ಪದ್ಯ ೧೫: ಭೀಮನನ್ನು ಯಾರು ಬೈದರು?

ಉಚಿತವೆಂದರು ಕೆಲವು ಕೆಲರಿದ
ನುಚಿತವೆಂದರು ಪೂರ್ವಜನ್ಮೋ
ಪಚಿತ ದುಷ್ಕೃತವೈಸಲೇ ಶಿವ ಎಂದು ಕೆಲಕೆಲರು
ಖಚರ ಕಿನ್ನರ ಯಕ್ಷ ನಿರ್ಜರ
ನಿಚಯ ಭೀಮನ ಬೈದು ಕುರುಪತಿ
ಯಚಳ ಬಲವನು ಬಣ್ಣಿಸುತ ಹೊಕ್ಕರು ನಿಜಾಲಯವ (ಗದಾ ಪರ್ವ, ೮ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಮಾಡಿದುದು ಸರಿ ಎಂದು ಕೆಲವರು ಹೊಗಳಿದರು, ಇದು ಅನುಚಿತವೆಂದು ಕೆಲವರು ಹೇಳಿದರು. ಪೂರ್ವಜನ್ಮದ ಸಂಚಿತ ಪಾಪವಲ್ಲವೇ ಶಿವ ಶಿವಾ ಎಂದು ಕೆಲರು ಉದ್ಗರಿಸಿದರು. ದೇವತೆಗಳು, ಕಿನ್ನರರು, ಯಕ್ಷರು, ಭೀಮನನ್ನು ಬೈದು ಕೌರವನನ್ನು ಹೊಗಳುತ್ತಾ ತಮ್ಮ ನಿವಾಸಗಳಿಗೆ ಹೋದರು.

ಅರ್ಥ:
ಉಚಿತ: ಸರಿಯಾದುದು; ಕೆಲವು: ಸ್ವಲ್ಪ; ಅನುಚಿತ: ಸರಿಯಲ್ಲದ್ದು; ಪೂರ್ವ: ಹಿಂದಿನ; ಜನ್ಮ: ಹುಟ್ಟು; ದುಷ್ಕೃತ: ಪಾಪ; ಐಸಲೇ: ಅಲ್ಲವೇ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ; ಯಕ್ಷ: ದೇವತೆಗಳಲ್ಲಿ ಒಂದು ವರ್ಗ; ನಿರ್ಜರ: ದೇವತೆ; ನಿಚಯ: ಗುಂಪು; ಬೈದು: ಜರೆದು; ಅಚಲ: ಸ್ಥಿರವಾದ; ಬಲ: ಶಕ್ತಿ; ಬಣ್ಣಿಸು: ವರ್ಣಿಸು, ಹೊಗಳು; ಹೊಕ್ಕು: ಸೇರು; ಆಲಯ: ಮನೆ;

ಪದವಿಂಗಡಣೆ:
ಉಚಿತವ್+ಎಂದರು +ಕೆಲವು +ಕೆಲರ್+ಇದ್
ಅನುಚಿತವೆಂದರು +ಪೂರ್ವಜನ್ಮೋ
ಪಚಿತ+ ದುಷ್ಕೃತವ್+ಐಸಲೇ +ಶಿವ +ಎಂದು +ಕೆಲಕೆಲರು
ಖಚರ +ಕಿನ್ನರ+ ಯಕ್ಷ+ ನಿರ್ಜರ
ನಿಚಯ +ಭೀಮನ +ಬೈದು +ಕುರುಪತಿ
ಅಚಳ +ಬಲವನು +ಬಣ್ಣಿಸುತ +ಹೊಕ್ಕರು +ನಿಜಾಲಯವ

ಅಚ್ಚರಿ:
(೧) ಉಚಿತ, ಅನುಚಿತ – ವಿರುದ್ಧ ಪದಗಳು
(೨) ದೇವತೆಗಳ ಗುಂಪುಗಳು – ಖಚರ ಕಿನ್ನರ ಯಕ್ಷ

ಪದ್ಯ ೫: ಕೃಷ್ಣನು ಅರ್ಜುನನನ್ನು ಎಲ್ಲಿಗೆ ಕರೆದೊಯ್ದನು?

ರಚನೆ ಚೆಲುವಿದು ನಾಳಿನಾಹವ
ಖಚರ ಕಿಂಪುರುಷರಿಗೆ ಅಸದಳ
ವಚಲಬಲಗಾಂಡಿವಿಗೆ ಹರಿಯದು ಸುಪ್ತಿಯೊಳಗವನ
ಉಚಿತದಲಿ ಕೊಂಡೊಯ್ದು ರುದ್ರನ
ವಚನದನುವನು ತಿಳಿವೆನೆಂದಾ
ಶಚಿಯಗಂಡನ ಮಗನನೀಶನ ಪದವ ಕಾಣಿಸಿದ (ದ್ರೋಣ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ಯೋಚಿಸುತ್ತಾ, ನಾಳಿನ ವ್ಯೂಹರಚನೆಯನನ್ನು ಭೇದಿಸಲು ದೇವತೆಗಳಿಗೂ ಕಿಂಪುರುಷರಿಗೂ ಅಸಾಧ್ಯ. ಅರ್ಜುನನು ಅಸಮಾನ ಬಲಶಾಲಿಯಾದರೂ ಅವನಿಗೆ ಗೆಲುವು ಅಸಾಧ್ಯ. ಅರ್ಜುನನ ಜೀವವನ್ನು ಆಕರ್ಷಿಸಿ ರುದ್ರನ ಬಳಿಗೆ ಹೋಗಿ ಅವನೇನು ಹೆಳುವನೋ ಕೇಳಿ ತಿಳಿದುಕೊಳ್ಳೋಣ ಎಂದುಕೊಂಡು ಶ್ರೀಕೃಷ್ಣನು ಅರ್ಜುನನ ಜೀವದೊಂದಿಗೆ ಹೋಗಿ ಶಿವನ ಪಾದದರ್ಶನವನ್ನು ಮಾಡಿಸಿದನು.

ಅರ್ಥ:
ರಚನೆ: ನಿರ್ಮಿಸು; ಚೆಲುವು: ಅಂದ; ನಾಳೆ: ಮರುದಿನ; ಆಹವ: ಯುದ್ಧ; ಖಚರ: ಗಂಧರ್ವ; ಅಸದಳ: ಅಸಾಧ್ಯ; ಅಚಲ: ಸ್ಥಿರವಾದ; ಬಲ: ಶಕ್ತಿ; ಗಾಂಡಿವಿ: ಅರ್ಜುನ; ಹರಿ: ಕತ್ತರಿಸು; ಸುಪ್ತಿ: ನಿದ್ರೆ, ನಿದ್ರಾವಸ್ಥೆ; ಉಚಿತ: ಸರಿಯಾದ; ಕೋಂಡೊಯ್ದು: ತೆರಳು; ರುದ್ರ: ಶಿವ; ವಚನ: ಮಾತು; ಅನುವು: ರೀತಿ, ಅವಕಾಶ; ತಿಳಿ: ಅರ್ಥೈಸು; ಶಚಿ: ಇಂದ್ರನ ಹೆಂಡತಿ; ಗಂಡ: ಯಜಮಾನ; ಮಗ: ಸುತ; ಈಶ: ಶಂಕರ; ಪದ: ಚರಣ; ಕಾಣಿಸು: ತೋರು;

ಪದವಿಂಗಡಣೆ:
ರಚನೆ +ಚೆಲುವಿದು +ನಾಳಿನ+ಆಹವ
ಖಚರ +ಕಿಂಪುರುಷರಿಗೆ +ಅಸದಳವ್
ಅಚಲಬಲ+ಗಾಂಡಿವಿಗೆ +ಹರಿಯದು +ಸುಪ್ತಿಯೊಳಗ್+ಅವನ
ಉಚಿತದಲಿ +ಕೊಂಡೊಯ್ದು +ರುದ್ರನ
ವಚನದ್+ಅನುವನು +ತಿಳಿವೆನೆಂದ್+ಆ
ಶಚಿಯಗಂಡನ +ಮಗನನ್+ಈಶನ +ಪದವ +ಕಾಣಿಸಿದ

ಅಚ್ಚರಿ:
(೧) ಅರ್ಜುನನನ್ನು ಶಚಿಯಗಂಡನ ಮಗ ಎಂದು ಕರೆದಿರುವುದು

ಪದ್ಯ ೪೩: ಯಕ್ಷ ಧರ್ಮಜನ ಸಂವಾದ – ೭

ನರಕಿಯಾವನು ಸುಜನರಲಿ ಬಾ
ಹಿರನದಾವನು ಲೋಕವರಿಯಲು
ಹರಣವಿರೆ ಹೊಂದಿದನದಾವನು ಭೂಮಿಪಾಲರಲಿ
ಮರುಳದಾವನು ಮಾನಭಂಗದಿ
ಭರಿತನಾವನು ಹೇಳು ಧರ್ಮಜ
ಸರಸಿಯಲಿ ಬಳಿಕುದಕವನು ಕುಡಿಯೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೪೩ ಪದ್ಯ)

ತಾತ್ಪರ್ಯ:
ಯಕ್ಷನು ತನ್ನ ಪ್ರಶ್ನೆಗಳನ್ನು ಮುಂದುವರೆಸುತ್ತಾ, ಯಾರು ನರಕಕ್ಕೆ ಹೋಗುತ್ತಾನೆ, ಸಜ್ಜನರಲ್ಲಿ ಯಾರು ಬಾಹಿರರು? ಜೀವವಿದ್ದರೂ ಯಾವ ರಾಜನು ಸತ್ತವನಾಗುತ್ತಾನೆ? ಯಾರು ಮರುಳ? ಯಾರು ಅಭಿಮಾನವನ್ನು ಕಳೆದುಕೊಂಡವನು? ಉತ್ತರವನ್ನು ಹೇಳಿ ಆನಂತರ ನೀರನ್ನು ಕುಡಿ ಎಂದು ಯಕ್ಷನು ಹೇಳಿದನು.

ಅರ್ಥ:
ನರಕಿ: ನರಕವಾಸಿ; ನರಕ: ಅಧೋ ಲೋಕ; ಸುಜನ: ಸಜ್ಜನ; ಬಾಹಿರ: ಹೊರಗಿನವ; ಲೋಕ: ಜಗತ್ತು; ಅರಿ: ತಿಳಿ; ಹರಣ: ಜೀವ, ಪ್ರಾಣ; ಭೂಮಿಪಾಲ; ರಾಜ; ಮರುಳ: ತಿಳಿಗೇಡಿ, ದಡ್ಡ; ಭಂಗ: ನಾಶ; ಮಾನ: ಗೌರವ, ಮರ್ಯಾದೆ; ಭರಿತ: ಕೂಡಿದ; ಹೇಳು: ತಿಳಿಸು; ಸರಸಿ: ಸರೋವರ; ಬಳಿಕ: ನಂತರ; ಉದಕ: ನೀರು; ಕುಡಿ: ಪಾನಮಾಡು; ಖಚರ: ಗಂಧರ್ವ, ಯಕ್ಷ;

ಪದವಿಂಗಡಣೆ:
ನರಕಿ+ಆವನು +ಸುಜನರಲಿ +ಬಾ
ಹಿರನದ್+ಆವನು +ಲೋಕವ್+ಅರಿಯಲು
ಹರಣವಿರೆ+ ಹೊಂದಿದನದ್+ಆವನು+ ಭೂಮಿಪಾಲರಲಿ
ಮರುಳದ್+ಆವನು+ ಮಾನ+ಭಂಗದಿ
ಭರಿತನ್+ಆವನು +ಹೇಳು +ಧರ್ಮಜ
ಸರಸಿಯಲಿ +ಬಳಿಕ್+ಉದಕವನು +ಕುಡಿ+ಎಂದನಾ +ಖಚರ

ಅಚ್ಚರಿ:
(೧) ಆವನು – ೫ ಬಾರಿ ಪ್ರಯೋಗ

ಪದ್ಯ ೪೧: ಯಕ್ಷ ಧರ್ಮಜನ ಸಂವಾದ – ೫

ನಿಂದ್ಯನಾವನು ಲೋಕದೊಳಗಭಿ
ವಂದ್ಯನಾವನು ಜೀವವಿರೆ ಮೃತ
ನೆಂದಡಾವನು ದೇಶಕಳಿವಹುದಾರ ದೆಸೆಯಿಂದ
ಸಂದ ಯಜ್ಞವದೆಂತು ಕೆಡುವುದು
ತಂದೆ ಹೇಳೈ ತನಗೆನಲು ಸಾ
ನಂದದಿಂದವೆ ಕಾಣಿಸಿದನಾ ಖಚರಗುತ್ತರವ (ಅರಣ್ಯ ಪರ್ವ, ೨೬ ಸಂಧಿ, ೪೧ ಪದ್ಯ)

ತಾತ್ಪರ್ಯ:
ಲೋಕದಲ್ಲಿ ನೀಂದೆಗೆ ಅರ್ಹನಾದವನು ಯಾರು? ವಂದನೆಗೆ ಪಾತ್ರನಾದವನು ಯಾರು? ಜೀವವಿದ್ದರೂ ಸತ್ತವನಾರು? ದೇಶವು ಯಾರಿಂದ ಅಳಿದು ಹೋಗುತ್ತದೆ? ಯಜ್ಞವು ಹೇಗೆ ನಿಷ್ಫಲವಾಗುತ್ತದೆ? ತಂದೆ ಉತ್ತರವನ್ನು ನೀಡು ಎಂದು ಯಕ್ಷ ಕೇಳಲು, ಧರ್ಮಜನು ಆನಂದದಿಂದ ಹೀಗೆ ಉತ್ತರಿಸಿದನು.

ಅರ್ಥ:
ನಿಂದನೆ: ಬಯ್ಗಳು, ದೂಷಣೆ; ಲೋಕ: ಜಗತ್ತು; ಅಭಿವಂದನೆ: ಗೌರವದಿಂದ ಮಾಡುವ ನಮಸ್ಕಾರ; ಜೀವ: ಪ್ರಾಣ; ಮೃತ: ಸಾವು; ದೇಶ: ರಾಷ್ಟ್ರ; ಅಳಿ: ಸಾವು; ದೆಸೆ: ಕಾರಣ; ಸಂದ: ಕಳೆದ, ಹಿಂದಿನ; ಯಜ್ಞ: ಯಾಗ, ಯಜನ; ಕೆಡು: ಹಾಳು; ಸಾನಂದ: ಸಂತಸ; ಕಾಣಿಸು: ತೋರು; ಖಚರ: ಗಂಧರ್ವ; ತಂದೆ: ತಾತ;

ಪದವಿಂಗಡಣೆ:
ನಿಂದ್ಯನ್+ಆವನು+ ಲೋಕದೊಳಗ್+ಅಭಿ
ವಂದ್ಯನಾವನು +ಜೀವವಿರೆ +ಮೃತ
ನೆಂದಡ್+ಆವನು +ದೇಶಕ್+ಅಳಿವಹುದಾರ+ ದೆಸೆಯಿಂದ
ಸಂದ +ಯಜ್ಞವದೆಂತು +ಕೆಡುವುದು
ತಂದೆ +ಹೇಳೈ +ತನಗೆನಲು+ ಸಾ
ನಂದದಿಂದವೆ +ಕಾಣಿಸಿದನಾ+ ಖಚರಗ್+ಉತ್ತರವ

ಅಚ್ಚರಿ:
(೧) ನಿಂದ್ಯ, ಅಭಿವಂದ್ಯ – ಪ್ರಾಸ ಪದ

ಪದ್ಯ ೩೯: ಯಕ್ಷ ಧರ್ಮಜನ ಸಂವಾದ – ೩

ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬುವನು
ನಿಯತಧೀರನದಾರು ದೇವ
ಪ್ರಿಯನದಾವನು ಕಠಿಣಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾಜನೀತಿಯನ್ನು ಬಲ್ಲವನೇ ಹೇಳು, ಕ್ಷತ್ರಿಯನು ಯಾರು? ಬ್ರಾಹಣರಲ್ಲಿ ಶ್ರೋತ್ರಿಯನಾರು? ಸಜ್ಜನರಲ್ಲಿ ಮಹಾಪುರುಷನಾರು? ಧೀರನು ಯಾರು? ದೇವತೆಗಳಿಗೆ ಪ್ರಿಯನಾದವನಾರು ಎಂದು ಕೇಳಿದನು.

ಅರ್ಥ:
ನಯ: ನುಣುಪು, ಮೃದುತ್ವ, ಅಂದ; ಕೇಳು: ಆಲಿಸು; ಕ್ಷತ್ರಿಯ: ನಾಲ್ಕು ವರ್ಣಗಳಲ್ಲಿ ಒಂದು; ವಿಪ್ರ: ಬ್ರಾಹ್ಮಣ; ಶ್ರೋತ್ರಿ: ಬ್ರಾಹ್ಮಣ; ಸುಜನ: ಒಳ್ಳೆಯ ವ್ಯಕ್ತಿ; ಮಹಪುರುಷ: ಶ್ರೇಷ್ಠ; ನಿಯತ: ನಿಶ್ಚಿತವಾದುದು; ಧೀರ: ಪರಾಕ್ರಮಿ; ದೇವ: ದೇವತೆ, ಸುರರು; ಪ್ರಿಯ: ಹಿತವಾದುದು; ಕಠಿಣ: ಬಿರುಸು, ಕಷ್ಟಕರವಾದ; ಆಶ್ರಯ: ಆಸರೆ, ಅವಲಂಬನ; ಹೇಳು: ತಿಳಿಸು; ಖಚರ: ಯಕ್ಷ, ಗಂಧರ್ವ;

ಪದವಿಂಗಡಣೆ:
ನಯವಿದನೆ+ ಕೇಳ್+ಆವನೈ +ಕ್ಷ
ತ್ರಿಯನು +ವಿಪ್ರರೊಳ್+ಆವನೈ+ ಶ್ರೋ
ತ್ರಿಯನು +ಸುಜನರೊಳ್+ಆವನೈ +ಮಹಪುರುಷನ್+ಎಂಬುವನು
ನಿಯತ+ಧೀರನದ್+ಆರು +ದೇವ
ಪ್ರಿಯನದ್+ಆವನು +ಕಠಿಣ+ಕಷ್ಟಾ
ಶ್ರಯನದ್+ಆವನು +ಧರ್ಮಸುತ +ಹೇಳೆಂದನಾ +ಖಚರ

ಅಚ್ಚರಿ:
(೧) ಕ್ಷತ್ರಿಯ, ಶ್ರೋತ್ರಿಯ – ಪ್ರಾಸ ಪದಗಳ ಬಳಕೆ

ಪದ್ಯ ೩೮: ಯಕ್ಷ ಧರ್ಮಜನ ಸಂವಾದ – ೨

ಗಗನವಬುಧಿಗೆ ಸರಿ ಸರೋವರ
ಜಗಕೆ ಹಿತವನು ಶಕ್ರ ಮರ್ತ್ಯಾ
ಳಿಗಳ ಮಾತಾರೂಪು ಗೋವುಗಳದು ನಿದಾನಕಣ
ಬಗೆಯಲಗ್ಗದ ಸತ್ಯವೆಂಬುದು
ಗಗನಮಣಿಗೆಣೆಯೆನಲು ಚಿತ್ತಕೆ
ಸೊಗಸಿ ತಲೆದೂಗಿದನು ಮಗುಳಿಂತೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೩೮ ಪದ್ಯ)

ತಾತ್ಪರ್ಯ:
ಆಕಾಶವು ಸಮುದ್ರಕ್ಕೆ ಸಮಾನವಾದ ಸರೋವರ, ಇಂದ್ರನೇ ಜಗತ್ತಿಗೆ ಹಿತವ ನೀಡುವವನು. ಮನುಷ್ಯರಿಗೆ ಗೋವೇ ತಾಯಿ, ಸತ್ಯವೆನ್ನುವುದು ಸೂರ್ಯ ಪ್ರಕಾಶಕ್ಕೆ ಸಮ, ಎಂದು ಧರ್ಮಜನು ಹೇಳಲು ಯಕ್ಷನು ತಲೆದೂಗಿ ಮತ್ತೆ ಕೇಳಿದನು.

ಅರ್ಥ:
ಗಗನ: ಆಗಸ; ಅಬುಧಿ: ಸಾಗರ; ಸರಿ: ಸಮಾನ; ಸರೋವರ: ಸರಸಿ; ಜಗ: ಪ್ರಪಂಚ; ಹಿತ: ಒಳ್ಳೆಯದು; ಶಕ್ರ: ಇಂದ್ರ; ಮರ್ತ್ಯಾಳಿ: ಮನುಷ್ಯರ ಗುಂಪು; ಮಾತೆ: ತಾಯಿ; ರೂಪ: ಆಕಾರ; ಗೋವು: ಆಕಳು; ನಿದಾನ: ಕಾರಣ, ನಿಮಿತ್ತ, ಮೂಲಕಾರಣ; ಬಗೆ: ಅಭಿಪ್ರಾಯ, ಮತ; ಅಗ್ಗ: ಶ್ರೇಷ್ಠ; ಸತ್ಯ: ನಿಜ, ದಿಟ; ಗಗನಮಣಿ: ಸೂರ್ಯ; ಎಣೆ: ಸಮ, ದಾಟಿ; ಎನಲು: ಹೇಳಲು; ಚಿತ್ತ: ಮನಸ್ಸು; ಸೊಗಸು: ಚೆಲುವು; ತಲೆ: ಶಿರ; ತೂಗು: ಅಲ್ಲಾಡಿಸು; ಮಗುಳು: ಮತ್ತೆ, ಪುನಃ; ಖಚರ: ಗಂಧರ್ವ;

ಪದವಿಂಗಡಣೆ:
ಗಗನವ್+ಅಬುಧಿಗೆ +ಸರಿ+ ಸರೋವರ
ಜಗಕೆ+ ಹಿತವನು +ಶಕ್ರ +ಮರ್ತ್ಯಾ
ಳಿಗಳ+ ಮಾತಾರೂಪು+ ಗೋವುಗಳ್+ ಅದು+ ನಿದಾನಕಣ
ಬಗೆಯಲ್+ಅಗ್ಗದ +ಸತ್ಯವೆಂಬುದು
ಗಗನಮಣಿಗ್+ಎಣೆ+ಎನಲು +ಚಿತ್ತಕೆ
ಸೊಗಸಿ+ ತಲೆದೂಗಿದನು +ಮಗುಳ್+ಇಂತೆಂದನಾ +ಖಚರ

ಅಚ್ಚರಿ:
(೧) ಗೋವಿನ ಮಹತ್ವ – ಮರ್ತ್ಯಾಳಿಗಳ ಮಾತಾರೂಪು ಗೋವುಗಳದು ನಿದಾನಕಣ
(೨) ಸೂರ್ಯನನ್ನು ಗಗನಮಣಿ ಪದದ ಬಳಕೆ

ಪದ್ಯ ೬: ಧರ್ಮಜನಿಗೆ ದ್ರೌಪದಿ ಏನು ಹೇಳಿದಳು?

ಕೆಳದಿಯರ ಕೈಯಿಂದ ಕೊಯ್ಸಿದ
ಳುಳಿದ ಕೌರವನನುಜವರ್ಗದ
ಬಲು ಹುರಿಯ ನೇಣುಗಳನವದಿರ ಗೋಣುಗಳು ಮಣಿಯೆ
ಅಳಲಿಸಿದನೇ ಖಚರನಾತನ
ಕೊಲಿಸಬೇಹುದು ಕಳುಹಿ ಕಷ್ಟವ
ಬಳಸಿದಿರಿ ಭೂಪಾಲಯೆಂದಳು ನಳಿನಮುಖಿ ನಗುತ (ಅರಣ್ಯ ಪರ್ವ, ೨೨ ಸಂಧಿ, ೬ ಪದ್ಯ)

ತಾತ್ಪರ್ಯ:
ತನ್ನ ಸಖಿಯರನ್ನು ಕರೆಸಿ, ಕೌರವನ ತಮ್ಮಂದಿರ ಬಂಧನವನ್ನೆಲ್ಲವನ್ನೂ ಕೊಯಿಸಿದಳು. ಅವರೆಲ್ಲರೂ ನಾಚಿ ತಲೆ ತಗ್ಗಿಸಿದರು, ದ್ರೌಪದಿಯು ಧರ್ಮರಾಯನಿಗೆ ಗಂಧರ್ವರಾಜನು ಇವರೆಲ್ಲರಿಗೂ ಕಷ್ಟಕೊಟ್ಟು ಅಳಲಿಸಿದನೇ? ಅವನನ್ನು ಕೊಲ್ಲಿಸಬೇಕಾಗಿತ್ತು, ಅವನನ್ನು ಕಳಿಸಿ ದೊಡ್ಡ ತಪ್ಪು ಮಾಡಿದಿರಿ ಎಂದು ನಗುತ್ತಾ ಹೇಳಿದಳು.

ಅರ್ಥ:
ಕೆಳದಿ: ಸ್ನೇಹಿತೆ; ಕೈ: ಹಸ್ತ; ಕೊಯ್ಸು: ಬಿಚ್ಚಿಸು; ಉಳಿದ: ಮಿಕ್ಕ; ಅನುಜ: ತಮ್ಮ; ವರ್ಗ: ಗುಂಪು; ಬಲು: ಬಹಳ; ಹುರಿಯ: ರಜ್ಜು, ಹಗ್ಗ; ನೇಣು: ಕುಣಿಕೆ; ಅವದಿರ: ಅವರ; ಗೋಣು: ಕಂಠ, ಕುತ್ತಿಗೆ; ಮಣಿ: ಬಗ್ಗು; ಅಳಲು: ದುಃಖ; ಖಚರ: ಗಂಧರ್ವ; ಕೊಲಿಸು: ಸಾಯಿಸು; ಕಳುಹು: ಬೀಳ್ಕೊಟ್ಟು; ಕಷ್ಟ: ತೊಂದರೆ, ತಪ್ಪು; ಬಳಸು: ಸುತ್ತುವರಿ; ಭೂಪಾಲ: ರಾಜ; ನಳಿನಮುಖಿ: ಕಮಲದಂತ ಮುಖವುಳ್ಳವಳು; ನಗು: ಸಂತಸ;

ಪದವಿಂಗಡಣೆ:
ಕೆಳದಿಯರ +ಕೈಯಿಂದ +ಕೊಯ್ಸಿದಳ್
ಉಳಿದ +ಕೌರವನ್+ಅನುಜ+ವರ್ಗದ
ಬಲು +ಹುರಿಯ +ನೇಣುಗಳನ್+ಅವದಿರ+ ಗೋಣುಗಳು +ಮಣಿಯೆ
ಅಳಲಿಸಿದನೇ +ಖಚರನ್+ಆತನ
ಕೊಲಿಸಬೇಹುದು +ಕಳುಹಿ +ಕಷ್ಟವ
ಬಳಸಿದಿರಿ +ಭೂಪಾಲ+ಎಂದಳು +ನಳಿನಮುಖಿ +ನಗುತ

ಅಚ್ಚರಿ:
(೧) ಕೌರವನನ್ನು ಅಣುಕಿಸುವ ಪರಿ – ಅಳಲಿಸಿದನೇ ಖಚರನಾತನಕೊಲಿಸಬೇಹುದು

ಪದ್ಯ ೨೧: ಅರ್ಜುನನ ಬಾಣ ಪ್ರಯೋಗ ಹೇಗಿತ್ತು?

ಸರಳಿನುಬ್ಬೆಗೆ ಸೆಡೆದು ಸಮರಕೆ
ತಿರುಗಿ ನಿಂದುದು ಖಚರಬಲವು
ಬ್ಬರದ ಬೊಬ್ಬೆಯಲುರುಬಿದುದು ಶರಹತಿಗೆ ಸೈರಿಸುತ
ಉರುಳಿದವು ಗಂಧರ್ವಶಿರ ನಭ
ಸರಳಮಯ ದಿಗುಜಾಲವಂಬಿನ
ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾಪಾರ್ಥ (ಅರಣ್ಯ ಪರ್ವ, ೨೧ ಸಂಧಿ, ೨೧ ಪದ್ಯ)

ತಾತ್ಪರ್ಯ:
ಅರ್ಜುನನ ಬಾಣಗಳ ಹೊಡೆತಕ್ಕೆ ಸಿಕ್ಕ ಗಂಧರ್ವಬಲವು, ತೀವ್ರವಾಗಿ ಗರ್ಜಿಸುತ್ತಾ ಅರ್ಜುನನನ್ನು ಎದುರಿಸಿತು. ಗಂಧರ್ವರ ತಲೆಗಳು ಉರುಳಿದವು. ಆಕಾಶವೂ ಎಂಟು ದಿಕ್ಕುಗಳೂ ಬಾಣದಿಂದ ತುಂಬುವಂತೆ ಅರ್ಜುನನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಸರಳು: ಬಾಣ; ಉಬ್ಬು: ಹೆಚ್ಚಾಗು; ಸೆಡೆ: ಉಬ್ಬು, ದಪ್ಪವಾಗು; ಸಮರ: ಯುದ್ಧ; ತಿರುಗು: ಸುತ್ತು; ನಿಂದು: ನಿಲ್ಲು; ಖಚರ: ಗಂಧರ್ವ; ಬಲ: ಸೈನ್ಯ; ಉಬ್ಬರ: ಹೆಚ್ಚು; ಬೊಬ್ಬೆ: ಗರ್ಜಿಸು; ಉರುಬು: ಅತಿಶಯವಾದ ವೇಗ; ಶರ: ಬಾಣ; ಹತಿ: ಪೆಟ್ಟು, ಹೊಡೆತ; ಸೈರಿಸು: ತಾಳು; ಉರುಳು: ಕೆಳಕ್ಕೆ ಬೀಳು; ಶಿರ: ತಲೆ; ನಭ: ಆಗಸ; ಮಯ: ತುಂಬು; ದಿಗು: ದಿಕ್ಕು; ಜಾಲ: ಬಲೆ, ಸಮೂಹ; ಅಂಬು: ಬಾಣ; ಹೊರಳು: ಉರುಳಾಡು; ಹೊದಿಸು: ಮುಸುಕು; ಕವಿ: ದಾಳಿಮಾಡು; ಎಚ್ಚು: ಬಾಣ ಪ್ರಯೋಗ ಮಾದು;

ಪದವಿಂಗಡಣೆ:
ಸರಳಿನ್+ಉಬ್ಬೆಗೆ +ಸೆಡೆದು +ಸಮರಕೆ
ತಿರುಗಿ +ನಿಂದುದು +ಖಚರಬಲವ್
ಉಬ್ಬರದ +ಬೊಬ್ಬೆಯಲ್+ಉರುಬಿದುದು +ಶರಹತಿಗೆ+ ಸೈರಿಸುತ
ಉರುಳಿದವು +ಗಂಧರ್ವ+ಶಿರ+ ನಭ
ಸರಳಮಯ +ದಿಗುಜಾಲವ್+ಅಂಬಿನ
ಹೊರಳಿಯಲಿ +ಹೊದಿಸಿದುದೆನಲು+ ಕವಿದೆಚ್ಚನಾ+ಪಾರ್ಥ

ಅಚ್ಚರಿ:
(೧) ಅರ್ಜುನನ ಬಾಣದ ವೈಖರಿ – ನಭ ಸರಳಮಯ ದಿಗುಜಾಲವಂಬಿನ
ಹೊರಳಿಯಲಿ ಹೊದಿಸಿದುದೆನಲು ಕವಿದೆಚ್ಚನಾಪಾರ್ಥ

ಪದ್ಯ ೭೨: ಕಾಲವೆಂಬುದೇನು?

ಕಾಲವೆಂಬುದು ರವಿಯ ಗಾಲಿಯ
ಕಾಲಗತಿಯೈ ಸಲೆ ಕೃತಾಂತಗೆ
ಲೀಲೆ ಸೃಷ್ಟಿ ಸ್ಥಿತಿಲಯವು ಸಚರಾಚರಗಳಲಿ
ಕಾಲ ಚಕ್ರದ ಖಚರ ಗತಿಯಲಿ
ಕಾಳಗತ್ತಲೆಯನು ನಿವಾರಿಸಿ
ಪಾಲಿಸುವ ಲೋಕಂಗಳಿನಿತುವ ಪಾರ್ಥ ನೋಡೆಂದ (ಅರಣ್ಯ ಪರ್ವ, ೮ ಸಂಧಿ, ೭೨ ಪದ್ಯ)

ತಾತ್ಪರ್ಯ:
ಪಾರ್ಥ ಕೇಳು, ಕಾಲವೆಂಬುದು ಸೂರ್ಯನ ರಥದ ಚಕ್ರದ ಚಲನೆ. ಇದು ಯಮನ ಲೀಲಾವಿನೋದ. ಚಲಿಸುವ ಮತ್ತು ಜಡವಸ್ತುಗಳ ಸೃಷ್ಟಿ, ಸ್ಥಿತಿ, ಲಯಗಳನ್ನು ಸೂರ್ಯನು ಆಕಾಶದಲ್ಲಿ ಚಲಿಸುತ್ತಾ ನಿಯಂತ್ರಿಸುತ್ತಾನೆ, ಕತ್ತಲೆಯನ್ನು ಕಳೆದು ಲೋಕಗಳನ್ನು ಪಾಲಿಸುತ್ತಾನೆ.

ಅರ್ಥ:
ಕಾಲ: ಸಮಯ; ರವಿ: ಸೂರ್ಯ; ಗಾಲಿ: ಚಕ್ರ; ಗತಿ: ಚಲನೆ, ವೇಗ; ಸಲೆ: ಒಂದೇ ಸಮನೆ; ಕೃತಾಂತ: ಯಮ; ಲೀಲೆ: ಆನಂದ, ಸಂತೋಷ; ಸೃಷ್ಟಿ: ಹುಟ್ಟು; ಸ್ಥಿತಿ: ಅವಸ್ಥೆ; ಲಯ; ನಾಶ; ಚರಾಚರ: ಚಲಿಸುವ-ಚಲಿಸದಿರುವ; ಚಕ್ರ: ಗಾಲಿ; ಖಚರ: ಸೂರ್ಯ; ಕಾಳಗತ್ತಲೆ: ಅಂಧಕಾರ; ನಿವಾರಿಸು: ಹೋಗಲಾಡಿಸು; ಪಾಲಿಸು: ರಕ್ಷಿಸು, ಕಾಪಾಡು; ಲೋಕ: ಜಗತ್ತು; ನೋಡು: ವೀಕ್ಷಿಸು;

ಪದವಿಂಗಡಣೆ:
ಕಾಲವೆಂಬುದು +ರವಿಯ +ಗಾಲಿಯ
ಕಾಲಗತಿಯೈ+ ಸಲೆ+ ಕೃತಾಂತಗೆ
ಲೀಲೆ +ಸೃಷ್ಟಿ +ಸ್ಥಿತಿ+ಲಯವು +ಸಚರಾಚರಗಳಲಿ
ಕಾಲ +ಚಕ್ರದ +ಖಚರ +ಗತಿಯಲಿ
ಕಾಳಗತ್ತಲೆಯನು +ನಿವಾರಿಸಿ
ಪಾಲಿಸುವ +ಲೋಕಂಗಳಿನಿತುವ+ ಪಾರ್ಥ +ನೋಡೆಂದ

ಅಚ್ಚರಿ:
(೧) ಕಾಲದ ವಿವರ – ಕಾಲವೆಂಬುದು ರವಿಯ ಗಾಲಿಯ ಕಾಲಗತಿಯೈ

ಪದ್ಯ ೫: ರಾಕ್ಷಸ ಪುತ್ರರು ಯಾವ ವರವನ್ನು ಕೇಳಿದರು?

ರಚಿಸುವೆವು ಪುರಮೂರನಗ್ಗದ
ಖಚರ ಕಿನ್ನರ ಸಿದ್ಧ ನಿರ್ಜರ
ನಿಚಯವೆಮಗೋಲೈಸಿ ಹೋಗಲಿ ಹಲವು ಮಾತೇನು
ಉಚಿತದಲಿ ನಿಮ್ಮಡಿಗಳನು ಪರಿ
ರಚಿಸಲಾವೋಲೈಸುವೆವು ವರ
ವಚನ ನಿಮ್ಮದು ಕರುಣಿಸುವುದಮರತ್ವವನು ನಮಗೆ (ಕರ್ಣ ಪರ್ವ, ೬ ಸಂಧಿ, ೫ ಪದ್ಯ)

ತಾತ್ಪರ್ಯ:
ಆ ಮೂವರು ರಾಕ್ಷಸ ಪುತ್ರರು ನಾವು ಮೂರು ಊರುಗಳನ್ನು ರಚಿಸುತ್ತೇವೆ, ದೇವತೆಗಳು, ಕಿನ್ನರರು, ಸಿದ್ಧರು, ಮೊದಲಾದವರೆಲ್ಲರೂ ನಮಗೆ ಸೇವಕರಾಗಿರಬೇಕು, ಕೇಳಿದುದನ್ನು ಕೊಡುತ್ತೇವೆ ಎಂದಿರಿ, ಅದಕ್ಕಾಗಿ ಕೇಳುತ್ತಿದ್ದೇವೆ, ನಮಗೆ ಮರಣವೇ ಬರಬಾರದು ಎಂದು ಕೇಳಿದರು.

ಅರ್ಥ:
ರಚಿಸು: ನಿರ್ಮಿಸು; ಪುರ: ಊರು; ಮೂರು: ತ್ರಿ, ತ್ರಯ; ಅಗ್ಗ: ಶ್ರೇಷ್ಠ; ಖಚರ: ಗಂಧರ್ವ; ಕಿನ್ನರ: ದೇವತೆಗಳ ಒಂದುವರ್ಗ, ಕಿಂಪುರುಷ; ಸಿದ್ಧ:ದೇವತೆಗಳಲ್ಲಿ ಒಂದು ಪಂಗಡ; ನಿರ್ಜರ: ದೇವತೆಗಳು; ನಿಚಯ: ಗುಂಪು; ಓಲೈಸು: ಉಪಚರಿಸು; ಹಲವು: ಬಹಳ; ಮಾತು: ನುಡಿ; ಉಚಿತ: ಸರಿಯಾದ; ನಿಮ್ಮಡಿ: ನಿಮ್ಮ ಸೇವೆ; ಪರಿ: ರೀತಿ; ವರ: ಶ್ರೇಷ್ಠ; ವಚನ: ನುಡಿ; ಅಮರ: ಮರಣವಿಲ್ಲದ;

ಪದವಿಂಗಡಣೆ:
ರಚಿಸುವೆವು +ಪುರ+ಮೂರನ್+ಅಗ್ಗದ
ಖಚರ+ ಕಿನ್ನರ +ಸಿದ್ಧ +ನಿರ್ಜರ
ನಿಚಯವ್+ಎಮಗ್+ಓಲೈಸಿ +ಹೋಗಲಿ +ಹಲವು +ಮಾತೇನು
ಉಚಿತದಲಿ +ನಿಮ್ಮಡಿಗಳನು +ಪರಿ
ರಚಿಸಲಾವ್+ಓಲೈಸುವೆವು +ವರ
ವಚನ +ನಿಮ್ಮದು +ಕರುಣಿಸುವುದ್+ಅಮರತ್ವವನು +ನಮಗೆ

ಅಚ್ಚರಿ:
(೧) ರಚಿಸು – ೧, ೫ ಸಾಲಿನ ಮೊದಲ ಪದ
(೨) ದೇವತೆಗಳ ಗುಂಪುಗಳು: ಖಚರ, ಕಿನ್ನರ, ಸಿದ್ಧ
(೩) ಅಗ್ಗ, ವರ – ಸಾಮ್ಯಾರ್ಥಪದಗಳು