ಪದ್ಯ ೧೬: ಕೌರವನನ್ನು ಧರ್ಮಜನು ಹೇಗೆ ರೇಗಿಸಿದನು?

ನಾಡೊಳರ್ಧವ ಕೊಡದೆ ಹೋದಡೆ
ಬೇಡಿದೈದೂರುಗಳ ಕೊಡುಯೆನ
ಲೇಡಿಸಿದಲೈ ಸೂಚಿಯಗ್ರಪ್ರಮಿತಧಾರುಣಿಯ
ಕೂಡೆ ನೀ ಕೊಡೆನೆಂದು ದರ್ಪವ
ಮಾಡಿ ಸಕಲ ಮಹೀತಳವ ಹೋ
ಗಾಡಿ ಹೊಕ್ಕೈ ಜಲವನಾವೆಡೆ ನಿನ್ನ ಛಲವೆಂದ (ಗದಾ ಪರ್ವ, ೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ನೀನು ಅರ್ಧ ಭೂಮಿಯನ್ನು ಕೊಡಲಿಲ್ಲ, ಬೇಡ, ಐದು ಊರುಗಳನ್ನು ಕೊಡು ಎಂದರೆ ಅದನ್ನು ಕೊಡದೆ ನಮ್ಮನ್ನು ಲೇವಡಿ ಮಾಡಿದೆ. ಸೂಜಿಯ ಮೊನೆಯಷ್ಟು ಭೂಮಿಯನ್ನು ಕೊಡುವುದಿಲ್ಲವೆಂದು ದರ್ಪವನ್ನು ತೋರಿದೆ. ಈಗ ಸಮಸ್ತ ಭೂಮಿಯನ್ನು ಕಳೆದುಕೊಂಡು ನೀರನ್ನು ಹೊಕ್ಕಿರುವೆ. ಎಲ್ಲಿ ಹೋಯಿತು ನಿನ್ನ ಛಲವೆಂದು ಧರ್ಮಜನು ಕೌರವನನ್ನು ರೇಗಿಸಿದನು.

ಅರ್ಥ:
ನಾಡು: ದೇಶ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಕೊಡು: ನೀಡು; ಬೇಡು: ಕೇಳು; ಊರು: ಗ್ರಾಮ, ಪುರ; ಕೊಡು: ನೀಡು; ಏಡಿಸು: ಅವಹೇಳನ ಮಾಡು, ನಿಂದಿಸು; ಸೂಚಿ: ಸೂಜಿ; ಅಗ್ರ: ತುದಿ; ಪ್ರಮಿತ: ಪ್ರಮಾಣಕ್ಕೆ ಒಳಗಾದುದು; ಧಾರುಣಿ: ಭೂಮಿ; ಕೂಡು: ಜೊತೆಯಾಗು; ಕೊಡೆ: ನೀಡು; ದರ್ಪ: ಅಹಂಕಾರ; ಸಕಲ: ಎಲ್ಲಾ; ಮಹೀತಳ: ಭೂಮಿ; ಹೋಗು: ತೆರಳು; ಹೊಕ್ಕು: ಸೇರು; ಜಲ: ನೀರು; ಛಲ: ದೃಢ ನಿಶ್ಚಯ;

ಪದವಿಂಗಡಣೆ:
ನಾಡೊಳ್+ಅರ್ಧವ +ಕೊಡದೆ +ಹೋದಡೆ
ಬೇಡಿದ್+ಐದೂರುಗಳ +ಕೊಡುಯೆನೆಲ್
ಏಡಿಸಿದಲೈ +ಸೂಚಿ+ಅಗ್ರ+ಪ್ರಮಿತ+ಧಾರುಣಿಯ
ಕೂಡೆ +ನೀ +ಕೊಡೆನೆಂದು+ ದರ್ಪವ
ಮಾಡಿ +ಸಕಲ+ ಮಹೀತಳವ +ಹೋ
ಗಾಡಿ +ಹೊಕ್ಕೈ +ಜಲವನ್+ಆವೆಡೆ +ನಿನ್ನ +ಛಲವೆಂದ

ಅಚ್ಚರಿ:
(೧) ಧಾರುಣಿ, ಮಹೀತಳ, ನಾಡು – ಸಮಾನಾರ್ಥಕ ಪದ

ಪದ್ಯ ೪೫: ಅರ್ಜುನನು ಯಾರನ್ನು ಸದೆಬಡೆದು ಮುನ್ನುಗ್ಗಿದನು?

ಹೆದರಿದರು ನರ ಹೋಗದಿರು ಹೋ
ಗದಿರು ಕೊಡು ಕೊಡು ಕಾಳೆಗವನೆಂ
ದದಟರಟ್ಟಿತು ವೀರ ಸಮಸಪ್ತ ಕರು ಸೂಠಿಯಲಿ
ಇದಿರಲಿನಸುತ ಶಲ್ಯರಡಗ
ಟ್ಟಿದರು ಖತಿಯಲಿ ಪಾರ್ಥನನಿಬರ
ಸದೆದು ವಹಿಲದಲೈದಿದನು ದಿಕ್ಕರಿಯ ಸಮ್ಮುಖಕೆ (ದ್ರೋಣ ಪರ್ವ, ೩ ಸಂಧಿ, ೪೫ ಪದ್ಯ)

ತಾತ್ಪರ್ಯ:
ಸಂಶಪ್ತಕರು ಅರ್ಜುನನನ್ನು ಹೆದರಿ ಓಡಬೇಡ, ಓಡಬೇಡ, ಯುದ್ಧವನ್ನು ಮಾಡು ಎನ್ನುತ್ತಾ ಅಟ್ಟಿಸಿಕೊಂಡು ಹೋದರು. ಕರ್ಣ ಶಲ್ಯರು ಅವನ ರಥವನ್ನು ತಡೆದರು. ಅರ್ಜುನನು ಅವರೆಲ್ಲರನ್ನು ಸದೆಬಡಿದು ಸುಪ್ರತೀಕದ ಕಡೆ ವೇಗದಿಂದ ನುಗ್ಗಿದನು.

ಅರ್ಥ:
ಹೆದರು: ಭಯಪಡು, ಅಂಜಿಕೆ; ನರ: ಅರ್ಜುನ; ಹೋಗು: ತೆರಳು; ಕೊಡು: ನೀಡು; ಕಾಳೆಗ: ಯುದ್ಧ; ಅದಟು: ಪರಾಕ್ರಮ, ಶೌರ್ಯ; ಅಟ್ಟು: ಬೆನ್ನುಹತ್ತಿ ಹೋಗು; ವೀರ: ಪರಾಕ್ರಮಿ; ಸಮಸಪ್ತಕ: ಯುದ್ಧದಲ್ಲಿ ಶಪಥ ಮಾಡಿ ಹೋರಾಡುವವರು; ಸೂಠಿ: ವೇಗ; ಇನಸುತ: ಸೂರ್ಯನ ಮಗ (ಕರ್ಣ); ಖತಿ: ಕೋಪ; ಅನಿಬರು: ಅಷ್ಟುಜನ; ಸದೆ: ಕುಟ್ಟು, ಪುಡಿಮಾಡು; ವಹಿಲ:ಬೇಗ, ತ್ವರೆ; ಐದು: ಬಂದು ಸೇರು; ದಿಕ್ಕರಿ: ದಿಗ್ಗಜ; ಸಮ್ಮುಖ: ಎದುರು;

ಪದವಿಂಗಡಣೆ:
ಹೆದರಿದರು+ ನರ +ಹೋಗದಿರು +ಹೋ
ಗದಿರು +ಕೊಡು +ಕೊಡು +ಕಾಳೆಗವನೆಂದ್
ಅದಟರ್+ಅಟ್ಟಿತು +ವೀರ +ಸಮಸಪ್ತಕರು +ಸೂಠಿಯಲಿ
ಇದಿರಲ್+ಇನಸುತ +ಶಲ್ಯರ್+ಅಡಗ
ಟ್ಟಿದರು +ಖತಿಯಲಿ +ಪಾರ್ಥನ್+ಅನಿಬರ
ಸದೆದು +ವಹಿಲದಲ್+ಐದಿದನು +ದಿಕ್ಕರಿಯ +ಸಮ್ಮುಖಕೆ

ಅಚ್ಚರಿ:
(೧) ಜೋಡಿ ಪದಗಳು – ಹೋಗದಿರು, ಹೋಗದಿರು, ಕೊಡು ಕೊಡು;
(೨) ಸುಪ್ರತೀಕಗಜವನ್ನು ದಿಕ್ಕರಿ ಎಂದು ಕರೆದಿರುವುದು

ಪದ್ಯ ೩೫: ದ್ರುಪದನ ಅಹಂಕಾರದ ಮಾತುಗಳನ್ನು ಕೇಳಿದ ದ್ರೋಣ ಏನು ಶಪಥ ಮಾಡಿದ?

ಎಲವೊ ನಿನ್ನಾಸ್ಥಾನ ಸಹಿತೀ
ಹೊಳಲ ಸುಡುವೆನು ನಿನ್ನ ಸೀಳಿದು
ಬಳಿಯ ಕೊಡುವೆನು ಭೂತಗಣಕಿದಿರಲ್ಲ ನೀನೆನಗೆ
ಕಲಿತ ವಿದ್ಯದ ಕೋಲ ಮಕ್ಕಳ
ಕಳುಹಿ ಕಟ್ಟಿಸಿ ವಾಮಪಾದದಿ
ತಲೆಯನೊದೆವೆನು ಮರೆಯದಿರು ನೀನೆಂದನಾ ದ್ರೋಣ (ಆದಿ ಪರ್ವ, ೬ ಸಂಧಿ ೩೫ ಪದ್ಯ)

ತಾತ್ಪರ್ಯ:
ದ್ರೋಣನು ದ್ರುಪದನ ಅಹಂಕಾರದ ಮಾತುಗಳಿಂದ ಕುಪಿತನಾಗಿ, ಏ ದ್ರುಪದ (ಏಕವಚನದ ಪ್ರಯೋಗ, ಎಲವೋ) ನಿನ್ನ ಆಸ್ಥಾನ ಸಹಿತ ಈ ನಗರವನ್ನು ಸುಡುವೆನು ನಿನ್ನನ್ನು ಸೀಳಿ ಭೂತಗಳಿಗೆ ಬಲಿಯನ್ನು ಕೊಡಬಲ್ಲೆ, ನೀನು ನನಗೆ ಯಾವ ರೀತಿಯಲ್ಲೂ ಸಮನಲ್ಲ. ನಾನು ಬಿಲ್ವಿದ್ಯೆ ಪಾಠ ಕಲಿಸಿದ ಶಿಷ್ಯರಿಂದ ನಿನ್ನನ್ನು ಕಟ್ಟಿಸಿ (ಬಂಧಿಸಿ) ನನ್ನ ಬಳಿಗೆ ಕರೆಸಿ, ಎಡಗಾಲಿನಿಂದ ನಿನ್ನ ತಲೆಯನ್ನು ಒದೆಯುತ್ತೇನೆ, ಇದನ್ನು ನೀನು ಮರೆಯದಿರು ಎಂಬ ಉಗ್ರ ಶಪಥ ಮಾಡಿ ದ್ರೋಣನು ಹೊರಟ.

ಅರ್ಥ:
ಆಸ್ಥಾನ: ವಾಸಸ್ಥಾನ, ರಾಜರ ಅರಮನೆ; ಸಹಿತ: ಸೇರಿ, ಒಟ್ಟಾರೆ; ಹೊಳಲು: ನಗರ, ಪಟ್ಟಣ;
ಸುಡು: ನಾಶ ಮಾಡು; ಸುಟ್ಟು ಹಾಕು; ಸೀಳು: ಹೋಳು ಮಾಡು, ತುಂಡುಮಾಡು; ಇದಿರ್: ಅಭಿಮುಖ; ವಿರೋಧ
ಬಲಿ: ಆಹುತಿಯಾಗಿ ಅರ್ಪಿಸುವ ಅನ್ನ, ಪೂಜೆ; ಕೊಡು: ನೀಡು; ಭೂತ: ದೆವ್ವ, ಪಿಶಾಚಿ;
ಕಲಿತ: ತಿಳಿದಿರುವ; ವಿದ್ಯ: ಜ್ಞಾನ; ಕೋಲ: ಅಲಂಕಾರ, ಕುಣಿತ, ಸೋಗು ವೇಷ, ಬಾಣ;
ಮಕ್ಕಳ: ಹುಡುಗರು;ಕಳುಹಿ: ಕಳಿಸಿ, ಅಟ್ಟಿ; ವಾಮ: ಎಡ; ಪಾದದ: ಕಾಲು, ಚರಣ
ತಲೆ: ಶಿರ, ಮಸ್ತಕ; ಒದೆ: ಹೊಡೆ, ತುಳಿ, ಮೆಟ್ಟು; ಮರೆಯದಿರು: ಜ್ನಾಪಕದಲ್ಲಿಡು

ಪದವಿಂಗಡನೆ:
ನಿನ್ನ+ಆಸ್ಥಾನ+ಸಹಿತ+ಈ; ಭೂತಗಣಕ್+ಇದಿರಲ್ಲ+ನೀನ್+ಎನಗೆ; ತಲೆಯನ್+ಒದೆವೆನು;

ಅಚ್ಚರಿ:
(೧) ಏಕವಚನದ ಪ್ರಯೋಗ, ಎಲವೋ, ಬಯ್ಯುವಾಗ ಕೋಪದಲ್ಲಾಡುವ ಪದ ಕಾವ್ಯಾತ್ಮಕ ವಾಗಿ ಮೂಡಿರುವುದು
(೨) ನನ್ನ ಶಿಷ್ಯರೇ ಸಾಕು ನಿನ್ನನ್ನು ಸೋಲಿಸಲು ಎಂದು ಹೇಳುವ ೪,೫ ಸಾಲುಗಳು
(೩) ದ್ರೋಣನ ಪರಾಕ್ರಮ – ಮೊದಲ ೩ ಸಾಲುಗಳಲ್ಲಿ ವ್ಯಕ್ತವಾಗಿದೆ
(೪) “ಕ” ಕಾರದ ಪದಗಳು: ಕೊಡು, ಕಲಿತ, ಕೋಲ, ಕಳುಹಿ, ಕಟ್ಟಿಸಿ
(೫) ನೀನ್/ನಿನ್ನ ೪ ಬಾರಿ ಪ್ರಯೋಗ (೧,೨,೩,೬ ಸಾಲಿನಲ್ಲಿ)
(೬) ಕೋಪಗೊಂಡಾಗ ಯಾವ ಕ್ರಿಯೆಗಳನ್ನು ಮಾಡಬಹುದು: ಸುಡುವೆನು,ಕೊಡುವೆನು, ಒದೆವೆನು (೨,೩, ೬ ಸಾಲು)