ಪದ್ಯ ೩೩: ಅರ್ಜುನನು ಯಾವ ಭಂಗಿಯಲ್ಲಿ ನಿಂತನು?

ಅಳಲ ಮುಕ್ಕುಳಿಸಿದನು ಮೋಹದ
ಬೆಳವಿಗೆಯ ಗವಸಣಿಸಿದನು ಕಳ
ಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು
ಪ್ರಳಯ ರುದ್ರನ ಕೋಪಶಿಖಿ ವೆ
ಗ್ಗಳಿಸಿತೆನೆ ಕಂಗಳಲಿ ಕಿಡಿಗಳು
ತುಳುಕಿದವು ರೌದ್ರಾನುಭಾವದ ರಸದ ಭಂಗಿಯಲಿ (ದ್ರೋಣ ಪರ್ವ, ೮ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅರ್ಜುನನು ದುಃಖವನ್ನುಗುಳಿ, ಮೋಹಾತಿರೇಕಕ್ಕೆ ತೆರೆಯನ್ನೆಳೆದನು. ಮಾತು ನಿಂತಿತು. ಕಂಬನಿಗಳನ್ನು ಕಣ್ಣಿನಲ್ಲೇ ಕುಡಿದು ಕೋಪಾಗ್ನಿ ಭುಗಿಲ್ಲನೆ ಪ್ರಜ್ವಲಿಸಿತೋ ಎಂಬಂತೆ ಕಣ್ಣಿನಲ್ಲಿ ಕಿಡಿಗಳನ್ನುಗುಳಿದನು. ರೌದ್ರಾನುಭಾವದ ಭಂಗಿಯಲ್ಲಿ ನಿಂತನು.

ಅರ್ಥ:
ಅಳಲು: ದುಃಖ; ಮುಕ್ಕುಳಿಸು: ಹೊರಹಾಕು; ಮೋಹ:ಭ್ರಾಂತಿ, ಭ್ರಮೆ; ಬೆಳವಿಗೆ: ಏಳಿಗೆ; ಗವಸಣಿಗೆ: ಮುಸುಕು; ಕಳಕಳ: ಗೊಂದಲ; ಹಿಂಗು: ಹಿಂದಕ್ಕೆ ಹೋಗು, ಹಿಂದೆ ಸರಿ; ಅಶ್ರು: ಕಣ್ಣೀರು; ಜಲ: ನೀರು; ಕಂಗಳ: ಕಣ್ಣು; ಕುಡಿ: ಪಾನ ಮಾಡು; ಪ್ರಳಯ: ಅಂತ್ಯ; ಕೋಪ: ಕ್ರೋಧ, ಸಿಟ್ಟು; ಶಿಖಿ: ಬೆಂಕಿ; ವೆಗ್ಗಳಿಸು: ಹೆಚ್ಚಾಗು, ಅಧಿಕವಾಗು; ಕಂಗಳು: ಕಣ್ಣು; ಕಿಡಿ: ಬೆಂಕಿ; ತುಳುಕು: ಹೊರಸೂಸುವಿಕೆ, ಉಕ್ಕುವಿಕೆ; ರೌದ್ರ: ಸಿಟ್ಟು, ರೋಷ; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬಾಗು, ತಿರುವು;

ಪದವಿಂಗಡಣೆ:
ಅಳಲ +ಮುಕ್ಕುಳಿಸಿದನು +ಮೋಹದ
ಬೆಳವಿಗೆಯ +ಗವಸಣಿಸಿದನು +ಕಳ
ಕಳಿಕೆ +ಹಿಂಗಿದುದ್+ಅಶ್ರು +ಜಲವನು +ಕಂಗಳಲಿ +ಕುಡಿದು
ಪ್ರಳಯ +ರುದ್ರನ +ಕೋಪ+ಶಿಖಿ+ ವೆ
ಗ್ಗಳಿಸಿತೆನೆ +ಕಂಗಳಲಿ +ಕಿಡಿಗಳು
ತುಳುಕಿದವು +ರೌದ್ರಾನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಅರ್ಜುನನು ಚೇತರಿಸಿಕೊಂಡ ಪರಿ – ಅಳಲ ಮುಕ್ಕುಳಿಸಿದನು ಮೋಹದ ಬೆಳವಿಗೆಯ ಗವಸಣಿಸಿದನು ಕಳಕಳಿಕೆ ಹಿಂಗಿದುದಶ್ರು ಜಲವನು ಕಂಗಳಲಿ ಕುಡಿದು

ಪದ್ಯ ೨೭: ಭೀಮನು ಕರ್ಣನನ್ನು ಎಲ್ಲಿ ಒದೆದನು?

ಹೊಡೆದು ತಲೆಯನು ಹಗೆಯ ರಕುತವ
ಕುಡಿವೆನಲ್ಲದೊಡವನಿಪಾಲನ
ಕೆಡೆನುಡಿದ ನಾಲಗೆಯ ಕೀಳುವೆನೆನುತ ಕೋಪದಲಿ
ಸಿಡಿವ ಕಿಡಿಗಳ ಕೋಪಶಿಖಿಯು
ಗ್ಗಡದ ಮಾರುತಿ ಹೊಯ್ದು ಕರ್ಣನ
ಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ (ಕರ್ಣ ಪರ್ವ, ೧೨ ಸಂಧಿ, ೨೭ ಪದ್ಯ)

ತಾತ್ಪರ್ಯ:
ಭೀಮನ ಕೋಪಾಗ್ನಿಯು ಏರುತ್ತಿತ್ತು. ವೈರಿಯ ತಲೆ ಕಡೆದು ಅವನ ರಕ್ತವನ್ನು ಕುಡಿಯುತ್ತೇನೆ, ಇಲ್ಲವೆ ಅಣ್ಣನನ್ನು ಹೀಯಾಳಿಸಿದ ನಾಲಿಗೆಯನ್ನು ಕಿತ್ತು ಹಾಕುತ್ತೇನೆ ಎಂದುಕೊಂಡು, ರೋಷಾಗ್ನಿಯು ಭುಗಿಲೆದ್ದು ಕೆಂಗಣ್ಣಿನ ಭೀಮನು ಕರ್ಣನ ಮುಂದಲೆಗೂದಲನ್ನು ಹಿಡಿದು ಕೆಡವಿ, ಮುರಿದುಹೋಗುವಂತೆ ಎದೆಗೊದೆದನು.

ಅರ್ಥ:
ಹೊಡೆ: ಪೆಟ್ಟು; ತಲೆ: ಶಿರ; ಹಗೆ: ವೈರಿ; ರಕುತ: ನೆತ್ತರು; ಕುಡಿ: ಪಾನ ಮಾಡು; ಅಲ್ಲದೊಡೆ: ಇಲ್ಲದಿದ್ದರೆ; ಅವನಿಪಾಲ: ರಾಜ; ಕೆಡೆನುಡಿ: ಕೆಟ್ಟಮಾತು; ನಾಲಗೆ: ಜಿಹ್ವೆ; ಕೀಳು: ಸೀಳು, ಮುರಿ; ಕೋಪ: ರೋಷ; ಸಿಡಿ: ಸ್ಫೋಟ, ಚಿಮ್ಮು; ಕಿಡಿ: ಬೆಂಕಿಯ ಕಣ; ಕೋಪಶಿಖಿ: ರೊಷಾಗ್ನಿ; ಉಗ್ಗಡ:ಉತ್ಕಟತೆ, ಅತಿಶಯ; ಮಾರುತಿ: ವಾಯು; ಹೊಯ್ದು: ಹೊಡೆ; ಕೆಡಹು: ತಳ್ಳು, ಕೆಳಕ್ಕೆ ನೂಕು; ಮುರಿ: ಸೀಳು; ಒದೆ: ಕಾಲಿನಿಂದ ತಳ್ಳು; ಎದೆ: ವಕ್ಷ; ಹಾಯ್ದು: ಮೇಲೆಬಿದ್ದು; ಮುಂದಲೆ: ತಲೆಯ ಮುಂಭಾಗದಲ್ಲಿರುವ ಕೂದಲು;

ಪದವಿಂಗಡಣೆ:
ಹೊಡೆದು +ತಲೆಯನು +ಹಗೆಯ +ರಕುತವ
ಕುಡಿವೆನ್+ಅಲ್ಲದೊಡ್+ಅವನಿಪಾಲನ
ಕೆಡೆ+ನುಡಿದ +ನಾಲಗೆಯ +ಕೀಳುವೆನ್+ಎನುತ+ ಕೋಪದಲಿ
ಸಿಡಿವ +ಕಿಡಿಗಳ +ಕೋಪ+ಶಿಖಿ
ಉಗ್ಗಡದ +ಮಾರುತಿ +ಹೊಯ್ದು +ಕರ್ಣನ
ಕೆಡಹಿದನು+ ಮುರಿ+ಒದೆದನ್+ಎದೆಯನು +ಹಾಯ್ದು +ಮುಂದಲೆಗೆ

ಅಚ್ಚರಿ:
(೧) ಭೀಮನ ರೋಷದ ಚಿತ್ರಣ – ಸಿಡಿವ ಕಿಡಿಗಳ ಕೋಪಶಿಖಿಯುಗ್ಗಡದ ಮಾರುತಿ
(೨) ಕರ್ಣನನ್ನು ತಳ್ಳಿದ ಬಗೆ – ಹೊಯ್ದು ಕರ್ಣನಕೆಡಹಿದನು ಮುರಿಯೊದೆದನೆದೆಯನು ಹಾಯ್ದು ಮುಂದಲೆಗೆ