ಪದ್ಯ ೪೯: ಕರ್ಣನನ್ನು ಹೇಗೆ ಹೊಗಳಿದರು?

ಬರಿಯ ಕಕ್ಕುಲಿತೆಯಲಿ ಕರ್ಣನ
ಮರೆಯ ಹೊಕ್ಕೆವು ಕರ್ಣನೀತನ
ತರುಬಿದನಲಾ ಶಕ್ತಿಯಾವೆಡೆಯೆಂದು ಕೆಲಕೆಲರು
ಕರುಬುತನವೇಕಕಟ ಪುಣ್ಯದ
ಕೊರೆತೆ ನಮ್ಮದು ಕರ್ಣನೇಗುವ
ನಿರಿತಕಂಜಿದ ನಾವೆ ಬಾಹಿರರೆಂದರುಳಿದವರು (ದ್ರೋಣ ಪರ್ವ, ೧೬ ಸಂಧಿ, ೪೯ ಪದ್ಯ)

ತಾತ್ಪರ್ಯ:
ಕೌರವ ಯೋಧರು, ಬರಿಯ ಕಕುಲಾತಿಯಿಂದ ಕರ್ಣನ ಮರೆಹೊಕ್ಕೆವು, ಕರ್ಣನು ಇವನನ್ನು ತಡೆದು ನಿಲ್ಲಿಸಿದ. ಆದರೆ ಅವನ ಬಳಿಯಿರುವ ಶಕ್ತ್ಯಾಯುಧವೆಲ್ಲಿ ಎಂದು ಕೆಲವರು, ಮತ್ಸರವೇಕೆ ನಮ್ಮ ಪುಣ್ಯಹೀನವಾದರೆ ಕರ್ಣನೇನು ಮಾಡಲು ಸಾಧ್ಯ? ಘಟೋತ್ಕಚನ ಇರಿತಕ್ಕೆ ಹೆದರಿದ ನಾವೇ ಬಾರಿರರು ಎಂದು ಇನ್ನು ಕೆಲವರು ಮಾತನಾಡಿಕೊಂಡರು.

ಅರ್ಥ:
ಕಕ್ಕುಲಿತೆ: ಚಿಂತೆ; ಮರೆ: ಅಡ್ಡಿ, ತಡೆ; ಹೊಕ್ಕು: ಸೇರು; ತರುಬು: ತಡೆ, ನಿಲ್ಲಿಸು; ಶಕ್ತಿ: ಬಲ; ಕರುಬು: ಹೊಟ್ಟೆಕಿಚ್ಚು ಪಡು; ಅಕಟ: ಅಯ್ಯೋ; ಪುಣ್ಯ: ಸದಾಚಾರ; ಕೊರತೆ: ಕಡಮೆ; ಏಗು: ಸಾಗಿಸು; ಇರಿ: ಚುಚ್ಚು; ಅಂಜು: ಹೆದರು; ಬಾಹಿರ: ಹೊರಗೆ; ಉಳಿದ: ಮಿಕ್ಕ;

ಪದವಿಂಗಡಣೆ:
ಬರಿಯ +ಕಕ್ಕುಲಿತೆಯಲಿ +ಕರ್ಣನ
ಮರೆಯ +ಹೊಕ್ಕೆವು +ಕರ್ಣನ್+ಈತನ
ತರುಬಿದನಲಾ+ ಶಕ್ತಿಯಾವೆಡೆ+ಎಂದು+ ಕೆಲಕೆಲರು
ಕರುಬುತನವೇಕ್+ಅಕಟ +ಪುಣ್ಯದ
ಕೊರೆತೆ +ನಮ್ಮದು +ಕರ್ಣನೇಗುವನ್
ಇರಿತಕ್+ಅಂಜಿದ +ನಾವೆ +ಬಾಹಿರರ್+ಎಂದರ್+ಉಳಿದವರು

ಅಚ್ಚರಿ:
(೧) ಪುಣ್ಯದ ಮಹಿಮೆ – ಕರುಬುತನವೇಕಕಟ ಪುಣ್ಯದ ಕೊರೆತೆ ನಮ್ಮದು

ಪದ್ಯ ೧೦೪: ಜನರು ಯಾವ ರೀತಿ ಮಾತನಾಡುತ್ತಿದ್ದರು?

ಈಕೆಗೋಸುಗವಳಿದನಕಟವಿ
ವೇಕಿ ಕೀಚಕನೆಂದು ಕೆಲಬರಿ
ದೇಕೆ ನಮಗೀ ಚಿಂತೆ ಶಿವ ಶಿವಯೆಂದು ಕೆಲಕೆಲರು
ನೂಕಿ ಕವಿದುದು ಮಂದಿ ಮಧ್ಯದೊ
ಳೀಕೆ ಮೆಲ್ಲನೆ ಬರುತಲಾ ಲೋ
ಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ (ವಿರಾಟ ಪರ್ವ, ೩ ಸಂಧಿ, ೧೦೪ ಪದ್ಯ)

ತಾತ್ಪರ್ಯ:
ಅವಿವೇಕಿಯಾದ ಕೀಚಕನು ಇವಳಿಗಾಗಿ ಸತ್ತ ಎಂದು ಕೆಲವರೆಂದರು. ನಮಗೇಕಿದ್ದೀತು ಇದರ ಚಿಂತೆ ಶಿವ ಶಿವಾ ಎಂದು ಕೆಲವರೆಂದರು. ಕುತೂಹಲದಿಂದ ಜನರು ಬೀದಿಯ ಇಕ್ಕೆಲದಲ್ಲೂ ನಿಂತು ನೋಡುತ್ತಿರಲು ದ್ರೌಪದಿಯು ನಿಧಾನವಾಗಿ ನಡೆಯುತ್ತಾ ಬಂದು ಬಾಣಸಿನ ಮನೆಯ ಬಾಗಿಲಲ್ಲಿ ಲೋಕೈಕವೀರನಾದ ಭೀಮನನ್ನು ನೋಡಿದಳು.

ಅರ್ಥ:
ಅಳಿ: ನಾಶ, ಸಾವು; ಅಕಟ: ಅಯ್ಯೋ; ಅವಿವೇಕಿ: ವಿವೇಚನೆ ಇಲ್ಲದೆ; ಕೆಲಬರು: ಸ್ವಲ್ಪ ಜನ; ಚಿಂತೆ: ಕಳವಳ, ಯೋಚನೆ; ನೂಕು: ತಳ್ಳು; ಕವಿದು: ಆವರಿಸು; ಮಂದಿ: ಜನ; ಮಧ್ಯ: ನಡುವೆ; ಮೆಲ್ಲನೆ: ನಿಧಾನ; ಬರುತ: ಆಗಮನ; ಲೋಕ: ಜಗತ್ತು; ವೀರ: ಶೂರ; ಬಾಣಸಿಗ: ಅಡುಗೆ; ಬಾಗಿಲು: ಕದನ;

ಪದವಿಂಗಡಣೆ:
ಈಕೆಗೋಸುಗವ್+ಅಳಿದನ್+ಅಕಟ+ಅವಿ
ವೇಕಿ +ಕೀಚಕನೆಂದು+ ಕೆಲಬರ್
ಇದೇಕೆ +ನಮಗೀ +ಚಿಂತೆ +ಶಿವ +ಶಿವಯೆಂದು +ಕೆಲಕೆಲರು
ನೂಕಿ +ಕವಿದುದು +ಮಂದಿ +ಮಧ್ಯದೊಳ್
ಈಕೆ +ಮೆಲ್ಲನೆ +ಬರುತಲಾ +ಲೋ
ಕೈಕ +ವೀರನ +ಕಂಡಳಾ +ಬಾಣಸಿನ +ಬಾಗಿಲಲಿ

ಅಚ್ಚರಿ:
(೧) ಭೀಮನನ್ನು ಹೊಗಳುವ ಪರಿ – ಲೋಕೈಕ ವೀರನ ಕಂಡಳಾ ಬಾಣಸಿನ ಬಾಗಿಲಲಿ

ಪದ್ಯ ೮೦: ರಾಜರ ಗುಂಪು ಶಿಶುಪಾಲನ ಸಾವಿಗೆ ಹೇಗೆ ಪ್ರತಿಕ್ರಯಿಸಿತು?

ಈಸು ಹಿರಿದೆಲ್ಲೆಂದು ಕೆಲಬರು
ಲೇಸ ಮಾಡಿದನಸುರ ರಿಪುವಿನ
ನೀಸು ಬಾಹಿರನೆಂದರಿಯೆವಾವೆಂದು ಕೆಲಕೆಲರು
ಐಸಲೇ ಕೃಷ್ಣಂಗೆ ಮುನಿದವ
ರೇಸು ದಿನ ಬದುಕುವರು ಲೇಸಾ
ಯ್ತೀ ಸುನೀತಂಗೆಂದು ನಗುತಿರ್ದುದು ನೃಪಸ್ತೋಮ (ಸಭಾ ಪರ್ವ, ೧೧ ಸಂಧಿ, ೮೦ ಪದ್ಯ)

ತಾತ್ಪರ್ಯ:
ಅಲ್ಲಿದ್ದ ರಾಜರಲ್ಲಿ ಕೆಲವರು ಇದೇನೂ ಹೆಚ್ಚಲ್ಲ ಎಂದು ನುಡಿದರೆ, ಇನ್ನೂ ಕೆಲವರು ಶಿಶುಪಾಲನಿಗೆ ಶ್ರೀಕೃಷ್ಣನು ತಕ್ಕ ಶಾಸ್ತಿಯನ್ನೇ ಮಾಡಿದನು ಎಂದು ಅಭಿಪ್ರಾಯಪಟ್ಟರು. ಶಿಶುಪಾಲನು ಇಷ್ಟು ಸನ್ಮಾರ್ಗಬಾಹಿರನೆಂದು ನಮಗೆ ತಿಳಿದಿರಲಿಲ್ಲ ಎಂದು ಕೆಲವರು ಮಾತಾಡಿದರು, ಇನ್ನೂ ಕೆಲವರು ಕೃಷ್ಣನ ಮೇಲೆ ದ್ವೇಷ ಕಟ್ಟಿಕೊಂಡವರು ಎಷ್ಟು ದಿನ ಬದುಕಲು ಸಾಧ್ಯ, ಶಿಶುಪಾಲನಿಗೆ ಸರಿಯಾದುದಾಯಿತು ಎಂದು ನಗುತ್ತಿದ್ದರು.

ಅರ್ಥ:
ಈಸು: ಇಷ್ಟು; ಹಿರಿ: ಹೆಚ್ಚು, ದೊಡ್ಡದು; ಕೆಲಬರು: ಸ್ವಲ್ಪ ಮಂದಿ; ಲೇಸು: ಒಳಿತು; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಬಾಹಿರ: ಹೊರಗಿನವ, ಹೀನಮನುಷ್ಯ; ಅರಿ: ತಿಳಿ; ಐಸಲೇ: ಅಲ್ಲವೇ; ಮುನಿ: ಕೋಪ; ಏಸು: ಎಷ್ಟು; ದಿನ: ದಿವಸ, ವಾರ; ಬದುಕು: ಜೀವಿಸು; ಸುನೀತ: ಶಿಶುಪಾಲ; ನಗು: ಸಂತಸ; ನೃಪ: ರಾಜ; ಸ್ತೋಮ: ಗುಂಪು;

ಪದವಿಂಗಡಣೆ:
ಈಸು +ಹಿರಿದೆಲ್ಲೆಂದು +ಕೆಲಬರು
ಲೇಸ +ಮಾಡಿದನ್+ಅಸುರರಿಪುವ್+ಇನನ್
ಈಸು +ಬಾಹಿರನೆಂದ್+ಅರಿಯೆವಾವೆಂದು+ ಕೆಲಕೆಲರು
ಐಸಲೇ +ಕೃಷ್ಣಂಗೆ +ಮುನಿದವರ್
ಏಸು +ದಿನ +ಬದುಕುವರು +ಲೇಸಾ
ಯ್ತೀ +ಸುನೀತಂಗೆಂದು +ನಗುತಿರ್ದುದು +ನೃಪಸ್ತೋಮ

ಅಚ್ಚರಿ:
(೧) ಈಸು, ಏಸು – ಪ್ರಾಸ ಪದಗಳು
(೨) ಕೆಲಕೆಲರು, ಕೆಲಬರು – ಪದಗಳ ಬಳಕೆ