ಪದ್ಯ ೪೦: ಕೃಷ್ಣನು ಧೃತರಾಷ್ಟ್ರನಿಗೆ ಯಾವ ಹಗೆ ಹೋಯಿತೆಂದನು?

ಮಗನೆ ಹಾ ಹಾ ಭೀಮ ನೊಂದೈ
ಮಗನೆ ಕೆಟ್ಟೆನು ಕೆಟ್ಟೆನಕಟೆಂ
ದೊಗುಮಿಗೆಯ ಶೋಕದಲಿ ನೆರೆ ಮರುಗಿದನು ಧೃತರಾಷ್ಟ್ರ
ದುಗುಡ ಬೇಡೊಮ್ಮಿಂಗೆ ನಿಮ್ಮಯ
ಮಗನುಳಿದ ನಿಮ್ಮಧಿಕರೋಷದ
ಹಗರಣದ ಹಗೆ ಹೋಯಿತೆಂದನು ನಗುತ ಮುರವೈರಿ (ಗದಾ ಪರ್ವ, ೧೧ ಸಂಧಿ, ೪೦ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಭೀಮನ ವಿಗ್ರಹವನ್ನು ಅಪ್ಪಿ ಅದು ಪುಡಿಯಾದುದನ್ನು ತಿಳಿದು, ಮಗನೇ ನನ್ನ ಅಪ್ಪುಗೆಯಿಂದ ನಿನಗೆ ನೋವಾಯಿತೇ? ಅಯ್ಯೋ ನಾನು ಕೆಟ್ಟೆ ಎಂದು ಮರುಗಲು, ಶ್ರೀಕೃಷ್ಣನು ದುಃಖಿಸಬೇಡ, ನಿಮ್ಮ ಮಗನು ಉಳಿದಿದ್ದಾನೆ, ನಿನ್ನ ವೈರಿ ಹೋಯಿತು ಎಂದು ನಗುತ್ತಾ ಹೇಳಿದನು.

ಅರ್ಥ:
ಮಗ: ಪುತ್ರ; ನೊಂದು: ನೋವುಂಡು; ನೋವು: ಬೇನೆ, ಅಳಲು; ಅಕಟ: ಅಯ್ಯೋ; ಒಗುಮಿಗೆ: ಹೆಚ್ಚಾಗಿ, ಅಧಿಕವಾಗಿ; ಶೋಕ: ದುಃಖ; ನೆರೆ: ಗುಂಪು; ಮರುಗು: ತಳಮಳ, ಸಂಕಟ; ದುಗುಡ: ದುಃಖ; ಬೇಡ: ತ್ಯಜಿಸು; ಉಳಿದು: ಜೀವಿಸು; ಅಧಿಕ: ಹೆಚ್ಚು; ರೋಷ: ಕೋಪ; ಹಗರಣ: ಗೊಂದಲ, ನಟನೆ; ಹಗೆ: ವೈರಿ; ಹೋಯಿತು: ತ್ಯಜಿಸು, ತೆರಳು; ನಗು: ಹರ್ಷ; ಮುರವೈರಿ: ಕೃಷ್ಣ;

ಪದವಿಂಗಡಣೆ:
ಮಗನೆ +ಹಾ +ಹಾ +ಭೀಮ +ನೊಂದೈ
ಮಗನೆ+ ಕೆಟ್ಟೆನು+ ಕೆಟ್ಟೆನ್+ಅಕಟೆಂದ್
ಒಗುಮಿಗೆಯ +ಶೋಕದಲಿ +ನೆರೆ +ಮರುಗಿದನು +ಧೃತರಾಷ್ಟ್ರ
ದುಗುಡ +ಬೇಡೊಮ್ಮಿಂಗೆ +ನಿಮ್ಮಯ
ಮಗನ್+ಉಳಿದ +ನಿಮ್ಮಧಿಕ+ರೋಷದ
ಹಗರಣದ +ಹಗೆ +ಹೋಯಿತೆಂದನು +ನಗುತ +ಮುರವೈರಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹಗರಣದ ಹಗೆ ಹೋಯಿತೆಂದನು
(೨) ಮಗನೆ – ೧, ೨ ಸಾಲಿನ ಮೊದಲ ಪದ

ಪದ್ಯ ೨೩: ದುರ್ಯೋಧನನ ಸ್ಥಿತಿಯನ್ನು ಸಂಜಯನು ಹೇಗೆ ವರ್ಣಿಸಿದನು – ೪?

ಮುಳಿದಡಗ್ಗದ ಪರಶುರಾಮನ
ಗೆಲಿದನೊಬ್ಬನೆ ಭೀಷ್ಮ ಪಾಂಡವ
ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
ದಳಪತಿಯ ಮಾಡಿದಡೆ ಪಾರ್ಥನ
ತಲೆಗೆ ತಂದನು ಕರ್ಣನೀಯ
ಗ್ಗಳೆಯರಗ್ಗಿತು ಕಡೆಯಲೊಬ್ಬನೆ ಕೆಟ್ಟೆ ನೀನೆಂದ (ಗದಾ ಪರ್ವ, ೩ ಸಂಧಿ, ೨೩ ಪದ್ಯ)

ತಾತ್ಪರ್ಯ:
ಪರಶುರಾಮನೇ ಕೋಪದಿಂದ ಬಂದರೂ, ಭೀಷ್ಮನೊಬ್ಬನೇ ಅವನನ್ನು ಸೋಲಿಸಿದನು. ಪಾಂಡವ ಬಲದ ಮಹಾರಥರನ್ನು ದ್ರೋಣನು ಸಂಹರಿಸಿದನು. ಸೇನಾಧಿಪತಿಯಾದ ಕರ್ಣನು ಅರ್ಜುನನ ತಲೆಗೆ ಅಪಾಯವನ್ನೊಡಿದ, ಈ ಮಹಾಸತ್ವಶಾಲಿಗಳು ಮಡಿದರು. ಕಡೆಯಲ್ಲಿ ನೀನೊಬ್ಬನೇ ಒಬ್ಬಂಟಿಯಾಗಿ ಉಳಿದು ಕೆಟ್ಟೆ ಎಂದು ಸಂಜಯನು ಹೇಳಿದನು.

ಅರ್ಥ:
ಮುಳಿ: ಕೋಪ; ಅಗ್ಗ: ಶ್ರೇಷ್ಠ; ಗೆಲಿ: ಜಯಿಸು; ಬಲ: ಸೈನ್ಯ; ಸಕಲ: ಎಲ್ಲಾ; ಮಹಾರಥ: ಪರಾಕ್ರಮಿ; ಸಂಹರ: ಸಾವು; ದಳಪತಿ: ಸೇನಾಧಿಪತಿ; ತಲೆ: ಶಿರ; ತಂದು: ತೆಗೆದುಕೊಂಡು ಬಂದು; ಕಡೆ: ಕೊನೆ; ಕೆಡು: ಹಾಳಾಗು; ಅಗ್ಗಿ: ಬೆಂಕಿ;

ಪದವಿಂಗಡಣೆ:
ಮುಳಿದಡ್+ಅಗ್ಗದ +ಪರಶುರಾಮನ
ಗೆಲಿದನ್+ಒಬ್ಬನೆ +ಭೀಷ್ಮ +ಪಾಂಡವ
ಬಲದ +ಸಕಲ +ಮಹಾರಥರ +ಸಂಹರಿಸಿದನು +ದ್ರೋಣ
ದಳಪತಿಯ +ಮಾಡಿದಡೆ +ಪಾರ್ಥನ
ತಲೆಗೆ +ತಂದನು +ಕರ್ಣನ್+ಈ+ಅ
ಗ್ಗಳೆಯರ್+ಅಗ್ಗಿತು +ಕಡೆಯಲೊಬ್ಬನೆ+ ಕೆಟ್ಟೆ +ನೀನೆಂದ

ಅಚ್ಚರಿ:
(೧) ಭೀಷ್ಮರ ಪರಾಕ್ರಮ – ಮುಳಿದಡಗ್ಗದ ಪರಶುರಾಮನಗೆಲಿದನೊಬ್ಬನೆ ಭೀಷ್ಮ
(೨) ದ್ರೋಣರ ಪರಾಕ್ರಮ – ಪಾಂಡವ ಬಲದ ಸಕಲ ಮಹಾರಥರ ಸಂಹರಿಸಿದನು ದ್ರೋಣ
(೩) ಕರ್ಣನ ಪರಾಕ್ರಮ – ದಳಪತಿಯ ಮಾಡಿದಡೆ ಪಾರ್ಥನ ತಲೆಗೆ ತಂದನು ಕರ್ಣ