ಪದ್ಯ ೪೬: ದ್ರೋಣನು ಶತ್ರುಗಳನ್ನು ಹೇಗೆ ಸಂಹರಿಸಿದನು?

ಕೋಲಿಗೊಬ್ಬರ ಕೆಡಹಿದನು ಪಾಂ
ಚಾಲ ಬಲದಲಿ ಸತ್ಯಜಿತುವನು
ಮೇಲಣಾಹವದೊಳು ಶತಾನೀಕಕ್ಷಿತೀಶ್ವರನ
ಸೀಳಿದನು ಮಿಡುಕುವ ಮಹಾರಥ
ರೇಳು ನೂರನು ತುರಗ ಗಜ ಕಾ
ಲಾಳನಳಿದುದನಾವನೆಣಿಸುವನಹಿತ ಸೇನೆಯಲಿ (ದ್ರೋಣ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಒಂದು ಬಾಣಕ್ಕೊಬ್ಬನಂತೆ ದ್ರೋಣನು ಶತ್ರುಸೈನ್ಯದ ಪರಾಕ್ರಮಿಗಳನ್ನು ಸಂಹರಿಸಿದನು. ಪಾಂಚಾಲ ಸೈನ್ಯದಲ್ಲಿ ಸತ್ಯಜಿತುವನ್ನೂ, ನಂತರ ಶತಾನೀಕನನ್ನೂ ಸೀಳಿದನು. ಏಳುನೂರು ಮಹಾರಥರನ್ನು ಸೀಳಿ, ಲೆಕ್ಕವಿಲ್ಲದಷ್ಟು ಚತುರಂಗ ಸೈನ್ಯವನ್ನು ಸಂಹರಿಸಿದನು.

ಅರ್ಥ:
ಕೋಲು: ಬಾಣ; ಕೆಡಹು: ಬೀಳಿಸು; ಬಲ: ಸೈನ್ಯ; ಆಹವ: ಯುದ್ಧ; ಕ್ಷಿತೀಶ್ವರ: ರಾಜ; ಸೀಳು: ಕತ್ತರಿಸು; ಮಿಡುಕು: ಅಲುಗಾಟ, ಚಲನೆ; ಮಹಾರಥ: ಪರಾಕ್ರಮಿ; ನೂರು: ಶತ; ತುರಗ: ಅಶ್ವ; ಗಜ: ಆನೆ; ಕಾಲಾಳು: ಸೈನಿಕ; ಅಳಿ: ನಾಶ; ಎಣಿಸು: ಲೆಕ್ಕಹಾಕು; ಅಹಿತ: ಶತ್ರು; ಸೇನೆ: ಸೈನ್ಯ;

ಪದವಿಂಗಡಣೆ:
ಕೋಲಿಗ್+ಒಬ್ಬರ+ ಕೆಡಹಿದನು +ಪಾಂ
ಚಾಲ +ಬಲದಲಿ +ಸತ್ಯಜಿತುವನು
ಮೇಲಣ್+ಆಹವದೊಳು +ಶತಾನೀಕ+ಕ್ಷಿತೀಶ್ವರನ
ಸೀಳಿದನು +ಮಿಡುಕುವ +ಮಹಾರಥರ್
ಏಳು+ ನೂರನು +ತುರಗ +ಗಜ +ಕಾ
ಲಾಳನ್+ಅಳಿದುದನ್+ಆವನ್+ಎಣಿಸುವನ್+ಅಹಿತ +ಸೇನೆಯಲಿ

ಅಚ್ಚರಿ:
(೧) ದ್ರೋಣನ ಪರಾಕ್ರಮ – ಕೋಲಿಗೊಬ್ಬರ ಕೆಡಹಿದನು

ಪದ್ಯ ೮೦: ಸ್ವರ್ಗಕ್ಕೆ ಭರತವರ್ಷದಿಂದ ಯಾರು ಹೋಗಿದ್ದಾರೆ?

ಇದೆಯಸಂಖ್ಯಾತ ಕ್ಷಿತೀಶ್ವರ
ರುದಿತ ಕೃತಪುಣ್ಯೋಪಚಯ ಭೋ
ಗದಲಿ ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ
ಇದರೊಳಗೆ ಜಪ ಯಜ್ಞ ದಾನಾ
ಭ್ಯುದಯ ವೈದಿಕ ಕರ್ಮನಿಷ್ಠರ
ಪದವಿಗಳ ಪರುಠವಣೆಯನು ಕಲಿಪಾರ್ಥನೋಡೆಂದ (ಅರಣ್ಯ ಪರ್ವ, ೮ ಸಂಧಿ, ೮೦ ಪದ್ಯ)

ತಾತ್ಪರ್ಯ:
ಎಲೈ ಅರ್ಜುನ, ನಿಮ್ಮದು ಪುಣ್ಯಭೂಮಿಯಾದ ಭರತವರ್ಷ, ಇಲ್ಲಿ ಅಸಂಖ್ಯಾತ ರಾಜರು ತಾವು ಮಾಡಿದ ಪುಣ್ಯ ಕರ್ಮ ಸಂಗ್ರಹದಿಂದ ಸ್ವರ್ಗವನ್ನು ಸಂಪಾದಿಸಿದ್ದಾರೆ. ಇಲ್ಲಿ ಜಪ, ತಪ, ಯಜ್ಞ, ದಾನ ಅಭ್ಯುದಯವನ್ನುಂಟು ಮಾಡುವ ವೈದಿಕ ಕರ್ಮಗಳಿಂದ ಸ್ವರ್ಗಕ್ಕೆ ಬಂದು ಸುಖವನ್ನನುಭವಿಸುತ್ತಿದ್ದಾರೆ, ಈ ವ್ಯವಸ್ಥೆಯನ್ನು ಗಮನಿಸು ಎಂದು ಮಾತಲಿಯು ಅರ್ಜುನನಿಗೆ ಹೇಳಿದನು.

ಅರ್ಥ:
ಅಸಂಖ್ಯಾತ: ಲೆಕ್ಕವಿಲ್ಲದಷ್ಟು; ಕ್ಷಿತೀಶ್ವರ: ರಾಜ; ಕ್ಷಿತಿ: ಭೂಮಿ; ಉದಿತ: ಹುಟ್ಟಿದ; ಕೃತ: ಮಾಡಿದ; ಪುಣ್ಯ: ಸದಾಚಾರ; ಉಪಚಯ: ಶೇಖರಣೆ, ರಾಶಿ; ಭೋಗ: ಸುಖವನ್ನು ಅನುಭವಿಸುವುದು; ಪುಣ್ಯಭೂಮಿ: ಶ್ರೇಷ್ಠವಾದ ನೆಲೆ; ಜಪ: ತಪಸ್ಸು; ಯಜ್ಞ: ಯಾಗ; ದಾನ: ನೀಡು; ಅಭ್ಯುದಯ: ಏಳಿಗೆ; ವೈದಿಕ: ವೇದದಲ್ಲಿ ಹೇಳಿರುವ; ಕರ್ಮ: ಕಾರ್ಯ; ನಿಷ್ಠ: ಶ್ರದ್ಧೆಯುಳ್ಳವನು; ಪದವಿ: ಸ್ಥಾನ; ಪರುಠವ: ವಿಸ್ತಾರ, ಹರಹು; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಇದೆ+ಅಸಂಖ್ಯಾತ +ಕ್ಷಿತೀಶ್ವರರ್
ಉದಿತ +ಕೃತ+ಪುಣ್ಯ+ಉಪಚಯ +ಭೋ
ಗದಲಿ +ಭಾರತ +ವರುಷ +ನಿಮ್ಮದು +ಪುಣ್ಯಭೂಮಿ +ಕಣ
ಇದರೊಳಗೆ+ ಜಪ +ಯಜ್ಞ +ದಾನ
ಅಭ್ಯುದಯ +ವೈದಿಕ+ ಕರ್ಮನಿಷ್ಠರ
ಪದವಿಗಳ +ಪರುಠವಣೆಯನು +ಕಲಿ+ಪಾರ್ಥ+ನೋಡೆಂದ

ಅಚ್ಚರಿ:
(೧) ಭರತ ಭೂಮಿಯನ್ನು ಹೊಗಳುವ ಪರಿ – ಭಾರತ ವರುಷ ನಿಮ್ಮದು ಪುಣ್ಯಭೂಮಿ ಕಣ

ಪದ್ಯ ೨೨: ಮತ್ತಾವ ರಾಜರು ತಮ್ಮ ಬಲವನ್ನು ತೋರಿಸಿದರು?

ವರ ಯುಧಾಯನ್ಯೂತ್ತಮೌಜಸ
ರುರು ಶಿಖಂಡಿ ಸುಚೇಕಿತಾನ ಸ
ಮರ ದುರಂಧರ ವೀರ ಪಾಂಚಾಲ ಕ್ಷಿತೀಶ್ವರರು
ತುರಗ ಗಜರಥ ಪಾಯದಳ ಸಾ
ಗರದ ಸಂರಂಭದೊಳು ನಿಜಸಂ
ವರಣೆಯನು ತೋರಿದರು ತಮ್ಮಕ್ಷೋಹಿಣೀ ಬಲವ (ಉದ್ಯೋಗ ಪರ್ವ, ೧೨ ಸಂಧಿ, ೨೨ ಪದ್ಯ)

ತಾತ್ಪರ್ಯ:
ಯುಧಿಷ್ಠಿರ ಮತ್ತು ಕೃಷ್ಣರಿಗೆ ಯುಧಾಮನ್ಯು, ಉತ್ತಮೌಜಸ, ಶಿಖಂಡಿ, ಚೀಕಿತಾನರೂ, ವೀರ ಪಾಂಚಾಲ ರಾಜರೂ ತಮ್ಮ ಅಕ್ಷೋಹಿಣೀ ಬಲವನ್ನು ತೋರಿಸಿದರು.

ಅರ್ಥ:
ವರ: ಶ್ರೇಷ್ಠ; ಸಮರ: ಯುದ್ಧ; ದುರಂಧರ: ಪ್ರವೀಣ; ವೀರ: ಶೂರ; ಕ್ಷಿತೀಶ್ವರ: ರಾಜ; ತುರಗ: ಕುದುರೆ; ಗಜ: ಆನೆ; ರಥ: ಬಂಡಿ; ಪಾಯ: ಪಾದ, ಅಡಿ, ಚರಣ; ಬಲ: ಸೈನ್ಯ; ಸಾಗರ: ಸಮುದ್ರ; ಸಂರಂಭ: ಸಡಗರ, ಸಂಭ್ರಮ; ನಿಜ: ದಿಟ; ಸಂವರಣೆ: ಸಂಗ್ರಹ, ಶೇಖರಣೆ; ತೋರು: ಪ್ರದರ್ಶಿಸು; ಅಕ್ಷೋಹಿಣಿ: ೨೧೮೭೦ ಆನೆಗಳು + ೨೧೮೭೦ ರಥಗಳು + ೬೫೬೧೦ ಕುದುರೆಗಳು + ೧೦೯೩೫೦ ಕಾಲಾಳುಗಳಿರುವ ಸೈನ್ಯ ಸಮೂಹ; ಬಲ: ಶಕ್ತಿ; ಉರು: ಶ್ರೇಷ್ಠವಾದ;

ಪದವಿಂಗಡಣೆ:
ವರ +ಯುಧಾಯನ್ಯು+ಉತ್ತಮೌಜಸರ್
ಉರು+ ಶಿಖಂಡಿ +ಸುಚೇಕಿತಾನ+ ಸ
ಮರ +ದುರಂಧರ+ ವೀರ +ಪಾಂಚಾಲ +ಕ್ಷಿತೀಶ್ವರರು
ತುರಗ +ಗಜರಥ +ಪಾಯದಳ +ಸಾ
ಗರದ +ಸಂರಂಭದೊಳು +ನಿಜಸಂ
ವರಣೆಯನು +ತೋರಿದರು +ತಮ್+ ಅಕ್ಷೋಹಿಣೀ +ಬಲವ

ಅಚ್ಚರಿ:
(೧) ದುರಂಧರ, ವೀರ – ಸಮನಾರ್ಥಕ ಪದ
(೨) ಯಧಾಮನ್ಯುವು ಒಬ್ಬ ಪಾಂಚಾಲ ರಾಜ, ಉತ್ತಮೌಜಸನು ದ್ರುಪದನ ಮಗ;
(೩) ಸಮರ, ಸಾಗರ, ಸಂವರಣೆ, ಸಂರಂಭ – ಸ ಕಾರದ ಪದಗಳು

ಪದ್ಯ ೪: ಯಾವ ಯಾಗವನ್ನು ಮಾಡಲು ಯುಧಿಷ್ಠಿರನು ನಿಶ್ಚಯಿಸಿದನು?

ಅಲ್ಲಿ ಸುರರಲಿ ಸುಪ್ರತಿಕ್ಷಿತ
ನಲ್ಲ ಗಡ ಪಾಂಡು ಕ್ಷಿತೀಶ್ವರ
ನಿಲ್ಲಿ ವೈಭವಕೇನು ಫಲ ನಾವವರ ಸದ್ಗತಿಗೆ
ಇಲ್ಲಿ ರಚಿಸಿದ ರಾಜಸೂಯದಿ
ನೆಲ್ಲವಹುದಯ್ಯಂಗೆ ಮಖವಿದು
ದುರ್ಲಭವು ಕೈಕೊಂಡೆವಾವುದು ಮಂತ್ರವಿದಕೆಂದ (ಸಭಾ ಪರ್ವ, ೨ ಸಂಧಿ, ೪ ಪದ್ಯ)

ತಾತ್ಪರ್ಯ:
ದೇವತೆಗಳ ಲೋಕ ಸ್ವರ್ಗದಲ್ಲಿ ನನ್ನ ತಂದೆ ಪಾಂಡು ಮಹಾರಾಜರಿಗೆ ಸ್ವಾಗತವಿಲ್ಲ, ಇಲ್ಲಿ ನಾವು ಎಷ್ಟು ವೈಭವದಿಂದ್ದಿದರೇನು ಬಂತು ಪ್ರಯೋಜನ, ಆದ್ದರಿಂದ ನಾವು ಇಲ್ಲಿ ರಾಜಸೂಯ ಯಾಗವನ್ನು ಮಾಡಿದರೆ ಅವರಿಗೆ ಸದ್ಗತಿಯುಂಟಾಗುತ್ತದೆ, ಈ ಯಾಗವಾದರೂ ಕಷ್ಟಸಾಧ್ಯವಾದುದು, ಇದನ್ನು ಮಾಡಬೇಕೆಂದು ನಿಶ್ಚಯಿಸಿದ್ದೇನೆ, ಇದನ್ನು ಹೇಗೆ ಕಾರ್ಯರೂಪಕ್ಕೆ ತರಬೇಕು, ಇದಕ್ಕೆ ಏನು ಉಪಾಯ ಎಂದು ಕೇಳಿದನು.

ಅರ್ಥ:
ಸುರ: ದೇವತೆ; ಗಡ:ಅಲ್ಲವೆ; ಕ್ಷಿತೀಶ್ವರ; ರಾಜ; ಕ್ಶಿತಿ: ಭೂಮಿ; ವೈಭವ: ಐಶ್ವರ್ಯ, ಆಡಂಬರ; ಫಲ:ಫಲಿತಾಂಶ; ಸದ್ಗತಿ: ಒಳ್ಳೆಯ ದಾರಿ; ರಚಿಸು: ರೂಪಿಸು; ಅಯ್ಯ: ತಂದೆ; ಮಖ: ಯಾಗ; ದುರ್ಲಭ: ಕಷ್ಟದಲ್ಲಿ ಸಿಗುವ; ಕೈಕೊಂಡೆ: ನಡೆಸುವೆ; ಮಂತ್ರ: ವಿಚಾರ; ಪ್ರತಿ:ಸಾಟಿ, ಸಮಾನ;

ಪದವಿಂಗಡಣೆ:
ಅಲ್ಲಿ +ಸುರರಲಿ +ಸುಪ್ರತಿಕ್ಷಿತನ್
ಅಲ್ಲ +ಗಡ +ಪಾಂಡು +ಕ್ಷಿತೀಶ್ವರನ್
ಇಲ್ಲಿ +ವೈಭವಕೇನು+ ಫಲ+ ನಾವವರ +ಸದ್ಗತಿಗೆ
ಇಲ್ಲಿ +ರಚಿಸಿದ +ರಾಜಸೂಯದಿನ್
ಎಲ್ಲವಹುದ್+ಅಯ್ಯಂಗೆ +ಮಖವಿದು
ದುರ್ಲಭವು +ಕೈಕೊಂಡೆವ್+ಆವುದು +ಮಂತ್ರವಿದಕೆಂದ

ಅಚ್ಚರಿ:
(೧)ಆಲ್ಲಿ, ಅಲ್ಲ, ಇಲ್ಲಿ – ೧-೪ ಸಾಲಿನ ಮೊದಲ ಪದಗಳು
(೨) “ರ” ಕಾರದ ಜೋಡಿ ಪದ – ರಚಿಸಿದ ರಾಜಸೂಯದಿ