ಪದ್ಯ ೨೯: ಅರ್ಜುನನು ಯಾರೊಡನೆ ಯುದ್ಧಮಾಡಲು ಸಿದ್ಧನಾದನು?

ಬಲವನಾಯಕವೇ ವೃಥಾ ಹುಲು
ದಳದೊಳಗೆ ನಿಮ್ಮಗ್ಗಳಿಕೆ ಕೈ
ಯಳವ ಮನಗಲಿತನದಳವ ಬಿಲುಗಾರತನದಳವ
ಬಲಿಯಿರೇ ನಮ್ಮೊಡನೆ ಮೆಚ್ಚಿಸಿ
ಬಳಿಕ ಹಡೆಯಿರೆ ಬಿರುದನೆನುತವೆ
ಫಲುಗುಣನು ಕೈಯಿಕ್ಕಿದನು ಗಂಗಾಕುಮಾರನಲಿ (ಭೀಷ್ಮ ಪರ್ವ, ೯ ಸಂಧಿ, ೨೯ ಪದ್ಯ)

ತಾತ್ಪರ್ಯ:
ಬಲವು ಅನಾಯಕವಾಯಿತೇ? ಸಾಧಾರಣ ಸೈನ್ಯದೆದುರಿನಲ್ಲಿ ನಿಮ್ಮ ಸತ್ವ, ಕೈಚಳಕ, ಕಲಿತನ, ಬಿಲುಗಾರತನಗಲನ್ನು ತೋರಿಸಿದಿರಿ ಅಷ್ಟೇ, ನಮ್ಮೊಡನೆ ಯುದ್ಧದಲ್ಲಿ ಗೆದ್ದು ನಿಮ್ಮ ಬಿರುದನ್ನು ಸಾರ್ಥಕ ಮಾಡಿಕೊಳ್ಳಿ ಎಂದು ಅರ್ಜುನನು ಭೀಷ್ಮನೊಡನೆ ಯುದ್ಧಮಾಡಲು ಸಿದ್ಧನಾದನು.

ಅರ್ಥ:
ಬಲ: ಶಕ್ತಿ, ಸೈನ್ಯ; ನಾಯಕ: ಒಡೆಯ; ಅನಾಯಕ: ನಾಯಕನಿಲ್ಲದ ಸ್ಥಿತಿ; ವೃಥಾ: ಸುಮ್ಮನೆ; ಹುಲು: ಕ್ಷುಲ್ಲಕ; ದಳ: ಸೈನ್ಯ; ಅಗ್ಗಳಿಕೆ: ಶ್ರೇಷ್ಠ; ಅಳವು: ಶಕ್ತಿ, ಸಾಮರ್ಥ್ಯ; ಮನ: ಮನಸ್ಸು; ಕಲಿ: ಶೂರ; ಬಿಲುಗಾರ: ಬಿಲ್ವಿದ್ಯಾ ಚತುರ; ಬಲಿ: ಗಟ್ಟಿ, ದೃಢ, ಶಕ್ತಿಶಾಲಿ; ಮೆಚ್ಚು: ಪ್ರಶಂಸೆ; ಬಳಿಕ: ನಂತರ; ಹಡೆ: ಸೈನ್ಯ, ದಂಡು; ಬಿರುದು: ಗೌರವ ಸೂಚಕ ಪದ; ಕೈಯಿಕ್ಕು: ಹೋರಾಡು; ಕುಮಾರ: ಮಗ;

ಪದವಿಂಗಡಣೆ:
ಬಲವ್+ಅನಾಯಕವೇ +ವೃಥಾ +ಹುಲು
ದಳದೊಳಗೆ+ ನಿಮ್ಮಗ್ಗಳಿಕೆ+ ಕೈ
ಅಳವ+ ಮನ+ಕಲಿತನದ್+ಅಳವ+ ಬಿಲುಗಾರತನದ್+ಅಳವ
ಬಲಿಯಿರೇ +ನಮ್ಮೊಡನೆ +ಮೆಚ್ಚಿಸಿ
ಬಳಿಕ+ ಹಡೆಯಿರೆ+ ಬಿರುದನ್+ಎನುತವೆ
ಫಲುಗುಣನು +ಕೈಯಿಕ್ಕಿದನು +ಗಂಗಾಕುಮಾರನಲಿ

ಅಚ್ಚರಿ:
(೧) ಅಳವ ಪದದ ಬಳಕೆ – ೩ ಸಾಲಿನಲ್ಲಿ ೩ ಬಾರಿ
(೨) ಭೀಷ್ಮನನ್ನು ಹಂಗಿಸುವ ಪರಿ – ಬಲವನಾಯಕವೇ ವೃಥಾ ಹುಲುದಳದೊಳಗೆ ನಿಮ್ಮಗ್ಗಳಿಕೆ