ಪದ್ಯ ೧೯: ದುರ್ಯೋಧನನು ರಾಜರನ್ನು ಹೇಗೆ ಜರೆದನು?

ವೀರಮಾತೆಯರೆಂದು ತಾಯ್ಗಳ
ನಾರು ಕೊಂಡಾಡುವರು ಸತಿಯರು
ವೀರಪತ್ನಿಯರೆಂದು ನಿಇವರೆ ನಿಮ್ಮ ರಾಣಿಯರ
ವೀರಸಿರಿ ನಿಮಗೆಂದು ವಂದಿಗ
ಳೋರೆ ಕಟಕಿಯಲೆನ್ನರೇ ಕೈ
ವಾರಿಸುವ ಕವಿನಿಕರ ನಾಚದೆ ಶಿವಶಿವಾ ಎಂದ (ಗದಾ ಪರ್ವ, ೧ ಸಂಧಿ, ೧೯ ಪದ್ಯ)

ತಾತ್ಪರ್ಯ:
ನೀವೀಗ ಓಡಿಹೋದರೆ ನಿಮ್ಮ ತಾಯಂದಿರನ್ನು ವೀರ ಮಾತೆಯರೆಂದು ಯಾರು ಹೊಗಳುತ್ತಾರೆ? ನಿಮ್ಮ ಪತ್ನಿಯರನ್ನು ವೀರ ಪತ್ನಿಯರೆಂದು ಕರೆದಾರೆ? ನಿಮಗೆ ವೀರ ಲಕ್ಷ್ಮಿಯೊಲಿದಿದ್ದಾಳೆ? ಎಂದು ವಂದಿಗಳು ವ್ಯಂಗ್ಯವಾಗಿ ನುಡಿಯುವರಲ್ಲವೇ, ನಿಮ್ಮನ್ನು ಹೊಗಳುವ ಕವಿಗಳು ನಾಚಿಸುವುದಿಲ್ಲವೇ ಶಿವ ಶಿವಾ ಎಂದು ದುರ್ಯೋಧನನು ಜರೆದನು.

ಅರ್ಥ:
ವೀರ: ಶೂರ; ಮಾತೆ: ತಾಯಿ; ಕೊಂಡಾಡು: ಹೊಗಳು; ಸತಿ: ಹೆಂಡತಿ; ನುಡಿ: ಮಾತು; ರಾಣಿ: ಅರಸಿ; ಸಿರಿ: ಐಶ್ವರ್ಯ; ವಂದಿಗ: ಹೊಗಳುಭಟ್ಟ; ಕಟಕಿ: ಚುಚ್ಚುಮಾತು, ವ್ಯಂಗ್ಯ;ಕೈವಾರಿ: ಹೊಗಳುವವ; ಕವಿ: ಕಾವ್ಯಗಳನ್ನು ರಚಿಸುವವ; ನಿಕರ: ಗುಂಪು; ನಾಚು: ಅವಮಾನ ಹೊಂದು;

ಪದವಿಂಗಡಣೆ:
ವೀರ+ಮಾತೆಯರೆಂದು +ತಾಯ್ಗಳನ್
ಆರು +ಕೊಂಡಾಡುವರು +ಸತಿಯರು
ವೀರ+ಪತ್ನಿಯರೆಂದು +ನುಡಿವರೆ +ನಿಮ್ಮ +ರಾಣಿಯರ
ವೀರಸಿರಿ+ ನಿಮಗೆಂದು +ವಂದಿಗ
ಳೋರೆ+ ಕಟಕಿಯಲೆನ್ನರೇ +ಕೈ
ವಾರಿಸುವ +ಕವಿ+ನಿಕರ+ ನಾಚದೆ+ ಶಿವಶಿವಾ+ ಎಂದ

ಅಚ್ಚರಿ:
(೧) ವೀರಮಾತೆ, ವೀರಪತ್ನಿ, ವೀರಸಿರಿ – ವೀರ ಪದದ ಬಳಕೆ
(೨) ಮಾತೆ, ತಾಯಿ; ಸತಿ,ರಾಣಿ; ವಂದಿ, ಕಟಕಿ – ಸಾಮ್ಯಾರ್ಥ ಪದಗಳು

ಪದ್ಯ ೫೨: ಯುದ್ಧದಲ್ಲಿ ಹೇಗೆ ಶಬ್ದವು ಮೊಳಗಿತು?

ಸೂಳವಿಸಿದವು ಲಗ್ಗೆಯಲಿ ನಿ
ಸ್ಸಾಳತತಿ ಸಿಡಿಲೆರಗಿತೆನಲು
ಬ್ಬಾಳು ಮಿಗೆ ಕೈನೆಗಹಿ ಕೈವಾರಿಸುವ ಗಮಕಿಗಳು
ಸಾಲ ಹೆಗ್ಗಹಳೆಗಳು ರಿಪು ಭೂ
ಪಾಲಕರ ಬೈಬೈದು ಗಜರಿದ
ವಾಳುತನದಾಳಾಪ ಬೀರಿತು ಬೆರಗನಹಿತರಿಗೆ (ದ್ರೋಣ ಪರ್ವ, ೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಆಕ್ರಮಣ ಪೂರ್ವದಲ್ಲಿ ಭೇರಿಗಳು ಸಿಡಿಲೆರಗಿದಂತೆ ಸದ್ದುಮಾದಿದವು. ಮುಂದೆ ನುಗ್ಗಿಬರುವ ಸೈನಿಕರು ಕೈಯೆತ್ತಿ ಕೇಕೆ ಹಾಕುತ್ತಿದ್ದರು. ಹೆಗ್ಗಹಳೆಗಳು ಶತ್ರುರಾಜರನ್ನು ಬೈದು ಗದರಿಸುವಂತೆ ಮೊಳಗಿದವು. ಈ ಎಲ್ಲಾ ಸದ್ದು ಪಾಂಡವ ಸೈನ್ಯದ ಪರಾಕ್ರಮವನ್ನು ವ್ಯಕ್ತಪಡಿಸಿ, ಕೌರವ ಸೈನ್ಯವನ್ನು ಬೆರಗುಗೊಳಿಸಿದವು.

ಅರ್ಥ:
ಸೂಳು: ಯುದ್ಧ; ಸೂಳೈಸು: ಧ್ವನಿ ಮಾಡು; ಲಗ್ಗೆ: ಮುತ್ತಿಗೆ, ಆಕ್ರಮಣ; ನಿಸ್ಸಾಳ: ಚರ್ಮವಾದ್ಯ; ತತಿ: ಗುಂಪು; ಸಿಡಿಲು: ಅಶನಿ; ಎರಗು: ಬೀಳು; ಉಬ್ಬು: ಹಿಗ್ಗು, ಗರ್ವಿಸು; ಆಳು: ಸೈನಿಕ; ಮಿಗೆ: ಹೆಚ್ಚು; ನೆಗಹು: ಮೇಲೆತ್ತು; ಗಮಕಿ: ವಾಚನ ಮಾಡುವವನು; ಸಾಲ: ಕಡ, ಪ್ರಾಕಾರ; ರಿಪು: ವೈರಿ; ಭೂಪಾಲಕ: ರಾಜ; ಬೈದು: ಜರಿದು; ಗಜರು: ಗರ್ಜನೆ, ಜೋರಾಗಿ ಕೂಗು; ಆಳುತನ: ಪರಾಕ್ರಮ; ಆಳಾಪ: ಕೂಗು; ಬೀರು: ಜೋರು; ಬೆರಗು: ವಿಸ್ಮಯ, ಸೋಜಿಗ; ಅಹಿತ: ವೈರಿ;

ಪದವಿಂಗಡಣೆ:
ಸೂಳವಿಸಿದವು +ಲಗ್ಗೆಯಲಿ +ನಿ
ಸ್ಸಾಳತತಿ+ ಸಿಡಿಲೆರಗಿತೆನಲ್
ಉಬ್ಬ್+ಆಳು +ಮಿಗೆ +ಕೈನೆಗಹಿ+ ಕೈವಾರಿಸುವ +ಗಮಕಿಗಳು
ಸಾಲ +ಹೆಗ್ಗಹಳೆಗಳು +ರಿಪು +ಭೂ
ಪಾಲಕರ +ಬೈಬೈದು +ಗಜರಿದವ್
ಆಳುತನದ್+ಆಳಾಪ +ಬೀರಿತು+ ಬೆರಗನ್+ಅಹಿತರಿಗೆ

ಅಚ್ಚರಿ:
(೧) ರಿಪು, ಅಹಿತ – ಸಮಾನಾರ್ಥಕ ಪದ
(೨) ಗಜರು, ಬೈದು, ಗಮಕಿ, ಸಿಡಿಲು – ಶಬ್ದವನ್ನು ವಿವರಿಸುವ ಪದಗಳ ಬಳಕೆ

ಪದ್ಯ ೬೬: ಯಾರು ಶಿಷ್ಟರ ಪಂಕ್ತಿಗೆ ಸೇರಲು ಅನರ್ಹರು?

ಯುವತಿಯರು ಗಾಯಕರು ಕಿತವರು
ತವತವಗೆ ಕೈವಾರಿಸುವರಾವ
ವವನನವನೇ ಪಂಕ್ತಿ ದೂಷಕೆನಿಹಪರಂಗಳಿಗೆ
ಇವರು ಮೂವರು ನಿಂದಿಸುವರಾ
ವವನನವ ಸರ್ವಜ್ಞನೆನಿಸುವ
ನವನಿಪತಿ ಚಿತ್ತೈಸು ಧರ್ಮರಹಸ್ಯ ವಿಸ್ತರವ (ಉದ್ಯೋಗ ಪರ್ವ, ೪ ಸಂಧಿ, ೬೬ ಪದ್ಯ)

ತಾತ್ಪರ್ಯ:
ತರುಣಿಯರು, ಗಾಯಕರು, ಜೂಜುಗಾರರು ಈ ಮೂವರು ಯಾರನ್ನು ಹೊಗಳುವರೋ ಅವನು ಇಹಪರಲೋಕಗಳಲ್ಲಿ ಶಿಷ್ಟರ ಪಂಕ್ತಿಗೆ ಸೇರಲು ಅನರ್ಹರು. ಈ ಮೂರವು ಯಾರನ್ನು ನಿಂದಿಸುವರೋ ಅವನು ಸರ್ವಜ್ಞ, ಇದು ಧರ್ಮರಹಸ್ಯ ಎಂದು ನೀನು ಅರಿತುಕೋ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಯುವತಿ: ಹೆಣ್ಣು; ಗಾಯಕ: ಹಾಡುಗಾರ; ಕಿತವ: ಮೋಸಗಾರ, ಸುಳ್ಳುಗಾರ, ಜೂಜುಗಾರ; ತವ: ನಿನ್ನ; ಕೈವಾರಿಸು: ಹೊಗಳು; ಪಂಕ್ತಿ: ಸಾಲು; ದೂಷಕ: ದೂಷಿಸುವವ; ಇಹಪರ: ಈ ಲೋಕ ಮತ್ತು ಪರಲೋಕ; ಮೂವರು: ತ್ರಯ; ನಿಂದಿಸು: ದೂಷಿಸು; ಸರ್ವಜ್ಞ: ತಿಳಿದವ; ಅವನಿಪತಿ: ರಾಜ; ಚಿತ್ತೈಸು: ಗಮನಿಸು; ಧರ್ಮ: ಧಾರಣೆ ಮಾಡಿದುದು; ರಹಸ್ಯ: ಗೌಪ್ಯ; ವಿಸ್ತರ: ವಿವರಣೆ;

ಪದವಿಂಗಡಣೆ:
ಯುವತಿಯರು +ಗಾಯಕರು +ಕಿತವರು
ತವತವಗೆ+ ಕೈವಾರಿಸುವರ್+ಆವವ್
ಅವನನ್+ಅವನೇ+ ಪಂಕ್ತಿ +ದೂಷಕನ್+ಇಹಪರಂಗಳಿಗೆ
ಇವರು+ ಮೂವರು+ ನಿಂದಿಸುವರಾವ್
ಅವನನ್+ಅವ+ ಸರ್ವಜ್ಞನ್+ಎನಿಸುವನ್
ಅವನಿಪತಿ +ಚಿತ್ತೈಸು +ಧರ್ಮರಹಸ್ಯ+ ವಿಸ್ತರವ

ಅಚ್ಚರಿ:
(೧) ತವತವ, ಅವನವ – ಪದಗಳ ಬಳಕೆ
(೨) ಯಾರ ಹೊಗಳಿಕೆಯಿಂದ ಎಚ್ಚರವಾಗಿರಬೇಕೆಂದು ತಿಳಿಸುವ ಪದ್ಯ