ಪದ್ಯ ೫೩: ನಹುಷನು ಯಾವ ಪ್ರಶ್ನೆಗಳನ್ನು ಕೇಳಿದನು?

ಧೀರನಾವನು ದಿಟ್ಟನಾರು ವಿ
ಕಾರಿಯಾರು ವಿನೀತನಾರಾ
ಚಾರ ಹೀನನದಾರು ಸುವ್ರತಿ ಯಾರು ಶಠನಾರು
ಕ್ರೂರನಾರತಿಕಷ್ಟನಾರು ವಿ
ಚಾರಿಯಾರು ವಿಮುಕ್ತನಾರು ವಿ
ದೂರನಾರಿಹಪರಕೆ ಭೂಮೀಪಾಲ ಹೇಳೆಂದ (ಅರಣ್ಯ ಪರ್ವ, ೧೪ ಸಂಧಿ, ೫೩ ಪದ್ಯ)

ತಾತ್ಪರ್ಯ:
ನಹುಷನು ತನ್ನ ಪ್ರಶ್ನಮಾಲಿಕೆಯನ್ನು ಮುಂದುವರೆಸುತ್ತಾ, ಧೀರನಾರು, ದಿಟ್ಟನಾರು, ಯಾರು ವಿಕಾರಿ, ವಿನೀತನ ಗುಣವಾವುದು, ಆಚಾರ ಹೀನನಾರು, ಸುವ್ರತಿಯಾರು, ಯಾರು ದುಷ್ಟ, ಯಾರು ಕ್ರೂರಿ, ಯಾರು ಕಠಿಣರಾದವರು, ಯಾರು ಮುಕ್ತ ಇಹಪರಗಳೆರಡಕ್ಕೂ ಹೊರಗಿನವನಾರು ಎಂದು ನಹುಷನು ಕೇಳಿದನು.

ಅರ್ಥ:
ಧೀರ: ಶೂರ, ಪರಾಕ್ರಮಿ; ದಿಟ್ಟ: ಧೈರ್ಯಶಾಲಿ, ಸಾಹಸಿ, ಗಟ್ಟಿಗ; ವಿಕಾರ: ಮನಸ್ಸಿನ ವಿಕೃತಿ;ವಿನೀತ: ಸೌಜನ್ಯದಿಂದ ಕೂಡಿದ ವ್ಯಕ್ತಿ; ಆಚಾರ: ಕಟ್ಟುಪಾಡು, ಸಂಪ್ರದಾಯ; ಹೀನ: ಕೆಟ್ಟ, ದುಷ್ಟ; ವ್ರತಿ: ನಿಯಮಬದ್ಧವಾದ ನಡವಳಿಕೆಯುಳ್ಳವನು; ಶಠ: ದುಷ್ಟ, ಧೂರ್ತ; ಕ್ರೂರ: ದುಷ್ಟ; ಕಷ್ಟ: ಕಠಿಣವಾದದ್ದು; ವಿಚಾರ: ಪರ್ಯಾಲೋಚನೆ, ವಿಮರ್ಶೆ, ವಿವೇಕ; ವಿಮುಕ್ತ: ಬಿಡುಗಡೆಯಾದವನು, ಮುಕ್ತ; ವಿದೂರ: ಪಡೆಯಲಸಾಧ್ಯವಾದ; ಇಹಪರ: ಈ ಲೋಕ ಮತ್ತು ಪರಲೋಕ; ಭೂಮೀಪಾಲ: ರಾಜ; ಹೇಳು: ತಿಳಿಸು;

ಪದವಿಂಗಡಣೆ:
ಧೀರನಾವನು +ದಿಟ್ಟನಾರು +ವಿ
ಕಾರಿಯಾರು +ವಿನೀತನಾರ್
ಆಚಾರ +ಹೀನನದಾರು +ಸುವ್ರತಿ+ ಯಾರು +ಶಠನಾರು
ಕ್ರೂರನಾರ್+ಅತಿಕಷ್ಟನಾರು +ವಿ
ಚಾರಿಯಾರು +ವಿಮುಕ್ತನಾರು +ವಿ
ದೂರನಾರ್+ಇಹಪರಕೆ+ ಭೂಮೀಪಾಲ+ ಹೇಳೆಂದ

ಅಚ್ಚರಿ:
(೧) ಮನುಷ್ಯರ ಗುಣಗಳು – ವಿಕಾರಿ, ದಿಟ್ಟ, ಧೀರ, ಆಚಾರಹೀನ, ಸುವ್ರತಿ, ಶಠ, ಕ್ರೂರ, ಕಷ್ಟ, ವಿಚಾರಿ, ವಿಮುಕ್ತ, ವಿದೂರ

ಪದ್ಯ ೨೪: ಯಾರಿಗೆ ಪರಲೋಕವು ಲಭಿಸುವುದಿಲ್ಲ?

ಕ್ರೂರರಿಗೆ ಶಠರಿಗೆ ವೃಥಾಹಂ
ಕಾರಿಗಳಿಗತಿ ಕುಟಿಲರಿಗೆಯುಪ
ಕಾರಿಯಪಘಾತರಿಗೆ ಭೂತದ್ರೋಹಿಜೀವರಿಗೆ
ಜಾರರಿಗೆ ಜಡರಿಗೆ ನಿಕೃಷ್ಟಾ
ಚಾರರಿಗೆ ಪಿಸುಣರಿಗೆ ಧರ್ಮವಿ
ದೂರರಿಗೆ ಕಲಿಪಾರ್ಥ ಕೇಳ್ಪರಲೋಕವಿಲ್ಲೆಂದ (ಅರಣ್ಯ ಪರ್ವ, ೫ ಸಂಧಿ, ೨೪ ಪದ್ಯ)

ತಾತ್ಪರ್ಯ:
ಕೇಳು ಅರ್ಜುನ, ಈ ಜನ್ಮದಲ್ಲಿ ಕ್ರೂರಿಗಳಿಗೆ, ದುಷ್ಟರಿಗೆ, ಕೇವಲ ಅಹಂಕಾರವನ್ನು ಪ್ರದರ್ಶಿಸುವವರಿಗೆ, ಅತಿ ಮೋಸಮಾಡುವವರಿಗೆ, ಉಪಕಾರಿಗಳಿಗೆ ಅಪಕಾರಮಾಡುವವರಿಗೆ, ಪ್ರಾಣಿಗಳಿಗೆ ದ್ರೋಹಮಾಡುವವರು, ವ್ಯಭಿಚಾರರಿಗೆ, ಆಲಸ್ಯ ಸ್ವಭಾವದವರಿಗೆ, ಕೀಳು ನಡತೆಯವರಿಗೆ, ಚಾಡಿಕೋರರಿಗೆ, ಧರ್ಮದಿಂದ ದೂರವುಳಿದವರಿಗೆ ಪರಲೋಕವಿಲ್ಲ ಎಂದು ಧರ್ಮಜನು ಅರ್ಜುನನಿಗೆ ಹೇಳಿದನು.

ಅರ್ಥ:
ಕ್ರೂರಿ: ನಿರ್ದಯಿ, ನಿಷ್ಕರುಣಿ; ಶಠ: ದುಷ್ಟ, ಧೂರ್ತ; ವೃಥಾ: ಸುಮ್ಮನೆ; ಅಹಂಕಾರ: ಮದ; ಅತಿ: ಬಹಳ; ಕುಟಿಲ: ಮೋಸ; ಉಪಕಾರ: ಸಹಾಯ; ಅಪಘಾತ: ಅನಾಹುತ; ಭೂತ: ಪ್ರಾಣಿ; ದ್ರೋಹ: ಮೋಸ; ಜೀವ: ಬದುಕುವ; ಜಾರ: ವ್ಯಭಿಚಾರಿ, ಹಾದರಿಗ; ಜಡ: ಆಲಸ್ಯ; ನಿಕೃಷ್ಟ: ನೀಚ, ಕೀಳು ಮನುಷ್ಯ; ಪಿಸುಣ: ಚಾಡಿಕೋರ; ಧರ್ಮ: ಧಾರಣೆ ಮಾಡಿದುದು, ನಿಯಮ; ವಿದೂರ: ಬಹಳ ಅಂತರ; ಕಲಿ: ಶೂರ; ಪರಲೋಕ: ಬೇರೆ ಲೋಕ;

ಪದವಿಂಗಡಣೆ:
ಕ್ರೂರರಿಗೆ +ಶಠರಿಗೆ +ವೃಥ+ಅಹಂ
ಕಾರಿಗಳಿಗ್+ಅತಿ +ಕುಟಿಲರಿಗೆ+ಉಪ
ಕಾರಿ+ಅಪಘಾತರಿಗೆ+ ಭೂತದ್ರೋಹಿ+ಜೀವರಿಗೆ
ಜಾರರಿಗೆ +ಜಡರಿಗೆ+ ನಿಕೃಷ್ಟಾ
ಚಾರರಿಗೆ+ ಪಿಸುಣರಿಗೆ+ ಧರ್ಮ+ವಿ
ದೂರರಿಗೆ+ ಕಲಿಪಾರ್ಥ+ ಕೇಳ್ಪರಲೋಕವ್+ಇಲ್ಲೆಂದ

ಅಚ್ಚರಿ:
(೧) ಕೆಟ್ಟ ಮನುಷ್ಯರ ಲಕ್ಷಣ – ಕ್ರೂರ, ಜಾರ, ಪಿಸುಣ, ಭೂತದ್ರೋಹಿ, ಕುಟಿಲ, ಅಹಂ
ಕಾರಿ, ನಿಕೃಷ್ಟ, ಜಡ