ಪದ್ಯ ೫೭: ಅಶ್ವತ್ಥಾಮನ ರಥವು ಹೇಗಿತ್ತು?

ನವರತುನ ಕೇವಣದ ರಥವತಿ
ಜವದ ತೇಜಿಯ ತೆಕ್ಕೆಗಳ ರೌ
ರವದ ರೌದ್ರಾಯುಧದ ಗಡಣದ ಹರಿಯ ಹಳವಿಗೆಯ
ಬವರ ಭೈರವನಾದನೀತನು
ಶಿವನ ನೊಸಲಂದದಲಿ ಮೆರೆವವ
ನಿವನು ಜಿತ ಸಂಗ್ರಾಮನಶ್ವತ್ಥಾಮ ನೋಡೆಂದ (ವಿರಾಟ ಪರ್ವ, ೭ ಸಂಧಿ, ೫೭ ಪದ್ಯ)

ತಾತ್ಪರ್ಯ:
ನವರತ್ನಗಳ ಕುಚ್ಚು ಕಟ್ಟಿದ ರಥ, ಸಿಂಹಧ್ವಜ, ಅತಿ ವೇಗವಾಗಿ ಓಡುವ ಕುದುರೆಗಳು, ಭಯಂಕರ ಆಯುಧಗಳನ್ನು ಹೊಂದಿದವನು, ಯುದ್ಧದಲ್ಲಿ ಯಾವಾಗಲೂ ಗೆಲ್ಲುವ, ಶಿವನ ಹಣೆಗಣ್ಣಿನಂತೆ ಭಯಂಕರನಾಗಿರುವವನಾದ ಅಶ್ವತ್ಥಾಮನನ್ನು ನೋಡು ಎಂದು ಉತ್ತರನಿಗೆ ತೋರಿಸಿದನು.

ಅರ್ಥ:
ನವ: ಒಂಬತ್ತು; ರತುನ: ರತ್ನ, ಬೆಲೆಬಾಳುವ ಮಣಿ; ಕೇವಣ: ಕೂಡಿಸುವುದು, ಕೆಚ್ಚುವುದು; ರಥ: ಬಂಡಿ; ಜವ: ವೇಗ; ತೇಜಿ: ಕುದುರೆ; ತೆಕ್ಕೆ: ಅಪ್ಪುಗೆ, ಆಲಿಂಗನ; ರೌರವ: ಭಯಂಕರವಾದ; ರೌದ್ರಾಯುಧ: ಭಯಂಕರವಾದ ಆಯುಧ; ಗಡಣ: ಗುಂಪು, ಸಮೂಹ; ಹರಿ: ಸಿಂಹ; ಹಳವಿಗೆ: ಬಾವುಟ; ಬವರ: ಕಾಳಗ, ಯುದ್ಧ; ಭೈರವ: ಶಿವನ ಒಂದು ಅವತಾರ; ಶಿವ: ಶಂಕರ; ನೊಸಲು: ಹಣೆ; ಅಂದ: ಚೆಲುವು; ಮೆರೆ: ಪ್ರಕಾಶಿಸು; ಜಿತ: ಗೆದ್ದದ್ದು; ಸಂಗ್ರಾಮ: ಯುದ್ಧ; ನೋಡು: ವೀಕ್ಷಿಸು;

ಪದವಿಂಗಡಣೆ:
ನವರತುನ+ ಕೇವಣದ +ರಥವ್+ಅತಿ
ಜವದ +ತೇಜಿಯ +ತೆಕ್ಕೆಗಳ+ ರೌ
ರವದ+ ರೌದ್ರಾಯುಧದ +ಗಡಣದ +ಹರಿಯ +ಹಳವಿಗೆಯ
ಬವರ+ ಭೈರವನಾದನ್+ಈತನು
ಶಿವನ +ನೊಸಲಂದದಲಿ+ ಮೆರೆವವನ್
ಇವನು +ಜಿತ +ಸಂಗ್ರಾಮನ್+ಅಶ್ವತ್ಥಾಮ +ನೋಡೆಂದ

ಅಚ್ಚರಿ:
(೧) ಉಪಮಾನ – ಬವರ ಭೈರವನಾದನೀತನು ಶಿವನ ನೊಸಲಂದದಲಿ ಮೆರೆವವನಿವನು

ಪದ್ಯ ೬೯: ಶಿವನು ಯಾವ ರೂಪದಲ್ಲಿ ದರುಶನವನ್ನು ನೀಡಿದನು?

ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯ
ಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ
ಹೊಳೆವ ಹರಿಣನಕ್ಷಮಾಲಾ
ವಲಯಾಭಯ ವರದಕರ ಪರಿ
ಕಲಿತನೆಸೆದನು ಶಂಭುಸದ್ಯೋಜಾತ ರೂಪಿನಲಿ (ಅರಣ್ಯ ಪರ್ವ, ೭ ಸಂಧಿ, ೬೯ ಪದ್ಯ)

ತಾತ್ಪರ್ಯ:
ಚೆನ್ನಾಗಿ ಬೆಳೆದ ಚಂದ್ರನ ಬೆಳುದಿಂಗಳಿನಂತೆ ಹೊಳೆಹೊಳೆಯುವ ಕಾಂತಿ, ವ್ಯಾಘ್ರಾಜಿನ, ಕೆಂಜೆಡೆಯಲ್ಲಿ ಸೇರಿಸಿದ ಚಂದ್ರ, ನಾಗರಾಜನನ್ನು ಭೂಷಣವಾಗಿ ತೋರುವ, ಕೈಯಲ್ಲಿ ಹಿಡಿದ ಜಿಂಕೆ, ಕೊರಳಲ್ಲಿ ಧರಿಸಿದ ಮಣಿಮಾಲೆ, ವರದ ಅಭಯ ಮುದ್ರೆಯನ್ನು ತೋರಿಸುವ ಕೈಗಳು, ಇವುಗಳಿಂದ ಶಿವನು ಸದ್ಯೋಜಾತ ರೂಪಿನಿಂದ ದರುಶನವನ್ನಿತ್ತನು.

ಅರ್ಥ:
ಬಲಿದ: ಚೆನ್ನಾಗಿ ಬೆಳೆದ; ಚಂದ್ರಿಕೆ: ಬೆಳದಿಂಗಳು; ಎರಕ: ಸುರಿ, ತುಂಬು; ತೊಳತೊಳಗು: ಹೊಳೆವ; ಬೆಳಗು: ಹೊಳಪು, ಕಾಂತಿ; ಕಾಯ: ದೇಹ; ಕಾಂತಿ: ಹೊಳಪು; ಪುಲಿ: ಹುಲಿ; ದೊಗಲು: ಚರ್ಮ; ಕೆಂಜಡೆ: ಕೆಂಪಾದ ಜಟೆ; ಕೇವಣ: ಕುಂದಣ, ಕೂಡಿಸುವುದು; ಫಣಿಪತಿ: ನಾಗರಾಜ; ಹೊಳೆ: ಪ್ರಕಾಶಿಸು; ಹರಿಣ: ಜಿಂಕೆ; ಅಕ್ಷಮಾಲ: ಜಪಮಾಲೆ; ವಲಯ: ಕಡಗ, ಬಳೆ; ಅಭಯ: ನಿರ್ಭಯತೆ; ವರ: ಶ್ರೇಷ್ಠ; ಕರ: ಹಸ್ತ; ಪರಿಕಲಿತ: ಕೂಡಿದುದು, ಸೇರಿದುದು; ಎಸೆ: ತೋರು; ಶಂಭು: ಶಂಕರ; ಸದ್ಯೋಜಾತ: ಶಿವನ ಪಂಚಮುಖಗಳಲ್ಲಿ ಒಂದು; ರೂಪ: ಆಕಾರ;

ಪದವಿಂಗಡಣೆ:
ಬಲಿದ +ಚಂದ್ರಿಕೆ+ಎರಕವೆನೆ +ತೊಳ
ತೊಳಗಿ +ಬೆಳಗುವ +ಕಾಯ+ಕಾಂತಿಯ
ಪುಲಿದೊಗಲ+ ಕೆಂಜಡೆಯ +ಕೇವಣರಿಂದು +ಫಣಿಪತಿಯ
ಹೊಳೆವ +ಹರಿಣನ್+ಅಕ್ಷಮಾಲಾ
ವಲಯ+ಅಭಯ +ವರದ+ಕರ +ಪರಿ
ಕಲಿತನ್+ಎಸೆದನು +ಶಂಭು+ಸದ್ಯೋಜಾತ +ರೂಪಿನಲಿ

ಅಚ್ಚರಿ:
(೧) ಶಿವನ ರೂಪವನ್ನು ವರ್ಣಿಸುವ ಪರಿ – ಬಲಿದ ಚಂದ್ರಿಕೆಯೆರಕವೆನೆ ತೊಳ
ತೊಳಗಿ ಬೆಳಗುವ ಕಾಯಕಾಂತಿಯಪುಲಿದೊಗಲ ಕೆಂಜಡೆಯ ಕೇವಣರಿಂದು ಫಣಿಪತಿಯ

ಪದ್ಯ ೯೯: ಪಯಣವು ಹೇಗೆ ಸಾಗಿತ್ತು?

ಮುಂದೆ ಮೋಹರ ತೆಗೆದು ನಡೆದುದು
ಸಂದಣಿಸಿ ನಕುಲಾದಿ ಭೂಪರು
ಹಿಂದೆ ಮಣಿಕೇವಣದ ದಡ್ಡಿಯ ಬಿಗಿದ ಬೀಯಗದ
ಗೊಂದಣದ ಹೆಮ್ಮಕ್ಕಳಿದ್ದೆಸೆ
ಯಂದಣದ ಸಂದಣಿಗಳಲಿ ನಡೆ
ತಂದವನಿಬರ ರಾಣಿವಾಸದ ದಂಡಿಗೆಗಳಂದು (ಸಭಾ ಪರ್ವ, ೧೩ ಸಂಧಿ, ೯೯ ಪದ್ಯ)

ತಾತ್ಪರ್ಯ:
ಪಯಣದ ಮುಂದಿನ ಸಾಲಿನಲ್ಲಿ ನಕುಲನೇ ಮೊದಲಾದವರ ಸೈನ್ಯಗಳು ನಡೆದವು. ಪಾಂಡವರ ಮಕ್ಕಳು ಮುಂದೆ ಹೋಗುತ್ತಿದ್ದರು. ಹಿಂಭಾಗದಲ್ಲಿ ರಾಣಿವಾಸದವರ ಪಲ್ಲಕ್ಕಿಗಳು ಎರಡು ಸಾಲಿನಲ್ಲಿ ಬರುತ್ತಿದ್ದವು. ರಾಣಿವಾಸದವರ ಪಲ್ಲಕ್ಕಿಗಳು ಮಣಿ ಖಚಿತವಾಗಿದ್ದು ಅವುಗಳ ಬಾಗಿಲುಗಳನ್ನು ಬೀಗದಿಂದ ಭದ್ರಪಡಿಸಿದ್ದರು.

ಅರ್ಥ:
ಮುಂದೆ: ಮೊದಲು; ಮೋಹರ: ಸೈನ್ಯ, ದಂಡು; ತೆಗೆದು: ಹೊರತಂದು; ನಡೆ: ಚಲಿಸು; ಸಂದಣಿ: ಗುಂಪು, ಸಮೂಹ; ಭೂಪ: ರಾಜ; ಹಿಂದೆ: ಹಿಂಭಾಗದಲ್ಲಿ; ಮಣಿ: ಬೆಲಬಾಳುವ ರತ್ನ; ಕೇವಣ: ತಳ್ಳುವುದು, ನೂಕುವುದು; ಗೊಂದಣ: ಗುಂಪು, ಹಿಂಡು; ಹೆಮ್ಮಕ್ಕಳು: ಹಿರಿಯ ಮಕ್ಕಳು; ಅಂದಣ: ಸುಂದರ; ಸಂದಣಿ: ಗುಂಪು, ಸಮೂಹ; ಅನಿಬರು: ಅಷ್ಟುಜನ; ರಾಣಿ: ಅರಸಿ; ದಂಡಿಗೆ: ಪಲ್ಲಕ್ಕಿ;

ಪದವಿಂಗಡಣೆ:
ಮುಂದೆ +ಮೋಹರ +ತೆಗೆದು +ನಡೆದುದು
ಸಂದಣಿಸಿ +ನಕುಲಾದಿ +ಭೂಪರು
ಹಿಂದೆ +ಮಣಿಕೇವಣದ+ ದಡ್ಡಿಯ +ಬಿಗಿದ +ಬೀಯಗದ
ಗೊಂದಣದ +ಹೆಮ್ಮಕ್ಕಳ್+ಇದ್ದೆಸೆ
ಅಂದಣದ +ಸಂದಣಿಗಳಲಿ+ ನಡೆ
ತಂದವ್+ಅನಿಬರ+ ರಾಣಿವಾಸದ+ ದಂಡಿಗೆಗಳ್+ಅಂದು

ಅಚ್ಚರಿ:
(೧) ಣ ಕಾರದಿಂದ ಕೊನೆಗೊಳ್ಳುವ ಪದಗಳ ಬಳಕೆ – ಗೊಂದಣ, ಅಂದಣ, ಸಂದಣಿ, ಕೇವಣ, ಮಣಿ, ರಾಣಿ