ಪದ್ಯ ೨೬: ಯಾರು ಯಾರರ ಮೇಲೆ ಯುದ್ಧವನ್ನು ಮಾಡಿದರು?

ಸೆಣಸು ಮಿಗಲಭಿಮನ್ಯು ಭೀಷ್ಮನ
ಕೆಣಕಿದನು ದುಶ್ಯಾಸನನು ಫಲು
ಗುಣನ ತರುಬಿದನಾ ಘಟೋತ್ಕಚನೊಡನೆ ಭಗದತ್ತ
ಕಣೆಗೆದರಿ ಸಹದೇವ ನಾರಾ
ಯಣಬಲವ ಬೆರಸಿದನು ಮತ್ಸ್ಯನ
ಹೊಣಕೆಯಿಂದ ಸುಧರ್ಮ ತಾಗಿದನರಸ ಕೇಳೆಂದ (ಭೀಷ್ಮ ಪರ್ವ, ೮ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಭೀಷ್ಮನೊಡನೆ ದುಶ್ಯಾಸನನು ಅರ್ಜುನನೊಡನೆ, ಘಟೋತ್ಕಚನು ಭಗದತ್ತನೊಡನೆ, ಯಾದವ ಬಲದೊಡನೆ ಸಹದೇವ, ವಿರಾಟನೊಡನೆ ಸುಶರ್ಮರು ಯುದ್ಧವನ್ನು ಮಾಡಿದರು.

ಅರ್ಥ:
ಸೆಣಸು: ಹೋರಾಡು; ಮಿಗಲು: ಹೆಚ್ಚು; ಕೆಣಕು: ರೇಗಿಸು, ಪ್ರಚೋದಿಸು; ತರುಬು: ತಡೆ, ನಿಲ್ಲಿಸು; ಕಣೆ: ಬಾಣ; ಕೆದರು: ಹರಡು; ಬಲ: ಶಕ್ತಿ; ನಾರಾಯಣಬಲ: ಯಾದವರ ಬಲದೊಡನೆ; ಬೆರಸು: ಜೋಡಿಸು; ಹೋಣಕೆ: ಯುದ್ಧ, ಕಾಳಗ; ತಾಗು: ಎದುರಿಸು; ಅರಸ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಸೆಣಸು +ಮಿಗಲ್+ಅಭಿಮನ್ಯು +ಭೀಷ್ಮನ
ಕೆಣಕಿದನು +ದುಶ್ಯಾಸನನು +ಫಲು
ಗುಣನ +ತರುಬಿದನಾ+ ಘಟೋತ್ಕಚನೊಡನೆ +ಭಗದತ್ತ
ಕಣೆಗೆದರಿ +ಸಹದೇವ+ ನಾರಾ
ಯಣ+ಬಲವ +ಬೆರಸಿದನು +ಮತ್ಸ್ಯನ
ಹೊಣಕೆಯಿಂದ +ಸುಶರ್ಮ +ತಾಗಿದನ್+ಅರಸ +ಕೇಳೆಂದ

ಅಚ್ಚರಿ:
(೧) ಹೋರಾಟವನ್ನು ವಿವರಿಸಲು ಬಳಸಿದ ಪದಗಳು – ಸೆಣಸು, ಕೆಣಕು, ತರುಬು, ಬೆರಸು

ಪದ್ಯ ೩೩: ಶಲ್ಯನು ದುರ್ಯೋಧನನನ್ನು ದುರಾತ್ಮವೆಂದುದೇಕೆ?

ಒಣಗುತಿದೆ ಕುರುವಂಶಲತೆ ಫಲು
ಗುಣನ ಕೋಪಾನಳನ ನಾಲಗೆ
ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ
ಅಣಕಿಸದೆ ಕಾರುಣ್ಯ ವರ್ಷವ
ನೊಣಗಲಲಿ ಸುರಿ ಪಾಪಿ ಮಕ್ಕಳ
ಹೆಣನ ಕಾಣುವ ದುಃಖವಿಲ್ಲ ದುರಾತ್ಮ ನೀನೆಂದ (ಕರ್ಣ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಅಯ್ಯೋ ದುರ್ಯೋಧನ ನೀನು ಬಹಳ ಪಾಪಿಷ್ಟ. ಅರ್ಜುನನ ಕೋಪದ ಜ್ವಾಲೆಗೆ ತುತ್ತಾಗೆ ಕುರುವಂಶದ ಲತೆಯು ಒಣಗುತ್ತಿದೆ, ಲೋಭವು ಆವರಿಸುವುದಾದರೆ ಕಾಪಾಡುವವರು ಯಾರೂ ಇಲ್ಲ. ಅಪಹಾಸ್ಯ ಮಾಡದೆ ಒಣಗಿದ ನೆಲಕ್ಕೆ ಮಳೆಯನ್ನು ಕರೆ. ನಿನ್ನ ಮಕ್ಕಳ ಸಾವನ್ನು ಕಂಡೂ ದುಃಖ ಪಡದ, ಕೋಪಗೊಳ್ಳದವ ನೀನು ನಿಶ್ಚಯವಾಗಿಯೂ ಪಾಪಿ.

ಅರ್ಥ:
ಒಣಗು: ಸಾರವಿಲ್ಲದ; ವಂಶ: ಕುಲ; ಫಲುಗುಣ: ಅರ್ಜುನ; ಕೋಪ: ಕ್ರೋಧ; ಅನಲ: ಅಗ್ನಿ, ಬೆಂಕಿ; ನಾಲಗೆ: ಜಿಹ್ವೆ; ಕೆಣಕು: ರೇಗಿಸು, ಪ್ರಚೋದಿಸು; ಕಕ್ಕುಲತೆ: ಚಿಂತೆ, ಲೋಭ; ಕಾಣೆ: ನೋಡಲಾಗದು; ಕಾವ: ರಕ್ಷಿಸುವ; ಅಣಕ: ಕುಚೋದ್ಯ, ಮೂದಲಿಸು; ಕಾರುಣ್ಯ: ದಯೆ; ವರ್ಷ: ಮಳೆ; ಸುರಿ: ಬೀಳು; ಪಾಪಿ: ದುಷ್ಟ; ಮಕ್ಕಳು: ಸುತರು; ಹೆಣ: ಜೀವವಿಲ್ಲದ ದೇಹ; ಕಾಣು: ನೋಡು; ದುಃಖ: ಅಳಲು; ದುರಾತ್ಮ: ಪಾಪಿ;

ಪದವಿಂಗಡಣೆ:
ಒಣಗುತಿದೆ +ಕುರುವಂಶಲತೆ +ಫಲು
ಗುಣನ +ಕೋಪಾನಳನ +ನಾಲಗೆ
ಕೆಣಕುತಿದೆ+ ಕಕ್ಕುಲಿತೆಬಟ್ಟರೆ +ಕಾಣೆ +ಕಾವವರ
ಅಣಕಿಸದೆ+ ಕಾರುಣ್ಯ +ವರ್ಷವ
ನೊಣಗಲಲಿ+ ಸುರಿ +ಪಾಪಿ +ಮಕ್ಕಳ
ಹೆಣನ +ಕಾಣುವ +ದುಃಖವಿಲ್ಲ+ ದುರಾತ್ಮ +ನೀನೆಂದ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕೆಣಕುತಿದೆ ಕಕ್ಕುಲಿತೆಬಟ್ಟರೆ ಕಾಣೆ ಕಾವವರ
(೨) ಪಾಪಿ, ದುರಾತ್ಮ – ದುರ್ಯೋಧನನನ್ನು ಜರಿಯುವ ಪದಗಳು
(೩) ಶಲ್ಯನ ಸಲಹೆ: ಅಣಕಿಸದೆ ಕಾರುಣ್ಯ ವರ್ಷವ ನೊಣಗಲಲಿ ಸುರಿ

ಪದ್ಯ ೧೬: ಉತ್ತರನು ತನ್ನ ಸಾಮರ್ಥ್ಯವನ್ನು ಹೇಗೆ ಕೊಚ್ಚುಕೊಂಡನು?

ಅಹುದಹುದು ತಪ್ಪೇನು ಜೂಜಿನ
ಕುಹಕದಲಿ ಪಾಂಡವರ ಸೋಲಿಸಿ
ಮಹಿಯಕೊಂಡಂತೆನ್ನ ಕೆಣಕಿದನೇ ಸುಯೋಧನನು
ಸಹಸದಿಂದವೆ ತುರುವ ಮರಳಿಚಿ
ತಹೆನು ಬಳಿಕಾ ಕೌರವನ ನಿ
ರ್ವಹಿಸಲೀವೆನೆ ಸೂರೆಗೊಂಬೆನು ಹಸ್ತಿನಾಪುರವ (ವಿರಾಟ ಪರ್ವ, ೬ ಸಂಧಿ, ೧೬ ಪದ್ಯ)

ತಾತ್ಪರ್ಯ:
ಉತ್ತರನು ತನ್ನ ಪೌರುಷದ ಬಗ್ಗೆ ಜಂಬ ಕೊಚ್ಚುಕೊಳ್ಳುತ್ತಾ, ಹೌದೌದು ಕೌರವನು ಹಿಂದೆ ಮೋಸದಿಂದ ಪಾಂಡವರನ್ನು ಸೋಲಿಸಿ ಹಸ್ತಿನಾಪುರವನ್ನು ತೆಗೆದುಕೊಂಡನಲ್ಲವೆ, ಇದರಲ್ಲಿ ಅವನದೇನು ತಪ್ಪು, ಇದು ಹಾಗೆಯೇ ಎಂದು ಕೊಂಡು ನನ್ನನ್ನು ಕೆಣಕಿದ್ದಾನೆ, ಗೋವುಗಳನ್ನು ಸಾಹಸದಿಂದ ಹಿಂಪಡೆದು, ಹಸ್ತಿನಾಪುರಕ್ಕೆ ಲಗ್ಗೆಹಾಕಿ ಸೂರೆಗೊಳ್ಳುತ್ತೇನೆ ಎಂದನು.

ಅರ್ಥ:
ಅಹುದು: ಹೌದು; ತಪ್ಪು: ದೋಷ; ಜೂಜು: ಏನಾದರು ಒತ್ತೆ ಇಟ್ಟು ಆಡುವುದು, ಪಂದ್ಯ; ಕುಹಕ: ಮೋಸ; ಸೋಲು: ಪರಾಜಯ; ಮಹಿ: ಭೂಮಿ; ಕೊಂಡು: ತೆಗೆದುಕೊ; ಕೆಣಕು: ಪ್ರಚೋದಿಸು; ಸಹಸ: ಸಾಹಸ, ಧೈರ್ಯ; ತುರು: ಗೋವು; ನಿರ್ವಹಿಸು: ನಿಭಾಯಿಸು; ಸೂರೆಗೊಂಬು:ಕೊಳ್ಳೆಹೋಡಿ,ಲೂಟಿ; ಪುರ: ಊರು; ಹಸ್ತಿ: ಆನೆ;

ಪದವಿಂಗಡಣೆ:
ಅಹುದಹುದು +ತಪ್ಪೇನು +ಜೂಜಿನ
ಕುಹಕದಲಿ +ಪಾಂಡವರ +ಸೋಲಿಸಿ
ಮಹಿಯ+ಕೊಂಡಂತ್+ಎನ್ನ +ಕೆಣಕಿದನೇ+ ಸುಯೋಧನನು
ಸಹಸದಿಂದವೆ +ತುರುವ +ಮರಳಿಚಿ
ತಹೆನು +ಬಳಿಕಾ+ ಕೌರವನ+ ನಿ
ರ್ವಹಿಸಲೀವೆನೆ+ ಸೂರೆಗೊಂಬೆನು +ಹಸ್ತಿನಾಪುರವ

ಪದ್ಯ ೩೪: ಕಣಕ್ಕಿಳಿದ ಭೀಮನು ಯಾರನ್ನು ಹೇಗೆ ಕೆಣಕಿದನು?

ಕೋಲ ಗುರು ಚಿತ್ತೈಸು ಕುರು ಭೂ
ಪಾಲ ಸಮ್ಮುಖನಾಗು ಹಿಡಿ ಮಾ
ರ್ಕೋಲನೆನ್ನೊಡನೆನುತ ತಿವಿದನು ಭೀಮ ಕುರುಪತಿಯ
ಮೇಳವಿಸಿತೆರಡಂಕ ಬಂದಿಗೆ
ಕೋಲ ಹೊಯ್ದಾಟದಲಿ ಬಳಿಕಾ
ಕೀಲುಗದೆಗಳ ಹಿಡಿದು ತರುಬಿದರಧಿಕ ರೋಷದಲಿ (ಆದಿ ಪರ್ವ, ೭ ಸಂಧಿ, ೩೪ ಪದ್ಯ)

ತಾತ್ಪರ್ಯ:
ಧರ್ನುವಿದ್ಯೆಯ ಗುರುಗಳಾದ ದ್ರೋಣಾಚಾರ್ಯರೆ ನೋಡಿ, ಎಲೈ ದುರ್ಯೋಧನ ನನ್ನ ಮುಂದೆ ಬಾ, ತೆಗೆದುಕೋ ನಿನ್ನ ಬಿಲ್ಲನ್ನು ನನ್ನೊಡನೆ ಎದುರಾಗು ಎಂದು ದುರ್ಯೋಧನನಿಗೆ ಕೆಣಕಿದನು. ಭೀಮ ದುರ್ಯೋಧನರ ಹೋರಾಟಕ್ಕೆ ಎರಡು ಪಂಗಡಗಳು ಸುತ್ತುವರೆದವು. ಮೊದಲು ಬಾಣಗಳಿಂದ ಹೋರಾಡಿ, ನಂತರ ಗದೆಗಳನ್ನು ಹಿಡಿದು ಮಹಾ ರೋಷದಿಂದ ಒಬ್ಬರನ್ನೊಬ್ಬರು ತಡೆದು ಹೋರಾಡಿದರು.

ಅರ್ಥ:
ಕೋಲ್: ಬಾಣ,ಕೋಲಗುರು: ಬಿಲ್ವಿದ್ಯೆಯ ಗುರು; ಗುರು: ಆಚಾರ್ಯ;ಚಿತ್ತೈಸು: ಗಮನಿಸು, ಲಕ್ಷಿಸು; ಕುರು: ಕುರುವಂಶದವರು; ಭೂಪಾಲ: ರಾಜ; ಸಮ್ಮುಖ: ಎದುರು; ಹಿಡಿ: ಗ್ರಹಿಸು, ಹಿಡಿದುಕೊ; ಎನ್ನೊಡನೆ: ನನ್ನೊಡನೆ; ತಿವಿ: ಇರಿ, ಚುಚ್ಚು; ಕುರುಪತಿ: ದುರ್ಯೋಧನ; ಮೇಳವಿಸು: ಸೇರು, ಜೊತೆಯಾಗು, ಕೂಡಿಸು, ಸೇರಿಸು; ಎರಡ್: ಎರಡು ಕಡೆ; ಅಂಕ: ಯುದ್ಧ, ಕಾಳಗ ಸ್ಪರ್ಧೆ ನಡೆಯುವ ಸ್ಥಳ; ಬಂದು: ಆಗಮಿಸಿ; ಹೊಯ್ದಾಟ: ಹೋರಾಟ; ಬಳಿಕ: ನಂತರ; ಕೀಲು: ಅಗುಳಿ, ಬೆಣೆ, ಗುಟ್ಟು; ಗದೆ: ಒಂದು ಆಯುಧ, ಮುದ್ಗರ; ತರುಬು: ತಡೆ, ನಿಲ್ಲಿಸು, ಅಡ್ಡಗಟ್ಟು; ರೋಷ: ಸಿಟ್ಟು, ಕೋಪ;

ಪದವಿಂಗಡನೆ:
ಕೋಲ+ ಗುರು +ಚಿತ್ತೈಸು +ಕುರು +ಭೂ
ಪಾಲ +ಸಮ್ಮುಖನಾಗು +ಹಿಡಿ+ ಮಾರ್
ಕೋಲನೆನ್+ಒಡನ್+ಎನುತ+ ತಿವಿದನು +ಭೀಮ +ಕುರುಪತಿಯ
ಮೇಳವಿಸಿತ್+ಎರಡ್+ಆಂಕ +ಬಂದಿಗೆ
ಕೋಲ+ ಹೊಯ್ದ್+ಆಟದಲಿ+ ಬಳಿಕಾ
ಕೀಲು+ಗದೆಗಳ+ ಹಿಡಿದು +ತರುಬಿದರ್+ಅಧಿಕ+ ರೋಷದಲಿ

ಅಚ್ಚರಿ:
(೧) ೧, ೩, ೫ ಸಾಲಿನ ಮೊದಲ ಪದ ಕೋಲ; ಹಿಡಿ – ೨ ಬಾರಿ ಪ್ರಯೋಗ ೨,೬ ಸಾಲು
(೨) ದ್ರೋಣರಿಗೆ “ಕೋಲ ಗುರು” ಎಂದು ಸಂಭೋದಿಸಿರುವುದು
(೩) ದುರ್ಯೋಧನನನ್ನು ಕುರು ಭೂಪಾಲ, ಕುರುಪತಿ