ಪದ್ಯ ೧೫: ಭೀಮನು ದ್ರೋಣರಿಗೇಕೆ ದಾರಿ ಬಿಡಿ ಎಂದನು?

ತರಳರರ್ಜುನ ಸಾತ್ಯಕಿಗಳವ
ದಿರಿಗೆ ಪಂಥವದೇಕೆ ನಿಮ್ಮನು
ಗರುಡಿಯಲಿ ವಂದಿಸುವ ವಂದನೆಯುಂಟೆ ಸಮರದಲಿ
ಮರುಳಲಾ ಮರುಮಾತು ಕಡುವೃ
ದ್ಧರಿಗದೇಕೆಂಬಂತೆ ಚಿತ್ತದ
ಹುರುಳ ಬಲ್ಲೆನು ಪಥವ ಬಿಡಿ ಕೆಲಸಾರಿ ಸಾಕೆಂದ (ದ್ರೋಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಎಲೈ ದ್ರೋಣನೇ, ಅರ್ಜುನ, ಸಾತ್ಯಕಿಯರು ಇನ್ನೂ ಬಾಲಕರು, ಅವರಿಗೆಂತಹ ಹುರುಡು, ಪಂಥ? ನನ್ನಲ್ಲದು ನಡೆಯದು, ಗರುಡಿಯಲ್ಲಿ ನೀವು ನಮಗೆ ಆಚಾರ್ಯರು ಅಲ್ಲಿ ನಮಸ್ಕರಿಸುತ್ತೇನೆ, ಯುದ್ಧಭೂಮಿಯಲ್ಲಿ ಎಂತಹ ನಮಸ್ಕಾರ? ನೀವು ಬಹಳ ವೃದ್ಧರು, ನಿಮಗೆದುರಾಡಬಾರದು, ನಿಮ್ಮ ಸತ್ವ ನನಗೆ ಗೊತ್ತು, ಸುಮ್ಮನೆ ಪಕ್ಕಕ್ಕೆ ಸರಿಯಿರಿ ಎಂದು ಭೀಮನು ದ್ರೋಣರಿಗೆ ಹೇಳಿದನು.

ಅರ್ಥ:
ತರಳ: ಬಾಲಕ; ಅವದಿರು: ಅಷ್ಟುಜನ; ಪಂಥವ: ಹಟ, ಛಲ, ಸ್ಪರ್ಧೆ; ಗರುಡಿ: ವ್ಯಾಯಾಮ ಶಾಲೆ; ವಂದಿಸು: ನಮಸ್ಕರಿಸು; ವಂದನೆ: ನಮಸ್ಕಾರ; ಸಮರ: ಯುದ್ಧ; ಮರುಳು: ಮೂಢ; ಮರುಮಾತು: ಎದುರುತ್ತರ; ವೃದ್ಧ: ಮುದುಕ; ಚಿತ್ತ: ಮನಸ್ಸು; ಹುರುಳು: ಸತ್ತ್ವ, ಸಾರ; ಬಲ್ಲೆ: ತಿಳಿ; ಪಥ: ದಾರಿ; ಬಿಡು: ತೊರೆ; ಕೆಲಸಾರು: ಪಕ್ಕಕ್ಕೆ ಹೋಗು;

ಪದವಿಂಗಡಣೆ:
ತರಳರ್+ಅರ್ಜುನ +ಸಾತ್ಯಕಿಗಳ್+ಅವ
ದಿರಿಗೆ +ಪಂಥವದೇಕೆ +ನಿಮ್ಮನು
ಗರುಡಿಯಲಿ +ವಂದಿಸುವ +ವಂದನೆ+ಯುಂಟೆ +ಸಮರದಲಿ
ಮರುಳಲಾ+ ಮರುಮಾತು +ಕಡು+ವೃ
ದ್ಧರಿಗ್+ಅದೇಕೆಂಬಂತೆ+ ಚಿತ್ತದ
ಹುರುಳ +ಬಲ್ಲೆನು +ಪಥವ+ ಬಿಡಿ +ಕೆಲಸಾರಿ +ಸಾಕೆಂದ

ಅಚ್ಚರಿ:
(೧) ಭೀಮನ ಬಿರುಸು ನುಡಿ – ವಂದನೆಯುಂಟೆ ಸಮರದಲಿ