ಪದ್ಯ ೧೧: ಯಾವ ದೇಶದ ರಾಜರು ಯುದ್ಧಕ್ಕೆ ಬಂದಿದ್ದರು?

ಚೀನ ಭೋಟಿ ವರಾಳ ಕೇಶಿ ಸು
ದೀನ ಖುರಸಾಣಾದಿ ದೇಶದ
ಮಾನನಿಧಿಗಳು ಕವಿದು ಮುತ್ತಿತು ಕೈಯ ಕೋಲ್ಗಳಲಿ
ಏನನೆಂಬೆನು ಸಮರದಲಿ ರಾ
ಜಾನುಮಿತ ಮಂತ್ರಣವೆನಿಪ ಮುನಿ
ಪಾನುಮತವರಿದಾಯ್ತು ಸಾತ್ಯಕಿಗಾ ಮಹಾಕದನ (ದ್ರೋಣ ಪರ್ವ, ೧೧ ಸಂಧಿ, ೧೧ ಪದ್ಯ)

ತಾತ್ಪರ್ಯ:
ಚೀನ, ಭೋಟಕ, ವರಾಳ, ಕೇಶಿ, ಸುದೀನ, ಖುರಸಾಣದೇಶದ ಮಹಾವೀರರು ಆಯುಧಗಳನ್ನು ಹಿಡಿದು ಸಾತ್ಯಕಿಯನ್ನು ಸುತ್ತುವರೆದರು. ರಾಜನು ಆಲೋಚಿಸಿದುದುಏ ವೇದ ಮಾರ್ಗವೆಂಬ ಕರ್ತವ್ಯವನ್ನು ಮಾಡಲು ಸಾತ್ಯಕಿಗೆ ಕಷ್ಟವಾಯಿತು, ಯುದ್ಧವು ಉಗ್ರ ಸ್ವರೂಪ ಪಡೆಯಿತು.

ಅರ್ಥ:
ದೇಶ: ರಾಷ್ಟ್ರ; ಮಾನನಿಧಿ: ಶ್ರೇಷ್ಠ; ಕವಿ: ಆವರಿಸು; ಮುತ್ತು: ಸುತ್ತುವರಿ; ಕೈ: ಹಸ್ತ; ಕೋಲು: ಬಾಣ; ಸಮರ: ಯುದ್ಧ; ರಾಜ: ನೃಪ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಮುನಿ: ಋಷಿ; ಅರಿ: ತಿಳಿ; ಮಹಾ: ದೊಡ್ಡ; ಕದನ: ಯುದ್ಧ;

ಪದವಿಂಗಡಣೆ:
ಚೀನ +ಭೋಟಿ +ವರಾಳ+ ಕೇಶಿ+ ಸು
ದೀನ +ಖುರಸಾಣಾದಿ +ದೇಶದ
ಮಾನನಿಧಿಗಳು+ ಕವಿದು +ಮುತ್ತಿತು +ಕೈಯ +ಕೋಲ್ಗಳಲಿ
ಏನನೆಂಬೆನು +ಸಮರದಲಿ+ ರಾ
ಜಾನುಮಿತ +ಮಂತ್ರಣವೆನಿಪ +ಮುನಿ
ಪಾನುಮತವ್+ಅರಿದಾಯ್ತು +ಸಾತ್ಯಕಿಗಾ+ ಮಹಾಕದನ

ಅಚ್ಚರಿ:
(೧) ಸಮರ, ಕದನ – ಸಮಾನಾರ್ಥಕ ಪದ

ಪದ್ಯ ೫೭:ಕೃಷ್ಣನು ಬಾಲ್ಯದಲ್ಲೇ ಯಾವ ರಾಕ್ಷಸರನ್ನು ಸಂಹರಿಸಿದನು?

ಕೇಶಿ ಧೇನುಕ ವತ್ಸಲಂಬ ಬ
ಕಾಸುರನು ತೃಣವರ್ತನಘನೆಂ
ಬಾ ಸಮರ್ಥರ ಸೀಳಿ ಬಿಸುಟನು ಬಾಲಕೇಳಿಯಲಿ
ಗಸಿಯಾದುದು ದಂತಿ ಮಲ್ಲರ
ದೇಸುಘನ ಮಾವನನು ಮರ್ದಿಸಿ
ಮೀಸಲಳಿಯದ ದಿವಿಜಕನ್ನೆಯರೊಡನೆ ಜೋಡಿಸಿದ (ಸಭಾ ಪರ್ವ, ೧೦ ಸಂಧಿ, ೫೭ ಪದ್ಯ)

ತಾತ್ಪರ್ಯ:
ಕೇಶಿ, ಧೇನುಕ, ವತ್ಸ, ಪ್ರಲಂಬ, ಬಕಾಸುರ, ತೃಣಾಅರ್ತ, ಅಘ ಎನ್ನುವ ಅನೇಕ ರಾಕ್ಷಸರನ್ನು ಬಾಲಲೀಲೆಯಿಂದ ಸಂಹರಿಸಿದನು. ಇವನ ಮೇಲೆ ಬಂದ ಕುವಲಯಾಪೀಡವೆಂಬ ಆನೆಯು ಸತ್ತುಹೋಯಿತು. ಚಾಣೂರ ಮುಷ್ಟಿಕರೆಂಬ ಜಟ್ಟಿಗಳನ್ನು ಇವನು ನಿರಾಯಾಸವಾಗಿ ಸಂಹರಿಸಿದನು. ಇವನು ಮಾವನಾದ ಕಂಸನನ್ನು ಸಂಹರಿಸಿ ಸದಾ ಕನ್ಯೆಯರಾಗಿರುವ ಸ್ವರ್ಗದ ಅಪ್ಸರೆಯರಿಗೆ ಜೊತೆಮಾಡಿದ.

ಅರ್ಥ:
ಸಮರ್ಥ: ಬಲಶಾಲಿ, ಗಟ್ಟಿಗ; ಸೀಳು: ಮುರಿ; ಬಿಸುಟು: ಹೊರಹಾಕು; ಬಾಲ: ಬಾಲ್ಯ; ಕೇಳಿ: ಕ್ರೀಡೆ, ವಿನೋದ; ಗಾಸಿ:ತೊಂದರೆ, ಹಿಂಸೆ; ಮಲ್ಲ: ಜಟ್ಟಿ; ಘನ: ಶ್ರೇಷ್ಠ; ಮಾವ: ತಾಯಿಯ ತಮ್ಮ; ಮರ್ದಿಸು: ಕೊಲ್ಲು; ಮೀಸಲಳಿ: ಬಳಸು; ದಿವಿಜಕನ್ನೆ: ಅಪ್ಸರೆ; ಜೋಡಿ: ಜೊತೆಯಾಗು;

ಪದವಿಂಗಡಣೆ:
ಕೇಶಿ +ಧೇನುಕ +ವತ್ಸಲಂಬ +ಬ
ಕಾಸುರನು +ತೃಣವರ್ತನ್+ಅಘನೆಂಬ್
ಆ +ಸಮರ್ಥರ +ಸೀಳಿ +ಬಿಸುಟನು+ ಬಾಲಕೇಳಿಯಲಿ
ಗಸಿಯಾದುದು+ ದಂತಿ +ಮಲ್ಲರದ್
ಏಸು+ಘನ +ಮಾವನನು +ಮರ್ದಿಸಿ
ಮೀಸಲಳಿಯದ +ದಿವಿಜಕನ್ನೆಯರೊಡನೆ+ ಜೋಡಿಸಿದ

ಅಚ್ಚರಿ:
(೧) ಮ ಕಾರದ ಸಾಲು ಪದ – ಮಲ್ಲರದೇಸುಘನ ಮಾವನನು ಮರ್ದಿಸಿ ಮೀಸಲಳಿಯದ

ಪದ್ಯ ೫೫: ದ್ವಾಪರದಲ್ಲಿ ಕಾಲನೇಮಿ ಯಾವ ರೂಪದಲ್ಲಿ ಕಾಣಿಸಿಕೊಂಡಿದ್ದನು?

ಆ ಮಹಾಸುರ ಕಾಲನೇಮಿ ಸ
ನಾಮನೀ ಕಾಲದಲಿ ಯಾದವ
ಭೂಮಿಯಲಿ ಜನಿಸಿದನಲೇ ಕಂಸಾಭಿಧಾನದಲಿ
ಈ ಮರುಳು ಹವಣೇ ತದೀಯ
ಸ್ತೋಮ ಧೇನುಕ ಕೇಶಿ ವತ್ಸ ತೃ
ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ (ಸಭಾ ಪರ್ವ, ೧೦ ಸಂಧಿ, ೫೫ ಪದ್ಯ)

ತಾತ್ಪರ್ಯ:
ಆ ಮಹಾದೈತ್ಯನಾದ ಕಾಲನೇಮಿಯು ದ್ವಾಪರ ಯುಗದಲ್ಲಿ ಯಾದವರ ಸೀಮೆಯಲ್ಲಿ ಕಂಸನೆಂಬ ಹೆಸರಿನಿಂದ ಹುಟ್ಟಿದನು. ಅವನ ದುಷ್ಟ ಪರಿವಾರದಲ್ಲಿ ಧೇನುಕ, ಕೇಶಿ, ವತ್ಸ, ತೃಣಾವರ್ತ ಮೊದಲಾದ ಹಲವರಿದ್ದರು. ಈ ಮೂಢನಾದ ಶಿಶುಪಾಲನು ಅವರಿಗೆ ಯಾವವಿಧದಲ್ಲೂ ಸಮಾನನಲ್ಲ ಎಂದು ಭೀಷ್ಮರು ನುಡಿದರು.

ಅರ್ಥ:
ಮಹ: ಹಿರಿಯ, ದೊಡ್ಡ; ಅಸುರ: ದಾನವ; ಸನಾಮ: ಹೆಸರಿನಿಂದ ಪ್ರಸಿದ್ಧವಾದ; ಕಾಲ: ಸಮಯ; ಭೂಮಿ: ಧರಣಿ; ಜನಿಸು: ಹುಟ್ಟು; ಅಭಿಧಾನ: ಹೆಸರು; ಮರುಳು: ಮೂಢ; ಹವಣು: ಅಳತೆ, ಪ್ರಮಾಣ; ತದೀಯ: ಅದಕ್ಕೆ ಸಂಬಂಧಪಟ್ಟ; ಸ್ತೋಮ: ಗುಂಪು; ಹಲರು: ಬಹಳ, ಮುಂತಾದ; ಇಹರು: ಇರುವರು; ದುಷ್ಪರಿವಾರ: ಕೆಟ್ಟ ಪರಿಜನ;

ಪದವಿಂಗಡಣೆ:
ಆ +ಮಹಾಸುರ+ ಕಾಲನೇಮಿ +ಸ
ನಾಮನ್+ಈ+ ಕಾಲದಲಿ +ಯಾದವ
ಭೂಮಿಯಲಿ +ಜನಿಸಿದನಲೇ+ ಕಂಸಾಭಿಧಾನದಲಿ
ಈ+ ಮರುಳು +ಹವಣೇ +ತದೀಯ
ಸ್ತೋಮ +ಧೇನುಕ +ಕೇಶಿ +ವತ್ಸ +ತೃ
ಣಾಮಯರು +ಹಲರಿಹರು+ ದುಷ್ಪರಿವಾರ+ ಕಂಸನಲಿ

ಅಚ್ಚರಿ:
(೧) ಕಂಸನ ಪರಿವಾರದವರು – ಕಂಸ, ಧೇನುಕ, ಕೇಶಿ, ವತ್ಸ, ತೃಣಾವರ್ತ
(೨) ಸನಾಮ, ಅಭಿಧಾನ – ಸಾಮ್ಯಾರ್ಥ ಪದಗಳು