ಪದ್ಯ ೪೪: ಅಭಿಮನ್ಯುವು ದುಶ್ಯಾಸನನಿಗೆ ಹೇಗೆ ಉತ್ತರಿಸಿದನು?

ಕೊಳಚಿ ನೀರೊಳಗಾಳುತೇಳುತ
ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ (ದ್ರೋಣ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ಕೊಳಚೆ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಸಮುದ್ರವೇನು ಮಹಾ! ಕಾಲಿನಲ್ಲಿ ದಾಟುವ ಹೊಳೆ ಎಂದು ಮಾತನಾಡುವ ಭಂಡರ ಮೇಲೆ ಸಿಟ್ಟಾಗಿ ಏನು ಪ್ರಯೋಜನ. ಎಲವೋ ಹುಚ್ಚಾ, ಮೊದಲು ನಮ್ಮನ್ನು ಗೆದ್ದು ಆಮೇಲೆ ಭೀಮಾರ್ಜುನರ ಮಾತಾದು. ನಿನ್ನ ದೇಹವನ್ನು ಈಗಲೇ ಸೀಳಿ ನಿನ್ನ ತಿಳಿರಕ್ತದಿಂದ ನನ್ನ ತಾಯಿಯ ತುರುಬನ್ನು ತೋಯಿಸಿ ಕಟ್ಟುತ್ತೇನೆ ಎಂದು ಗುಡುಗಿದನು.

ಅರ್ಥ:
ಕೊಳಚೆ: ಗಲೀಜು; ನೀರು: ಜಲ; ಆಳುತೇಳು: ಮುಳುಗುತ್ತಾ, ತೇಲುತ್ತಾ; ಜಲಧಿ: ಸಾಗರ; ಕಾಲ್ವೊಳೆ: ಕಾಲಿನಲ್ಲಿ ದಾಟುವ ಹೊಳೆ; ಭಂಡ: ಮೂಢ; ಮುಳಿ: ಸಿಟ್ಟು, ಕೋಪ; ಮೊದಲು: ಆದಿ; ಗೆಲಿದು: ಜಯಿಸು; ಬಳಿಕ: ನಂತರ; ಬಯಸು: ಇಚ್ಛೆಪಡು; ಮರುಳ: ಮೂಢ; ಒಡಲು: ದೇಹ; ಸೀಳು: ಚೂರು, ತುಂಡು; ತಿಳಿ: ಶುದ್ಧವಾಗು, ಪ್ರಕಾಶಿಸು; ರಕುತ: ನೆತ್ತರು; ತಾಯಿ: ಮಾತೆ; ತುರುಬು: ಕೂದಲಿನ ಗಂಟು, ಮುಡಿ; ನಾದಿಸು: ಹದಮಾಡು, ಕಟ್ಟು;

ಪದವಿಂಗಡಣೆ:
ಕೊಳಚಿ+ ನೀರೊಳಗ್+ಆಳುತ್+ಏಳುತ
ಜಲಧಿ +ಕಾಲ್ವೊಳೆಯೆಂಬ+ ಭಂಡರ
ಮುಳಿದು +ಮಾಡುವುದೇನು+ ಮೊದಲಲಿ +ನಮ್ಮ +ನೀ +ಗೆಲಿದು
ಬಳಿಕ +ಭೀಮಾರ್ಜುನರ +ಬಯಸುವುದ್
ಎಲೆ+ ಮರುಳೆ+ ನಿನ್ನೊಡಲ +ಸೀಳಿಯೆ
ತಿಳಿರಕುತದಲಿ +ತಾಯ +ತುರುಬನು +ನಾದಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೊಳಚಿ ನೀರೊಳಗಾಳುತೇಳುತ ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು