ಪದ್ಯ ೮೮: ಸೂರ್ಯನೇಕೆ ಅಂಜಿದನು?

ಎಲೆಲೆ ವಿಂಧ್ಯಾಚಲದ ಹರಿಬಕೆ
ಕಳನ ಹೊಕ್ಕವೊ ಕಣೆಗಳೆನುತಾ
ನಳಿನಸಖನಂಜಿದನು ಕೋಪಾಟೋಪಕಭ್ರದಲಿ
ಅಲಗುಗಣೆಗಳೊ ಮೇಘತರುವಿನ
ತಳಿತ ತುದಿಗೊಂಬುಗಳೊ ಬೀಳುವ
ತಲೆಗಳೋ ತತ್ಫಲಸಮೂಹವೊ ಚಿತ್ರವಾಯ್ತೆಂದ (ಭೀಷ್ಮ ಪರ್ವ, ೪ ಸಂಧಿ, ೮೮ ಪದ್ಯ)

ತಾತ್ಪರ್ಯ:
ವಿಂಧ್ಯಾಚಲದೊಡನೆ ಯುದ್ಧಮಾಡಲು ಬಾಣಗಳು ಹೊಕ್ಕಿವೆಯೋ ಏನೋ ಎಂದು ಸೂರ್ಯನು ಭಯಗೊಂಡನು. ಬಾಣಗಳೋ, ಮೇಘವೃಕ್ಷದ ತುದಿಕೊಂಬೆಗಳೋ, ನೆಲಕ್ಕುರುಳುವ ತಲೆಗಳೋ ಆ ಮರದ ಹಣ್ಣುಗಳೋ ಎಂಬಂತೆ ತೋರಿತು.

ಅರ್ಥ:
ಎಲೆಲೆ: ಆಶ್ಚರ್ಯ ಸೂಚಿಸುವ ಪದ; ಅಚಲ: ಬೆಟ್ಟ; ಹರಿಬ: ಕಾಳಗ, ಯುದ್ಧ, ಕಾರ್ಯ; ಕಳ: ರಣರಂಗ; ಹೊಕ್ಕು: ಸೇರು; ಕಣೆ: ಬಾಣ; ನಳಿನಸಖ: ಕಮಲನ ಮಿತ್ರ (ಸೂರ್ಯ); ಅಂಜು: ಹೆದರು; ಕೋಪಾಟೋಪ: ಉಗ್ರವಾದ ಕೋಪ; ಅಭ್ರ: ಆಗಸ; ಅಲಗು: ಕತ್ತಿ, ಖಡ್ಗ; ಕಣೆ: ಬಾಣ; ಮೇಘ: ಮೋಡ; ತರು: ವೃಕ್ಷ; ತಳಿತ: ಚಿಗುರಿದ; ತುದಿ: ಅಗ್ರಭಾಗ; ಕೊಂಬು: ಟೊಂಗೆ, ಕೊಂಬೆ; ಬೀಳು: ಕುಸಿ; ತಲೆ: ಶಿರ; ಫಲ: ಹಣ್ಣು; ಸಮೂಹ: ಗುಂಪು; ಚಿತ್ರ: ಬರೆದ ಆಕೃತಿ;

ಪದವಿಂಗಡಣೆ:
ಎಲೆಲೆ +ವಿಂಧ್ಯಾಚಲದ+ ಹರಿಬಕೆ
ಕಳನ +ಹೊಕ್ಕವೊ +ಕಣೆಗಳ್+ಎನುತಾ
ನಳಿನಸಖನ್+ಅಂಜಿದನು +ಕೋಪಾಟೋಪಕ್+ಅಭ್ರದಲಿ
ಅಲಗು+ಕಣೆಗಳೊ+ ಮೇಘ+ತರುವಿನ
ತಳಿತ+ ತುದಿ+ಕೊಂಬುಗಳೊ +ಬೀಳುವ
ತಲೆಗಳೋ +ತತ್ಫಲ+ಸಮೂಹವೊ +ಚಿತ್ರವಾಯ್ತೆಂದ

ಅಚ್ಚರಿ:
(೧) ರೂಪದಕ ಪ್ರಯೋಗ – ವಿಂಧ್ಯಾಚಲದ ಹರಿಬಕೆ ಕಳನ ಹೊಕ್ಕವೊ ಕಣೆಗಳೆನುತಾನಳಿನಸಖನಂಜಿದನು

ಪದ್ಯ ೧೮: ಶಲ್ಯನು ಭೀಮನನ್ನು ತ್ರಿಕಟುಕದ ಕಜ್ಜಾಯವೆಂದು ಏಕೆ ಕರೆದನು?

ಅಕಟ ಬಲುಗೈಯಹೆ ಕಣಾ ಸಾ
ಧಕನು ನಾನದಕೆನ್ನೆನಿಂದಿನ
ವಿಕಟ ಕೋಪಾಟೋಪ ಭೀಮನ ದಂಡಿಯದು ಬೇರೆ
ತ್ರಿಕಟುಕದ ಕಜ್ಜಾಯವಿದು ಬಾ
ಲಕರ ಸೊಗಸೇ ಕರ್ಣ ಕೇಳ್ ಕೌ
ತುಕದ ಮಾತೇ ನಿನ್ನ ಮೇಲಾಣೆಂದನಾ ಶಲ್ಯ (ಕರ್ಣ ಪರ್ವ, ೧೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಲ್ಯನು ಕರ್ಣನಿಗೆ ಉತ್ತರಿಸುತ್ತಾ, ಅಯ್ಯೋ ಕರ್ಣ ನೀನು ಬಲಶಾಲಿಯೆಂದು ನಾನು ಬಲ್ಲೆ, ಯುದ್ಧ ವಿದ್ಯೆಯನ್ನು ಸಾಧಿಸಿರುವೆ ಎಂದು ಸಂಶಯವಿಲ್ಲದೆ ಒಪ್ಪುತ್ತೇನೆ. ಅದರೆ ಇಂದು ಭೀಮನು ಉಗ್ರ ಕೋಪಾಟೋಪದಿಂದ ನುಗ್ಗಿ ಬರುತ್ತಿರುವ ರೀತಿಯೇ ಬೇರೆ. ಇವನು ಮೂರು ಬಗೆಯಾದ ವಿಷವನ್ನು ಹಾಕಿಕಟ್ಟಿದ ಕಜ್ಜಾಯದ ಹಾಗೆ ತೋರುತ್ತಿದ್ದಾನೆ, ಬಾಲಕರು ಇದನ್ನು ತಿಂದು ಸುಧಾರಿಸಬಹುದೇ ಕರ್ಣ ನಿನ್ನ ಮೇಲಾಣೆ ಇವನನ್ನು ತಡೆಯುವ ಸಾಹಸ ಬೇಡವೆಂದು ಶಲ್ಯನು ಹೇಳಿದನು.

ಅರ್ಥ:
ಅಕಟ: ಅಯ್ಯೋ; ಬಲುಗೈ: ಬಲಶಾಲಿ; ಸಾಧಕ: ಸಾಧಿಸಿದವ; ಇಂದಿನ: ಇವತ್ತು; ವಿಕಟ: ಭೀಕರವಾದ; ಕೋಪ: ಆಕ್ರೋಶ; ದಂಡಿ: ಶಕ್ತಿ, ಸಾಮರ್ಥ್ಯ; ಬೇರೆ: ಅನ್ಯ; ತ್ರಿಕಟುಕ: ಮೂರು ಬಗೆಯಾದ ವಿಷ; ಕಜ್ಜಾಯ: ಅತಿರಸ; ಬಾಲಕ: ಮಕ್ಕಳು; ಸೊಗಸು: ಚೆಲುವು; ಕೌತುಕ: ಕುತೂಹಲ; ಮಾತು: ವಾಣಿ; ಆಣೆ: ಪ್ರಮಾಣ;

ಪದವಿಂಗಡಣೆ:
ಅಕಟ +ಬಲುಗೈಯಹೆ+ ಕಣಾ +ಸಾ
ಧಕನು +ನಾನದಕ್+ಎನ್ನೆನ್+ಇಂದಿನ
ವಿಕಟ+ ಕೋಪಾಟೋಪ +ಭೀಮನ+ ದಂಡಿಯದು +ಬೇರೆ
ತ್ರಿಕಟುಕದ+ ಕಜ್ಜಾಯವಿದು +ಬಾ
ಲಕರ+ ಸೊಗಸೇ+ ಕರ್ಣ +ಕೇಳ್ ಕೌ
ತುಕದ +ಮಾತೇ +ನಿನ್ನ +ಮೇಲಾಣೆ+ಎಂದನಾ +ಶಲ್ಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ತ್ರಿಕಟುಕದ ಕಜ್ಜಾಯವಿದು ಬಾಲಕರ ಸೊಗಸೇ
(೨) ಕರ್ಣನನ್ನು ಹೊಗಳಿ ಬಾಲಕನಿಗೆ ಹೋಲಿಸುವ ಶಲ್ಯ – ಬಲುಗೈಯಹೆ; ಬಾಲಕರ ಸೊಗಸೇ

ಪದ್ಯ ೧೦: ಪಾಪದ ಹಣದಿಂದ ಯಾರಿಗೆ ಹಾನಿ?

ಪಾಪದಿಂದಾರ್ಜಿಸಿದೊಡರ್ಥವ
ನಾ ಫಲವನುಂಬವರಿಗಿಲ್ಲಾ
ಪಾಪವೊಬ್ಬಂಗಪ್ಪುದಲ್ಲದೆ ವಿಷದ ಫಣಿಯಂತೆ
ಕಾಪಥವ ನಾಶ್ರಯಿಸಿ ಕೋಪಾ
ಟೋಪದಿಂದುತ್ತಮರ ಸರ್ವ
ಸ್ವಾಪಹಾರವ ಮಾಡಿ ಬದುಕುವುದಾವ ಗುಣವೆಂದ (ಉದ್ಯೋಗ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಪಾಪದಿಂದ ಗಳಿಸಿದ ಐಶ್ವರ್ಯದ ಫಲ ಪಾಪಮಾಡಿದವನಿಗೆ ಲಭಿಸುತ್ತದೆಯೆ ಹೊರತು ಅದರ ಹಣವನ್ನನುಭವಿಸಿದವರಿಗೆ ಅದರ ಫಲ ಬರುವುದಿಲ್ಲ. ಇದಕ್ಕೆ ಹಾವೇ ಉದಾಹರಣೆ. ವಿಷಸರ್ಪದಂತೆ ದುರ್ಮಾರ್ಗವನ್ನನುಸರಿಸಿ ಕೋಪದಿಂದ ಸಜ್ಜನರ ಸರ್ವಸ್ವವನ್ನು ಅಪಹರಿಸಿ ಬದುಕುವುದು ಯಾವ ಸದ್ಗುಣ ಎಂದು ವಿದುರ ಕೇಳಿದ.

ಅರ್ಥ:
ಪಾಪ:ಪುಣ್ಯವಲ್ಲದ ಕಾರ್ಯ, ಕೆಟ್ಟ ಕೆಲಸ; ಆರ್ಜಿಸು: ಸಂಪಾದಿಸು; ಅರ್ಥ: ಐಶ್ವರ್ಯ; ಫಲ: ಫಲಿತಾಂಶ, ಲಾಭ; ಉಂಬು: ತಿನ್ನು; ವಿಷಮ: ಕಷ್ಟಕರವಾದುದು; ವಿಷ: ನಂಜು; ಫಣಿ: ಹಾವು; ಕಾಪಥ: ಕೆಟ್ಟದಾರಿ; ಆಶ್ರಯ: ಆಸರೆ, ಅವಲಂಬನೆ; ಕೋಪಾಟೋಪ: ಹೆಚ್ಚಾದ ಕೋಪ; ಉತ್ತಮ: ಶ್ರೇಷ್ಠ; ಸರ್ವಸ್ವ: ಎಲ್ಲಾ; ಅಪಹರಣ: ಕದಿಯುವುದು; ಬದುಕು: ಜೀವನ ಮಾಡು; ಗುಣ:ನಡತೆ, ಸ್ವಭಾವ;

ಪದವಿಂಗಡಣೆ:
ಪಾಪದಿಂದ್+ಆರ್ಜಿಸಿದೊಡ್+ಅರ್ಥವ
ನಾ +ಫಲವನ್+ಉಂಬವರಿಗಿಲ್ಲಾ
ಪಾಪವ್+ಒಬ್ಬಂಗಪ್ಪುದಲ್ಲದೆ+ ವಿಷದ+ ಫಣಿಯಂತೆ
ಕಾಪಥವನ್+ ಆಶ್ರಯಿಸಿ +ಕೋಪಾ
ಟೋಪದಿಂದ್+ಉತ್ತಮರ +ಸರ್ವಸ್ವ
ಅಪಹಾರವ+ ಮಾಡಿ +ಬದುಕುವುದ್+ಆವ +ಗುಣವೆಂದ

ಅಚ್ಚರಿ:
(೧) ಪಾಪ – ೧, ೩ ಸಾಲಿನ ಮೊದಲ ಪದ