ಪದ್ಯ ೬೫: ಧರ್ಮಜನ ಕೋರಿಕೆ ಅರ್ಜುನನು ಹೇಗೆ ಉತ್ತರಿಸಿದನು?

ಜೀಯ ನಿಮ್ಮರ್ತಿಯನು ಶಂಭುವಿ
ನಾಯುಧದಲೇ ಸಲಿಸಿದಪೆನಾ
ಗ್ನೇಯ ವಾರುಣ ವೈಂದ್ರ ಕೌಬೇರಾಸ್ತ್ರಕೌಶಲವ
ಆಯತವ ತೋರಿಸುವೆನೀಗಳ
ನಾಯತವು ರವಿ ತುರಗರಾಜಿಗೆ
ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ (ಅರಣ್ಯ ಪರ್ವ, ೧೩ ಸಂಧಿ, ೬೫ ಪದ್ಯ)

ತಾತ್ಪರ್ಯ:
ಅಣ್ಣಾ ಪಾಶುಪತಾಸ್ತ್ರವನ್ನು ಪ್ರದರ್ಶಿಸುತ್ತೇನೆ, ಅದೊಂದೇ ಏಕೆ, ಆಗ್ನೇಯ, ವಾರುಣ, ಐಂದ್ರ, ಕೌಬೇರಾಸ್ತ್ರಗಳನ್ನು ಪ್ರದರ್ಶಿಸುತ್ತೇನೆ. ಆದರೆ ಈ ಹೊತ್ತು ಸರಿಯಲ್ಲ. ಸೂರ್ಯನ ಕುದುರೆಗಳು ಈಗ ಪಶ್ಚಿಮ ದಿಕ್ಕಿನ ಬೆಟ್ಟದ ತಪ್ಪಲಲ್ಲಿರುವ ಲಾಯವನ್ನು ಸೇರಿವೆ ಎಂದು ಹೇಳಿದನು.

ಅರ್ಥ:
ಜೀಯ: ಒಡೆಯ; ಅರ್ತಿ: ಪ್ರೀತಿ, ಸಂತೋಷ; ಶಂಭು: ಶಂಕರ; ಆಯುಧ: ಶಸ್ತ್ರ; ಸಲಿಸು:ಪೂರೈಸು; ಕೌಶಲ: ಜಾಣತನ, ಚದುರು; ಆಯತ: ಉಚಿತವಾದ ಕ್ರಮ, ವಾಸಸ್ಥಾನ; ಅನಾಯತ: ತಪ್ಪುಕೆಲಸ; ತೋರಿಸು: ಪ್ರದರ್ಶಿಸು; ತುರಗ: ಕುದುರೆ; ರಾಜಿ: ಗುಂಪು; ಲಾಯ: ಅಶ್ವಶಾಲೆ; ಪಶ್ಚಿಮ: ಪಡುವಣ; ಗಿರಿ: ಬೆಟ್ಟ; ತಪ್ಪಲು: ಬೆಟ್ಟದ ಕೆಳಗಿರುವ ಸಮತಟ್ಟು ಪ್ರದೇಶ;

ಪದವಿಂಗಡಣೆ:
ಜೀಯ +ನಿಮ್ಮ್+ಅರ್ತಿಯನು +ಶಂಭುವಿನ್
ಆಯುಧದಲೇ+ ಸಲಿಸಿದಪೆನ್
ಆಗ್ನೇಯ +ವಾರುಣವ್ + ಐಂದ್ರ+ ಕೌಬೇರಾಸ್ತ್ರ+ಕೌಶಲವ
ಆಯತವ +ತೋರಿಸುವೆನ್+ಈಗಳ್
ಅನಾಯತವು +ರವಿ +ತುರಗರಾಜಿಗೆ
ಲಾಯ +ನೀಡಿತು +ಪಶ್ಚಿಮಾಶಾ+ಗಿರಿಯ +ತಪ್ಪಲಲಿ

ಅಚ್ಚರಿ:
(೧) ಸೂರ್ಯ ಮುಳುಗಿದನು ಎಂದು ಹೇಳುವ ಪರಿ – ರವಿ ತುರಗರಾಜಿಗೆ ಲಾಯ ನೀಡಿತು ಪಶ್ಚಿಮಾಶಾಗಿರಿಯ ತಪ್ಪಲಲಿ
(೨) ಆಯತ, ಅನಾಯತ – ಪದಗಳ ಬಳಕೆ