ಪದ್ಯ ೬೧: ಭೀಮನು ದುರ್ಯೋಧನನನ್ನು ಹೇಗೆ ಹಂಗಿಸಿದನು?

ಒದೆದು ರಥವನು ಧರೆಗೆ ಧುಮ್ಮಿ
ಕ್ಕಿದನು ಕೌರವರಾಯ ಮೈದೋ
ರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
ರದನಿಗಳ ರೌದ್ರಾಹವಕೆ ಕೋ
ವಿದನಲೇ ಕೊಳ್ಳೆನುತ ಕರಿಗಳ
ಕೆದರಿದನು ಕಲಿಜೋದರಂಬಿನ ಸರಿಯ ಸೈರಿಸುತ (ಗದಾ ಪರ್ವ, ೧ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭೀಮನು ರಥವನ್ನು ಬಿಟ್ಟು ಭೂಮಿಗೆ ಧುಮುಕಿ, ಕೌರವರಾಯ, ಈಗ ಕಾಣಿಸಿಕೊಂಡೆ, ವೀರನಾಗಿ ನಿಲ್ಲು ಹೇಡಿಯಂತೆ ಓಡಬೇಡ. ಆನೆಗಳ ರೌದ್ರ ಯುದ್ಧದಲ್ಲಿ ನೀನು ನಿಪುಣನಲ್ಲವೇ? ತೆಗೆದುಕೋ ಎಂದು ಜೋದರು ಬಿಡುವ ಬಾಣಗಳನ್ನು ಕಡೆಗಣಿಸಿ ಆನೆಗಳನ್ನು ಓಡಿಸಿದನು.

ಅರ್ಥ:
ಒದೆ: ನೂಕು; ರಥ: ಬಂಡಿ; ಧರೆ: ಭೂಮಿ; ಧುಮ್ಮಿಕ್ಕು: ಜಿಗಿ; ರಾಯ: ರಾಜ; ಮೈದೋರು: ವೀರನಾಗಿ ನಿಲ್ಲು, ಕಾಣಿಸಿಕೊ; ಕಲಿ: ಶೂರ; ಪಾಲಿಸು: ಅನುಕರಿಸು; ಪಲಾಯಣ: ಓಡು; ರದನಿ: ಆನೆ; ರೌದ್ರ: ಭಯಂಕರ; ಆಹವ: ಯುದ್ಧ; ಕೋವಿದ: ಪಂಡಿತ; ಕರಿ: ಆನೆ; ಕೆದರು: ಹರಡು; ಕಲಿ: ಶೂರ; ಜೋದ: ಯೋಧ, ಆನೆ ಮೇಲೆ ಕುಳಿತು ಯುದ್ಧ ಮಾಡುವವ; ಅಂಬು: ಬಾಣ; ಸೈರಿಸು: ತಾಳು, ಸಹನೆ;

ಪದವಿಂಗಡಣೆ:
ಒದೆದು +ರಥವನು +ಧರೆಗೆ +ಧುಮ್ಮಿ
ಕ್ಕಿದನು +ಕೌರವರಾಯ +ಮೈದೋ
ರಿದೆಯಲಾ +ಕಲಿಯಾಗು +ಪಾಲಿಸದಿರು +ಪಲಾಯನವ
ರದನಿಗಳ+ ರೌದ್ರ+ಆಹವಕೆ +ಕೋ
ವಿದನಲೇ +ಕೊಳ್ಳೆನುತ +ಕರಿಗಳ
ಕೆದರಿದನು +ಕಲಿ+ಜೋದರ್+ಅಂಬಿನ +ಸರಿಯ +ಸೈರಿಸುತ

ಅಚ್ಚರಿ:
(೧) ದುರ್ಯೋಧನನನ್ನು ಹಂಗಿಸುವ ಪರಿ – ಕೌರವರಾಯ ಮೈದೋರಿದೆಯಲಾ ಕಲಿಯಾಗು ಪಾಲಿಸದಿರು ಪಲಾಯನವ
(೨) ಕ ಕಾರದ ಸಾಲು ಪದ – ಕೋವಿದನಲೇ ಕೊಳ್ಳೆನುತ ಕರಿಗಳ ಕೆದರಿದನು ಕಲಿಜೋದರಂಬಿನ

ಪದ್ಯ ೩೯: ಅಶ್ವತ್ಥಾಮನು ಅರ್ಜುನನ ಮೇಲೆ ಹೇಗೆ ಯುದ್ಧ ಮಾಡಿದನು?

ಆವುದೈ ನೀನರಿದ ಬಿಲು ವಿ
ದ್ಯಾವಿಷಯ ಘನ ಚಾಪವೇದಾ
ರ್ಥಾವಳಿಯು ಶರಮೌಕ್ತಿಕೋಪನ್ಯಾಸವೆಂತೆಂತು
ಕೋವಿದಾಭಾಸಕರ ಜಯ ನಿನ
ಗಾವ ಪರಿ ತೆಗೆ ಶಸ್ತ್ರವಿದ್ಯಾ
ಭಾವಗೋಷ್ಠಿಯ ಬಲ್ಲೊಡರಿಯೆಂದೆಚ್ಚನರ್ಜುನನ (ವಿರಾಟ ಪರ್ವ, ೯ ಸಂಧಿ, ೩೯ ಪದ್ಯ)

ತಾತ್ಪರ್ಯ:
ಅರ್ಜುನ, ನೀನು ಯಾವ ಬಿಲ್ಲುಗಾರಿಕೆಯನ್ನು ಕಲಿತಿರುವೆ? ಧರ್ನುವೇದದ ಯಾವ ಅರ್ಥವನ್ನು ಅರಿತಿರುವೆ? ಬಾಣ ಪ್ರಯೋಗದ ಯಾವ ವ್ಯಾಖ್ಯಾನವನ್ನು ಬಲ್ಲೆ? ಪಂಡಿತರಂತೆ ತೋರುವವರು ವಾದದಲ್ಲಿ ಜಯಿಸಿದೆವೆಂದು ಕೊಚ್ಚಿಕೊಂಡ ಹಾಗೆ ಉಬ್ಬಬೇಡ. ಶಸ್ತ್ರ ವಿದ್ಯೆಯ ನಿಜವಾದ ಹುರೂಲನ್ನು ಅರಿತಿದ್ದರೆ ಯುದ್ಧ ಮಾಡು, ಎಂದು ಅಶ್ವತ್ಥಾಮನು ಅರ್ಜುನನ ಮೇಲೆ ಬಾಣ ಪ್ರಯೋಗ ಮಾಡಿದನು.

ಅರ್ಥ:
ಅರಿ: ತಿಳಿ; ಬಿಲು: ಬಿಲ್ಲು, ಚಾಪ; ವಿದ್ಯ: ಜ್ಞಾನ; ವಿಷಯ: ಭೋಗಾಭಿಲಾಷೆ; ಘನ: ಶ್ರೇಷ್ಠ; ಚಾಪ: ಬಿಲ್ಲು; ಮೌಕ್ತಿಕ: ಮುತ್ತು; ಶರ: ಬಾಣ; ಉಪನ್ಯಾಸ: ವ್ಯಾಖ್ಯಾನ, ಬೋಧನೆ; ಕೋವಿದ: ಪಂಡಿತ; ಭಾಸ: ಮೇಲ್ನೋಟಕ್ಕೆ ತೋರುವಿಕೆ; ಜಯ: ಗೆಲುವು; ಪರಿ: ರೀತಿ; ತೆಗೆ: ಹೊರತರು, ಬಿಡು; ಶಸ್ತ್ರ: ಆಯುಧ; ಭಾವ: ಅಭಿಪ್ರಾಯ, ಅಂತರ್ಗತ ಅರ್ಥ; ಗೋಷ್ಠಿ: ಗುಂಪು, ಕೂಟ; ಬಲ್ಲ: ತಿಳಿದವ; ಅರಿ: ತಿಳಿ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಆವುದೈ +ನೀನ್+ಅರಿದ+ ಬಿಲು+ ವಿ
ದ್ಯಾ+ವಿಷಯ +ಘನ +ಚಾಪ+ವೇದಾ
ರ್ಥಾವಳಿಯು +ಶರ+ಮೌಕ್ತಿಕ+ಉಪನ್ಯಾಸವ್+ಎಂತೆಂತು
ಕೋವಿದಾ+ಭಾಸಕರ+ ಜಯ +ನಿನ
ಗಾವ +ಪರಿ+ ತೆಗೆ+ ಶಸ್ತ್ರವಿದ್ಯಾ
ಭಾವಗೋಷ್ಠಿಯ +ಬಲ್ಲೊಡ್+ಅರಿ+ಎಂದ್+ಎಚ್ಚನ್+ಅರ್ಜುನನ

ಅಚ್ಚರಿ:
(೧) ಬಿಲು, ಚಾಪ – ಸಮನಾರ್ಥಕ ಪದ
(೨) ಚಾಪವೇದಾರ್ಥಾವಳಿ, ಶರಮೌಕ್ತಿಕೋಪನ್ಯಾಸ, ಕೋವಿದಾಭಾಸಕರ, ಶಸ್ತ್ರವಿದ್ಯಾಭಾವಗೋಷ್ಠಿ – ಪದಗಳ ಪ್ರಯೋಗ

ಪದ್ಯ ೩೫: ಅರ್ಜುನನು ದ್ರೋಣರಿಗೆೆ ಏನು ಹೇಳಿದನು?

ದೇವ ಭಾರದ್ವಾಜ ಬಿಲು ವಿ
ದ್ಯಾ ವಿಷಯ ನವರುದ್ರ ಘನ ಶ
ಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
ಕೋವಿದನ ಶರತಿಮಿರವನು ಗಾಂ
ಡೀವಿಯಗಣಿತ ಬಾಣ ಭಾನು ಕ
ರಾವಳಿಯಲಪಹರಿಸಿದನು ಸುರರಾಜಸುತ ನಗುತ (ವಿರಾಟ ಪರ್ವ, ೯ ಸಂಧಿ, ೩೫ ಪದ್ಯ)

ತಾತ್ಪರ್ಯ:
ಹೇ ಭಾರದ್ವಾಜ ದೇವ, ನೀನು ಧರ್ನುವಿದ್ಯೆಯಲ್ಲಿ ನೂತನ ರುದ್ರ, ಶಸ್ತ್ರಾವಳಿಗಳ ಪ್ರಯೋಗದಲ್ಲಿ ನೂತನ ಬ್ರಹ್ಮ, ಎಂದು ಅರ್ಜುನನು ದ್ರೋಣನನ್ನು ಹೊಗಳಿದನು. ದ್ರೋಣನ ಬಾಣಗಳ ಕತ್ತಲನ್ನು ತನ್ನ ಬಾಣಗಳ ಬಿಸಿಲಿನಿಂದ ನಾಶಪಡಿಸಿದನು.

ಅರ್ಥ:
ಭಾರದ್ವಾಜ: ದ್ರೋಣ; ಬಿಲು: ಚಾಪ; ವಿದ್ಯ: ಜ್ಞಾನ; ವಿಷಯ: ವಿಚಾರ; ನವ: ನೂತನ; ರುದ್ರ: ಶಿವನ ಅಂಶ; ಘನ: ಶ್ರೇಷ್ಠ; ಶಸ್ತ್ರ: ಆಯುಧ; ಆವಳಿ: ಗುಂಪು; ನಿರ್ಮಾಣ: ರಚನೆ; ಕಮಲಭವ: ಕಮಲದಲ್ಲಿ ಹುಟ್ಟಿದವ (ಬ್ರಹ್ಮ); ಕೋವಿದ: ಪಂಡಿತ; ಶರ: ಬಾಣ; ತಿಮಿರ: ಕತ್ತಲೆ; ಅಗಣಿತ: ಎಣಿಸಲಾಗದ; ಬಾಣ: ಶರ; ಭಾನು: ರವಿ; ಕರ: ಕಿರಣ, ರಶ್ಮಿ; ಆವಳಿ: ಗುಮ್ಪು; ಅಪಹರಿಸು: ನಾಶಪಡಿಸು, ಸಾಗಿಸು; ಸುರರಾಜ: ಇಂದ್ರ; ಸುತ: ಮಗ; ನಗು: ಹರ್ಷ;

ಪದವಿಂಗಡಣೆ:
ದೇವ +ಭಾರದ್ವಾಜ +ಬಿಲು +ವಿ
ದ್ಯಾ +ವಿಷಯ +ನವರುದ್ರ +ಘನ+ ಶ
ಸ್ತ್ರಾವಳೀ+ ನಿರ್ಮಾಣ +ನೂತನ+ ಕಮಲಭವಯೆನುತ
ಕೋವಿದನ +ಶರ+ತಿಮಿರವನು +ಗಾಂ
ಡೀವಿ+ಅಗಣಿತ +ಬಾಣ +ಭಾನು +ಕ
ರಾವಳಿಯಲ್+ಅಪಹರಿಸಿದನು +ಸುರರಾಜಸುತ +ನಗುತ

ಅಚ್ಚರಿ:
(೧) ದ್ರೋಣರನ್ನು ಹೊಗಳಿದ ಪರಿ – ದೇವ ಭಾರದ್ವಾಜ ಬಿಲು ವಿದ್ಯಾ ವಿಷಯ ನವರುದ್ರ ಘನ ಶಸ್ತ್ರಾವಳೀ ನಿರ್ಮಾಣ ನೂತನ ಕಮಲಭವಯೆನುತ
(೨) ಅರ್ಜುನನ ಕೌಶಲ್ಯ – ಕೋವಿದನ ಶರತಿಮಿರವನು ಗಾಂಡೀವಿಯಗಣಿತ ಬಾಣ ಭಾನು ಕರಾವಳಿಯಲಪಹರಿಸಿದನು ಸುರರಾಜಸುತ ನಗುತ

ಪದ್ಯ ೫: ಸೈರಂಧ್ರಿಯು ಯಾರನ್ನು ನೆನೆವುತ್ತಾ ಚಲಿಸಿದಳು?

ದೇವಿ ನೇಮಿಸಲರಿಯೆನೆಂದೊಡಿ
ದಾವ ಧರ್ಮವು ಶಿವ ಶಿವೀ ಹದ
ಸಾವನವರಿಗೆ ತಹುದು ಬದ್ಧವಿಘಾತಿಯಿದು ಬಲುಹು
ಸೇವೆಯಿದಕೇ ಕಷ್ಟವೆಂಬುದು
ಕೋವಿದರ ಮತ ಶಿವಶಿವಾ ರಾ
ಜೀವಲೋಚನ ಕೃಷ್ಣ ಬಲ್ಲೆಯೆನುತ್ತ ಗಮಿಸಿದಳು (ವಿರಾಟ ಪರ್ವ, ೩ ಸಂಧಿ, ೫ ಪದ್ಯ)

ತಾತ್ಪರ್ಯ:
ದೇವಿ ನಿಮ್ಮ ಆಜ್ಞೆಯನ್ನು ನಡೆಸಲಾರೆ ಎಂದು ಹೇಳಿದರೂ ಬಲವಂತವನ್ನು ಮಾಡುವುದು ಯಾವ ಧರ್ಮ? ನೀವು ಮಾಡಿದ ಆಜ್ಞೆಯಂತೆ ನಡೆಯುವುದು ನಿಮ್ಮ ತಮ್ಮನಿಗೆ ಸಾವನ್ನು ತರುತ್ತದೆ, ಈ ಬಲವಂತದ ಪೆಟ್ಟು ಬಲುದೊಡ್ಡದು, ಆದುದರಿಂದಲೇ ತಿಳಿದವರು ಹೇಳುತ್ತಾರೆ, ಸೇವೆಯು ಬಹುಕಷ್ಟಕರವೆಂದು, ಶಿವ ಶಿವಾ ಕೃಷ್ಣ ಇದರ ಪರಿಣಾಮವನ್ನು ನೀನೇ ಬಲ್ಲೆ ಎಂದು ಹೇಳುತ್ತಾ ಸೈರಂಧ್ರಿಯು ಕೀಚಕನ ಮನೆಯ ಕಡೆಗೆ ನಡೆದಳು.

ಅರ್ಥ:
ನೇಮಿಸು: ಅಪ್ಪಣೆ ಮಾಡು, ಗೊತ್ತು ಮಾಡು; ಅರಿ: ತಿಳಿ; ಧರ್ಮ: ಧಾರಣೆ ಮಾಡಿದುದು; ಹದ: ಸ್ಥಿತಿ; ಸಾವು: ಮರಣ; ತಹುದು: ತರುವುದು; ಬದ್ಧ: ಕಟ್ಟಿದ, ಬಿಗಿದ; ವಿಘಾತ: ನಾಶ, ಧ್ವಂಸ; ಬಲುಹು: ಬಲ, ಶಕ್ತಿ; ಸೇವೆ: ಊಳಿಗ; ಕಷ್ಟ: ತೊಂದರೆ; ಕೋವಿದ: ಪಂಡಿತ; ಮತ: ಅಭಿಪ್ರಾಯ; ರಾಜೀವಲೋಚನ: ಕಮಲದಂತ ಕಣ್ಣುಳ್ಳವ (ಕೃಷ್ಣ); ಬಲ್ಲೆ: ತಿಳಿದಿರುವೆ; ಗಮಿಸು: ತೆರಳು;

ಪದವಿಂಗಡಣೆ:
ದೇವಿ +ನೇಮಿಸಲ್+ಅರಿಯೆನ್+ಎಂದೊಡ್
ಇದಾವ +ಧರ್ಮವು +ಶಿವ +ಶಿವ್+ಈ+ ಹದ
ಸಾವನ್+ಅವರಿಗೆ+ ತಹುದು+ ಬದ್ಧ+ವಿಘಾತಿಯಿದು +ಬಲುಹು
ಸೇವೆಯಿದಕೇ+ ಕಷ್ಟವೆಂಬುದು
ಕೋವಿದರ+ ಮತ +ಶಿವಶಿವಾ+ ರಾ
ಜೀವಲೋಚನ +ಕೃಷ್ಣ +ಬಲ್ಲೆ+ಎನುತ್ತ +ಗಮಿಸಿದಳು

ಅಚ್ಚರಿ:
(೧) ಪಂಡಿತರ ಮಾತು – ಸೇವೆಯಿದಕೇ ಕಷ್ಟವೆಂಬುದು ಕೋವಿದರ ಮತ

ಪದ್ಯ ೧೨೯: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೧೮?

ಋಷಿಗಳತಿ ತಾರ್ಕಿಕರು ಕರ್ಮ
ವ್ಯಸನಿಗಳು ಕೋವಿದರು ಮಿಕ್ಕಿನ
ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
ಒಸೆದು ನಿನ್ನವರೆಂದು ಬಗೆವರೆ
ಬಸಿದು ಬೀಳುವ ಕೃಪೆಯ ನೀ ತೋ
ರಿಸೆಯಿದೇನೈ ಕೃಷ್ಣಯೆಂದೊರಲಿದಳು ನಳಿನಾಕ್ಷಿ (ಸಭಾ ಪರ್ವ, ೧೫ ಸಂಧಿ, ೧೨೯ ಪದ್ಯ)

ತಾತ್ಪರ್ಯ:
ಋಷಿಮುನಿಗಳು ತರ್ಕದಲ್ಲಿ ಪಾಂಡಿತ್ಯಹೊಂದಿದವರು, ಕರ್ಮದಲ್ಲಿ ನಿರತರಾದವರು ಪಂಡಿತರು,
ಮೂಢರಾದ ಮಿಕ್ಕ ಜನರು ವಿಷಯಗಳೆಂಬ ಎರೆಹುಳುಗಳು ಚುಚ್ಚಿದ ಗಾಳಕ್ಕೆ ಬೀಳುವ ಮೀನಿನಂತಿರುವವರು. ನನ್ನವರೆಂಬ ಮೋಹದಿಂದಾದರೂ ನಮ್ಮನ್ನು ರಕ್ಷಿಸಲು ಮುಗಿಬೀಳುವಂತಹ ಕೃಪೆಯನ್ನೇಕೆ ತೋರಿಸುತ್ತಿಲ್ಲ ಕೃಷ್ಣ ಎಂದು ದ್ರೌಪದಿ ಮೊರೆಯಿಟ್ಟಳು.

ಅರ್ಥ:
ಋಷಿ: ಮುನಿ; ತಾರ್ಕಿಕ: ತರ್ಕದಲ್ಲಿ ಪಾಂಡಿತ್ಯಪಡೆದವ; ಕರ್ಮ: ಕಾರ್ಯ; ವ್ಯಸನಿ: ಗೀಳುಳ್ಳವ, ಚಟ; ಕೋವಿದ: ಪಂಡಿತ; ಮಿಕ್ಕ: ಉಳಿದ; ವಿಷಯ: ವಿಚಾರ, ಸಂಗತಿ; ಎರೆ: ಮೀನು, ಹಕ್ಕಿ ಗಳಿಗೆ ಹಾಕುವ ಆಹಾರ; ಮೀನು: ಮತ್ಸ್ಯ; ಮೂಢ: ತಿಳಿವಳಿಕೆಯಿಲ್ಲದ, ಮೂರ್ಖ; ಮನುಷ್ಯ: ನರ; ಒಸೆ: ಪ್ರೀತಿಸು, ಮೆಚ್ಚು; ಬಗೆ: ಆಲೋಚನೆ, ಯೋಚನೆ; ಬಸಿ: ಸರು, ಸ್ರವಿಸು, ಜಿನುಗು; ಬೀಳು: ಎರಗು; ಕೃಪೆ: ದಯೆ; ತೋರು: ಕಾಣು, ದೃಷ್ಟಿಗೆ ಬೀಳು; ಒರಲು: ಗೋಳಿಡು, ಕೂಗು; ನಳಿನಾಕ್ಷಿ: ಕಮಲದಂತ ಕಣ್ಣುಳ್ಳವಳು (ಸುಂದರಿ);

ಪದವಿಂಗಡಣೆ:
ಋಷಿಗಳ್+ಅತಿ +ತಾರ್ಕಿಕರು+ ಕರ್ಮ
ವ್ಯಸನಿಗಳು +ಕೋವಿದರು+ ಮಿಕ್ಕಿನ
ವಿಷಯದ್+ಎರೆ +ಮೀನುಗಳು +ಮೂಢ +ಮನುಷ್ಯರೆಂಬುವರು
ಒಸೆದು +ನಿನ್ನವರೆಂದು +ಬಗೆವರೆ
ಬಸಿದು +ಬೀಳುವ +ಕೃಪೆಯ+ ನೀ+ ತೋ
ರಿಸೆ+ಇದೇನೈ +ಕೃಷ್ಣ+ಎಂದ್+ಒರಲಿದಳು +ನಳಿನಾಕ್ಷಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮಿಕ್ಕಿನ ವಿಷಯದೆರೆ ಮೀನುಗಳು ಮೂಢ ಮನುಷ್ಯರೆಂಬುವರು
(೨) ಕೃಷ್ಣನನ್ನು ಮೊರೆಯಿಡುವ ಪರಿ – ಒಸೆದು ನಿನ್ನವರೆಂದು ಬಗೆವರೆ ಬಸಿದು ಬೀಳುವ ಕೃಪೆಯ ನೀ ತೋರಿಸೆ

ಪದ್ಯ ೨೧: ಪಣಕಿಟ್ಟ ಅರ್ಜುನನ ಸ್ಥಿತಿ ಏನಾಯಿತು?

ಮೇಲೆ ಹೇಳುವುದೇನು ಸಾರಿಯ
ಸಾಲು ಮುರಿದುದು ಸೆರೆಯ ಕಳವಿನ
ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ
ಹೇಳುವದರಿಂ ಮುನ್ನ ಶಕುನಿಗೆ
ಬೀಳುವುವು ಬೇಕಾದ ದಾಯವು
ಕೌಳಿಕದ ವಿಧಿಪಾಶ ತೊಡಕಿತು ಕೆಡಹಿತರ್ಜುನನ (ಸಭಾ ಪರ್ವ, ೧೫ ಸಂಧಿ, ೨೧ ಪದ್ಯ)

ತಾತ್ಪರ್ಯ:
ಜನಮೇಜಯ ಇನ್ನು ಹೇಳುವುದೇನಿದೆ, ಪಗಡೆಯಾಟದಲ್ಲಿ ಧರ್ಮಜನು ಇಟ್ಟ ಕಾಯಿಯು ಮುರಿಯಿತು. ಮೋಸದಲ್ಲಿ ಪ್ರವೀಣರಾದವರ ಕೈಚಳಕವನ್ನು ಯಾರು ತಾನೇ ತಿಳಿಯಬಲ್ಲರು. ಶಕುನಿಯು ಇಂತಹ ಗರವು ತನಗೆ ಬೇಕೆಂದು ದಾಳಕ್ಕೆ ಹೇಳುವ ಮೊದಲೇ ಆ ಗರವು ಬೀಳುತ್ತಿತ್ತು. ಕ್ರೂರವಾದ ವಂಚನೆಯ ವಿಧಿ ಪಾಶವು, ಕಾಲಿಗೆ ತೊಡಕಿಕೊಂಡು ಅರ್ಜುನನನ್ನು ಕೆಡವಿತು.

ಅರ್ಥ:
ಮೇಲೆ: ಮುಂದಿನ, ನಂತರ; ಹೇಳು: ತಿಳಿಸು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಸಾಲು: ಪಂಕ್ತಿ; ಮುರಿ: ಸೀಳು; ಸೆರೆ: ಬಂಧನ; ಕಳವು:ಅಪಹರಣ ; ಕಾಲುಕೀಲ್ಗಳು: ಅಡಿ, ಬುಡ, ರೀತಿ; ಬಲ್ಲರು: ತಿಳಿದವರು; ಕುಟಿಲ: ಮೋಸ; ಕೋವಿದ: ಪಂಡಿತ; ಮುನ್ನ: ಮೊದಲೇ; ಬೇಕಾದ: ಇಚ್ಛಿಸಿದ; ದಾಯ: ಪಗಡೆಯಾಟದಲ್ಲಿ ಬೀಳುವ ಗರ; ಕೌಳಿಕ: ಕಟುಕ, ಮೋಸ, ವಂಚನೆ; ವಿಧಿ: ಹಣೆಬರಹ, ಅದೃಷ್ಟ; ತೊಡಕು: ಸಿಕ್ಕು, ಅಡ್ಡಿ, ಗೊಂದಲ; ಕೆಡಹು: ಬೀಳಿಸು, ಸಂಹರಿಸು;

ಪದವಿಂಗಡಣೆ:
ಮೇಲೆ +ಹೇಳುವುದೇನು+ ಸಾರಿಯ
ಸಾಲು +ಮುರಿದುದು +ಸೆರೆಯ +ಕಳವಿನ
ಕಾಲು +ಕೀಲ್ಗಳನಾರು+ ಬಲ್ಲರು +ಕುಟಿಲ +ಕೋವಿದರ
ಹೇಳುವದರಿಂ +ಮುನ್ನ +ಶಕುನಿಗೆ
ಬೀಳುವುವು +ಬೇಕಾದ+ ದಾಯವು
ಕೌಳಿಕದ +ವಿಧಿಪಾಶ+ ತೊಡಕಿತು +ಕೆಡಹಿತ್+ಅರ್ಜುನನ

ಅಚ್ಚರಿ:
(೧) ಅರ್ಜುನನ ಪಣವು ಸೋತಿತೆನ್ನಲು – ಕೌಳಿಕದ ವಿಧಿಪಾಸಶ ತೊಡಕಿತು ಕೆಡಹಿತರ್ಜುನನ
(೨) ದುಷ್ಟರನ್ನು ವಿವರಿಸುವ ಪರಿ – ಕಳವಿನ ಕಾಲು ಕೀಲ್ಗಳನಾರು ಬಲ್ಲರು ಕುಟಿಲ ಕೋವಿದರ

ಪದ್ಯ ೭೧: ಧೃತರಾಷ್ಟ್ರನು ಯಾವ ನಿರ್ಧಾರಕ್ಕೆ ಬಂದನು?

ಐಸಲೇ ತಾನಾದುದಾಗಲಿ
ಲೇಸ ಕಾಣೆನು ನಿನ್ನ ಮಕ್ಕಳೆ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು
ಆ ಸಭೆಯ ಸರಿಸದ ಸಭಾ ವಿ
ನ್ಯಾಸ ಶಿಲ್ಪಿಗರಾರೆನುತ ಧರ
ಣೀಶ ಕರೆಸಿದನುರು ಸಭಾ ನಿರ್ಮಾಣ ಕೋವಿದರ (ಸಭಾ ಪರ್ವ, ೧೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಗಾಂಧಾರಿಯ ಮಾತನ್ನು ಕೇಳಿ, ಅಷ್ಟೆ ಅಲ್ಲವೇ ಆಗಿದ್ದು ಆಗಲಿ, ನನಗೆ ಬೇರೆ ಅನ್ಯ ಒಳಿತಾದ ಮಾರ್ಗ ಕಾಣುತ್ತಿಲ್ಲ, ನಿನ್ನ ಮಕ್ಕಳೇ ಹೆಚ್ಚಾಗಲಿ, ಮೆರೆಯಲಿ. ಹೆಚ್ಚು ಮಾತುಬೇಡ, ಪಾಂಡವರ ಸಭಾಸ್ಥಾನಕ್ಕೆ ಸರಿಗಟ್ಟುವ ಸಭೆಯನ್ನು ನಿರ್ಮಿಸುವ ಶಿಲ್ಪಿಗಳಾರು? ಎಂದು ಕೇಳಿ ಸಭಾ ನಿರ್ಮಾಣ ಮಾಡುವ ಶಿಲ್ಪಿಗಳನ್ನು ಕರೆಸಿದನು.

ಅರ್ಥ:
ಐಸಲೇ: ಅಲ್ಲವೇ; ಲೇಸು: ಒಳಿತು; ಕಾಣು: ತೋರು; ಮಕ್ಕಳು: ಸುತರು; ವಾಸಿ: ಭಾಗ, ಪಾಲು; ವಿಸ್ತಾರ: ವಿಶಾಲ; ಮೆರೆ: ಹೊಳೆ, ಪ್ರಕಾಶಿಸು; ಹಲವು: ಬಹಳ; ಮಾತು: ವಾಣಿ; ಸಭೆ: ಓಲಗ; ಸರಿಸದ: ಸಮಾನವಾದ; ಸಭಾ: ದರ್ಬಾರು; ವಿನ್ಯಾಸ: ರಚನೆ; ಶಿಲ್ಪಿ: ಕುಶಲಕಲೆಯನ್ನು ಬಲ್ಲವನು, ಕುಶಲ ಕರ್ಮಿ; ಧರಣೀಶ: ರಾಜ; ಕರೆಸು: ಬರೆಮಾಡು; ನಿರ್ಮಾಣ: ರಚಿಸುವ; ಕೋವಿದರು: ಪಂಡಿತರು; ಉರು: ಶ್ರೇಷ್ಠ;

ಪದವಿಂಗಡಣೆ:
ಐಸಲೇ +ತಾನ್+ಆದುದಾಗಲಿ
ಲೇಸ+ ಕಾಣೆನು +ನಿನ್ನ +ಮಕ್ಕಳೆ
ವಾಸಿಗಳ+ ವಿಸ್ತಾರ +ಮೆರೆಯಲಿ +ಹಲವು +ಮಾತೇನು
ಆ +ಸಭೆಯ +ಸರಿಸದ+ ಸಭಾ +ವಿ
ನ್ಯಾಸ+ ಶಿಲ್ಪಿಗರ್+ಆರೆನುತ +ಧರ
ಣೀಶ +ಕರೆಸಿದನ್+ಉರು +ಸಭಾ +ನಿರ್ಮಾಣ +ಕೋವಿದರ

ಅಚ್ಚರಿ:
(೧) ಧೃತರಾಷ್ಟ್ರನ ವಿವೇಕ ರಹಿತ ನಡೆ – ಆದುದಾಗಲಿ, ಲೇಸ ಕಾಣೆನು, ನಿನ್ನ ಮಕ್ಕಳೆ
ವಾಸಿಗಳ ವಿಸ್ತಾರ ಮೆರೆಯಲಿ ಹಲವು ಮಾತೇನು

ಪದ್ಯ ೪೭: ಕೃಷ್ಣನನ್ನು ಅಗ್ರಪೂಜೆಗೆ ಆಯ್ಕೆಮಾಡಿದ್ದು ಯಾವುದರ ಸಮವೆಂದು ಶಿಶುಪಾಲನು ಹೇಳಿದನು?

ಕುಲದಲಧಿಕರು ಶೌರ್ಯದಲಿ ವೆ
ಗ್ಗಳರು ಶೀಲದಲುನ್ನತರು ನಿ
ರ್ಮಲಿನರಾಚಾರದಲಿ ಕೋವಿದರಖಿಳಕಳೆಗಳಲಿ
ಇಳೆಯವಲ್ಲಭರಿನಿಬರನು ನೀ
ಕಳೆದು ನೋಣ ನೆರೆ ಹೂತ ವನವನು
ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ (ಸಭಾ ಪರ್ವ, ೧೧ ಸಂಧಿ, ೪೭ ಪದ್ಯ)

ತಾತ್ಪರ್ಯ:
ಉತ್ತಮ ಕುಲ, ಅಧಿಕ ಶೌರ್ಯ, ಉನ್ನತಶೀಲ, ನಿರ್ಮಲವಾದ ಆಚಾರ, ಅಖಿಲಲೆಗಲಲ್ಲೂ ಕೌಶಲ್ಯಗಳಿರುವ ಎಲ್ಲ ರಾಜರನ್ನೂ ಬಿಟ್ಟು ಕೃಷ್ಣನನ್ನು ಅಗ್ರಪೂಜೆಗೆ ಆಯ್ಕೆಮಾಡಿದ್ದು, ಸುಗಂಧಮಯ ಹೂವಿನ ತೋಟವನ್ನು ಬಿಟ್ಟು ನೊಣವು ಬಗಿನಿ ಮರದ ಮೇಲೆ ಕುಳಿತ ಹಾಗಾಯಿತು ಎಂದು ಶಿಶುಪಾಲನು ಹೇಳಿದನು.

ಅರ್ಥ:
ಕುಲ: ವಂಶ; ಅಧಿಕ: ಹೆಚ್ಚು, ಮೇಲೆ; ಶೌರ್ಯ: ಪರಾಕ್ರಮ; ವೆಗ್ಗಳ: ಅಧಿಕ, ಹೆಚ್ಚು; ಶೀಲ: ನಡತೆ, ಸ್ವಭಾವ; ಉನ್ನತ: ಹಿರಿಯ, ಉತ್ತಮ; ನಿರ್ಮಲ: ಶುದ್ಧತೆ, ಸ್ವಚ್ಛತೆ; ಮಲಿನ: ಕೊಳೆ, ಹೊಲಸು; ಆಚಾರ: ಕಟ್ಟುಪಾಡು, ಸಂಪ್ರದಾಯ; ಕೋವಿದ: ಪಂಡಿತ; ಅಖಿಳ: ಎಲ್ಲಾ, ಸರ್ವ; ಕಲೆ: ಲಲಿತವಿದ್ಯೆ, ಕುಶಲವಿದ್ಯೆ; ಇಳೆ: ಭೂಮಿ; ವಲ್ಲಭ: ಒಡೆಯ; ಇನಿಬರು: ಇಷ್ಟುಜನ; ಕಳೆ: ಹೋಗ ಲಾಡಿಸು; ನೆರೆ: ಗುಂಪು; ಹೂತ: ಹೂಬಿಟ್ಟಿರುವ; ವನ: ಬನ, ಕಾಡು, ತೋಟ; ಹಳಿ: ನಿಂದೆ; ಹಗಿನು: ಗೊಂದು, ಅಂಟು; ಎರಗು: ಬಾಗು; ಚೈದ್ಯ: ಶಿಶುಪಾಲ;

ಪದವಿಂಗಡಣೆ:
ಕುಲದಲ್+ಅಧಿಕರು +ಶೌರ್ಯದಲಿ +ವೆ
ಗ್ಗಳರು +ಶೀಲದಲ್+ಉನ್ನತರು +ನಿ
ರ್ಮಲಿನರ್+ಆಚಾರದಲಿ+ ಕೋವಿದರ್+ಅಖಿಳ +ಕಳೆಗಳಲಿ
ಇಳೆಯ+ವಲ್ಲಭರ್+ಇನಿಬರನು +ನೀ
ಕಳೆದು +ನೋಣ +ನೆರೆ +ಹೂತ +ವನವನು
ಹಳಿದು +ಹಗಿನಿಂಗ್+ಎರಗುವವೊಲಾಯ್ತೆಂದನಾ +ಚೈದ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೋಣ ನೆರೆ ಹೂತ ವನವನು ಹಳಿದು ಹಗಿನಿಂಗೆರಗುವವೊಲಾಯ್ತೆಂದನಾ ಚೈದ್ಯ
(೨) ಅಧಿಕರು, ವೆಗ್ಗಳರು, ಉನ್ನತರು, ಕೋವಿದ, ವಲ್ಲಭರು – ಪ್ರಶಂಶಿಸುವ ಪದಗಳ ಪ್ರಯೋಗ

ಪದ್ಯ ೩೨: ವಿದ್ವಾಂಸರಿಗೆ ಯಾವ ತತ್ತ್ವವೇ ಜೀವನ?

ಮನುವರಿವನಜ ಬಲ್ಲನೀಶ್ವರ
ನೆರೆವ ನಾರದ ಮುನಿಪ ವರ್ಣಿಪ
ಮನದಿ ಸನಕ ಸನತ್ಸುಜಾತಾದ್ಯರಿಗಿದೇ ವ್ಯಸನ
ಮುನಿಗಳಿಗೆ ಮುಕ್ತರಿಗೆ ಕರ್ಮದ
ಕಣಿಗಳಿಗೆ ಕೋವಿದರಿಗಿದೆ ಜೀ
ವನವಿದೇಗತಿ ಪರಮವೈಷ್ಣವ ತತ್ತ್ವವಿದೆಯೆಂದ (ಸಭಾ ಪರ್ವ, ೧೦ ಸಂಧಿ, ೩೨ ಪದ್ಯ)

ತಾತ್ಪರ್ಯ:
ಸರ್ವವ್ಯಾಪಿಯಾದ ಹೆಚ್ಚಿನ ತತ್ವವಾದ ಶ್ರೀಕೃಷ್ಣನ ರೀತಿಯನ್ನು ನಿಜವನ್ನು ಮನುವು ಬಲ್ಲ, ಬ್ರಹ್ಮನುಬಲ್ಲ, ಶಿವನು ನೆನೆಯುತ್ತಾನೆ, ನಾರದನು ಕೀರ್ತಿಸುತ್ತಾನೆ. ಸನಕಾದಿಗಳಿಗೆ ಈ ತತ್ವವನ್ನು ಸ್ಮರಿಸುವದೇ ಗೀಳು ಆತ್ಮ ತತ್ತ್ವವನ್ನು ಮನನಮಾಡುವ ಮುನಿಗಳಿಗೆ ಆತ್ಮ ನಿಷ್ಠೆಯಲ್ಲಿ ನೆಲೆ ನಿಂತ ಜೀವನ್ಮುಕ್ತರಿಗೆ ವೈದಿಕ ಕರ್ಮ ನಿರತರಿಗೆ ತಿಳಿದ ವಿದ್ವಾಂಸರಿಗೆ ಈ ತತ್ತ್ವವೇ ಜೀವನ. ಅವರೆಲ್ಲಾ ಬಂದು ಸೇರುವುದು ಇಲ್ಲಿಯೇ ಎಂದು ಭೀಷ್ಮರು ತಿಳಿಸಿದರು.

ಅರ್ಥ:
ಅಜ: ಬ್ರಹ್ಮ; ಮನು: ಸ್ವಾಯಂಭು ಮನು; ಅರಿ: ತಿಳಿ; ಈಶ್ವರ: ಭಗವಂತ; ಬಲ್ಲ: ತಿಳಿ; ನೆನೆ: ಜ್ಞಾಪಿಸಿಕೊಳ್ಳು, ಸ್ಮರಿಸು; ಮುನಿ: ಋಷಿ; ವರ್ಣಿಪ: ಮನ: ಮನಸ್ಸು; ಆದಿ: ಮುಂತಾದ; ವ್ಯಸನ: ಗೀಳು, ಚಟ; ಮುಕ್ತ: ಬಿಡುಗಡೆ ಹೊಂದಿದವನು; ಕರ್ಮ: ಕೆಲಸ; ಕಣಿ: ನೋಟ, ಕಾಣ್ಕೆ; ಕೋವಿದ: ವಿದ್ವಾಂಸ, ಪಂಡಿತ; ಜೀವನ: ಬಾಳು, ಬದುಕು; ಗತಿ: ಅವಸ್ಥೆ; ಪರಮ: ಶ್ರೇಷ್ಠ; ವೈಷ್ಣವ: ವಿಷ್ಣುಭಕ್ತ; ತತ್ವ: ಪರಮಾತ್ಮನ ಸ್ವರೂಪವೇ ಆಗಿರುವ ಆತ್ಮನ ಸ್ವರೂಪ

ಪದವಿಂಗಡಣೆ:
ಮನುವ್+ಅರಿವನ್+ಅಜ +ಬಲ್ಲನ್+ಈಶ್ವರ
ನೆರೆವ+ ನಾರದ+ ಮುನಿಪ+ ವರ್ಣಿಪ
ಮನದಿ +ಸನಕ+ ಸನತ್ಸುಜಾತಾದ್ಯರಿಗ್+ಇದೇ +ವ್ಯಸನ
ಮುನಿಗಳಿಗೆ +ಮುಕ್ತರಿಗೆ +ಕರ್ಮದ
ಕಣಿಗಳಿಗೆ+ ಕೋವಿದರಿಗಿದೆ +ಜೀ
ವನವ್+ಇದೇಗತಿ+ ಪರಮವೈಷ್ಣವ +ತತ್ತ್ವವಿದೆಯೆಂದ

ಪದ್ಯ ೨೭: ದುರ್ಯೋಧನನು ಯಾವ ರಾಶಿಯವನೆಂದು ಹೇಳಿದನು?

ವ್ಯಾಸ ವಚನವನಾ ವಸಿಷ್ಠ ಮು
ನೀಶನೊಳುನುಡಿಗಳನು ಕೋವಿದ
ಕೌಶಿಕನ ಕಥನವನು ಕೈಕೊಳ್ಳದೆ ಸುಯೋಧನನು
ದೇಶವನು ಪಾಂಡವರಿಗೀವ
ಭ್ಯಾಸವೆಮ್ಮೊಳಗಿಲ್ಲನೀತಿಯ
ರಾಶಿಯಾನಹೆನೆನ್ನನೊಡಬಡಿಸುವಿರಿ ನೀವೆಂದ (ಉದ್ಯೋಗ ಪರ್ವ, ೯ ಸಂಧಿ, ೨೭ ಪದ್ಯ)

ತಾತ್ಪರ್ಯ:
ವ್ಯಾಸರ ಮಾತು, ವಸಿಷ್ಠರ ಹಿತವಚನ, ವಿದ್ವಾಂಸರಾದ ಕೌಶಿಕ ಮುನಿಗಳ ವಿಚಾರ ಯಾವುದು ಸುಯೋಧನನ ಕಿವಿಗೆ ಬೀಳಲಿಲ್ಲ, ಅವರ ಮಾತನ್ನೊಪ್ಪದೆ ಪಾಂಡವರಿಗೆ ಭೂಮಿಯನ್ನು ಕೊಡವ ಅಭ್ಯಾಸ ನನಗಿಲ್ಲ, ನಾನು ಅನೀತಿಯ ರಾಶಿಯವನು, ನನ್ನನ್ನೇಕೆ ಒಪ್ಪಿಸಲು ಬರುತ್ತಿರುವಿರಿ ಎಂದು ಪ್ರಶ್ನಿಸಿದನು.

ಅರ್ಥ:
ವಚನ: ಮಾತು; ಮುನಿ: ಋಷಿ; ಮುನೀಶ: ಮುನಿಗಳಲ್ಲಿ ಶ್ರೇಷ್ಠನಾದವ; ಒಳು: ಒಳಿತು; ನುಡಿ: ಮಾತು; ಕೋವಿದ: ವಿದ್ವಾಂಸ; ಕಥನ: ವಿಚಾರ; ಕೈಕೊಳ್ಳು: ಒಪ್ಪಿಕೊ; ದೇಶ: ರಾಷ್ಟ್ರ; ಅಭ್ಯಾಸ: ರೂಢಿ; ಅನೀತಿ: ಕೆಟ್ಟ ಮಾರ್ಗ; ರಾಶಿ:ಗುಂಪು; ಒಡಬಡಿಸು: ಒಪ್ಪಿಸು;

ಪದವಿಂಗಡಣೆ:
ವ್ಯಾಸ+ ವಚನವನ್+ಆ+ ವಸಿಷ್ಠ+ ಮು
ನೀಶನ್+ಒಳುನುಡಿಗಳನು +ಕೋವಿದ
ಕೌಶಿಕನ +ಕಥನವನು +ಕೈಕೊಳ್ಳದೆ +ಸುಯೋಧನನು
ದೇಶವನು +ಪಾಂಡವರಿಗ್+ಈವ್
ಅಭ್ಯಾಸವ್+ಎಮ್ಮೊಳಗ್+ಇಲ್ಲ್+ಅನೀತಿಯ
ರಾಶಿಯಾನಹೆನ್+ಎನ್ನನೊಡಬಡಿಸುವಿರಿ+ ನೀವೆಂದ

ಅಚ್ಚರಿ:
(೧) ‘ಕ’ ಕಾರದ ಸಾಲು ಪದಗಳು – ಕೋವಿದ ಕೌಶಿಕನ ಕಥನವನು ಕೈಕೊಳ್ಳದೆ
(೨) ‘ವ’ಕಾರದ ತ್ರಿವಳಿ ಪದ – ವ್ಯಾಸ ವಚನವನಾ ವಸಿಷ್ಠ
(೩) ವಚನ, ನುಡಿ – ಸಮನಾರ್ಥಕ ಪದ