ಪದ್ಯ ೪೯: ಅರ್ಜುನನ ತೇರು ಹೇಗೆ ಉರಿಯಿತು?

ಬಳಿಕ ಫಲುಗುಣ ರಥದ ಮೇಲಿಂ
ದಿಳೆಗೆ ಹಾಯ್ದನು ಕೃಷ್ಣ ನೀನಿ
ನ್ನಿಳಿಯೆನಲು ಚಮ್ಮಟಿಗೆ ವಾಘೆಯ ನೇಣ ರಥದೊಳಗೆ
ಇಳುಹಿ ನಗುತ ಮುಕುಂದ ರಥದಿಂ
ದಿಳಿಯೆ ಛಟಛಟಿಲೆಂದು ಕಿಡಿಯು
ಚ್ಚಳಿಸಲುರಿದುದು ತೇರು ಕೇಸುರಿ ನಭವನಪ್ಪಳಿಸೆ (ಗದಾ ಪರ್ವ, ೮ ಸಂಧಿ, ೪೯ ಪದ್ಯ)

ತಾತ್ಪರ್ಯ:
ಬಳಿಕ ಅರ್ಜುನನು ರಥದ ಮೇಲಿಂದ ಭೂಮಿಗೆ ಹಾರಿದನು. ಕೃಷ್ಣ, ಇನ್ನು ನೀನಿಳಿ ಎನ್ನಲು, ಶ್ರೀಕೃಷ್ಣನು ಬಾರುಕೋಲು, ಲಗಾಮು, ಹಗ್ಗಗಲನ್ನು ರಥದೊಳಗಿಟ್ಟು ಕೆಳಗಿಳಿದನು. ಆ ಕ್ಷಣವೇ ಛಿಟಿಛಿಟಿಲೆಂಬ ಸದ್ದಿನೊಡನೆ ಕಿಡಿಗಳು ಹಾರಿ, ತೇರು ಉರಿಯಲು ಕೆಂಪಾದ ಉರಿಗಳು ಆಕಾಶಕ್ಕಡರಿತು.

ಅರ್ಥ:
ಬಳಿಕ: ನಂತರ; ರಥ: ಬಂಡಿ; ಇಳೆ: ಭೂಮಿ; ಹಾಯ್ದು: ಹಾರು, ನೆಗಿ; ಚಮ್ಮಟಿಗೆ: ಚಾವಟಿ; ವಾಘೆ: ಲಗಾಮು; ನೇಣ: ಹಗ್ಗ; ನಗು: ಹರ್ಷ; ಛಟಛತಿಲು: ಶಬ್ದವನ್ನು ಸೂಚಿಸುವ ಪದ; ಕಿಡಿ: ಬೆಂಕಿ; ಉಚ್ಚಳಿಸು: ಹೊರಹೊಮ್ಮು; ಉರಿ: ಸುಡು; ಕೇಸುರಿ: ಕೆಂಪಾದ ಉರಿ; ನಭ: ಆಗಸ; ಅಪ್ಪಳಿಸು: ತಟ್ಟು, ತಾಗು;

ಪದವಿಂಗಡಣೆ:
ಬಳಿಕ +ಫಲುಗುಣ +ರಥದ +ಮೇಲಿಂದ್
ಇಳೆಗೆ +ಹಾಯ್ದನು +ಕೃಷ್ಣ+ ನೀನಿನ್
ಇಳಿ+ಎನಲು +ಚಮ್ಮಟಿಗೆ +ವಾಘೆಯ +ನೇಣ +ರಥದೊಳಗೆ
ಇಳುಹಿ +ನಗುತ +ಮುಕುಂದ +ರಥದಿಂದ್
ಇಳಿಯೆ +ಛಟಛಟಿಲೆಂದು+ ಕಿಡಿ+
ಉಚ್ಚಳಿಸಲ್+ಉರಿದುದು +ತೇರು +ಕೇಸುರಿ +ನಭವನ್+ಅಪ್ಪಳಿಸೆ

ಅಚ್ಚರಿ:
(೧) ಸುಡುವ ಶಬ್ದವನ್ನು ವಿವರಿಸುವ ಪರಿ – ಛಟಛಟಿ
(೨) ಇಳೆ, ಇಳಿ, ಇಳುಹಿ – ಪದಗಳ ಬಳಕೆ

ಪದ್ಯ ೪೮: ಭೀಮನು ತನ್ನ ದೇಹವನ್ನು ಹೇಗೆ ಸಂತೈಸಿಕೊಂಡನು?

ತ್ರಾಣವಿಮ್ಮಡಿಯಾಯ್ತು ತಿರುಗಿದ
ಗೋಣು ಮರಳಿತು ರೋಷವಹ್ನಿಗೆ
ಸಾಣೆವಿಡಿದವೊಲಾಯ್ತು ಕಣ್ಣುಗುಳಿದುವು ಕೇಸುರಿಯ
ಠಾಣವೆಡಹಿದ ಗದೆಯ ರಣಬಿ
ನ್ನಾಣ ಮಸುಳಿದ ಮಾನಮರ್ದನ
ದೂಣೆಯದ ಸವ್ಯಥೆಯ ಭಟ ಸಂತೈಸಿದನು ತನುವ (ಗದಾ ಪರ್ವ, ೭ ಸಂಧಿ, ೪೮ ಪದ್ಯ)

ತಾತ್ಪರ್ಯ:
ಭೀಮನ ಸತ್ವವು ಇಮ್ಮಡಿಯಾಯಿತು ತಿಗುರಿದ್ದ ಕೊರಳು ಸರಿಯಾಯಿತು. ಕೋಪಾಗ್ನಿಗೆ ಸಾಣೆಹಿಡಿದಂತಾಯಿತು. ಕಣ್ಣುಗಳು ಕೆಂಪಾದ ಉರಿಯನ್ನು ಸೂಸಿದವು. ಭೀಮನ ಗದೆ ಕೈಯಿಮ್ದ ಹಾರಿಹೋಗಿತ್ತು. ಯುದ್ಧಚಾತುರ್ಯ ಮಾಸಿತ್ತು. ಮಾನಭಂಗವಾಗಿತ್ತು. ಭೀಮನು ಅವೆಲ್ಲವನ್ನು ಕಳೆದುಕೊಂಡು ದೇಹವನ್ನು ಸಂತೈಸಿಕೊಂಡನು.

ಅರ್ಥ:
ತ್ರಾಣ: ಕಾಪು, ರಕ್ಷಣೆ; ಇಮ್ಮಡಿ: ಎರಡು ಪಟ್ಟು; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಗೋಣು: ಕಂಠ, ಕುತ್ತಿಗೆ; ಮರಳು: ಹಿಂದಿರುಗು; ರೋಷ: ಕೋಪ; ವಹ್ನಿ: ಬೆಂಕಿ; ಸಾಣೆ: ಉಜ್ಜುವ ಕಲ್ಲು; ಕಣ್ಣು: ನಯನ; ಉಗುಳು: ಹೊರಹೊಮ್ಮು; ಕೇಸುರಿ: ಕೆಂಪಾದ ಬಣ್ಣ; ಠಾಣ: ಜಾಗ, ಸ್ಥಳ; ಎಡಹು: ಜಾರಿಹೋಗು; ಗದೆ: ಮುದ್ಗರ; ರಣ: ಯುದ್ಧಭೂಮಿ; ಬಿನ್ನಾಣ: ಗಾಢವಾದ ತಿಳುವಳಿಕೆ; ಮಸುಳು: ಕಾಂತಿಹೀನವಾಗು, ಮಂಕಾಗು; ಮಾನ: ಮರ್ಯಾದೆ, ಗೌರವ; ಮರ್ದನ: ಪುಡಿ ಮಾಡುವುದು; ಊಣೆ: ನ್ಯೂನ್ಯತೆ; ವ್ಯಥೆ: ದುಃಖ; ಭಟ: ಪರಾಕ್ರಮಿ; ಸಂತೈಸು: ಸಮಾಧಾನ ಪಡಿಸು; ತನು: ದೇಹ;

ಪದವಿಂಗಡಣೆ:
ತ್ರಾಣವ್+ಇಮ್ಮಡಿಯಾಯ್ತು +ತಿರುಗಿದ
ಗೋಣು +ಮರಳಿತು +ರೋಷ+ವಹ್ನಿಗೆ
ಸಾಣೆವಿಡಿದವೊಲಾಯ್ತು +ಕಣ್ಣ್+ಉಗುಳಿದುವು +ಕೇಸುರಿಯ
ಠಾಣವೆಡಹಿದ+ ಗದೆಯ +ರಣ+ಬಿ
ನ್ನಾಣ +ಮಸುಳಿದ +ಮಾನ+ಮರ್ದನದ್
ಊಣೆಯದ +ಸವ್ಯಥೆಯ +ಭಟ +ಸಂತೈಸಿದನು + ತನುವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರೋಷವಹ್ನಿಗೆ ಸಾಣೆವಿಡಿದವೊಲಾಯ್ತು

ಪದ್ಯ ೬೭: ಶಲ್ಯನ ಅಂತ್ಯವು ಹೇಗಾಯಿತು?

ಇದಿರೊಳೆಚ್ಚನು ಶಲ್ಯನಂಬಿನ
ಹೊದೆ ಸವೆಯೆ ಹರಿತಪ್ಪ ಶಕ್ತಿಯ
ತುದಿಗೆ ಕಬಳಗ್ರಾಸವಾದುದಲೈ ವಿಚಿತ್ರವಲಾ
ಹೊದರುಗಿಡಿಗಳ ಕೇಸುರಿಯ ಹಾ
ರದಲಿ ಹರಿತಂದಹಿತ ದಳಪತಿ
ಯೆದೆಯನೊದೆದುದು ನೆಲಕೆ ನಟ್ಟುದು ನಾಲ್ಕು ಮುಷ್ಟಿಯಲಿ (ಶಲ್ಯ ಪರ್ವ, ೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ಶಲ್ಯನು ತನ್ನಲ್ಲಿದ್ದ ಬಾಣಗಳ ಹೊರೆಗಳು ಸವೆಯುವವರೆಗೂ ಆ ಶಕ್ತಿಯ ಮೇಲೆ ಬಿಟ್ಟನು. ಶಕ್ತಿಯು ಆ ಬಾಣಗಳನ್ನು ನುಂಗಿತು. ಕ್ಡಿಗಳ ಪೊದೆಯ ನಡುವೆ ಕೆಂಪನೆಯ ಉರಿಯ ಹಾರವನ್ನು ತೊಟ್ಟ ಶಕ್ತಿಯು ಶಲ್ಯ್ನ ಎದೆಗೆ ಹೊಡೆದು, ಭೇದಿಸಿ ಬೆನ್ನಿನಿಂದ ಹೊರಟು ನಾಲ್ಕು ಮುಷ್ಟಿಗಳಷ್ಟು ದೂರದಲ್ಲಿ ನೆಲಕ್ಕೆ ನೆಟ್ಟಿತು.

ಅರ್ಥ:
ಎಚ್ಚು: ಬಾಣ ಪ್ರಯೋಗ ಮಾಡು; ಅಂಬು: ಬಾಣ; ಹೊದೆ: ಬಾಣಗಳನ್ನಿಡುವ ಕೋಶ; ಸವೆ: ಶಕ್ತಿಗುಂದು, ತೀರು; ಹರಿ: ಸಾಧ್ಯವಾಗು; ಶಕ್ತಿ: ಬಲ; ತುದಿ: ಕೊನೆ; ಕಬಳಗ್ರಾಸ: ತುತ್ತು ಆಹಾರ; ವಿಚಿತ್ರ: ಆಶ್ಚರ್ಯಕರವಾದುದು; ಹೊದರು: ಗುಂಪು, ಸಮೂಹ; ಕಿಡಿ: ಬೆಂಕಿ; ಕೇಸುರಿ: ಕೆಂಪು ಉರಿ; ಹಾರ: ಮಾಲೆ; ಅಹಿತ: ವೈರ; ದಳಪತಿ: ಸೇನಾಧಿಪತಿ; ಎದೆ: ಉರು; ಒದೆ: ನೂಕು; ನೆಲ: ಭೂಮಿ; ನಟ್ಟು: ಒಳಹೋಗು; ಮುಷ್ಟಿ: ಮುಚ್ಚಿದ ಅಂಗೈ;

ಪದವಿಂಗಡಣೆ:
ಇದಿರೊಳ್+ಎಚ್ಚನು +ಶಲ್ಯನ್+ಅಂಬಿನ
ಹೊದೆ +ಸವೆಯೆ +ಹರಿತಪ್ಪ+ ಶಕ್ತಿಯ
ತುದಿಗೆ +ಕಬಳಗ್ರಾಸವಾದುದಲೈ +ವಿಚಿತ್ರವಲಾ
ಹೊದರು+ಕಿಡಿಗಳ +ಕೇಸುರಿಯ +ಹಾ
ರದಲಿ +ಹರಿತಂದ್+ಅಹಿತ +ದಳಪತಿ
ಎದೆಯನ್+ಒದೆದುದು +ನೆಲಕೆ +ನಟ್ಟುದು +ನಾಲ್ಕು +ಮುಷ್ಟಿಯಲಿ

ಅಚ್ಚರಿ:
(೧) ಧರ್ಮಜನ ಬಾಣದ ತೀವ್ರತೆ: ಹೊದರುಗಿಡಿಗಳ ಕೇಸುರಿಯ ಹಾರದಲಿ ಹರಿತಂದಹಿತ ದಳಪತಿ ಯೆದೆಯನೊದೆದುದು

ಪದ್ಯ ೧೦: ವೈರಿ ಸೈನ್ಯವನ್ನು ಹೇಗೆ ನಿರ್ನಾಮ ಮಾಡಿದರು?

ಆ ಸಮಯದಲಿ ಬಹಳ ಶೌರ್ಯಾ
ವೇಶದಲಿ ನಿನ್ನಾತ ನೂಕಿದ
ನಾ ಶಕುನಿಯೈವತ್ತು ಸಾವಿರ ತುರಗದಳ ಸಹಿತ
ಕೇಸುರಿಯ ಕರ್ಬೊಗೆಯವೊಲು ನಿ
ಟ್ಟಾಸಿನಾಯುಧದಾನೆಗಳು ಕೈ
ವೀಸುವಲ್ಲಿಂ ಮುನ್ನ ಮೊಗೆದುವು ವೈರಿಮೋಹರವ (ಶಲ್ಯ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಕೌರವ ಸೈನ್ಯವು ಬತ್ತು ಹೋಗುತ್ತಿದ್ದ ಸಮಯದಲ್ಲಿ, ನಿನ್ನ ಮಗ ಬಹಳ ಶೌರ್ಯದಿಂದ ಮುನ್ನುಗ್ಗಿದನು. ಐವತ್ತು ಸಾವಿರ ಕುದುರೆಗಳೊಡನೆ ಶಕುನಿಯು ಯುದ್ಧಕ್ಕೆ ಮುಂದಾದನು. ಆಯುಧಗಳನ್ನು ಹಿಡಿದು ಆನೆಗಳ ಮೇಲೆ ಬರುತ್ತಿದ್ದ ಸೈನಿಕರು ಕೈ ಸನ್ನೆ ಕೊಡುವ ಮೊದಲೇ ವೈರಿ ಸೈನ್ಯವನ್ನು ನಿರ್ನಾಮ ಮಾಡಿದವು.

ಅರ್ಥ:
ಸಮಯ: ಕಾಲ; ಬಹಳ: ತುಂಬ; ಶೌರ್ಯ: ಪರಾಕ್ರಮ; ಆವೇಶ: ರೋಷ; ನೂಕು: ತಳ್ಳು; ಸಾವಿರ: ಸಹಸ್ರ; ತುರಗ: ಕುದುರೆ; ದಳ: ಗುಂಪು; ಸಹಿತ: ಜೊತೆ; ಕೇಸುರಿ: ಕೆಂಪು ಉರಿ; ಕರ್ಬೊಗೆ: ಕಪ್ಪಾದ ಧೂಮ; ನಿಟ್ಟಾಸಿ: ಭಯಂಕರವಾದ; ಆಯುಧ: ಶಸ್ತ್ರ; ಆನೆ: ಕರಿ, ಗಜ; ಕೈವೀಸು: ಕೈ ಸನ್ನೆಮಾಡು; ಮುನ್ನ: ಮುಂಚೆ; ಮೊಗೆ:ನುಂಗು, ಕಬಳಿಸು; ವೈರಿ: ಶತ್ರು; ಮೋಹರ: ಯುದ್ಧ;

ಪದವಿಂಗಡಣೆ:
ಆ +ಸಮಯದಲಿ +ಬಹಳ +ಶೌರ್ಯ
ಆವೇಶದಲಿ +ನಿನ್ನಾತ +ನೂಕಿದನ್
ಆ+ ಶಕುನಿ+ಐವತ್ತು +ಸಾವಿರ +ತುರಗದಳ +ಸಹಿತ
ಕೇಸುರಿಯ +ಕರ್ಬೊಗೆಯವೊಲು +ನಿ
ಟ್ಟಾಸಿನ್+ಆಯುಧದ್+ಆನೆಗಳು +ಕೈ
ವೀಸುವಲ್ಲಿಂ +ಮುನ್ನ +ಮೊಗೆದುವು +ವೈರಿ+ಮೋಹರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೇಸುರಿಯ ಕರ್ಬೊಗೆಯವೊಲು

ಪದ್ಯ ೬: ಸೈನ್ಯವು ಹೇಗೆ ನಿಂತಿತು?

ಮುರಿದ ಬಲುಗುದುರೆಗಳ ಬಾದಣ
ಗೊರೆದ ಮಯ್ಯಾನೆಗಳ ಹತ್ತಿಗೆ
ಹರಿದ ಗಾಲಿಯ ರಥವ ಚಿನಕಡಿವಡೆದ ಕಾಲಾಳ
ಅರುಹಿದರು ಭೂಪತಿಗೆ ಸೇನೆಯ
ಲರಸಿ ತೆಗೆದಾಯತ ಚತುರ್ಬಲ
ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ (ಶಲ್ಯ ಪರ್ವ, ೨ ಸಂಧಿ, ೬ ಪದ್ಯ)

ತಾತ್ಪರ್ಯ:
ಗಾಯಗೊಂಡ ಕುದುರೆಗಳು, ಆನೆಗಳು, ಗಾಲಿ ಮುರಿದ ರಥಗಳನ್ನು ಗಾಯಗೊಂಡ ಕಾಲಾಳುಗಳನ್ನು ಅರಸನಿಗೆ ತಿಳಿಸಿ, ಸುಸ್ಥಿತಿಯಲ್ಲಿದ್ದ ಸೇನೆಯನ್ನು ಹೊರನಿಲ್ಲಿಸಿದರು. ಯುದ್ಧ ಸನ್ನದ್ಧವಾಗಿದ್ದ ಸೈನ್ಯವು ಹೊಗೆ ತೆಗೆದ ಕೆಂಪನೆಯ ಉರಿಯ ತಿರುಳಿನಂತೆ ನಿಂತಿತು.

ಅರ್ಥ:
ಮುರಿ: ಸೀಳು; ಕುದುರೆ: ಅಶ್ವ; ಬಾದಣ: ತೂತು, ರಂಧ್ರ; ಕೊರೆ: ಕತ್ತರಿಸುವುದು, ತುಂಡು; ಆನೆ: ಗಜ; ಹರಿ: ಸೀಳು; ಗಾಲಿ: ಚಕ್ರ; ರಥ: ಬಂಡಿ; ಕಾಲಾಳು: ಸೈನಿಕ; ಅರುಹು: ತಿಳಿಸು, ಹೇಳು; ಭೂಪತಿ: ರಾಜ; ಸೇನೆ: ಸೈನ್ಯ; ಅರಸು: ಹುಡುಕು; ತೆಗೆ: ಹೊರತರು; ಆಯತ: ವಿಶಾಲ; ಚತುರ್ಬಲ: ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಬಗೆಯ ಸೈನ್ಯ; ಹೊರಗೆ: ಆಚೆ; ನಿಂದು: ನಿಲ್ಲು; ಹೊಗೆ: ಧೂಮ; ಕೇಸುರಿ: ಕೆಂಪಾದ ಉರಿ; ತಿರುಳು: ಸಾರ;

ಪದವಿಂಗಡಣೆ:
ಮುರಿದ +ಬಲು+ಕುದುರೆಗಳ +ಬಾದಣ
ಕೊರೆದ +ಮಯ್ಯ+ಆನೆಗಳ+ ಹತ್ತಿಗೆ
ಹರಿದ+ ಗಾಲಿಯ +ರಥವ +ಚಿನಕಡಿವಡೆದ+ ಕಾಲಾಳ
ಅರುಹಿದರು +ಭೂಪತಿಗೆ +ಸೇನೆಯಲ್
ಅರಸಿ+ ತೆಗೆದಾಯತ+ ಚತುರ್ಬಲ
ಹೊರಗೆ +ನಿಂದುದು +ಹೊಗೆ+ತೆಗೆದ +ಕೇಸುರಿಯ +ತಿರುಳಂತೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ಚತುರ್ಬಲ ಹೊರಗೆ ನಿಂದುದು ಹೊಗೆದೆಗೆದ ಕೇಸುರಿಯ ತಿರುಳಂತೆ

ಪದ್ಯ ೫೦: ಅಭಿಮನ್ಯುವು ದುಶ್ಯಾಸನನನ್ನು ಹೇಗೆ ಸೋಲಿಸಿದನು?

ಕಾಯ್ದುಕೊಳ್ಳೈ ಕೌರವಾನುಜ
ಹೊಯ್ದು ಹೋಗಲು ಬಹುದೆ ಹರನಡ
ಹಾಯ್ದಡೆಯು ಗೆಲುವೆನು ಕಣಾ ನಿಲ್ಲೆನುತ ತೆಗೆದೆಸಲು
ಬಾಯ್ದೆಗೆದು ಕೇಸುರಿಯ ಕಾರುತ
ಕೈದುವೆದೆಯಲಿ ಕೊಂಡು ಬೆನ್ನಲಿ
ಹಾಯ್ದಡವನೋರ್ಗುಡಿಸಿದನು ಕುರುಸೇನೆ ಕಳವಳಿಸೆ (ದ್ರೋಣ ಪರ್ವ, ೫ ಸಂಧಿ, ೫೦ ಪದ್ಯ
)

ತಾತ್ಪರ್ಯ:
ದುಶ್ಯಾಸನ, ನಿನ್ನನ್ನು ನೀನು ರಕ್ಷಿಸಿಕೋ? ನನ್ನನ್ನು ಹೊಡೆದು ಹೋಗುವುದು ಸಾಧ್ಯವೇ? ಶಿವನೇ ಅಡ್ಡ ಬಂದರು ನಾನು ಗೆಲ್ಲುತ್ತೇನೆ, ನಿಲ್ಲು ಎಂದು ಅಭಿಮನ್ಯುವು ಬೆಂಕಿಯ ಬಾಣಗಳನ್ನು ಬಿಡಲು ಅದು ಅವನ ಎದೆಯೊಳ್ಗೆ ಹಾಯ್ದು ಬೆನ್ನಲ್ಲಿ ಬಂದು ನೆಲಕ್ಕೆ ಬಿದ್ದಿತು, ದುಶ್ಯಾಸನನು ಮೂರ್ಛಿತನಾಗಲು ಕುರುಸೇನೆಯು ಕಳವಳಗೊಂಡಿತು.

ಅರ್ಥ:
ಕಾಯ್ದು: ಕಾಪಾಡು; ಅನುಜ: ತಮ್ಮ; ಹೊಯ್ದು: ಹೊಡೆದು; ಹೋಗು: ತೆರಳು; ಹರ: ಈಶ್ವರ; ಅಡ: ಅಡ್ಡ, ಮಧ್ಯ; ಹಾಯ್ದು: ಬಂದು; ಗೆಲುವು: ಜಯ; ನಿಲ್ಲು: ತಾಳು; ತೆಗೆ: ಹೊರತರು; ಎಸಲು: ಬಾಣ ಪ್ರಯೋಗ ಮಾಡು; ತೆಗೆ: ಹೊರತರು; ಕೇಸುರಿ: ಕೆಂಪು ಉರಿ; ಕಾರು: ಹೊರಹಾಕು; ಕೈದು: ಆಯುಧ; ಎದೆ: ವಕ್ಷಸ್ಥಳ; ಕೊಂಡು: ಧರಿಸು; ಬೆನ್ನು: ಹಿಂಭಾಗ; ಊರ್ಗುಡಿಸು: ಮೂರ್ಛೆ; ಕಳವಳ: ಗೊಂದಲ;

ಪದವಿಂಗಡಣೆ:
ಕಾಯ್ದುಕೊಳ್ಳೈ+ ಕೌರವಾನುಜ
ಹೊಯ್ದು +ಹೋಗಲು +ಬಹುದೆ +ಹರನ್+ಅಡ
ಹಾಯ್ದಡೆಯು +ಗೆಲುವೆನು +ಕಣಾ +ನಿಲ್ಲೆನುತ +ತೆಗೆದ್+ಎಸಲು
ಬಾಯ್ದೆಗೆದು +ಕೇಸುರಿಯ +ಕಾರುತ
ಕೈದುವ್+ಎದೆಯಲಿ +ಕೊಂಡು +ಬೆನ್ನಲಿ
ಹಾಯ್ದಡ್+ಅವನ್+ಊರ್ಗುಡಿಸಿದನು +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ಕಾಯ್ದು, ಹೊಯ್ದು, ಹಾಯ್ದು – ಪ್ರಾಸ ಪದಗಳು
(೨) ಅಭಿಮನ್ಯುವಿನ ದಿಟ್ಟನುಡಿ – ಹರನಡ ಹಾಯ್ದಡೆಯು ಗೆಲುವೆನು ಕಣಾ

ಪದ್ಯ ೩: ಕೌರವ ಸೈನ್ಯವು ಉತ್ತರನಿಗೆ ಹೇಗೆ ತೋರಿತು?

ಜಡಿವ ಖಡ್ಗದ ಕಿಡಿಯ ಸೇನೆಯ
ತೊಡರುಗಳ ಕೇಸುರಿಯ ಬಲದು
ಗ್ಗಡದ ರಭಸದ ರೌದ್ರರವ ಛಟ ಛಟಿಗ ನಿಸ್ವನದ
ಇಡಿದ ಧೂಳಿಯ ಧೂಮರಾಶಿಯ
ಪಡೆ ವಿರಾಟನ ಸುತನ ಕಂಗಳಿ
ಗೊಡನೊಡನೆ ದಾವಾಗ್ನಿಯಂತಿರೆ ತೋರಿತಿದಿರಿನಲಿ (ವಿರಾಟ ಪರ್ವ, ೭ ಸಂಧಿ, ೩ ಪದ್ಯ)

ತಾತ್ಪರ್ಯ:
ಬೀಸುವ ಖಡ್ಗಗಳ ಹೊಳಪೇ ಕಿಡಿಗಳು, ಆಭರಣಗಳ ಕಾಂತಿ ಕೆಂಬಣ್ಣದ ಉರಿ, ಸೈನ್ಯದ ಸದ್ದೇ ಛಟಛಟ ಸದ್ದು, ಮೇಲೆದ್ದ ಧೂಳೇ ಹೊಗೆ, ಹೀಗೆ ಉತ್ತರನಿಗೆ ಕುರುಸೈನ್ಯವು ಕಾಳ್ಗಿಚ್ಚಿನಂತೆ ತೋರಿತು.

ಅರ್ಥ:
ಜಡಿ: ಬೆದರಿಕೆ, ಹೆದರಿಕೆ; ಖಡ್ಗ: ಕತ್ತಿ, ಕರವಾಳ; ಕಿಡಿ: ಬೆಂಕಿ; ಸೇನೆ: ಸೈನ್ಯ; ತೊಡರು: ಸಂಕೋಲೆ, ಬಂಧನ; ಕೇಸುರಿ: ಕೆಂಪು ಉರಿ; ಬಲ: ಶಕ್ತಿ; ಉಗ್ಗಡ: ಉತ್ಕಟತೆ, ಅತಿಶಯ; ರಭಸ: ವೇಗ; ರೌದ್ರ: ಸಿಟ್ಟು, ರೋಷ; ರವ: ಶಬ್ದ; ಛಟ: ಬೆಂಕಿಯ ಶಬ್ದವನ್ನು ವಿವರಿಸುವ ಪದ; ನಿಸ್ವನ: ಶಬ್ದ, ಧ್ವನಿ; ಇಡಿ: ತಿವಿ, ಚುಚ್ಚು; ಧೂಳು: ಮಣ್ಣಿನ ಪುಡಿ; ಧೂಮ: ಹೊಗೆ; ರಾಶಿ: ಗುಂಪು; ಪಡೆ: ಸೈನ್ಯ; ಸುತ: ಮಗ; ಕಂಗಳು: ಕಣ್ಣು; ಒಡನೊಡನೆ: ಒಮ್ಮೆಲೆ; ದಾವಾಗ್ನಿ: ಕಾಳ್ಗಿಚ್ಚು; ತೋರು: ಕಾಣಿಸು; ಇದಿರು: ಎದುರು;

ಪದವಿಂಗಡಣೆ:
ಜಡಿವ +ಖಡ್ಗದ +ಕಿಡಿಯ +ಸೇನೆಯ
ತೊಡರುಗಳ +ಕೇಸುರಿಯ +ಬಲದ್
ಉಗ್ಗಡದ +ರಭಸದ +ರೌದ್ರ+ರವ+ ಛಟ+ ಛಟಿಗ +ನಿಸ್ವನದ
ಇಡಿದ+ ಧೂಳಿಯ +ಧೂಮರಾಶಿಯ
ಪಡೆ +ವಿರಾಟನ +ಸುತನ +ಕಂಗಳಿಗ್
ಒಡನೊಡನೆ +ದಾವಾಗ್ನಿಯಂತಿರೆ +ತೋರಿತ್+ಇದಿರಿನಲಿ

ಅಚ್ಚರಿ:
(೧) ಬೆಂಕಿಯ ಶಬ್ದವನ್ನು ಹೇಳುವ ಪರಿ – ಛಟ ಛಟಿಗ ನಿಸ್ವನದ