ಪದ್ಯ ೭: ಭೀಷ್ಮನು ಯಾರ ಬಾಣಗಳಿಗೆ ಹೆದರುವೆನೆಂದನು?

ಹರಿಯ ಕೌಮೋದಕಿಯ ಹೊಯ್ಲನು
ಬೆರಳಲಾನುವೆನಖಿಲ ಕುಲಗಿರಿ
ಜರಿದು ಬೀಳುವಡಾನಲಾಪೆನು ನಖದ ಕೊನೆಗಳಲಿ
ಭರದಲಾದಿ ವರಾಹ ದಾಡೆಯ
ಲಿರಿದಡೆಯು ನರಸಿಂಹ ನಖದಲಿ
ಕೆರೆದಡೆಯು ಸೈರಿಸುವೆನಂನುವೆನರ್ಜುನನ ಶರಕೆ (ಭೀಷ್ಮ ಪರ್ವ, ೧೦ ಸಂಧಿ, ೭ ಪದ್ಯ)

ತಾತ್ಪರ್ಯ:
ವಿಷ್ಣುವಿನ ಕೌಮೋದಕಿ ಗದೆಯ ಹೊಡೆತವನ್ನು ಬೆರಳ ತುದಿಯಿಂದ ತಪ್ಪಿಸಬಲ್ಲೆ, ಕುಲ ಪರ್ವತಗಳು ನನ್ನ ಮೇಲೆ ಜಾರಿ ಬಿದ್ದರೂ ಉಗುರಿನ ಕೊನೆಯಿಂದ ತಡೆಯಬಲ್ಲೆ, ಆದಿ ವರಾಹನು ಅವನ ಹಲ್ಲುಗಳಿಂದ ಇರಿದರೂ, ನರಸಿಂಹನು ತನ್ನ ಉಗುರುಗಳಿಂದ ಕೆರೆದರೂ ನಾನು ಸಹಿಸಬಲ್ಲೆ, ಆದರೆ ಅರ್ಜುನನ ಬಾಣಗಳಿಗೆ ನಾನು ಹೆದರುತ್ತೇನೆ ಎಂದು ಭೀಷ್ಮರು ನುಡಿದರು.

ಅರ್ಥ:
ಹರಿ: ವಿಷ್ಣು; ಕೌಮೋದಕಿ: ವಿಷ್ಣುವಿನ ಗದೆ; ಹೊಯ್ಲು: ಹೊಡೆತ; ಆನು: ಎದುರಿಸು; ಅಖಿಲ: ಎಲ್ಲಾ; ಕುಲಗಿರಿ: ದೊಡ್ಡ ಬೆಟ್ಟ; ಜರಿ: ಸೀಳೂ; ಬೀಳು: ಕೆಳಕ್ಕೆ ಕೆಡೆ, ಕುಸಿ; ಆಪು: ಸಾಮರ್ಥ್ಯ; ನಖ: ಉಗುರು; ಕೊನೆ: ತುದಿ; ಭರ: ವೇಗ; ಆದಿ: ಮೊದಲ; ವರಾಹ: ಹಂದಿ; ದಾಡೆ: ಹಲ್ಲು; ಇರಿ: ಚುಚ್ಚು; ಕೆರೆ: ಉಗುರಿನಿಂದ ಗೀಚು, ಗೀರು; ಸೈರಿಸು: ತಾಳು; ಅಂಜು: ಹೆದರು; ಶರ: ಬಾಣ;

ಪದವಿಂಗಡಣೆ:
ಹರಿಯ +ಕೌಮೋದಕಿಯ +ಹೊಯ್ಲನು
ಬೆರಳಲ್+ಆನುವೆನ್+ಅಖಿಲ +ಕುಲಗಿರಿ
ಜರಿದು +ಬೀಳುವಡ್+ಆನಲ್+ಆಪೆನು +ನಖದ +ಕೊನೆಗಳಲಿ
ಭರದಲ್+ಆದಿ +ವರಾಹ +ದಾಡೆಯಲ್
ಇರಿದಡೆಯು +ನರಸಿಂಹ +ನಖದಲಿ
ಕೆರೆದಡೆಯು +ಸೈರಿಸುವೆನ್+ಅಂಜುವೆನ್+ಅರ್ಜುನನ +ಶರಕೆ

ಅಚ್ಚರಿ:
(೧) ಇರಿ, ಜರಿ, ಹೊಯ್ಲು, ಕೆರೆ – ಹೊಡೆತ, ನೋವನ್ನು ಸೂಚಿಸುವ ಪದಗಳು

ಪದ್ಯ ೨: ಕರ್ಣನು ಕೃಷ್ಣನ ಮೇಲೆ ಎಷ್ಟು ಬಾಣಗಳನ್ನು ಬಿಟ್ಟನು?

ಎಲೆ ಮುರಾಂತಕ ಸಾಕು ರಥದಿಂ
ದಿಳಿ ಸುದರ್ಶನವೆಲ್ಲಿ ಚಾಪವ
ಕಳೆದುಕೊಳು ಕೌಮೋದಕಿಯ ಹಿಡಿ ಹಾಯ್ಕು ವಾಘೆಯವ
ಉಳುಹುವವರಾವಲ್ಲ ಕೊಳ್ಳೆನು
ತಳವಿಯಲಿ ಕೈಕೊಂಡು ಕೃಷ್ಣನ
ನಳುಕದೆಚ್ಚನು ನೂರು ಶರದಲಿ ಕರ್ಣ ಬೊಬ್ಬಿರಿದು (ಕರ್ಣ ಪರ್ವ, ೨೪ ಸಂಧಿ, ೨ ಪದ್ಯ)

ತಾತ್ಪರ್ಯ:
ಕರ್ಣನು ಕೃಷ್ಣನ ಮೇಲೆ ಅಬ್ಬರಿಸುತ್ತಾ, ಎಲೈ ಕೃಷ್ಣ ನೀನು ಸಾರಥಿಯಾಗಿದ್ದು ಸಾಕು, ರಥದಿಂದಿಳಿದು ನಿನ್ನ ಸುದರ್ಶನಾಸ್ತ್ರವನ್ನು ಹಿಡಿ, ನಿನ್ನ ಶಾಂರ್ಗಧನುಸ್ಸನ್ನು ತೆಗೆದುಕೋ, ಎಲ್ಲಿ ನಿನ್ನ ಕೌಮೋದಿಕಿಯೆಂಬ ಗಧೆ ಅದನ್ನು ಹಿಡಿದು ಯುದ್ಧಕ್ಕೆ ಬಾ, ನಾನು ನಿನ್ನನ್ನು ಉಳಿಸುವುದಿಲ್ಲ ಎಂದು ಹೆಳುತ್ತಾ ತನ್ನ ಕೈಯಲ್ಲಿ ಬಾಣವನ್ನು ತೆಗೆದು ಬಿಲ್ಲಿಗೆ ಹೂಡಿ ನೂರು ಬಾಣಗಳನ್ನು ಕೃಷ್ಣನ ಮೇಲೆ ಬಿಟ್ಟನು.

ಅರ್ಥ:
ಮುರಾಂತಕ: ಕೃಷ್ಣ; ಅಂತಕ: ಯಮ; ಸಾಕು: ಕೊನೆ; ರಥ: ಬಂಡಿ; ಇಳಿ: ಕೆಳಗೆ ಬಾ; ಚಾಪ: ಬಿಲ್ಲು; ಕಳೆ: ತೊರೆ; ಹಿಡಿ: ಗ್ರಹಿಸು; ಹಾಯ್ಕು: ಬಿಡು; ವಾಘೆ: ಲಗಾಮು; ಉಳುಹು: ಕಾಪಾಡು; ಕೊಳ್ಳೆ: ಸ್ವೀಕರಿಸು; ತಳ: ಅಂಗೈ; ಕೈಕೊಂಡು: ಪಡೆದು; ಅಳುಕು: ಹೆದರು; ಎಚ್ಚು: ಬಾಣ ಬಿಡು; ನೂರು: ಶತ; ಶರ: ಬಾಣ; ಬೊಬ್ಬಿರಿ: ಗರ್ಜಿಸು;

ಪದವಿಂಗಡಣೆ:
ಎಲೆ +ಮುರಾಂತಕ +ಸಾಕು +ರಥದಿಂ
ದಿಳಿ+ ಸುದರ್ಶನವೆಲ್ಲಿ+ ಚಾಪವ
ಕಳೆದುಕೊಳು +ಕೌಮೋದಕಿಯ+ ಹಿಡಿ+ ಹಾಯ್ಕು +ವಾಘೆಯವ
ಉಳುಹುವವರ್+ಆವಲ್ಲ +ಕೊಳ್ಳೆನು
ತಳವಿಯಲಿ+ ಕೈಕೊಂಡು +ಕೃಷ್ಣನನ್
ಅಳುಕದ್+ಎಚ್ಚನು +ನೂರು +ಶರದಲಿ +ಕರ್ಣ +ಬೊಬ್ಬಿರಿದು

ಅಚ್ಚರಿ:
(೧) ಕೃಷ್ಣನನ್ನು ಪ್ರಚೋದಿಸುವ ಪರಿ – ಎಲೆ ಮುರಾಂತಕ ಸಾಕು ರಥದಿಂದಿಳಿ ಸುದರ್ಶನವೆಲ್ಲಿ; ಕೌಮೋದಕಿಯ ಹಿಡಿ ಹಾಯ್ಕು ವಾಘೆಯವ

ಪದ್ಯ ೬೫: ದುಶ್ಯಾಸನನನ್ನು ರಕ್ಷಿಸಲು ಭೀಮನು ಯಾರನ್ನು ಕರೆದನು?

ಎಲವೊ ಧೃಷ್ಟದ್ಯುಮ್ನ ಸಾತ್ಯಕಿ
ಎಲೆ ಶಿಖಂಡಿಪ್ರಮುಖನಾಯಕ
ರಳುಕದಿಹ ಮನವುಳ್ಳಡಿದಿರಾಗಿವನ ಸಲಹುವುದು
ಹಲಬರಲಿ ಫಲವೇನು ದಾನವ
ಕುಲ ದಿಶಾಪಟ ಕೃಷ್ಣ ಮುನಿದಡೆ
ಕಳೆದುಕೊಳು ಕೌಮೋದಕಿಯನೆಂದೊದರಿದನು ಭೀಮ (ಕರ್ಣ ಪರ್ವ, ೧೯ ಸಂಧಿ, ೬೫ ಪದ್ಯ)

ತಾತ್ಪರ್ಯ:
ದುಶ್ಯಾಸನನ ಪ್ರಾಣವನ್ನು ಕಾಪಾಡಲು ಕೌರವರನ್ನು ಕರೆದ ನಂತರ ಭೀಮನು ತನ್ನ ತಂಡದವರನ್ನು ಕರೆದನು. ಎಲವೋ ಧೃಷ್ಟದ್ಯುಮ್ನ, ಸಾತ್ಯಕಿ, ಶಿಖಂಡಿ, ಎಲ್ಲಾ ಪ್ರಮುಖನಾಯಕರೇ ಭಯಪಡದಿದ್ದರೆ ನನ್ನನ್ನು ಇದಿರಿಸಿ ಕಾಡಿ ಇವನನ್ನು ರಕ್ಷಿಸಿರಿ, ಇವರಿಂದ ಏನು ಪ್ರಯೋಜನ, ಎಲೈ ರಾಕ್ಷಸ ಕುಲಾಂತಕನಾದ ಕೃಷ್ಣ ನಿನ್ನನ್ನೆ ಕರೆಯುತ್ತಿದ್ದೇನೆ, ಸಿಟ್ಟು ಬಂದರೆ ನಿನ್ನ ಕೌಮೋದೈಯನ್ನು ಹಿಡಿದು ಬಾ ಎಂದು ಭೀಮನು ಗರ್ಜಿಸಿದನು.

ಅರ್ಥ:
ಪ್ರಮುಖ: ಮುಖ್ಯ; ನಾಯಕ: ಒಡೆಯ; ಅಳುಕು: ಹೆದರು; ಮನ: ಮನಸ್ಸು; ಇದಿರು: ಎದುರು; ಸಲಹು: ಕಾಪಾಡು, ರಕ್ಷಿಸು; ಹಲಬರು: ಹಲವಾರು; ಫಲ: ಪ್ರಯೋಜನ; ದಾನವ: ರಾಕ್ಷಸ; ಕುಲ: ವಂಶ; ದಿಶಾಪಟ: ಶತ್ರುಗಳನ್ನು ದಿಕ್ಕುದಿಕ್ಕಿಗೆ ಓಡಿಸುವ; ಮುನಿ: ಕೋಪ; ಕಳೆದುಕೋ: ಹೊರದೆಗೆ; ಕೌಮೋದಕಿ: ವಿಷ್ಣುವಿನ ಗದೆ; ಒದರು: ರುಚು, ಗರ್ಜಿಸು;

ಪದವಿಂಗಡಣೆ:
ಎಲವೊ +ಧೃಷ್ಟದ್ಯುಮ್ನ +ಸಾತ್ಯಕಿ
ಎಲೆ+ ಶಿಖಂಡಿ+ಪ್ರಮುಖ+ನಾಯಕರ್
ಅಳುಕದಿಹ+ ಮನವುಳ್ಳಡ್+ಇದಿರಾಗ್+ಇವನ +ಸಲಹುವುದು
ಹಲಬರಲಿ +ಫಲವೇನು +ದಾನವ
ಕುಲ +ದಿಶಾಪಟ+ ಕೃಷ್ಣ +ಮುನಿದಡೆ
ಕಳೆದುಕೊಳು +ಕೌಮೋದಕಿಯನ್+ಎಂದ್+ಒದರಿದನು +ಭೀಮ

ಅಚ್ಚರಿ:
(೧) ಕೃಷ್ಣನನ್ನು ದಾನವ ಕುಲ ದಿಶಾಪಟ ಎಂದು ಕರೆದಿರುವುದು