ಪದ್ಯ ೩೧: ದುರ್ಯೋಧನನು ಸಂಜಯನನ್ನು ಅಳಿಮನವೆಂದು ಏಕೆ ಕರೆದನು?

ಕಾನನಕೆ ಕೈಯಿಕ್ಕುವರೆ ಪವ
ಮಾನನನು ಪಾವಕನು ಬಯಸುವ
ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
ಈ ನಿಭೃತ ಗದೆಯಿರಲು ಕುಂತೀ
ಸೂನುಗಳ ಕೈಕೊಂಬೆನೇ ಮನ
ಈ ಹೀನನೈ ನೀನಕಟ ಸಂಜಯ ಎಂದನಾ ಭೂಪ (ಗದಾ ಪರ್ವ, ೩ ಸಂಧಿ, ೩೧ ಪದ್ಯ)

ತಾತ್ಪರ್ಯ:
ಕಾಡನ್ನು ಸುಡಲು ಅಗ್ನಿಯು ಗಾಳಿಯ ಸಹಾವನ್ನು ಬಯಸುತ್ತಾನೆ, ನಿಜ ಆದರೆ ಕತ್ತಲನ್ನು ತೊಲಗಿಸಲು ಸೂರ್ಯನು ಯಾರ ಸಹಾಯವನ್ನು ಬಯಸುತ್ತಾನೆ? ಈ ಸಮರ್ಥವಾದ ಗದೆಯಿರಲು, ಕುಂತಿಯ ಮಕ್ಕಳನ್ನು ಲೆಕ್ಕುಸುವೆನೇ? ಸಂಜಯ ನಿನ್ನ ಮನ ಸಣ್ಣದ್ದು ಎಂದು ಹೇಳಿದನು.

ಅರ್ಥ:
ಕಾನನ: ಕಾಡು; ಕೈಯಿಕ್ಕು: ಮುಟ್ಟು; ಪವಮಾನ: ವಾಯು; ಪಾವಕ: ಬೆಂಕಿ; ಬಯಸು: ಆಸೆ ಪಡು, ಇಚ್ಛಿಸು; ಭಾನು: ಸೂರ್ಯ; ಭಾರಿ: ದೊಡ್ಡ; ತಮ: ಅಂಧಕಾರ; ನೆರವು: ಸಹಾಯ; ನಿಭೃತ: ಗುಟ್ಟು, ರಹಸ್ಯ; ಗದೆ: ಮುದ್ಗರ; ಸೂನು: ಮಕ್ಕಳು; ಕೈಕೊಂಬು: ಹಿಡಿ, ಲೆಕ್ಕಿಸು; ಮನ:ಮನಸ್ಸು; ಹೀನ: ಕೆಟ್ಟದು; ಅಕಟ: ಅಯ್ಯೋ; ಭೂಪ: ರಾಜ;

ಪದವಿಂಗಡಣೆ:
ಕಾನನಕೆ +ಕೈಯಿಕ್ಕುವರೆ +ಪವ
ಮಾನನನು +ಪಾವಕನು+ ಬಯಸುವ
ಭಾನು +ಭಾರಿಯ +ತಮವ್+ಅತಿವ್+ಇವನ್+ಅದಾರ+ ನೆರವಿಯಲಿ
ಈ +ನಿಭೃತ +ಗದೆಯಿರಲು +ಕುಂತೀ
ಸೂನುಗಳ +ಕೈಕೊಂಬೆನೇ +ಮನ
ಈ +ಹೀನನೈ +ನೀನಕಟ +ಸಂಜಯ +ಎಂದನಾ +ಭೂಪ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು ಬಯಸುವ, ಭಾನು ಭಾರಿಯ ತಮವತಿವಿವನದಾರ ನೆರವಿಯಲಿ
(೨) ಕೈಯಿಕ್ಕು, ಕೈಕೊಂಬು – ಪದಗಳ ಬಳಕೆ
(೩) ಜೋಡಿ ಪದಗಳು (ಕ, ಪ) – ಕಾನನಕೆ ಕೈಯಿಕ್ಕುವರೆ ಪವಮಾನನನು ಪಾವಕನು

ಪದ್ಯ ೧೩: ಕರ್ಣನು ದುರ್ಯೋಧನನಿಗೆ ಹೇಗೆ ಅಭಯವನ್ನು ನೀಡಿದನು?

ಎನಲು ಕರ್ಣನು ಬಳಿಕ ನುಡಿದನು
ಜನಪತಿಯೆ ಕೇಳೇನು ಪಾರ್ಥನ
ನನುವರದಿ ಕೈಕೊಂಬೆನೇ ಗೆಲುವೆನು ತ್ರಿಯಂಬಕನ
ಎನಲು ಹರುಷಿತನಾಗಿ ಕೌರವ
ಜನಪ ನುಡಿದನು ಕರ್ಣನಿರೆ ಈ
ಬಿನುಗು ಪಾಂಡವರೆನಗೆ ಗಹನವೆ ಕರೆಸೆನವರುಗಳ (ವಿರಾಟ ಪರ್ವ, ೫ ಸಂಧಿ, ೧೩ ಪದ್ಯ)

ತಾತ್ಪರ್ಯ:
ಭೀಷ್ಮನು ಕರ್ಣನ ಮಾತನ್ನು ಕೇಳಬೇಡ ಎಂದೊಡನೆಯೆ ಕರ್ಣನು ದುರ್ಯೋಧನನನ್ನು ಉದ್ದೇಶಿಸಿ, ನಾನು ಅರ್ಜುನನ್ನು ಲೆಕ್ಕಿಸುವೆನೆ? ಶಿವನನ್ನೂ ಯುದ್ಧದಲ್ಲಿ ಗೆದ್ದೇನು ಎನಲು, ಕೌರವನು ಇದಕ್ಕೆ ಸಂತಸಪಟ್ಟು, ಕರ್ಣನು ಇರಲು ಕೆಲಸಕ್ಕೆ ಬಾರದ ಪಾಂಡವರು ನನಗೆ ಲೆಕ್ಕವೇ? ಅವರನ್ನು ನಾನು ಸಂಧಿಗೆ ಕರೆಯುವುದಿಲ್ಲ ಎಂದು ನುಡಿದನು.

ಅರ್ಥ:
ಎನಲು: ಹೀಗೆ ಹೇಳಿದ ಕೂಡಲೆ; ಬಳಿಕ: ನಂತರ; ನುಡಿ: ಮಾತು; ಜನಪತಿ: ರಾಜ; ಕೇಳು: ಆಲಿಸು; ಅನುವರ: ಕಷ್ಟ; ಕೈಕೊಂಬೆ: ಬೇರೆಯವರು ಹೇಳಿದಂತೆ ಕೇಳುವವ; ಗೆಲುವು: ವಿಜಯ; ತ್ರಿಯಂಬಕ: ಶಿವ; ಹರುಷ: ಸಂತೋಷ; ಜನಪ: ರಾಜ; ಬಿನುಗ: ಅಲ್ಪ, ಹೀನ; ಗಹನ:ಸುಲಭವಲ್ಲದುದು, ನಿಬಿಡವಾದ; ಕರೆಸೆನು: ಬರೆಮಾಡುವುದಿಲ್ಲ;

ಪದವಿಂಗಡಣೆ:
ಎನಲು +ಕರ್ಣನು +ಬಳಿಕ +ನುಡಿದನು
ಜನಪತಿಯೆ +ಕೇಳ್+ಏನು +ಪಾರ್ಥನನ್
ಅನುವರದಿ+ ಕೈಕೊಂಬೆನೇ +ಗೆಲುವೆನು +ತ್ರಿಯಂಬಕನ
ಎನಲು+ ಹರುಷಿತನಾಗಿ+ ಕೌರವ
ಜನಪ +ನುಡಿದನು +ಕರ್ಣನಿರೆ+ ಈ
ಬಿನುಗು +ಪಾಂಡವರೆನಗೆ+ ಗಹನವೆ+ ಕರೆಸೆನ್+ಅವರುಗಳ

ಅಚ್ಚರಿ:
(೧) ಜನಪತಿ, ಜನಪ – ೨, ೫ ಸಾಲಿನ ಮೊದಲ ಪದ
(೨) ೨ ಸಾಲಿನಲ್ಲಿ ಜನಪ ಕೇಳು, ೫ ಸಾಲಿನಲ್ಲಿ ಜನಪ ನುಡಿ