ಪದ್ಯ ೧೬: ಯಾವುದನ್ನು ಅಣಿ ಮಾಡಲು ದ್ರೋಣರು ಸೂಚಿಸಿದರು?

ಅರಸ ಮರುಳೈ ನೀನು ಸುರರನು
ಸರಕುಮಾಡನು ಸಕಲ ದೈವದ
ದೊರೆಯಲೇ ಹರನಾತನಸ್ತ್ರವನಾರು ತರುಬುವರು
ಹರನ ಶರವಿಲ್ಲಿನ್ನು ಹಗೆಗಳ
ನಿರುಳು ರಣದಲಿ ಹಿಂಡುವೆನು ಸಂ
ವರಿಸು ಕೈದೀವಿಗೆಯನೆಂದನು ದ್ರೋಣನುಬ್ಬಿನಲಿ (ದ್ರೋಣ ಪರ್ವ, ೧೫ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೋಣನು ತನ್ನ ಮಾತನ್ನು ಮುಂದುವರೆಸುತ್ತಾ, ರಾಜ ನಿನಗೇನು ಹುಚ್ಚೇ! ಎಲ್ಲ ದೈವಗಳ ದೊರೆಯಾದ ಶಿವನು ದೇವತೆಗಳನ್ನು ಲೆಕ್ಕಿಸುವುದಿಲ್ಲ. ಅರ್ಜುನನ ಬಳಿ ಇನ್ನು ಪಾಶುಪತಾಸ್ತ್ರವಿಲ್ಲ. ಈಗ ರಾತ್ರಿಯುದ್ಧದಲ್ಲಿ ವೈರಿಗಳನ್ನು ಹಿಂಡುತ್ತೇನೆ ಕೈದೀವಿಗೆಗಳನ್ನು ಸಿದ್ಧಗೊಳಿಸು ಎಂದು ದ್ರೋಣರು ಹೇಳಿದರು.

ಅರ್ಥ:
ಅರಸ: ರಾಜ; ಮರುಳೆ: ಮೂಢ; ಸುರ: ದೇವತೆ; ಸರಕು: ಸಾಮಾನು, ಸಾಮಗ್ರಿ; ಸಕಲ: ಎಲ್ಲಾ; ದೈವ: ಭಗವಂತ; ದೊರೆ: ಒಡೆಯ; ಹರ: ಶಿವ; ಅಸ್ತ್ರ: ಶಸ್ತ್ರ, ಆಯುಧ; ತರುಬು: ತಡೆ, ನಿಲ್ಲಿಸು; ಶರ: ಬಾಣ; ಹಗೆ: ವೈರಿ; ಇರುಳು: ರಾತ್ರಿ; ರಣ: ಯುದ್ಧ; ಹಿಂಡು: ಹಿಸುಕು, ಅದುಮು; ಸಂವರಿಸು: ಸಮಾಧಾನಗೊಳಿಸು, ಸಜ್ಜು ಮಾಡು; ಕೈದೀವಿಗೆ: ಪಂಜು; ಉಬ್ಬು: ಹಿಗ್ಗು;

ಪದವಿಂಗಡಣೆ:
ಅರಸ +ಮರುಳೈ +ನೀನು +ಸುರರನು
ಸರಕು+ಮಾಡನು +ಸಕಲ +ದೈವದ
ದೊರೆಯಲೇ +ಹರನ್+ಆತನ್+ಅಸ್ತ್ರವನ್+ಆರು +ತರುಬುವರು
ಹರನ +ಶರವಿಲ್ಲ್+ಇನ್ನು +ಹಗೆಗಳನ್
ಇರುಳು +ರಣದಲಿ +ಹಿಂಡುವೆನು +ಸಂ
ವರಿಸು +ಕೈದೀವಿಗೆಯನ್+ಎಂದನು +ದ್ರೋಣನ್+ಉಬ್ಬಿನಲಿ

ಅಚ್ಚರಿ:
(೧) ಶಿವನ ಹಿರಿಮೆ – ಸುರರನು ಸರಕುಮಾಡನು ಸಕಲ ದೈವದ ದೊರೆ
(೨) ದ್ರೋಣನ ಉಪಾಯ – ಹಗೆಗಳನಿರುಳು ರಣದಲಿ ಹಿಂಡುವೆನು

ಪದ್ಯ ೫೫: ಕೌರವನ ಆಗಮನ ಹೇಗಿತ್ತು?

ನೆಗಹಿದವು ಕೈದೀವಿಗೆಯ ಸಾ
ಲುಗಳು ಹೊಂದಂಡಿಗೆಯ ದೂವಾ
ರಿಗಳು ವೆಂಠಣಿಸಿದರು ಸೀಗುರಿ ಮೊಗವ ಮೋಹಿದವು
ಉಗಿದ ಕಡಿತಲೆ ಮುಸುಕಿದವು ಚೌ
ರಿಗಳ ಡೊಂಕಣಿ ತುರುಗಿದವು ಮೌ
ಳಿಗಳ ಮಸ್ತಕದವರು ನೆಲನುಗ್ಗಡಿಸಲೈತಂದ (ದ್ರೋಣ ಪರ್ವ, ೮ ಸಂಧಿ, ೫೫ ಪದ್ಯ)

ತಾತ್ಪರ್ಯ:
ಕೌರವನು ಬರುವಾಗ ಕೈದೀವಿಗೆಗಳ ಸಾಲು ಸಾಲೇ ಬರುತ್ತಿತ್ತು. ಬಂಗಾರದ ಪಲ್ಲಕ್ಕಿಯನ್ನು ಹೊರುವವರು ನಡೆದರು. ಸೀಗುರಿಗಳು ಕಾಣಿಸಿದವು. ಸೆಳೆದ ಕತ್ತಿ ಡೊಂಕಣಿಗಳು ದೊರೆಗೆ ರಕ್ಷಣೆ ಕೊಡುತ್ತಿದ್ದವು. ತಲೆಯ ಮೇಲೆ ಕೈಯೆತ್ತಿ ಅವನ ಬಿರುದುಗಳನ್ನು ಉಚ್ಚ ಧ್ವನಿಯಲ್ಲಿ ಘೋಷಿಸುತ್ತಿದ್ದರು.

ಅರ್ಥ:
ನೆಗಹು: ಮೇಲೆತ್ತು; ದೀವಿಗೆ: ಸೊಡರು, ದೀಪಿಕೆ; ಸಾಲು: ಆವಳಿ; ಹೊಂದು: ದೂವಾರಿ: ಹೊರುವವನು; ವೆಂಠಣಿಸು: ಮುತ್ತಿಗೆ ಹಾಕು; ಸೀಗುರಿ: ಚಾಮರ; ಮೊಗ: ಮುಖ; ಮೋಹ: ಮೈ ಮರೆಯುವಿಕೆ ಎಚ್ಚರ ತಪ್ಪುವಿಕೆ; ಉಗಿ: ಹೊರಹಾಕು; ಕಡಿ: ತುಂಡುಮಾಡು, ತರಿ; ತಲೆ: ಶಿರ; ಮುಸುಕು: ಹೊದಿಕೆ; ಯೋನಿ; ಚೌರಿ: ಚೌರಿಯ ಕೂದಲು; ಡೊಂಕಣಿ: ಈಟಿ; ತುರುಗು: ಸಂದಣಿ, ದಟ್ಟಣೆ; ಮೌಳಿ: ಶಿರ; ಮಸ್ತಕ: ಶಿರ; ನೆಲ: ಭೂಮಿ; ಉಗ್ಗಡಿಸು: ಸಾರು, ಘೋಷಿಸು; ಅಂಡಲೆ: ಕಾಡು;

ಪದವಿಂಗಡಣೆ:
ನೆಗಹಿದವು +ಕೈದೀವಿಗೆಯ +ಸಾ
ಲುಗಳು +ಹೊಂದಂಡಿಗೆಯ+ ದೂವಾ
ರಿಗಳು +ವೆಂಠಣಿಸಿದರು +ಸೀಗುರಿ +ಮೊಗವ +ಮೋಹಿದವು
ಉಗಿದ +ಕಡಿತಲೆ +ಮುಸುಕಿದವು +ಚೌ
ರಿಗಳ +ಡೊಂಕಣಿ +ತುರುಗಿದವು +ಮೌ
ಳಿಗಳ +ಮಸ್ತಕದವರು +ನೆಲನ್+ಉಗ್ಗಡಿಸಲ್+ಐತಂದ

ಅಚ್ಚರಿ:
(೧) ಸಾಲುಗಳು, ದುವಾರಿಗಳು – ಪ್ರಾಸ ಪದಗಳು

ಪದ್ಯ ೭೧: ಶ್ರೀಕೃಷ್ಣನು ಎಲ್ಲಿ ಆಸೀನನಾದನು?

ಹಿಡಿದರಾರತಿಗಳನು ಬಣ್ಣದ
ಸೊಡರು ಸುಳಿದವು ಮುಂದೆ ನೆಲನು
ಗ್ಗಡಿಸೆ ಭೀಮಾರ್ಜುನರು ಕೈಗುಡೆ ಧರ್ಮನಂದನನು
ಹಿಡಿದ ಕೈದೀವಿಗೆಗಳನು ಕೈ
ದುಡುಕಿ ತಿವಿದಾಡುವ ಸುಕಾಂತಿಯ
ಕಡಲ ಮಣಿಮಯ ಪೀಠದೊಳು ಕುಳ್ಳಿರ್ದನಸುರಾರಿ (ವಿರಾಟ ಪರ್ವ, ೧೧ ಸಂಧಿ, ೭೧ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನಿಗೆ ಆರತಿಗಳನ್ನೆತ್ತಿದರು. ಬಣ್ನ ಬಣ್ಣದ ಕೈದೀಪಗಳು ಮುಮ್ದೆ ಬರುತ್ತಿದ್ದವು. ಭೀಮಾರ್ಜುನರು ಶ್ರೀಕೃಷ್ಣನ ಗುಣಗಾನ ಮಾಡುತ್ತಿದ್ದರು. ಧರ್ಮಜನು ಶ್ರೀಕೃಷ್ಣನನ್ನು ಕರೆದೊಯ್ದನು. ಸಭಾಸ್ಥಾನದಲ್ಲಿದ್ದ ಮಣಿಪೀಠವು ತನ್ನ ಕಾಂತಿಯಿಂದ ಕೈದೀವಿಗೆಗಳ ಬೆಳಕನ್ನು ಮೀರಿಸುತ್ತಿತ್ತು. ಶ್ರೀಕೃಷ್ಣನು ಪೀಠವನ್ನೇರಿ ಕುಳತನು.

ಅರ್ಥ:
ಹಿಡಿ: ಗ್ರಹಿಸು, ಬಂಧಿಸು; ಆರತಿ: ನೀರಾಜನ; ಬಣ್ಣ: ವರ್ಣ; ಸೊಡರು: ದೀಪ; ಸುಳಿ: ಆವರಿಸು, ಮುತ್ತು;
ಮುಂದೆ: ಎದುರು, ತುದಿ; ನೆಲ: ಭೂಮಿ; ಉಗ್ಗಡಿಸು: ಸಾರು, ಘೋಷಿಸು; ಕೈಗುಡೆ: ಸಮರ್ಪಿಸು; ನಂದನ: ಮಗ; ದೀವಿಗೆ: ಸೊಡರು, ದೀಪಿಕೆ; ತಿವಿ: ಚಚ್ಚು; ದುಡುಕು: ಆತುರದಿಂದ ಕೂಡಿರುವಿಕೆ, ಗಡಿಬಿಡಿ; ಕಾಂತಿ: ಪ್ರಕಾಶ; ಕಡಲು: ಸಮುದ್ರ; ಮಣಿ: ಬೆಲೆಬಾಳುವ ರತ್ನ; ಪೀಠ: ಆಸನ; ಕುಳ್ಳಿರ್ದ: ಆಸೀನನಾಗು; ಅಸುರಾರಿ: ರಾಕ್ಷಸರ ವೈರಿ (ಕೃಷ್ಣ);

ಪದವಿಂಗಡಣೆ:
ಹಿಡಿದರ್+ಆರತಿಗಳನು+ ಬಣ್ಣದ
ಸೊಡರು +ಸುಳಿದವು +ಮುಂದೆ +ನೆಲನ್
ಉಗ್ಗಡಿಸೆ +ಭೀಮಾರ್ಜುನರು +ಕೈಗುಡೆ+ ಧರ್ಮನಂದನನು
ಹಿಡಿದ+ ಕೈದೀವಿಗೆಗಳನು +ಕೈ
ದುಡುಕಿ+ ತಿವಿದಾಡುವ +ಸುಕಾಂತಿಯ
ಕಡಲ +ಮಣಿಮಯ +ಪೀಠದೊಳು +ಕುಳ್ಳಿರ್ದನ್+ಅಸುರಾರಿ

ಅಚ್ಚರಿ:
(೧) ಪೀಠದ ಸೊಬಗು – ಹಿಡಿದ ಕೈದೀವಿಗೆಗಳನು ಕೈದುಡುಕಿ ತಿವಿದಾಡುವ ಸುಕಾಂತಿಯ
ಕಡಲ ಮಣಿಮಯ ಪೀಠದೊಳು
(೨) ಕೈಗುಡೆ, ಕೈದುಡುಕಿ, ಕೈದೀವಿಗೆ – ಕೈ ಪದದ ಬಳಕೆ

ಪದ್ಯ ೯೫: ಕೀಚಕನ ತಮ್ಮಂದಿರು ಹೇಗೆ ಬಂದರು?

ಅರಸಿ ಕೈದೀವಿಗೆಯಲವನಿಹ
ಪರಿಯ ಕಂಡರು ಕಾಹಿನವದಿರು
ಹರಿದು ಹೇಳಿದರಾತನನುಜಾತರಿಗೆ ಬೇಗದಲಿ
ಕರದಿ ಬಾಯ್ಗಳ ಹೊಯ್ದು ಹೃದಯದೊ
ಳುರಿ ಚಡಾಳಿಸೆ ಬಿಟ್ಟ ದಮಂಡೆಯೊ
ಳಿರದೆ ಬಂದರು ಕೀಚಕನ ಸೋದರರು ಬಾಯ್ಬಿಡುತ (ವಿರಾಟ ಪರ್ವ, ೩ ಸಂಧಿ, ೯೫ ಪದ್ಯ)

ತಾತ್ಪರ್ಯ:
ಕಾವಲಿನವರು ತಮ್ಮ ಕೈಯಲ್ಲಿ ದೀವಟಿಗೆ ಗಳನ್ನು ಹಿಡಿದು ಕೀಚಕನ ಶವವನ್ನು ನೋಡಿ,ಅವನ ತಮ್ಮಂದಿರಿಗೆ ಈ ಸುದ್ದಿಯನ್ನು ಬೇಗನೆ ತಿಳಿಸಿದರು. ಅವನ ತಮ್ಮಂದಿರು ಈ ವಿಷಯವನ್ನು ತಿಳಿದ ಕೂಡಲೆ ಬಾಯಿಬಡಿದುಕೊಂಡು, ಎದೆಯಲ್ಲಿ ಜ್ವಾಲೆಯು ಹೆಚ್ಚಾಗಿ, ತಲೆಗೆದರಿಕೊಂಡು ಬಾಯಿ ಬಿಡುತ್ತಾ ಬಂದರು.

ಅರ್ಥ:
ಅರಸಿ: ಹುಡುಕಿ; ದೀವಿಗೆ: ಸೊಡರು, ದೀಪಿಕೆ; ಕೈದೀವಿಗೆ: ಕೈಯಲ್ಲಿ ಹಿಡಿಯುವ ದೀಪ; ಪರಿ: ರೀತಿ; ಕಂಡು: ನೋಡು; ಕಾಹಿನ: ರಕ್ಷಿಸುವವ; ಹರಿ: ನೆರೆದುದು; ಹೇಳು: ತಿಳಿಸು; ಅನುಜಾತ: ಒಡಹುಟ್ಟಿದವರು; ಬೇಗ: ಶೀಘ್ರ; ಕರ: ಹಸ್ತ; ಹೊಯ್ದು: ಹೊಡೆದು; ಹೃದಯ: ಎದೆ; ಉರಿ: ಜ್ವಾಲೆ; ಚಡಾಳ: ಹೆಚ್ಚಳ; ಬಿಟ್ಟ: ತೊರೆದ; ಮಡೆ: ತಲೆ; ಬಂದು: ಆಗಮಿಸು; ಸೋದರ: ತಮ್ಮ;

ಪದವಿಂಗಡಣೆ:
ಅರಸಿ +ಕೈದೀವಿಗೆಯಲ್+ಅವನ್+ಇಹ
ಪರಿಯ +ಕಂಡರು +ಕಾಹಿನವದಿರು
ಹರಿದು+ ಹೇಳಿದರ್+ಆತನ್+ಅನುಜಾತರಿಗೆ +ಬೇಗದಲಿ
ಕರದಿ +ಬಾಯ್ಗಳ +ಹೊಯ್ದು +ಹೃದಯದೊಳ್
ಉರಿ +ಚಡಾಳಿಸೆ +ಬಿಟ್ಟ +ಮಂಡೆಯೊಳ್
ಇರದೆ +ಬಂದರು +ಕೀಚಕನ+ ಸೋದರರು +ಬಾಯ್ಬಿಡುತ

ಅಚ್ಚರಿ:
(೧) ಅನುಜಾತ, ಸೋದರ – ಸಮನಾರ್ಥಕ ಪದ

ಪದ್ಯ ೧೪: ವಂದಿ ಮಾಗಧರು ಕರ್ಣಾದಿಗಳಿಗೆ ಏನು ಹೇಳಿದರು?

ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ ಕತ್ತಲೆ
ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ
ಮರೆದೆಲಾ ರಾಧೇಯ ಕೃಪ ನಿಲು
ಹೊರಗೆ ಗುರುಸುತ ನಿನ್ನ ಗರ್ವವ
ಹೆರಿಸುವವು ಭೀಮಾಸ್ತ್ರವೆಂದುದು ವಂದಿ ಸಂದೋಹ (ಕರ್ಣ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಭೀಮನು ವಂದಿಮಾಗಧರು ಕುರುವೀರರಿಗೆ ಹೀಗೆ ಹೇಳಿದರು, ಲೋಕವನ್ನು ನುಂಗುವ ಯಮನಿಗೆ ದೊಡ್ಡದಾದ ಇರುವೆಗಳು ಲೆಕ್ಕವೇ? ಕತ್ತಲೊಡನೆ ಯುದ್ಧ ಮಾಡಲು ಸೂರ್ಯನು ಕೈದೀವಿಗೆಯ ಹಂಗಿಗೊಳಗಾದಾನೇ? ಕರ್ಣ ಮರೆತೆಯಾ, ಕೃಪ ದೂರನಿಲ್ಲು, ಅಶ್ವತ್ಥಾಮ ನಿನ್ನ ಗರ್ವವನ್ನು ಭೀಮನ ಆಯುಧಗಳು ನಿನ್ನನ್ನು ಹೆರಿಸುತ್ತವೆ ಎಂದು ತಿಳಿಸಿದರು.

ಅರ್ಥ:
ಮುರಿ: ಸೀಳು; ಲೋಕ: ಜಗತ್ತು; ನುಂಗು: ಸ್ವಾಹಮಾಡು; ಕಟ್ಟಿರುವೆ: ದೊಡ್ಡ ಇರುವೆ, ಗೊದ್ದ; ಕಾಲ: ಯಮ; ಕತ್ತಲೆ: ಅಂಧಕಾರ; ಇರಿ: ಚುಚ್ಚು, ಯುದ್ಧ; ಕೈದೀವಿ: ಕೈಯಲ್ಲಿ ಹಿಡಿದಿರುವ ದೀಪ; ಹಂಗು: ಋಣ, ದಾಕ್ಷಿಣ್ಯ; ದಿನಮಣಿ: ಸೂರ್ಯ; ಮರೆ: ನೆನಪಿನಿಂದ ದೂರ; ರಾಧೇಯ: ಕರ್ಣ; ಹೊರಗೆ: ಆಚೆ; ನಿಲು: ನಿಲ್ಲು, ಚಲಿಸದಿರು; ಸುತ: ಮಗ; ಗರ್ವ: ಅಹಂಕಾರ; ಹೆರು: ಗಟ್ಟಿಯಾಗು, ಹೊಂದು; ಅಸ್ತ್ರ: ಆಯುಧ; ವಂದಿ: ಹೊಗಳುಭಟ್ಟರು; ಸಂದೋಹ: ಗುಂಪು, ಸಮೂಹ;

ಪದವಿಂಗಡಣೆ:
ಮುರಿದು+ ಲೋಕವ +ನುಂಗಿದರೆ +ಕ
ಟ್ಟಿರುವೆಯೇ +ಕಾಲಂಗೆ +ಕತ್ತಲೆ
ಯಿರಿತದಲಿ +ಕೈದೀವಿಗೆಯ +ಹಂಗೇಕೆ +ದಿನಮಣಿಗೆ
ಮರೆದೆಲಾ +ರಾಧೇಯ +ಕೃಪ+ ನಿಲು
ಹೊರಗೆ +ಗುರುಸುತ +ನಿನ್ನ +ಗರ್ವವ
ಹೆರಿಸುವವು+ ಭೀಮಾಸ್ತ್ರವೆಂದುದು +ವಂದಿ +ಸಂದೋಹ

ಅಚ್ಚರಿ:
(೧) ಉಪಮಾನದ ಪ್ರಯೋಗ – ಮುರಿದು ಲೋಕವ ನುಂಗಿದರೆ ಕ
ಟ್ಟಿರುವೆಯೇ ಕಾಲಂಗೆ; ಕತ್ತಲೆ ಯಿರಿತದಲಿ ಕೈದೀವಿಗೆಯ ಹಂಗೇಕೆ ದಿನಮಣಿಗೆ