ಪದ್ಯ ೧೪: ಸಂಜಯನು ಯಾರ ನಡಿಗೆಯನ್ನು ನೋಡಿದನು – ೭?

ಕಡಿದ ಕೈದುಗಳೊಟ್ಟಿಲಲಿ ತನಿ
ಗೆಡೆದ ಗಾಲಿಯ ಹಾಯ್ಕಿ ಮೆಲ್ಲಡಿ
ಯಿಡುತ ಹಜ್ಜೆಯ ನೆಣದ ಕೆಸರಿಗೆ ಛತ್ರಚಮರಿಗಳ
ಅಡಸಿ ಹಜ್ಜೆಯನಿಡುತ ರಕುತದ
ಮಡುವನೆಡಬಲಕಿಕ್ಕಿ ಮೆಲ್ಲನೆ
ನಡೆದು ದೈವವ ಬಯ್ದು ಬಯ್ದಡಿಗಡಿಗೆ ಸುಯ್ವವನ (ಗದಾ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಮುರಿದು ಬಿದ್ದ ಆಯುಧಗಳ ರಾಶಿಯಲ್ಲಿ ಗಾಲಿಯನ್ನು ಹಾಕಿ ಅದರ ಮೇಲೆ ಕಾಲಿಡುತ್ತಾ, ಎರಡು ಹೆಜ್ಜೆ ದೂರದಲ್ಲಿ ಕೆಸರಿರಲು ಅಲ್ಲಿ ಛತ್ರ ಚಾಮರಗಳನ್ನು ಹಾಕಿ ಕಾಲಿಡುತ್ತಾ, ರಕ್ತದ ಮಡುಗಳನ್ನು ಎಡಕ್ಕೆ ಬಲಕ್ಕೆ ಬಿಟ್ಟು ಮೆಲ್ಲನೆ ನಡೆಯುತ್ತಾ, ಹೆಜ್ಜೆ ಹೆಜ್ಜೆಗೂ ದೈವ ವಿಧಿಯನ್ನು ಬಯ್ಯುತ್ತಾ ನಿಟ್ಟುಸಿರು ಬಿಡುವವನನ್ನು ಸಂಜಯನು ನೋಡಿದನು.

ಅರ್ಥ:
ಕಡಿ: ಸೀಳು; ಕೈದು: ಆಯುಧ; ತನಿ: ಹೆಚ್ಚಾಗು, ಅತಿಶಯವಾಗು; ಕೆಡೆ: ಬೀಳು, ಕುಸಿ; ಗಾಲಿ: ಚಕ್ರ; ಹಾಯ್ಕು: ಹೊಡೆ; ಮೆಲ್ಲಡಿ: ಮೃದುವಾದ ಪಾದ, ಕೋಮಲವಾದ ಅಡಿ; ಹಜ್ಜೆ: ಪಾದ; ನೆಣ: ಕೊಬ್ಬು, ಮೇದಸ್ಸು; ಕೆಸರು: ರಾಡಿ, ಪಂಕ; ಛತ್ರ: ಕೊಡೆ; ಚಮರಿ: ಚಾಮರ; ಅಡಸು: ಬಿಗಿಯಾಗಿ ಒತ್ತು; ರಕುತ: ನೆತ್ತರು; ಮಡು: ಕೊಳ, ಸರೋವರ; ಎಡಬಲ: ಅಕ್ಕಪಕ್ಕ; ಮೆಲ್ಲನೆ: ನಿಧಾನ; ದೈವ: ಭಗವಂತ; ಬಯ್ದು: ಜರೆ; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೆ; ಸುಯ್: ನಿಟ್ಟುಸಿರು;

ಪದವಿಂಗಡಣೆ:
ಕಡಿದ +ಕೈದುಗಳ್+ಒಟ್ಟಿಲಲಿ +ತನಿ
ಕೆಡೆದ +ಗಾಲಿಯ +ಹಾಯ್ಕಿ +ಮೆಲ್ಲಡಿ
ಯಿಡುತ +ಹಜ್ಜೆಯ +ನೆಣದ +ಕೆಸರಿಗೆ+ ಛತ್ರ+ಚಮರಿಗಳ
ಅಡಸಿ +ಹಜ್ಜೆಯನಿಡುತ +ರಕುತದ
ಮಡುವನ್+ಎಡಬಲಕಿಕ್ಕಿ +ಮೆಲ್ಲನೆ
ನಡೆದು +ದೈವವ +ಬಯ್ದು +ಬಯ್ದ್+ಅಡಿಗಡಿಗೆ+ ಸುಯ್ವವನ

ಅಚ್ಚರಿ:
(೧) ಎಡಬಲ, ಅಡಿಗಡಿ, ಅಡಿಯಿಡು – ಪದಗಳ ಬಳಕೆ