ಪದ್ಯ ೧೦: ಅಶ್ವತ್ಥಾಮನು ದುರ್ಯೋಧನನನ್ನು ಎಲ್ಲಿಗೆ ತೆರಳಲು ಹೇಳಿದನು?

ಹರಿಬ ಬಂದುದೆ ಪಾಂಡುಸುತರುಳಿ
ದಿರಲಿ ಸಾಕಂತಿರಲಿ ನಿಮ್ಮಡಿ
ಪುರಕೆ ಬಿಜಯಂಗೈಯ್ಯಿರೇ ಚೈತನ್ಯಗತಿಯೆಂತು
ಹರಣವುಳಿದಡೆ ಪಾಂಡುತನುಜರ
ಶಿರವ ಕೇವಣಿಸುವೆನಲೈ ಕೇ
ಸರಿಯ ಪೀಠದೊಳೆಂದನಶ್ವತ್ಥಾಮ ಕೈಮುಗಿದು (ಗದಾ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ನುಡಿಯುತ್ತಾ, ನಿಮ್ಮ ಕೆಲಸವು ಆಯಿತೇ? ಪಾಂಡವರು ಬದುಕಿ ಉಳಿದಿರಲಿ. ನೀವು ಹಸ್ತಿನಾಪುರಕ್ಕೆ ಬಿಜಯಂಗೈಸಿರಿ. ನಿಮ್ಮ ತ್ರಾಣ ಹೇಗಿದೆ? ಪಾಂಡವರ ಪ್ರಾಣವು ಉಳಿದಿರಬಹುದು. ನಾನು ಬದುಕಿದ್ದರೆ ಅವರ ತಲೆಗಳನ್ನು ಕಡಿದು ಸಿಂಹಾಸನಕ್ಕೆ ಹಾರವಾಗಿ ಪೋಣಿಸಿ ಕಟ್ಟುತ್ತೇನೆ ಎಂದನು.

ಅರ್ಥ:
ಹರಿಬ: ಕಾರ್ಯ, ಕೆಲಸ; ಬಂದು: ಆಗಮಿಸು; ಸುತ: ಮಕ್ಕಳು; ಉಳಿದಿರಲಿ: ಜೀವಿಸಲಿ; ಸಾಕು: ನಿಲ್ಲು; ನಿಮ್ಮಡಿ: ನಿಮ್ಮ ಪಾದ; ಪುರ: ಊರು; ಬಿಜಯಂಗೈ: ದಯಮಾಡಿಸಿ, ಹೊರಡಿ; ಚೈತನ್ಯ: ಜೀವದ ಲಕ್ಷಣ, ಜೀವಂತಿಕೆ; ಗತಿ: ವೇಗ; ಹರಣ: ಜೀವ, ಪ್ರಾಣ; ತನುಜ: ಮಕ್ಕಳು; ಶಿರ: ತಲೆ; ಕೇವಣಿ: ಕೀಲಿಸುವಿಕೆ; ಕೇಸರಿ: ಸಿಂಹ; ಪೀಠ: ಆಸನ; ಕೈಮುಗಿ: ನಮಸ್ಕರಿಸು;

ಪದವಿಂಗಡಣೆ:
ಹರಿಬ+ ಬಂದುದೆ +ಪಾಂಡುಸುತರ್+ಉಳಿ
ದಿರಲಿ +ಸಾಕಂತಿರಲಿ +ನಿಮ್ಮಡಿ
ಪುರಕೆ +ಬಿಜಯಂಗೈಯ್ಯಿರೇ +ಚೈತನ್ಯ+ಗತಿಯೆಂತು
ಹರಣವುಳಿದಡೆ+ ಪಾಂಡು+ತನುಜರ
ಶಿರವ +ಕೇವಣಿಸುವೆನಲೈ +ಕೇ
ಸರಿಯ ಪೀಠದೊಳ್+ಎಂದನ್+ಅಶ್ವತ್ಥಾಮ +ಕೈಮುಗಿದು

ಅಚ್ಚರಿ:
(೧) ಅಶ್ವತ್ಥಾಮನ ಧೀರ ನುಡಿ – ಪಾಂಡುತನುಜರ ಶಿರವ ಕೇವಣಿಸುವೆನಲೈ ಕೇಸರಿಯ ಪೀಠದೊಳೆಂದನಶ್ವತ್ಥಾಮ
(೨) ಸುತ, ತನುಜ – ಸಮಾನಾರ್ಥಕ ಪದ

ಪದ್ಯ ೬: ಯುಧಿಷ್ಠಿರನು ಯಾವ ಸಿಂಹಾಸನವನ್ನೇರಿದನು?

ಪರಮ ಸತ್ಯವ್ರತ ಮಹಾಕ್ರತು
ವರದಲವಭೃತ ಮಜ್ಜನವ ವಿ
ಸ್ತರಿಸಿ ಭೀಮಾದಿಗಳು ಸಹಿತ ವಿರಾಟನರಮನೆಗೆ
ಅರಸ ಬಂದನು ಮಣಿ ಖಚಿತ ಕೇ
ಸರಿಯ ಪೀಠವನಡರಿದನು ನಿಜ
ಚರಣ ಸೇವೆಯೊಳೆಸೆದರೊಡಹುಟ್ಟಿದರು ಪರುಠವಿಸಿ (ವಿರಾಟ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ಸತ್ಯವ್ರತವೆಂಬ ಮಹಾಯಾಗವನ್ನು ಮುಗಿಸಿ ಅವಬೃತಸ್ನಾನವನ್ನು ಮಾಡಿ ಯುಧಿಷ್ಠಿರನು ವಿರಾಟನ ಅರಮನೆಗೆ ಬಂದು ಸಿಂಹಾಸನವನ್ನೇರಿ ಕುಳಿತನು. ಅವನ ತಮ್ಮಂದಿರು ಅವನ ಪಾದ ಸೇವೆಯಲ್ಲಿ ತೊಡಗಿದ್ದನು.

ಅರ್ಥ:
ಪರಮ: ಶ್ರೇಷ್ಠ; ಮಹಾಕ್ರತು: ಮಹಾಯಾಗ; ಅವಭೃತ: ಯಾಗದ ಅನಂತರ ಮಾಡುವ ಮಂಗಳಸ್ನಾನ; ಮಜ್ಜನ: ಸ್ನಾನ; ವಿಸ್ತರಿಸು: ಹಬ್ಬು, ಹರಡು; ಆದಿ: ಮುಂತಾದ; ಸಹಿತ: ಜೊತೆ; ಅರಮನೆ: ಆಲಯ; ಅರಸ: ರಾಜ; ಬಂದನು: ಆಗಮನ; ಮಣಿ: ರತ್ನ; ಖಚಿತ: ಕೂಡಿಸಿದ, ಕುಂದಣಿಸಿದ; ಕೇಸರಿ: ಸಿಂಹ; ಪೀಥ: ಆಸನ; ಅಡರು: ಮೇಲಕ್ಕೆ ಹತ್ತು; ನಿಜ: ತನ್ನ, ದಿಟ; ಚರಣ: ಪಾದ; ಸೇವೆ: ಉಪಚಾರ; ಎಸೆದು: ತೋರು; ಒಡಹುಟ್ಟು: ಅಣ್ಣ ತಮ್ಮಂದಿರು; ಪರುಠವ: ವಿಸ್ತಾರ, ಹರಹು;

ಪದವಿಂಗಡಣೆ:
ಪರಮ +ಸತ್ಯವ್ರತ +ಮಹಾ+ಕ್ರತು
ವರದಲ್+ಅವಭೃತ +ಮಜ್ಜನವ+ ವಿ
ಸ್ತರಿಸಿ +ಭೀಮಾದಿಗಳು +ಸಹಿತ +ವಿರಾಟನ್+ಅರಮನೆಗೆ
ಅರಸ+ ಬಂದನು +ಮಣಿ +ಖಚಿತ +ಕೇ
ಸರಿಯ +ಪೀಠವನ್+ಅಡರಿದನು +ನಿಜ
ಚರಣ+ ಸೇವೆಯೊಳ್+ಎಸೆದರ್+ಒಡಹುಟ್ಟಿದರು +ಪರುಠವಿಸಿ

ಅಚ್ಚರಿ:
(೧) ಸಿಂಹಾಸನ ವನ್ನು ಕೇಸರಿಯ ಪೀಠ ಎಂದು ವರ್ಣಿಸಿರುವುದು

ಪದ್ಯ ೬೦: ದುರ್ಯೋಧನನು ತನ್ನ ಪಾದಕ್ಕೆ ಬಿದ್ದುದನ್ನು ನೋಡಿ ಕೃಷ್ಣನು ಏನು ಹೇಳಿದನು?

ಧರಣಿಪತಿ ಸಿಂಹಾಸನದ ಮೇ
ಲಿರದೆ ಬಹರೇ ನಾವು ಬಂದೇ
ಹರಸುವೆವು ತಪ್ಪಾವುದೆನುತೆತ್ತಿದನು ಮಸ್ತಕವ
ಸುರನದೀಸುತ ಕೈಗುಡಲು ಕೇ
ಸರಿಯ ಪೀಠಕೆ ದೇವ ಬಂದನು
ಕುರುಕುಲಾಗ್ರಣಿಗಳ ಸುಸನ್ಮಾನವನು ಕೈಕೊಳುತ (ಉದ್ಯೋಗ ಪರ್ವ, ೮ ಸಂಧಿ, ೬೦ ಪದ್ಯ)

ತಾತ್ಪರ್ಯ:
ಭೂಮಿಯನ್ನಾಳುವ ರಾಜನು ಸಿಂಹಾಸನದ ಮೇಲಿರದೆ ಹೀಗೆ ನನ್ನ ಕಾಲ ಬಳಿ ಎರಗುವುದು ಸರಿಯೇ, ಅಯ್ಯೋ ತಾಪ್ಪಾಯಿತಲ್ಲ, ನಾವೆ ನಿಮ್ಮ ಬಳಿ ಬಂದು ಆಶೀರ್ವದಿಸುತ್ತಿದ್ದೆವು ಎಂದು ಹೇಳುತ್ತಾ ದುರ್ಯೋಧನನ ತಲೆಯನ್ನು ಸವರಿಸುತ್ತಾ ಮೇಲೇಳಿಸಿದನು. ಭೀಷ್ಮರು ತಮ್ಮ ಹಸ್ತವನ್ನು ಚಾಚಿ ಕೃಷ್ಣನ ಆಸನವನ್ನು ತೋರಲು, ಕೃಷ್ಣನು ತನ್ನ ಸಿಂಹಾಸನಕ್ಕೆ ಬರಲು ಕುರುಕುಲದ ಶ್ರೇಷ್ಠರಿಂದ ಸನ್ಮಾನವನ್ನು ಸ್ವೀಕರಿಸಿದನು.

ಅರ್ಥ:
ಧರಣಿ: ಭೂಮಿ; ಧರಣಿಪತಿ: ರಾಜ; ಸಿಂಹಾಸನ: ರಾಜರು ಕುಳಿತುಕೊಳ್ಳುವ ಆಸನ; ಮೇಲೆ: ಅಗ್ರಭಾಗ; ಬಹರು: ಬರುವುದು; ಹರಸು: ಆಶೀರ್ವದಿಸು; ತಪ್ಪು: ಸರಿಯಾಗದ; ಎತ್ತು: ಮೇಲೇಳಿಸು; ಮಸ್ತಕ: ಶಿರ, ತಲೆ; ಸುರನದಿ: ಗಂಗೆ; ಸುತ: ಮಗ; ಸುರನದೀಸುತ: ಭೀಷ್ಮ; ಕೈ: ಹಸ್ತ; ಕೈಗುಡಲು: ಹಸ್ತವನ್ನು ನೀಡಲು; ಕೇಸರಿ: ಸಿಂಹ; ಪೀಠ: ಆಸನ; ದೇವ: ಭಗವಂತ; ಬಂದು: ಆಗಮಿಸು; ಅಗ್ರಣಿ: ಶ್ರೇಷ್ಠರು; ಕುಲ: ವಂಶ; ಸನ್ಮಾನ: ಗೌರವ; ಕೈಕೊಳುತ: ಸ್ವೀಕರಿಸು;

ಪದವಿಂಗಡಣೆ:
ಧರಣಿಪತಿ +ಸಿಂಹಾಸನದ+ ಮೇ
ಲಿರದೆ +ಬಹರೇ +ನಾವು +ಬಂದೇ
ಹರಸುವೆವು +ತಪ್ಪಾವುದ್+ಎನುತ್+ಎತ್ತಿದನು +ಮಸ್ತಕವ
ಸುರನದೀಸುತ +ಕೈಗುಡಲು +ಕೇ
ಸರಿಯ +ಪೀಠಕೆ +ದೇವ +ಬಂದನು
ಕುರುಕುಲ+ಅಗ್ರಣಿಗಳ+ ಸುಸನ್ಮಾನವನು +ಕೈಕೊಳುತ

ಅಚ್ಚರಿ:
(೧) ಸಿಂಹಾಸನ, ಕೇಸರಿಯ ಪೀಠ – ಸಮನಾರ್ಥಕ ಪದ