ಪದ್ಯ ೨೪: ಶಲ್ಯನು ಯಾವ ಶಪಥವನ್ನು ಮಾಡಿದನು?

ರಾಯ ನಿಲುವನೊ ಮೇಣು ಪಾರ್ಥನೊ
ವಾಯುಸುತನೋ ನಿಮ್ಮ ಮೂವರೊ
ಳಾಯುಧವ ಕೊಂಡಾರು ಹೊಕ್ಕರೆ ನಿಲುವೆನವರೊಡನೆ
ನಾಯಕರು ಮಿಕ್ಕವರೊಡನೆ ಬಿಲು
ಸಾಯಕವನೊಡ್ಡಿದಡೆ ಕೌರವ
ರಾಯನಾಣೆಯೆನುತ್ತ ಮದವೇರಿದನು ಕಲಿಶಲ್ಯ (ಶಲ್ಯ ಪರ್ವ, ೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಎಲೈ ಪಾಂಡವರೇ, ನನ್ನೊಡನೆ ಯುದ್ಧಕ್ಕೆ ಧರ್ಮಜನು ನಿಲ್ಲುವನೋ, ಅಥವ ಅರ್ಜುನ ಭೀಮರು ನಿಲ್ಲುವರೋ? ಯಾರು ಆಯುಧಪಾಣಿಗಳಾಗಿ ಬರುವರೋ ಅವರೊಡನೆ ಕಾಳಗವನ್ನು ಮಾಡುತ್ತೇನೆ, ಉಳಿದ ಸೇನಾನಾಯಕರೊಡನೆ ಕೌರವನಾಣೆ ಯುದ್ಧಮಾಡುವುದಿಲ್ಲ ಎಂದು ಶಲ್ಯನು ಶಪಥ ಮಾಡಿದನು.

ಅರ್ಥ:
ರಾಯ: ರಾಜ; ನಿಲ್ಲು: ತಡೆ; ಮೇಣ್: ಅಥವಾ; ವಾಯುಸುತ: ಭೀಮ; ಸುತ: ಮಗ; ಆಯುಧ: ಶಸ್ತ್ರ; ಕೊಂಡು: ಗ್ರಹಿಸು; ಹೊಕ್ಕು: ಸೇರು; ನಾಯಕ: ಒಡೆಯ; ಮಿಕ್ಕ: ಉಳಿದ; ಬಿಲು: ಬಿಲ್ಲು, ಚಾಪ; ಸಾಯಕ: ಬಾಣ, ಶರ; ಆಣೆ: ಪ್ರಮಾಣ; ಮದ: ಅಹಂಕಾರ; ಏರು: ಹೆಚ್ಚಾಗು; ಕಲಿ: ಶೂರ; ಒಡ್ಡು: ನೀಡು;

ಪದವಿಂಗಡಣೆ:
ರಾಯ+ ನಿಲುವನೊ +ಮೇಣು +ಪಾರ್ಥನೊ
ವಾಯುಸುತನೋ +ನಿಮ್ಮ +ಮೂವರೊಳ್
ಆಯುಧವ+ ಕೊಂಡಾರು +ಹೊಕ್ಕರೆ +ನಿಲುವೆನ್+ಅವರೊಡನೆ
ನಾಯಕರು +ಮಿಕ್ಕವರೊಡನೆ+ ಬಿಲು
ಸಾಯಕವನ್+ಒಡ್ಡಿದಡೆ +ಕೌರವ
ರಾಯನಾಣೆ+ಎನುತ್ತ +ಮದವೇರಿದನು +ಕಲಿ+ಶಲ್ಯ

ಅಚ್ಚರಿ:
(೧) ನಾಯಕ, ಸಾಯಕ – ಪ್ರಾಸ ಪದ
(೨) ರಾಯ – ೧, ೬ ಸಾಲಿನ ಮೊದಲ ಪದ

ಪದ್ಯ ೧೮: ಕರ್ಣನು ಕಟುನಿರ್ಧಾರವೇನು?

ವೀರ ಕೌರವ ರಾಯನೇ ದಾ
ತಾರನಾತನ ಹಗೆಯೆ ಹಗೆ
ಕೈವಾರವೇ ಕೈವಾರವಾದಂತಹೆನು ಕುರುನೃಪತಿ
ಶೌರಿ ಕೇಳೈ ನಾಳೆ ಸಮರದ
ಭಾರದೊಳು ತೋರುವೆನು ನಿಜಭುಜ
ಶೌರಿಯದ ಸಂಪನ್ನತೆಯನಾ ಪಾಂಡುತನಯರೊಳು (ಉದ್ಯೋಗ ಪರ್ವ, ೧೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ವೀರನಾದ ಕೌರವನೇ ನನ್ನ ಒಡೆಯ. ಅವನ ಶತ್ರುಗಳೇ ನನ್ನ ಶತ್ರುಗಳು. ಅವನ ಅಭಿಮಾನವೇ ನನಗೆ ಮುಖ್ಯ, ಅವನಿಗೆ ಏನಾಗುವುದೋ ಅದು ನನಗೂ ಆಗಲಿ. ಕೃಷ್ಣ ನಾಳೆ ಬರಲಿರುವ ಯುದ್ಧದಲ್ಲಿ ನನ್ನ ಬಾಹುಬಲದ ಸತ್ವವನ್ನು ಪಾಂಡವರ ಮೇಲೆ ಪ್ರಯೋಗಿಸಿ ಶೌರ್ಯವನ್ನು ತೋರುತ್ತೇನೆ.

ಅರ್ಥ:
ವೀರ: ಪರಾಕ್ರಮಿ; ರಾಯ: ರಾಜ; ದಾತಾರ: ಪೋಷಿಸುವ; ಹಗೆ: ವೈರತ್ವ; ಕೈವಾರ:ಬಾಹುಬಲ;
ನೃಪತಿ: ರಾಜ; ಶೌರಿ: ಕೃಷ್ಣ; ನಾಳೆ: ಮುಂದೆ; ಸಮರ: ಯುದ್ಧ; ಭಾರ: ಹೊರೆ; ತೋರುವೆ: ಪ್ರದರ್ಶಿಸು; ನಿಜ: ದಿಟ; ಭುಜ: ಬಾಹು; ಶೌರಿಯ: ಸಾಹಸ; ಸಂಪನ್ನ: ಹೊಂದಿದವನು; ತನಯ: ಮಕ್ಕಳು;

ಪದವಿಂಗಡಣೆ:
ವೀರ+ ಕೌರವ +ರಾಯನೇ +ದಾ
ತಾರನ್+ಆತನ+ ಹಗೆಯೆ +ಹಗೆ
ಕೈವಾರವೇ +ಕೈವಾರವಾದಂತಹೆನು +ಕುರು+ನೃಪತಿ
ಶೌರಿ+ ಕೇಳೈ +ನಾಳೆ +ಸಮರದ
ಭಾರದೊಳು +ತೋರುವೆನು +ನಿಜಭುಜ
ಶೌರಿಯದ +ಸಂಪನ್ನತೆಯನಾ +ಪಾಂಡು+ತನಯರೊಳು

ಅಚ್ಚರಿ:
(೧) ವೀರ, ಶೌರಿಯ – ಸಮನಾರ್ಥಕ ಪದಗಳು
(೨) ಶೌರಿ ಪದದ ಬಳಕೆ – ೩, ೬ ಸಾಲು ಒಂದೆಡೆ ಕೃಷ್ಣ ಮತ್ತೊಂದರಲ್ಲಿ ಪರಾಕ್ರಮಿ ಎಂಬ ಅರ್ಥ
(೩) ಜೋಡಿ ಪದಗಳು – ಹಗೆಯ ಹಗೆ, ಕೈವಾರವೆ ಕೈವಾರ
(೪) ಕೌರವ ರಾಯ, ಕುರುನೃಪತಿ – ದುರ್ಯೋಧನನ್ನು ಕರೆದಿರುವ ಬಗೆ