ಪದ್ಯ ೭೪: ವೀರರು ಆನೆಗಳನ್ನು ಹೇಗೆ ಯುದ್ಧಕ್ಕೆ ನೂಕಿದರು?

ಬಾರ ಸಂಕಲೆ ಪಕ್ಕ ಘಂಟೆಯ
ಚಾರು ಚಮರದ ಕೊಡತಿಗಳ ಕೈ
ಹಾರೆ ಕೂರಂಕುಶದ ಬಿರುದರು ಹೊದ್ದಿದರು ಗಜವ
ಬಾರ ದೂಹತ್ತಿಗಳ ಗುಂಡನು
ತೋರ ಲೌಡಿಯ ತೊಟ್ಟು ಕೈಯಲಿ
ವಾರಣದ ಮೋಹರವ ನೂಕಿದರುಭಯಸೇನೆಯಲಿ (ಭೀಷ್ಮ ಪರ್ವ, ೪ ಸಂಧಿ, ೭೪ ಪದ್ಯ)

ತಾತ್ಪರ್ಯ:
ತೂಕವಾದ ಸರಪಣಿ, ಗಂಟೆಗಳು, ಚಾಮರ, ಕೊಡತಿ, ಕೈಹಾರೆ, ಚೂಪಾದ ಅಂಕುಶಗಳನ್ನು ಹಿಡಿದ ವೀರರು ಆನೆಗಳ ಬಳಿ ಹೋಗಿ ಮೇಲೆ ಹತ್ತಿದರು. ದೂಹತ್ತಿ, ಗುಂಡು ಲೌಡಿಗಳನ್ನು ಹಿಡಿದು ಆನೆಗಳನ್ನು ಯುದ್ಧಕ್ಕೆ ನೂಕಿದರು.

ಅರ್ಥ:
ಬಾರ: ತೂಕವಾದುದು; ಸಂಕಲೆ: ಕಬ್ಬಿಣದ ಸರಪಣಿ; ಪಕ್ಕ: ಹತ್ತಿರ, ಸಮೀಪ; ಘಂಟೆ: ಘಣಘಣ ಎಂದು ಶಬ್ದ ಮಾಡುವ ಸಾಧನ; ಚಾರು: ಸುಂದರ; ಚಮರ: ಚಮರ ಮೃಗದ ಬಾಲದ ಕೂದಲಿನಿಂದ ತಯಾರಿಸಿದ ಕುಂಚ, ಚಾಮರ; ಕೊಡತಿ: ಕಬ್ಬಿಣದಿಂದ ಅಥಾವಾ ಮರದಿಂದ ಮಾಡಿದ ಸುಮಾರು ಒಂದು ಅಡಿ ಉದ್ದವಿರುವ ಸಲಕರಣೆ; ಕೂರಂಕುಶ: ಚೂಪಾದ ಅಂಕುಶ; ಬಿರುದರು: ಗೌರವ ಸೂಚಕ ಹೆಸರುಗಳನ್ನು ಪಡೆದವರು, ವೀರರು; ಹೊದ್ದು: ಹೊಂದು, ಸೇರು; ಗಜ: ಆನೆ; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ಗುಂಡು: ಗುಂಡುಕಲ್ಲು,ತುಪಾಕಿಯ ಗೋಲಿ; ತೋರು: ಕಾಣಿಸು; ಲೌಡಿ: ಒಂದು ಬಗೆಯ ಕಬ್ಬಿಣದ ಆಯುಧ; ತೊಟ್ಟು: ಧರಿಸು; ವಾರಣ: ಆನೆ; ಮೋಹರ: ಸೈನ್ಯ, ದಂಡು; ನೂಕು: ತಳ್ಳು; ಉಭಯ: ಎರಡು; ಸೇನೆ: ಸೈನ್ಯ;

ಪದವಿಂಗಡಣೆ:
ಬಾರ +ಸಂಕಲೆ +ಪಕ್ಕ +ಘಂಟೆಯ
ಚಾರು +ಚಮರದ +ಕೊಡತಿಗಳ +ಕೈ
ಹಾರೆ +ಕೂರಂಕುಶದ+ ಬಿರುದರು +ಹೊದ್ದಿದರು +ಗಜವ
ಬಾರ +ದೂಹತ್ತಿಗಳ+ ಗುಂಡನು
ತೋರ +ಲೌಡಿಯ +ತೊಟ್ಟು +ಕೈಯಲಿ
ವಾರಣದ +ಮೋಹರವ+ ನೂಕಿದರ್+ಉಭಯ+ಸೇನೆಯಲಿ

ಅಚ್ಚರಿ:
(೧) ಗಜ, ವಾರಣ – ಸಮನಾರ್ಥಕ ಪದಗಳು
(೨) ಆನೆಗಳನ್ನು ಸಿಂಗರಿಸಲು ಉಪಯೋಗಿಸುವ ವಸ್ತು – ಸಂಕಲೆ, ಘಂಟೆ, ಚಮರ, ಕೊಡತಿ, ಕೂರಂಕುಶ