ಪದ್ಯ ೪೦: ದ್ರೌಪದಿಯು ಕೃಷ್ಣನಿಗೆ ಏನನ್ನು ನೀಡಿದಳು?

ಮಾತುಗಳು ಸೊಗಸುವುವೆ ಹಸಿವಿಂ
ದಾತುರರಿಗೆಲೆ ತಂಇತರೌ
ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು
ಏತಕೀ ಜಂಜಡವೆನಲು ಜಲ
ಜಾತಮುಖಿ ಕಂಪಿಸುತ ಕುಮುದಾ
ರಾತಿಕೊಟ್ಟಾ ಸ್ಥಾಲಿಯನು ತಂದಿತ್ತಳಿದೆಯೆನುತ (ಅರಣ್ಯ ಪರ್ವ, ೧೭ ಸಂಧಿ, ೪೦ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ದ್ರೌಪದಿಯನ್ನುದ್ದೇಶಿಸಿ, ತಂಗಿ, ಹಸಿವಿನಿಂದ ಪೀಡಿತರಿಗೆ ಮಾತುಗಳು ತೃಪ್ತಿಯುಂಟು ಮಾದುವುದಿಲ್ಲ. ದ್ರೌಪದಿ ಕೇಳು, ಪ್ರೇಮದ ಬಗೆಯನ್ನು ಬಲ್ಲವರು, ಲಿದು ಕೊಟ್ಟುದೇ ಹಸಿವಿಗೆ ಅಮೃತದಂತೆ ತೃಪ್ತಿಯನ್ನುಂಟು ಮಾಡುತ್ತದೆ. ಬರೀ ಈ ತೊಡಕಿನ ಮಾತು ಬೇಡೆ ಎನಲು, ದ್ರೌಪದಿಯು ನಡುಗುತ್ತಾ ಸೂರ್ಯನಿತ್ತ ಅಕ್ಷಯ ಪಾತ್ರೆಯನ್ನು ತಂದು ಕೃಷ್ಣನಿಗೆ ಇದೋ ತೆಗೆದುಕೋ ಎಂದು ನೀಡಿದಳು.

ಅರ್ಥ:
ಮಾತು: ವಾಣಿ; ಸೊಗಸು: ಚೆಂದ; ಹಸಿ: ಆಹಾರವನ್ನು ಬಯಸು, ಹಸಿವಾಗು; ಆತುರ: ಬೇಗ; ತಂಗಿ: ಅನುಜೆ; ತಾರೌ: ತೆಗೆದುಕೊಂಡು ಬಾ; ಪ್ರೀತಿ: ಒಲವು; ಕ್ಷುಧೆ: ಹಸಿವು; ಅಮೃತ: ಸುಧೆ; ಪುಂಜ: ಸಮೂಹ; ಜಂಜಡ: ತೊಂದರೆ, ಕ್ಲೇಶ; ಜಲಜಾತಮುಖಿ: ಕಮಲದಂತ ಮುಖವುಳ್ಳವಳು; ಕಂಪಿಸು: ನಡುಗು; ಕುಮುದ: ನೈದಿಲೆ; ಅರಾತಿ: ವೈರಿ; ಕುಮುದಾರಾತಿ: ಸೂರ್ಯ; ಕೊಟ್ಟ: ನೀಡಿದ; ಸ್ಥಾಲಿ: ಸಣ್ಣಪಾತ್ರೆ; ಇತ್ತಳು: ನೀಡು;

ಪದವಿಂಗಡಣೆ:
ಮಾತುಗಳು+ ಸೊಗಸುವುವೆ +ಹಸಿವಿಂದ್
ಆತುರರಿಗ್+ಎಲೆ+ ತಂಗಿ+ತರೌ
ಪ್ರೀತಿವಿದರ್+ಒಲಿದ್+ಇತ್ತುದೇ +ಕ್ಷುಧೆಗ್+ಅಮೃತ +ಪುಂಜವದು
ಏತಕೀ +ಜಂಜಡವೆನಲು +ಜಲ
ಜಾತಮುಖಿ +ಕಂಪಿಸುತ +ಕುಮುದಾ
ರಾತಿ+ಕೊಟ್ಟ+ಆ+ಸ್ಥಾಲಿಯನು+ ತಂದಿತ್ತಳ್+ಇದೆಯೆನುತ

ಅಚ್ಚರಿ:
(೧) ಸೂರ್ಯನನ್ನು ಕುಮುದಾರಾತಿ, ದ್ರೌಪದಿಯನ್ನು ಜಲಜಾತಮುಖಿ ಎಂದು ಕರೆದಿರುವುದು
(೨) ಯಾವುದು ಅಮೃತ – ಪ್ರೀತಿವಿದರೊಲಿದಿತ್ತುದೇ ಕ್ಷುಧೆಗಮೃತ ಪುಂಜವದು