ಪದ್ಯ ೬೩: ಕೃಷ್ಣನ ಗುಣವೆಂತಹುದು?

ಅರಸಿಯರ ಬಗೆಗೊಳ್ಳ ಮಕ್ಕಳ
ಸರಕು ಮಾಡನು ದೇಶಕೋಶದ
ಸಿರಿಯ ಗಣಿಸನು ಖಡ್ಡಿಗೊಳ್ಳನು ಗಾಢಗರ್ವಿತರ
ಹರಿ ಪರಾಯಣರೆಂದೊಡವರಿಗೆ
ಹರಹಿ ಕೊಂಬನು ಮಗನ ಶೀಲವು
ನರರ ಪರಿಯಲ್ಲೆಂದನಾ ವಸುದೇವನಳಿಯಂಗೆ (ವಿರಾಟ ಪರ್ವ, ೧೧ ಸಂಧಿ, ೬೩ ಪದ್ಯ)

ತಾತ್ಪರ್ಯ:
ವಸುದೇವನು ಧರ್ಮರಾಯನಿಗೆ ಶ್ರೀಕೃಷ್ಣನ ಸ್ವಭಾವವನ್ನು ಹೀಗೆ ಹೇಳಿದನು, ಹೆಂಡಿರು ಮಕ್ಕಳನ್ನು ಲೆಕ್ಕಕ್ಕೇ ತೆಗೆದುಕೊಳ್ಳುವುದಿಲ್ಲ, ತನ್ನ ರಾಜ್ಯ ಸಂಪತ್ತುಗಳನ್ನು ಕುರಿತು ಚಿಂತಿಸುವುದಿಲ್ಲ, ಎಲ್ಲ ಸಂಪತ್ತನ್ನು ಬಗೆಯುವುದೇ ಇಲ್ಲ, ಹರಿಯನ್ನೇ ಹೆಚ್ಚಿನವನೆಂದು ನಂಬಿದವರಿಗೆ ತನ್ನನ್ನೇ ಕೊಟ್ಟುಕೊಂಡು ಬಿಡುವ ಭಕ್ತ ಕುಟುಂಬಿ ಈ ಕೃಷ್ಣ, ನನ್ನ ಮಗನ ನಡತೆಯು ಮನುಷ್ಯರ ನಡತೆಯಂತಿಲ್ಲ ಎಂದು ವಸುದೇವನು ಧರ್ಮಜನಿಗೆ ಹೇಳಿದನು.

ಅರ್ಥ:
ಅರಸಿ: ರಾಣಿ; ಬಗೆ: ರೀತಿ; ಮಕ್ಕಳು: ಸುತರು; ಸರಕು: ಗಮನ, ಲಕ್ಷ್ಯ; ದೇಶ: ರಾಷ್ಟ್ರ; ಕೋಶ: ಖಜಾನೆ, ಭಂಡಾರ; ಸಿರಿ: ಐಶ್ವರ್ಯ; ಗಣಿಸು: ಲೆಕ್ಕಹಾಕು; ಖಡ್ಡ: ತಿಳಿಗೇಡಿ, ಹೆಡ್ಡ; ಗಾಢ: ಹೆಚ್ಚಳ, ಅತಿಶಯ; ಗರ್ವ: ಸೊಕ್ಕು, ಹೆಮ್ಮೆ; ಹರಿ: ವಿಷ್ಣು; ಪರಾಯಣ: ಅತ್ಯಂತ ಆಸಕ್ತಿ ಹೊಂದಿದ, ತಲ್ಲೀನವಾದ; ಹರಹು: ವಿಸ್ತಾರ, ವೈಶಾಲ್ಯ; ಮಗ: ಸುತ; ಶೀಲ: ಗುಣ; ನರ: ಮನುಷ್ಯ; ಪರಿ: ರೀತಿ; ಅಳಿಯ: ಮಗಳ ಗಂಡ;

ಪದವಿಂಗಡಣೆ:
ಅರಸಿಯರ +ಬಗೆಗೊಳ್ಳ +ಮಕ್ಕಳ
ಸರಕು +ಮಾಡನು +ದೇಶ+ಕೋಶದ
ಸಿರಿಯ +ಗಣಿಸನು +ಖಡ್ಡಿಗೊಳ್ಳನು +ಗಾಢ+ಗರ್ವಿತರ
ಹರಿ+ ಪರಾಯಣರೆಂದೊಡ್+ಅವರಿಗೆ
ಹರಹಿ+ ಕೊಂಬನು +ಮಗನ +ಶೀಲವು
ನರರ+ ಪರಿಯಲ್ಲೆಂದನಾ+ ವಸುದೇವನ್+ಅಳಿಯಂಗೆ

ಅಚ್ಚರಿ:
(೧) ಕೃಷ್ಣನ ಗುಣ – ಹರಿ ಪರಾಯಣರೆಂದೊಡವರಿಗೆಹರಹಿ ಕೊಂಬನು

ಪದ್ಯ ೫೦: ಪ್ರಾತಿಕಾಮಿಕನು ದ್ರೌಪದಿಗೆ ಏನು ತಿಳಿಸಿದನು?

ತಾಯೆ ಬಿನ್ನಹವಿಂದು ನಿಮ್ಮಯ
ರಾಯ ಸೋತನು ಜೂಜಿನಲಿ ಕುರು
ರಾಯ ಗೆಲಿದನು ಕೋಶವನು ಗಜತುರಗ ರಥ ಸಹಿತ
ನೋಯಲಾಗದು ಹಲವು ಮಾತೇ
ನಾ ಯುಧಿಷ್ಠಿರ ನೃಪತಿ ಸೋತನು
ತಾಯೆ ಭೀಮಾರ್ಜುನ ನಕುಲ ಸಹದೇವ ನೀವ್ಸಹಿತ (ಸಭಾ ಪರ್ವ, ೧೫ ಸಂಧಿ, ೫೦ ಪದ್ಯ)

ತಾತ್ಪರ್ಯ:
ಪ್ರಾತಿಕಾಮಿಕನು ದ್ರೌಪದಿಯ ಬಳಿ ಬಂದು ನಮಸ್ಕರಿಸಿ, ತಾಯೆ ನಾನು ಒಂದು ವಿಷಯವನ್ನು ನಿವೇದಿಸಲು ಬಂದಿದ್ದೇನೆ, ಇಂದು ಯುಧಿಷ್ಠಿರನು ಜೂಜಿನಲ್ಲಿ ಸೋತನು. ದುರ್ಯೋಧನನು ಗೆದ್ದನು. ಇಂದ್ರಪ್ರಸ್ಥ ರಾಜ್ಯದ ಕೋಶ, ಚತುರಂಗ ಸೈನ್ಯವೆಲ್ಲವೂ ಕೌರವನ ವಶವಾಯಿತು. ನೀವು ಮನಸ್ಸಿನಲ್ಲಿ ನೊಂದುಕೊಳ್ಳಬೇಡಿರಿ, ಹೆಚ್ಚಿಗೆ ಹೇಳುವುದೇನಿದೆ, ಯುಧಿಷ್ಠಿರನು ತನ್ನನ್ನೂ ಸೋಲುವುದಲ್ಲದೆ, ಭೀಮಾರ್ಜುನ, ನಕುಲ ಸಹದೇವ ಹಾಗೂ ನಿಮ್ಮನ್ನೂ ಜೂಜಿನಲ್ಲಿ ಪಣಕಿಟ್ಟು ಸೋತನೆಂದು ಪ್ರಾತಿಕಾಮಿಕನು ತಿಳಿಸಿದನು.

ಅರ್ಥ:
ತಾಯೆ: ಮಾತೆ; ಬಿನ್ನಹ: ಮನವಿ; ಇಂದು: ಈ ದಿನ; ರಾಯ: ಒಡೆಯ; ಸೋಲು: ಪರಾಭವ; ಜೂಜು: ದ್ಯೂತ; ಗೆಲುವು: ಜಯ; ಕೋಶ: ಖಜಾನೆ, ಭಂಡಾರ; ಗಜ: ಆನೆ; ತುರಗ: ಅಶ್ವ; ರಥ: ಬಂಡಿ; ಸಹಿತ: ಜೊತೆ; ನೋವು: ಬೇಸರ, ಸಂಕಟ; ಹಲವು: ಬಹಳ; ಮಾತು: ನುಡಿ; ನೃಪತಿ: ರಾಜ;

ಪದವಿಂಗಡಣೆ:
ತಾಯೆ+ ಬಿನ್ನಹವ್+ಇಂದು +ನಿಮ್ಮಯ
ರಾಯ +ಸೋತನು +ಜೂಜಿನಲಿ+ ಕುರು
ರಾಯ +ಗೆಲಿದನು+ ಕೋಶವನು+ ಗಜ+ತುರಗ +ರಥ +ಸಹಿತ
ನೋಯಲಾಗದು+ ಹಲವು+ ಮಾತೇನ್
ಆ+ ಯುಧಿಷ್ಠಿರ +ನೃಪತಿ +ಸೋತನು
ತಾಯೆ +ಭೀಮಾರ್ಜುನ +ನಕುಲ+ ಸಹದೇವ+ ನೀವ್+ಸಹಿತ

ಅಚ್ಚರಿ:
(೧) ತಾಯೆ – ೧, ೬ ಸಾಲಿನ ಮೊದಲ ಪದ
(೨) ಸೋತನು, ಗೆಲಿದನು – ವಿರುದ್ಧ ಪದಗಳು
(೩) ರಾಯ, ನೃಪತಿ – ಸಮನಾರ್ಥ ಪದ
(೪) ಸಹಿತ – ೩, ೬ ಸಾಲಿನ ಕೊನೆ ಪದ

ಪದ್ಯ ೩: ರಾಜರಿಗಿರಬೇಕಾದ ಸಪ್ತಾಂಗಗಳಾವುವು?

ಕೋಶ ಬಲ ತಳತಂತ್ರ ಹೆಚ್ಚಿದ
ದೇಶ ದುರ್ಗವಮಾತ್ಯ ಮಿತ್ರಮ
ಹೀಶಜನವೆಂಬಿದುವೆ ಕೇಳ್ ಸಪ್ತಾಂಗ ಸನ್ನಾಹ
ಈಸು ನಿನಗುಂಟಿಲ್ಲ ಮಿತ್ರಮ
ಹೀಶರೆಂಬುದು ಕೊರತೆ ಪಾಂಡವ
ರಾ ಸಹಾಯವು ಬರಲು ಬಳಿಕಿದಿರಿಲ್ಲ ನಿನಗೆಂದ (ಉದ್ಯೋಗ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ಭಂಡಾರ, ಬಲ, ಸೈನ್ಯ, ದೇಶ, ಕೋಟೆ, ಮಂತ್ರಿ, ಮಿತ್ರರಾಜರು, ಈ ಏಳು ಅಂಗಗಳು ರಾಜರಿಗಿರಬೇಕಾದವು. ದುರ್ಯೋಧನ ಇದರಲ್ಲಿ ನಿನಗೆ ಎಲ್ಲವೂ ಇದೆ ಮಿತ್ರರಾಜರನ್ನು ಬಿಟ್ಟು. ಪಾಂಡವರನ್ನು ನೀನು ಮಿತ್ರರಾಗಿಸಿ, ಅವರು ನಿನಗೆ ಮಿತ್ರರಾಜರಾಗಿ ಸಹಾಯ ಮಾಡಿದರೆ ನಿನ್ನೆದುರು ನಿಲ್ಲುವವರಾರಿರುವುದಿಲ್ಲ.

ಅರ್ಥ:
ಕೋಶ:ಬೊಕ್ಕಸ; ಬಲ: ಶಕ್ತಿ, ಸೈನ್ಯ; ತಳತಂತ್ರ: ಕಾಲಾಳುಗಳ, ಪಡೆ, ಸೈನ್ಯ; ಹೆಚ್ಚು: ಅಧಿಕ; ದೇಶ: ರಾಷ್ಟ್ರ; ದುರ್ಗ: ಕೋಟೆ; ಅಮಾತ್ಯ: ಮಂತ್ರಿ; ಮಿತ್ರ: ಸ್ನೇಹಿತ; ಮಹೀಶ: ರಾಜ; ಸನ್ನಾಹ: ಕವಚ, ಜೋಡು; ಈಸು: ಇವೆಲ್ಲವು; ಕೊರತೆ: ಚಿಂತೆ; ಸಹಾಯ: ನೆರವು; ಬರಲು: ಆಗಮಿಸಲು; ಬಳಿಕ: ನಂತರ; ಇದಿರು: ಎದುರು;

ಪದವಿಂಗಡಣೆ:
ಕೋಶ +ಬಲ +ತಳತಂತ್ರ +ಹೆಚ್ಚಿದ
ದೇಶ +ದುರ್ಗವ್+ಅಮಾತ್ಯ +ಮಿತ್ರ+ಮ
ಹೀಶಜನ+ವೆಂಬ್+ಇದುವೆ +ಕೇಳ್ +ಸಪ್ತಾಂಗ +ಸನ್ನಾಹ
ಈಸು +ನಿನಗುಂಟಿಲ್ಲ+ ಮಿತ್ರ+ಮ
ಹೀಶರ್+ಎಂಬುದು +ಕೊರತೆ +ಪಾಂಡವ
ರಾ +ಸಹಾಯವು +ಬರಲು+ ಬಳಿಕ್+ಇದಿರಿಲ್ಲ+ ನಿನಗೆಂದ

ಅಚ್ಚರಿ:
(೧) ಮಹೀಶ – ೩, ೫ ಸಾಲಿನ ಮೊದಲ ಪದ
(೨) ರಾಜರ ಸಪ್ತಾಂಗಗಳ ವರ್ಣನೆ – ಕೋಶ, ಬಲ, ತಳತಂತ್ರ, ದೇಶ, ದುರ್ಗ, ಅಮಾತ್ಯ, ಮಿತ್ರರಾಜ

ಪದ್ಯ ೭೮: ಪಾಂಡವರ ಜೊತೆ ಯಾವುದರಲ್ಲಿ ಮಿತ್ರತ್ವವಾದರೆ ಕೊರತೆಯಿರುವುದಿಲ್ಲ?

ಧರೆಯೊಳೀ ಹೊತ್ತಿನಲಿ ನಿನಗೈ
ಶ್ವರಿಯದಲಿ ಮಕ್ಕಳಲಿ ಖಂಡೆಯ
ಸಿರಿಯಲೋಡಹುಟ್ಟಿದರು ಸಪ್ತಾಂಗದಲಿ ಸತಿಯರಲಿ
ಗುರು ಪಿತಾಮಹ ಬಂಧುಜನಮಿ
ತ್ರರಲಿದಾವುದು ಕೊರತೆ ಕೌಂತೇ
ಯರ ನೆರವಿಗರ ಮಾಡುವರೆ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೭೮ ಪದ್ಯ)

ತಾತ್ಪರ್ಯ:
ರಾಜನೇ, ಭೂಮಿಯಲ್ಲಿ ಈ ಹೊತ್ತಿನಲಿ ನಿನಗೆ ಐಶ್ವರ್ಯ, ಮಕ್ಕಳು, ಶಸ್ತ್ರಾಸ್ತ್ರಗಳ ಸಮೃದ್ಧಿ, ಸಹೋದರರು, ಸಪ್ತಾಂಗಗಳು, ರಾಣಿವಾಸ, ಗುರುಗಳು, ಪಿತಾಮಹ, ಬಂಧುಗಳು, ಸ್ನೇಹಿತರು ಇದಾವುದರಲ್ಲಿಯೂ ಪಾಂಡವರ ಮಿತ್ರತ್ವವುಂಟಾದರೆ ಕೊರತೆಯೇ ಇಲ್ಲ. ಪಾಂಡವರನ್ನು ರಾಜ್ಯದಿಂದ ದೂರವಿಡುವರೇ? ಎಂದು ವಿದುರ ಕೇಳಿದ.

ಅರ್ಥ:
ಧರೆ: ಭೂಮಿ; ಹೊತ್ತು: ಸಮಯ; ಐಶ್ವರ್ಯ: ಸಿರಿ; ಮಕ್ಕಳು: ಸುತ; ಖಂಡೆಯ: ಕತ್ತಿ; ಸಿರಿ: ಐಶ್ವರ್ಯ; ಒಡಹುಟ್ಟಿದ: ಅಣ್ಣ ತಮ್ಮ, ಅಕ್ಕ, ತಂಗಿ, ಜೊತೆಯಲ್ಲಿ ಹುಟ್ಟಿದವರು; ಸಪ್ತ: ಏಳು; ಅಂಗ: ಭಾಗ; ಸತಿ: ಹೆಣ್ಣು, ಹೆಂಡತಿ, ರಾಣಿ; ಗುರು: ಆಚಾರ್ಯ; ಪಿತಾಮಹ: ಅಜ್ಜ; ಬಂಧು: ಬಾಂಧವರು; ಮಿತ್ರ: ಸ್ನೇಹಿತ; ಕೊರತೆ: ತೊಂದರೆ; ನೆರವು: ಸಹಾಯ; ನೆರವಿ: ಸಮೂಹ, ಮೊತ್ತ; ಗರ: ಗ್ರಹ, ವಿಷ;

ಪದವಿಂಗಡಣೆ:
ಧರೆಯೊಳೀ +ಹೊತ್ತಿನಲಿ+ ನಿನಗ್
ಐಶ್ವರಿಯದಲಿ +ಮಕ್ಕಳಲಿ+ ಖಂಡೆಯ
ಸಿರಿಯಲ್+ಒಡಹುಟ್ಟಿದರು+ ಸಪ್ತಾಂಗದಲಿ +ಸತಿಯರಲಿ
ಗುರು +ಪಿತಾಮಹ +ಬಂಧುಜನ+ಮಿ
ತ್ರರಲ್+ಇದಾವುದು +ಕೊರತೆ+ ಕೌಂತೇ
ಯರ +ನೆರವಿಗರ +ಮಾಡುವರೆ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಸಪ್ತಾಂಗ: ಕೌಟಿಲ್ಯನ ಪ್ರಕಾರ ರಾಜ್ಯದ ಸಪ್ತಾಂಗಗಳು – ಪ್ರಮುಖ, ಅಮಾತ್ಯ, ಜನಪದ, ದುರ್ಗ, ಕೋಶ, ದಂಡ (ಸೈನ್ಯ), ಮಿತ್ರ