ಕರೆದನು?

ಕಂಡ ಮೃಗ ಮೈದೆಗೆಯದಿಕ್ಕೆಯ
ಹಿಂಡು ಹೊಳಹಿನ ಹುಲಿಯ ಕರಡಿಯ
ಮಿಂಡವಂದಿನ ಲಾವಣಿಗೆಯ ಲುಲಾಯಲಾಲನೆಯ
ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ
ಹಿಂಡುಗಳ ತೋರಿಸುವೆನೇಳೆಂದನಿಲಜನ ಕರೆದ (ಅರಣ್ಯ ಪರ್ವ, ೧೪ ಸಂಧಿ, ೧೮ ಪದ್ಯ)

ತಾತ್ಪರ್ಯ:
ನೋಡಿದರೂ ಹೋದರೂ ಆ ಮೃಗಗಳು ಹಿಂದೆ ಸರಿಯುವುದಿಲ್ಲ. ಹುಲಿ ಕರಡಿಗಳ ಹಿಂಡುಗಳ ಗರ್ವ, ಕಾದುಕೋಣಗಳ ಗುಂಪು, ಮೊಲಗಳ ಚಲನೆ, ನವಿಲು, ಹಾವುಗಳು ಜೊತೆ ಜೊತೆ ಇರುವುದು, ಖಡ್ಗಮೃಗದ ಹಿಂಡುಗಳನ್ನು ತೋರುತ್ತೇನೆ ಮೇಲೇಳು ಎಂದು ಬೇಡನು ಭೀಮಸೇನನನ್ನು ಕರೆದನು.

ಅರ್ಥ:
ಕಂಡು: ನೋಡು; ಮೃಗ: ಪ್ರಾಣಿ; ಮೈ: ತನು, ದೇಹ; ತೆಗೆ: ಈಚೆಗೆ ತರು, ಹೊರತರು; ಇಕ್ಕೆ: ನೆಲೆ; ಬೀಡು; ಹಿಂಡು: ಗುಂಪು; ಹೊಳಹು: ಸ್ವರೂಪ, ಲಕ್ಷಣ; ಹುಲಿ: ವ್ಯಾಘ್ರ; ಕರಡಿ: ಮೈಎಲ್ಲಾ ಕೂದಲುಳ್ಳಪ್ರಾಣಿ; ಮಿಂಡ:ಹರೆಯದ, ಪ್ರಾಯದ; ಲಾವಣಿಗೆ: ಗುಂಪು, ಸಮೂಹ; ಲುಲಾಯ: ಕೋಣ, ಮಹಿಷ; ಲಾಲನೆ: ಅಕ್ಕರೆ ತೋರಿಸುವುದು, ಮುದ್ದಾಟ; ತೊಂಡು: ಉದ್ಧಟತನ, ದುಷ್ಟತನ; ಮೊಲ: ತೊಂಡ: ಆಳು; ತುಂಟತನ, ತುಂಟ; ನವಿಲು: ಮಯೂರ; ಮಂಡಳಿ: ಗುಂಪು; ಮೇಳ: ಸೇರುವಿಕೆ, ಕೂಡುವಿಕೆ; ಖಡ್ಗಿ: ಘೇಂಡಾಮೃಗ; ಹಿಂಡು: ಗುಂಪು; ತೋರಿಸು: ನೋಡು, ಗೋಚರಿಸು; ಅನಿಲಜ: ಭೀಮ; ಕರೆ: ಬರೆಮಾಡು;

ಪದವಿಂಗಡಣೆ:
ಕಂಡ +ಮೃಗ +ಮೈದೆಗೆಯದ್+ಇಕ್ಕೆಯ
ಹಿಂಡು +ಹೊಳಹಿನ +ಹುಲಿಯ +ಕರಡಿಯ
ಮಿಂಡವಂದಿನ+ ಲಾವಣಿಗೆಯ +ಲುಲಾಯ+ಲಾಲನೆಯ
ತೊಂಡು +ಮೊಲನ +ತೊಂಡಕು +ನವಿಲಿನ
ಮಂಡಳಿಯ +ಮೇಳವದ+ ಖಡ್ಗಿಯ
ಹಿಂಡುಗಳ +ತೋರಿಸುವೆನ್+ಏಳೆಂದ್+ಅನಿಲಜನ +ಕರೆದ

ಅಚ್ಚರಿ:
(೧) ಲ ಕಾರದ ತ್ರಿವಳಿ ಪದ – ಲಾವಣಿಗೆಯ ಲುಲಾಯ ಲಾಲನೆಯ
(೨) ಅರಣ್ಯದಲ್ಲಿ ಕಾಣುವ ವಿಶೇಷತೆ: ತೊಂಡು ಮೊಲನ ತೊಂಡಕು ನವಿಲಿನ
ಮಂಡಳಿಯ ಮೇಳವದ ಖಡ್ಗಿಯ ಹಿಂಡುಗಳ ತೋರಿಸುವೆ