ಪದ್ಯ ೩೪: ಕೃಷ್ಣನು ತೊಡೆ ಮುರಿದುದು ತಪ್ಪಲ್ಲವೆಂದು ಏಕೆ ಹೇಳಿದನು?

ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತನುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ನುಡಿಯುತ್ತಾ, ತೊಡೆಯನ್ನು ತೋರಿಸಿ ಕೌರವನು ದ್ರೌಪದಿಯನ್ನು ಜರೆದಾಗ ಅವಳು ತೊಡೆ ಮುರಿದು ಸಾಯಿ ಎಂದು ಶಪಿಸಿದಳು. ಮೈತ್ರೇಯನ ನುಡಿಗೆ ಅನುಗುಣವಾಗಿ ದ್ರೌಪದಿಯೂ ಶಪಿಸಿದಳು. ನಿನ್ನ ತೊಡೆಗಲನ್ನು ಮುರಿಯುವೆನೆಂದು ಕೋಪದಿಂದ ಭೀಮನೂ ಭಾಷೆ ಮಾಡಿದನು. ಪ್ರತಿಜ್ಞೆಯಂತೆ ನಡೆದುಕೊಂಡರೆ ಅದರಲ್ಲೇನು ತಪ್ಪು ಎಂದು ಕೃಷ್ಣನು ಪ್ರಶ್ನಿಸಿದನು.

ಅರ್ಥ:
ಪತಿವ್ರತೆ: ಸಾಧ್ವಿ; ಬಯ್ದು: ಜರಿದು, ನಿಂದಿಸು; ಭೂಪ: ರಾಜ; ತೊಡೆ: ಜಂಘೆ; ತೋರು: ಪ್ರದರ್ಶಿಸು; ಜರೆ: ಬಯ್ಯು; ನುಡಿ: ಮಾತು; ತಪ್ಪು: ಸರಿಯಿಲ್ಲದ್ ಸ್ಥಿತಿ; ಋಷಿ: ಮುನಿ; ವಚನ: ಮಾತು ಅನುಗತಿ: ಸಾವು; ಕೋಪ: ಮುಳಿ; ಕುಡಿ: ಚಿಗುರು; ಪ್ರತಿಜ್ಣೆ: ಪ್ರಮಾಣ; ಸ್ಥಾಪನ: ಇಡು; ಬಳಿಕ: ನಂತರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಆ +ಪತಿವ್ರತೆ+ ಬಯ್ದಳ್+ಈ+ ಕುರು
ಭೂಪ +ತೊಡೆಗಳ +ತೋರಿ +ಜರೆಯಲು
ದ್ರೌಪದಿಯ +ನುಡಿ +ತಪ್ಪುವುದೆ+ ಋಷಿ+ವಚನದ್+ಅನುಗತಿಗೆ
ಕೋಪ +ಕುಡಿಯಿಡಲ್+ಈ+ ವೃಕೋದರನ್
ಆಪನಿತ+ನುಡಿದನು +ಪ್ರತಿಜ್ಞಾ
ಸ್ಥಾಪನಕೆ +ಬಳಿಕೇನ +ಮಾಡುವುದೆಂದನ್+ಅಸುರಾರಿ

ಅಚ್ಚರಿ:
(೧) ಕೋಪ ಹೆಚ್ಚಾಯಿತು ಎಂದು ಹೇಳಲು – ಕೋಪ ಕುಡಿಯಿಡಲೀ ವೃಕೋದರನಾಪನಿತನುಡಿದನು

ಪದ್ಯ ೨೦: ಭೀಮ ದುರ್ಯೋಧನರ ಯುದ್ಧವು ಹೇಗಿತ್ತು?

ಬಿಡಸಿದಡೆ ಗದೆಯಿಂದ ಹೊಯ್ಗುಳ
ತಡೆದು ತಿವಿದನು ನಿನ್ನ ಮಗನವ
ಗಡದ ಘಾಯಕೆ ಗದೆಯನೊಡ್ಡಿ ಸಗಾಢ ಕೋಪದಲಿ
ತುಡುಕಿದನು ಕಲಿಭೀಮ ಹಜ್ಜೆಯೊ
ಳೆಡೆಮುರಿದು ನಿನ್ನಾತನೌಕಿದ
ರೊಡನೊಡನೆ ಗಾಹಿಸಿದರುಚಿತದ ಗತಿಯ ಗಮಕದಲಿ (ಗದಾ ಪರ್ವ, ೬ ಸಂಧಿ, ೨೦ ಪದ್ಯ)

ತಾತ್ಪರ್ಯ:
ಕೌರವನು ಗದೆಯಿಂದ ಭೀಮನ ಹೊಡೆತಗಳನ್ನು ತಡೆದು, ಭೀಮನನ್ನು ತಿವಿದನು. ನಿನ್ನ ಮಗನ ಹೊಡೆತವನ್ನು ಭೀಮನು ತಪ್ಪಿಸಿ ಮುಂದೆ ಹೆಜ್ಜೆಯಿಟ್ಟು ಹೊಯ್ದನು. ನಿನ್ನ ಮಗನು ಪಕ್ಕಕ್ಕೆ ಸರಿದು ಹೊಡೆದನು. ಹೀಗೆ ಉಚಿತವಾಗಿ ಪದವಿನ್ಯಾಸದಿಂದ ಇಬ್ಬರೂ ಹೋರಾಡಿದರು.

ಅರ್ಥ:
ಬಿಡಸು: ಹೊಡೆ; ಗದೆ: ಮುದ್ಗರ; ಹೊಯ್: ಹೊಡೆ; ತಡೆ: ನಿಲ್ಲು; ತಿವಿ: ಚುಚ್ಚು; ಮಗ: ಸುತ; ಗಡ: ಬೇಗನೆ; ಘಾಯ: ಪೆಟ್ಟು; ಒಡ್ಡು: ಸಗಾಢ: ಜೋರು, ರಭಸ; ಕೋಪ: ಕುಪಿತ; ತುಡುಕು: ಹೋರಾಡು, ಸೆಣಸು; ಕಲಿ: ಶೂರ; ಹಜ್ಜೆ: ಪಾದ; ಎಡೆ: ನಡುವೆ, ಮಧ್ಯ; ಔಕು: ತಳ್ಳು; ಒಡನೊಡನೆ: ಒಮ್ಮಲೆ; ಗಾಹು: ತಿಳುವಳಿಕೆ, ಮೋಸ; ಉಚಿತ: ಪುಕ್ಕಟೆ; ಗತಿ: ಗಮನ, ಸಂಚಾರ; ಗಮಕ: ಮನದಟ್ಟು ಮಾಡುವ;

ಪದವಿಂಗಡಣೆ:
ಬಿಡಸಿದಡೆ +ಗದೆಯಿಂದ +ಹೊಯ್ಗುಳ
ತಡೆದು +ತಿವಿದನು +ನಿನ್ನ+ ಮಗನ್+ಅವ
ಗಡದ +ಘಾಯಕೆ +ಗದೆಯನ್+ಒಡ್ಡಿ+ ಸಗಾಢ +ಕೋಪದಲಿ
ತುಡುಕಿದನು +ಕಲಿಭೀಮ +ಹಜ್ಜೆಯೊಳ್
ಎಡೆ+ಮುರಿದು +ನಿನ್ನಾತನ್+ಔಕಿದರ್
ಒಡನೊಡನೆ +ಗಾಹಿಸಿದರ್+ಉಚಿತದ +ಗತಿಯ +ಗಮಕದಲಿ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗಾಹಿಸಿದರುಚಿತದ ಗತಿಯ ಗಮಕದಲಿ

ಪದ್ಯ ೩೧: ಶಲ್ಯನ ಕೋಪದ ತೀವ್ರತೆ ಹೇಗಿತ್ತು?

ಅರಸ ಕೇಳೈ ಮುಳಿದ ಮಾದ್ರೇ
ಶ್ವರನ ಖತಿಯೋ ಕುಪಿತ ಯಮನು
ಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ
ಉರಿದನಗ್ಗದ ರೋಷದಲಿ ಹೊಗೆ
ಹೊರಳಿಗಟ್ಟಿತು ಸುಯ್ಲಿನಲಿ ಸಂ
ವರಿಸಿಕೊಳು ಕೌಂತೇಯ ಎನುತೆಚ್ಚನು ಮಹೀಪತಿಯ (ಶಲ್ಯ ಪರ್ವ, ೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು, ಕಾಲಯಮನ ಕೋಪವೋ, ಕಾಲರುದ್ರನ ಹಣೆಗಣ್ಣಿನ ದೊಡ್ಡ ಕಿಡಿಯೋ ಎಂಬಂತೆ ರೋಷವುಕ್ಕಲು ಶಲ್ಯನ ಉಸಿರಿನಲ್ಲಿ ಹೊಗೆ ಮಸಗಿತು. ಕೌಂತೇಯ ಸುಧಾರಿಸಿಕೋ ಎಂದು ಬಾಣವನ್ನು ಬಿಟ್ಟನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಮುಳಿ: ಕೋಪ; ಮಾದ್ರೇಶ್ವರ: ಶಲ್ಯ; ಖತಿ: ರೇಗು, ಕೋಪ; ಕುಪಿತ: ಕೋಪಗೊಳ್ಳು; ಯಮ: ಜವ; ಉಬ್ಬರ: ಅತಿಶಯ; ಕೋಪ: ಖತಿ; ಕಾಲರುದ್ರ: ಪ್ರಳಯಕಾಲದ ಶಿವನ ರೂಪ; ಹಣೆ: ಲಲಾಟ; ಹೆಗ್ಗಿಡಿ: ದೊಡ್ಡ ಕಿಡಿ; ಉರಿ: ಬೆಂಕಿ; ಅಗ್ಗ: ಶ್ರೇಷ್ಠ; ರೋಷ: ಕೋಪ; ಹೊಗೆ: ಧೂಮ; ಹೊರಳು: ತಿರುವು; ಸುಯ್ಲು: ನಿಟ್ಟುಸಿರು; ಸಂವರಿಸು: ಸಮಾಧಾನಗೊಳಿಸು, ಸರಿಪಡಿಸು; ಕೌಂತೇಯ: ಕುಂತಿಯ ಮಗ; ಎಚ್ಚು: ಬಾಣ ಪ್ರಯೋಗ ಮಾಡು; ಮಹೀಪತಿ: ರಾಜ;

ಪದವಿಂಗಡಣೆ:
ಅರಸ +ಕೇಳೈ +ಮುಳಿದ +ಮಾದ್ರೇ
ಶ್ವರನ +ಖತಿಯೋ +ಕುಪಿತ +ಯಮನ್
ಉಬ್ಬರದ +ಕೋಪವೊ +ಕಾಲರುದ್ರನ +ಹಣೆಯ +ಹೆಗ್ಗಿಡಿಯೊ
ಉರಿದನ್+ಅಗ್ಗದ +ರೋಷದಲಿ+ ಹೊಗೆ
ಹೊರಳಿ+ಕಟ್ಟಿತು +ಸುಯ್ಲಿನಲಿ +ಸಂ
ವರಿಸಿಕೊಳು+ ಕೌಂತೇಯ +ಎನುತ್+ಎಚ್ಚನು +ಮಹೀಪತಿಯ

ಅಚ್ಚರಿ:
(೧) ಮುಳಿ, ಖತಿ, ಕೋಪ, ರೋಷ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಕುಪಿತ ಯಮನುಬ್ಬರದ ಕೋಪವೊ ಕಾಲರುದ್ರನ ಹಣೆಯ ಹೆಗ್ಗಿಡಿಯೊ

ಪದ್ಯ ೧೩: ದುರ್ಯೋಧನನು ಯಾರ ಸೇಡನ್ನು ತೀರಿಸಲು ನಿರ್ಧರಿಸಿದನು?

ತಾಪವಡಗಿತು ಮನದ ಕಡುಹಿನ
ಕೋಪ ತಳಿತುದು ಭೀಮ ಪಾರ್ಥರ
ರೂಪು ಮುಖದಲಿ ಕರ್ಣ ದುಶ್ಯಾಸನರ ಕಲ್ಪಿಸಿದ
ಭೂಪ ಕೇಳೈ ಪಾಳಯಕೆ ಕುರು
ಭೂಪ ಬಂದನು ನಾಳೆ ಕರ್ಣೋ
ತ್ಥಾಪನವಲಾ ಎನುತ ಹೊಕ್ಕನು ಭದ್ರಮಂಟಪವ (ಶಲ್ಯ ಪರ್ವ, ೧ ಸಂಧಿ, ೧೩ ಪದ್ಯ)

ತಾತ್ಪರ್ಯ:
ಅರಸನಿಗೆ ದುಃಖದ ತಾಪವು ಅಡಗಿತು. ಮನಸ್ಸಿನಲ್ಲಿ ಉಗ್ರಕೋಪವು ಚಿಗುರುಗೊಂಡಿತು. ಕರ್ಣ ದುಶ್ಯಾಸನರನ್ನು ಅರ್ಜುನ ಭೀಮರಿಂದ ಮೇಲೆತ್ತುವೆನೆಂದು ಕಲ್ಪಿಸಿಕೊಂಡು ಪಾಳೆಯಕ್ಕೆ ಹಿಂದಿರುಗಿದನು. ಎಲೈ ಧೃತರಾಷ್ಟ್ರ ಕೇಳು, ನಾಳೆ ಕರ್ಣನ ಮರಣದ ಸೇಡನ್ನು ತೀರಿಸುತ್ತೇನೆಂದುಕೊಂಡು ಭದ್ರಮಂಟಪವನ್ನು ಸೇರಿದನು.

ಅರ್ಥ:
ತಾಪ: ಸೆಕೆ, ಬಿಸಿ; ಅಡಗು: ಮುಚ್ಚು, ಕಡಿಮೆಯಾಗು; ಮನ: ಮನಸ್ಸು; ಕಡು: ಬಹಳ; ಕೋಪ: ಖತಿ; ತಳಿತು: ಚಿಗುರು; ರೂಪು: ಆಕಾರ; ಮುಖ: ಆನನ; ಕಲ್ಪಿಸು: ಮನಸ್ಸಿನಲ್ಲೇ ನೋಡುವುದು; ಭೂಪ: ರಾಜ; ಕೇಳು: ಆಲಿಸು; ಪಾಳಯ: ಬೀಡು; ಬಂದು: ಆಗಮಿಸು; ಉತ್ಥಾಪನ: ಉನ್ನತಿ, ಏರಿಕೆ; ಹೊಕ್ಕು: ಸೇರು; ಭದ್ರ: ಗಟ್ಟಿ; ಮಂಟಪ: ಆಲಯ;

ಪದವಿಂಗಡಣೆ:
ತಾಪವ್+ಅಡಗಿತು +ಮನದ +ಕಡುಹಿನ
ಕೋಪ +ತಳಿತುದು +ಭೀಮ +ಪಾರ್ಥರ
ರೂಪು +ಮುಖದಲಿ +ಕರ್ಣ +ದುಶ್ಯಾಸನರ+ ಕಲ್ಪಿಸಿದ
ಭೂಪ +ಕೇಳೈ +ಪಾಳಯಕೆ+ ಕುರು
ಭೂಪ +ಬಂದನು +ನಾಳೆ +ಕರ್ಣೋ
ತ್ಥಾಪನವಲಾ +ಎನುತ+ ಹೊಕ್ಕನು+ ಭದ್ರ+ಮಂಟಪವ

ಅಚ್ಚರಿ:
(೧) ಕೋಪ, ತಾಪ, ಉತ್ಥಾಪ, ಭೂಪ – ಪ್ರಾಸ ಪದಗಳು
(೨) ದುರ್ಯೋಧನನ ಮನಸ್ಥಿತಿ – ತಾಪವಡಗಿತು ಮನದ ಕಡುಹಿನ ಕೋಪ ತಳಿತುದು

ಪದ್ಯ ೨: ಧೃಷ್ಟದ್ಯುಮ್ನನು ದ್ರೋಣನನ್ನು ಹೇಗೆ ಸೀಳಿದನು?

ಐದಿ ಮುಂದಲೆವಿಡಿದು ಬಾಗಿಸಿ
ಕೊಯ್ದನಾತನ ಕೊರಳನೆಡದಲಿ
ಹೊಯ್ದು ಮುರಿದನು ಬರಿಯಲಪ್ಪಳಿಸಿದನು ಬೆನ್ನೆಲುವ
ಕೈದಣಿಯೆ ಕಡಿಖಂಡಮಯವೆನೆ
ಹೊಯ್ದು ರಥದಲಿ ಕೆದರಿ ಜಡಿದನ
ಡಾಯ್ದವನು ಕಡುಗೋಪದಲಿ ನೋಡಿದನು ರಿಪುಶಿರವ (ದ್ರೋಣ ಪರ್ವ, ೧೯ ಸಂಧಿ, ೨ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ದ್ರೋಣನ ಮುಂದಲೆಯನ್ನು ಹಿಡಿದು ಬಾಗಿಸಿ ಕೊರಳನ್ನು ಕೊಯ್ದು ಎಡಗೈಯಿಂದ ದೇಹವನ್ನು ಹೊಯ್ದು ಕೆಡವಿ ಬೆನ್ನೆಲುಬನ್ನು ಮುರಿದನು ಕೈದಣಿಯುವವರೆಗೂ ದೇಹವು ಮಾಂಸಮಯವಾಗುವಂತೆ ಖಡ್ಗದಿಂದ ಹೊಡೆದು ರಥದಲ್ಲಿ ಹರಡಿ ಕೋಪದಿಂದ ಅವನ ತಲೆಯನ್ನು ನೋಡಿದನು.

ಅರ್ಥ:
ಐದು: ಬಂದು ಸೇರು; ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು; ಬಾಗು: ಬೀಳು; ಕೊಯ್ದು: ಸೀಳು; ಕೊರಳು: ಗಂಟಲು; ಎಡ: ವಾಮಭಾಗ; ಹೊಯ್ದು: ಹೊಡೆ; ಮುರಿ: ಸೀಳು; ಅಪ್ಪಳಿಸು: ತಟ್ಟು, ತಾಗು; ಎಲುಬು: ಮೂಳೆ; ಬೆನ್ನು: ಹಿಂಭಾಗ; ಕೈ: ಹಸ್ತ; ದಣಿ: ಆಯಾಸಗೊಳ್ಳು; ಕಡಿ: ಸೀಳು; ಖಂಡ: ತುಂಡು; ರಥ: ಬಂಡಿ; ಕೆದರು: ಹರಡು; ಜಡಿ: ಕೊಲ್ಲು; ಅಡಹಾಯ್ದು: ಅಡ್ಡ ಬಂದು; ಕಡುಗೋಪ: ತುಂಬ ಕೋಪ; ನೋಡು: ವೀಕ್ಷಿಸು; ರಿಪು: ವೈರಿ; ಶಿರ: ತಲೆ;

ಪದವಿಂಗಡಣೆ:
ಐದಿ +ಮುಂದಲೆವಿಡಿದು +ಬಾಗಿಸಿ
ಕೊಯ್ದನ್+ಆತನ +ಕೊರಳನ್+ಎಡದಲಿ
ಹೊಯ್ದು +ಮುರಿದನು+ ಬರಿಯಲ್+ಅಪ್ಪಳಿಸಿದನು +ಬೆನ್ನೆಲುವ
ಕೈ+ದಣಿಯೆ +ಕಡಿ+ಖಂಡಮಯವ್+ಎನೆ
ಹೊಯ್ದು +ರಥದಲಿ+ ಕೆದರಿ+ ಜಡಿದನ್
ಅಡಾಯ್ದವನು+ ಕಡು+ಕೋಪದಲಿ +ನೋಡಿದನು +ರಿಪು+ಶಿರವ

ಅಚ್ಚರಿ:
(೧) ಹೊಯ್ದು – ೩, ೫ ಸಾಲಿನ ಮೊದಲ ಪದ
(೨) ಕೊಯ್ದು, ಹೊಯ್ದು, ಹಾಯ್ದು – ಪದಗಳ ಬಳಕೆ

ಪದ್ಯ ೫೨: ಕರ್ಣನೇಕೆ ಕೋಪಗೊಂಡನು?

ಗದೆಯ ಹೊಯ್ಲಲಿ ನೊಂದು ಕೋಪದೊ
ಳದಿರೆನುತ ಸೈಗೆಡೆದ ರೋಮದ
ಹೊದರುಗಳ ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ
ಕುದಿದ ಹೃದಯದ ಕಾದ ದೇಹದ
ಕದನಗಲಿ ರವಿಸೂನು ಮೇಲಿ
ಕ್ಕಿದನು ಫಡ ಹೋಗದಿರು ಹೋಗದಿರೆನುತ ತೆಗೆದೆಚ್ಚ (ದ್ರೋಣ ಪರ್ವ, ೬ ಸಂಧಿ, ೫೨ ಪದ್ಯ)

ತಾತ್ಪರ್ಯ:
ಗದೆಯ ಬಡಿತದಿಂದ ನೊಂದು ಕರ್ಣನು ಬಹಳ ಕೋಪಗೊಂಡನು. ಅವನ ರೋಮಗಳು ಜೋಲು ಬಿದ್ದವು. ನಟ್ಟ ನೋಟದಿಂದ ನೋಡುವ ತನ್ನ ಕಣ್ಣುಗಳು ಕೆಂಪಾಗಿ ಕೋಪವನ್ನು ಕಾರಿದವು. ಅವನ ಮೀಸೆಗಳು ಕುಣಿದವು. ಹೃದಯವು ಕುದಿಯಿತು. ದೇಹ ಕಾವೇರಿತು. ಆಗ ಕರ್ಣನು ಹೋಗಬೇಡ ಹೋಗಬೇಡ ಎಂದು ಕೂಗಿ ಬಾಣಗಳಿಂದ ಅಭಿಮನ್ಯುವನ್ನು ಹೊಡೆದನು.

ಅರ್ಥ:
ಗದೆ: ಮುದ್ಗರ; ಹೊಯ್ಲು: ಏಟು, ಹೊಡೆತ; ನೊಂದು: ನೋವು; ಕೋಪ: ಖತಿ; ಅದಿರು: ನಡುಕ, ಕಂಪನ; ಸೈಗೆಡೆ: ನೇರವಾಗಿ ಕೆಳಕ್ಕೆ ಬೀಳು; ರೋಮ: ಕೂದಲು; ಹೊದರು: ಗುಂಪು, ಸಮೂಹ; ಬಿಡುಗಣ್ಣ: ಬಿಟ್ಟಕಣ್ಣು; ಕೆಂಪು: ರಕ್ತವರ್ಣ; ಕುಣಿ: ನರ್ತಿಸು; ಕುದಿ: ಮರಳು; ಹೃದಯ: ಎದೆ; ಕಾದ: ಬಿಸಿಯಾದ; ದೇಹ: ತನು; ಕದನ: ಯುದ್ಧ; ಕಲಿ: ಶೂರ; ರವಿ: ಸೂರ್ಯ; ಸೂನು: ಮಗ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಗದೆಯ +ಹೊಯ್ಲಲಿ +ನೊಂದು +ಕೋಪದೊಳ್
ಅದಿರೆನುತ +ಸೈಗೆಡೆದ +ರೋಮದ
ಹೊದರುಗಳ +ಬಿಡುಗಣ್ಣ +ಕೆಂಪಿನ +ಕುಣಿವ +ಮೀಸೆಗಳ
ಕುದಿದ +ಹೃದಯದ +ಕಾದ+ ದೇಹದ
ಕದನ+ಕಲಿ +ರವಿಸೂನು +ಮೇಲಿ
ಕ್ಕಿದನು +ಫಡ +ಹೋಗದಿರು +ಹೋಗದಿರ್+ಎನುತ+ ತೆಗೆದ್+ಎಚ್ಚ

ಅಚ್ಚರಿ:
(೧) ಕೋಪವನ್ನು ವರ್ಣಿಸುವ ಪರಿ – ಬಿಡುಗಣ್ಣ ಕೆಂಪಿನ ಕುಣಿವ ಮೀಸೆಗಳ ಕುದಿದ ಹೃದಯದ ಕಾದ ದೇಹದ

ಪದ್ಯ ೧೧೩: ಕೋಪವನ್ನು ಏಕೆ ಬಿಡಬೇಕು?

ಕೋಪವೆಂಬುದನರ್ಥ ಸಾಧನ
ಕೋಪವೇ ಸಂಸಾರ ಬಂಧನ
ಕೋಪದಿಂದುರುತರದ ಸುಕೃತವು ಲಯವನೈದುವುದು
ಕೋಪವನು ವರ್ಜಿಸಲು ಬೇಹುದು
ಕೋಪವುಳ್ಳವನಾವನಾಗಲಿ
ಕಾಪುರುಷನಿಹಪರಕೆ ಚಿತ್ತೈಸೆಂದನಾ ವಿದುರ (ಉದ್ಯೋಗ ಪರ್ವ, ೩ ಸಂಧಿ, ೧೧೩ ಪದ್ಯ)

ತಾತ್ಪರ್ಯ:
ಕೋಪವು ಏಕೆ ಒಳ್ಳೆಯದಲ್ಲ ಎಂದು ವಿದುರ ಇಲ್ಲಿ ವಿವರಿಸುತ್ತಾರೆ. ಅನರ್ಥಕ್ಕೆ ಕೋಪವೇ ಸಾಧನ, ಮನುಷ್ಯನನ್ನು ಸಂಸಾರದ ಹುಟ್ಟು ಸಾವುಗಳ ಚಕ್ರದಲ್ಲಿ ಬಂಧಿಸುವುದು ಕೋಪವೇ, ಮಹಾಪುಣ್ಯವು ಕೋಪದಿಂದ ನಾಶವಾಗುತ್ತದೆ,ಕೋಪವನ್ನು ಬಿಡಬೇಕು, ಇಲ್ಲದಿದ್ದರೆ ಯಾರೇ ಆಗಲಿ ಕೋಪವುಳ್ಳವನಾದರೆ ಇಹಪರಗಳೆರಡರಲ್ಲೂ ಹೀನ ಮನುಷ್ಯನಾಗುತ್ತಾನೆ.

ಅರ್ಥ:
ಕೋಪ: ಸಿಟ್ಟು, ಮುನಿಸು; ಅನರ್ಥ: ಕೇಡು, ಉಪ ಯೋಗವಿಲ್ಲದ; ಸಾಧನ:ಗುರಿಮುಟ್ಟುವ ಪ್ರಯತ್ನ; ಸಂಸಾರ: ಹುಟ್ಟು, ಜನ್ಮ, ಲೌಕಿಕ ಜೀವನ; ಬಂಧನ: ಕಟ್ಟು, ಬಂಧ, ಸಂಕೋಲೆ; ಉರುತರ:ಬಹಳ ಶ್ರೇಷ್ಠ; ಸುಕೃತ: ಚೆನ್ನಾಗಿ ಮಾಡಿದ; ಲಯ: ನಾಶ; ವರ್ಜಿಸು: ಬಿಡು, ತ್ಯಜಿಸು; ಬೇಹುದು: ಬೇಕು;ಕಾಪುರುಷ:ಹೀನ ಮನುಷ್ಯ, ಕ್ಷುದ್ರ; ಇಹಪರ: ಈ ಲೋಕ ಮತ್ತು ಪರಲೋಕ; ಚಿತ್ತೈಸು: ಗಮನವಿಟ್ಟು ಕೇಳು;

ಪದವಿಂಗಡಣೆ:
ಕೋಪವೆಂಬುದ್+ಅನರ್ಥ +ಸಾಧನ
ಕೋಪವೇ +ಸಂಸಾರ +ಬಂಧನ
ಕೋಪದಿಂದ್+ಉರುತರದ +ಸುಕೃತವು +ಲಯವನ್+ಐದುವುದು
ಕೋಪವನು +ವರ್ಜಿಸಲು +ಬೇಹುದು
ಕೋಪವುಳ್ಳವನ್+ಆವನಾಗಲಿ
ಕಾಪುರುಷನ್+ಇಹಪರಕೆ +ಚಿತ್ತೈಸೆಂದನಾ +ವಿದುರ

ಅಚ್ಚರಿ:
(೧) ಕೋಪ – ೧-೫ ಸಾಲಿನ ಮೊದಲ ಪದ
(೨) ಸಾಧನ, ಬಂಧನ – ಅಂತ್ಯಪ್ರಾಸದ ಪದಗಳ ಬಳಕೆ

ಪದ್ಯ ೮೪: ರಾಜೋತ್ತಮನ ಲಕ್ಷಣವೇನು?

ಸಿರಿಗೆ ಕಂಟಕವಾದ ದೋಷವ
ನೊರೆವೆನಾಲಸ್ಯವನು ಭಯವನು
ಮರವೆಯನು ಕೋಪವನು ನಿದ್ರೆಯ ದೀರ್ಘಸೂತ್ರತೆಯ
ಪರಿಹರಿಸಬಲ್ಲವನಿಪಾಲಂ
ಗೆರವೆನಿಸದೈಶ್ವರಿಯವಹುದು
ರ್ವರೆಯೊಳವ ರಾಜೋತ್ತಮನು ಭೂಪಾಲ ಕೇಳೆಂದ (ಸಭಾ ಪರ್ವ, ೧ ಸಂಧಿ, ೮೪ ಪದ್ಯ)

ತಾತ್ಪರ್ಯ:
ಆಲಸ್ಯ, ಭಯ, ಮರೆವು, ಕೋಪ, ನಿದ್ರೆ, ಕಾರ್ಯವನ್ನು ಮುಂದೂಡುತ್ತಾ ಬಹುಕಾಲ ತಡೆಯುವುದು, ಇವು ಐಶ್ವರ್ಯಕ್ಕೆ ಹಾನಿಯುಂಟುಮಾಡುತ್ತದೆ. ಇವನ್ನು ನಿವಾರಿಸಿಕೊಳ್ಳುವ ರಾಜನಿಗೆ ಶಾಶ್ವತ ಐಶ್ವರ್ಯವುಂಟಾಗುತ್ತದೆ. ಅವನು ರಾಜರಲ್ಲಿ ಉತ್ತಮನಾಗುತ್ತಾನೆ.

ಅರ್ಥ:
ಸಿರಿ: ಐಶ್ವರ್ಯ; ಕಂಟಕ: ತೊಡಕು; ದೋಷ: ತಪ್ಪು; ಒರೆ: ಗುಣ; ಆಲಸ್ಯ: ಸೋಮಾರಿತನ, ಜಡತ್ವ; ಭಯ: ಹೆದರಿಕೆ, ಅಂಜಿಕೆ; ಮರವೆ: ಜ್ಞಾಪಕವಿಲ್ಲದ; ಕೋಪ: ಕ್ರೋಧ; ನಿದ್ರೆ: ಶಯನ; ದೀರ್ಘ: ಉದ್ದ; ಸೂತ್ರ:ಸಾರಾಂಶ; ಪರಿಹರಿಸು: ನಿವಾರಿಸು; ಅವನಿಪಾಲ: ರಾಜ; ಅವನಿ: ಭೂಮಿ; ಐಶ್ವರ್ಯ: ಸಿರಿ, ಸಂಪತ್ತು; ಭೂಪಾಲ: ರಾಜ; ಉತ್ತಮ: ಶ್ರೇಷ್ಠ;

ಪದವಿಂಗಡಣೆ:
ಸಿರಿಗೆ +ಕಂಟಕವಾದ +ದೋಷವನ್
ಒರೆವೆನ್+ಆಲಸ್ಯವನು +ಭಯವನು
ಮರವೆಯನು+ ಕೋಪವನು +ನಿದ್ರೆಯ +ದೀರ್ಘ+ಸೂತ್ರತೆಯ
ಪರಿಹರಿಸಬಲ್ಲ+ಅವನಿಪಾಲಂಗ್
ಎರವೆನಿಸದ್+ಐಶ್ವರಿಯವಹುದ್
ಉರ್ವರೆಯೊಳವ+ ರಾಜೋತ್ತಮನು +ಭೂಪಾಲ +ಕೇಳೆಂದ

ಅಚ್ಚರಿ:
(೧) ಅವನಿಪಾಲ, ಭೂಪಾಲ – ಸಮನಾರ್ಥಕ ಪದ