ಪದ್ಯ ೧೬: ಧರ್ಮಜನೇಕೆ ಮಾತಾಡಲು ತಡವಡಿಸಿದನು?

ಅರಸಿಯಾರೋಗಿಸಿದ ಹದನನು
ಬರವಿನಲಿ ನೃಪ ತಿಳಿಯಲಂತಃ
ಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
ಉರಿಹೊಡೆದ ಕೆಂದಾವರೆಯ ವೊಲ್
ಕರುಕುವರಿಯಲು ಮುಖ ಕಪಾಲದಿ
ಕರವನಿಟ್ಟು ಮಹೀಶ ತೊನಹುತ ನುಡಿದನಿಂತೆಂದು (ಅರಣ್ಯ ಪರ್ವ, ೧೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ದ್ರೌಪದಿಯ ಆಗಮನವನ್ನು ನೋಡಿ ಧರ್ಮಜನು ಅವಳ ಊಟವಾಗಿದೆಯೆಂದು ತಿಳಿದನು. ಅವನ ಮನಸ್ಸು ಕಳವಳಗೊಂಡು ಕಣ್ಣೀರಿನ ಧಾರೆ ಹರಿಯಿತು. ಉರಿಹೊಡೆದ ಕೆಂದಾವರೆಯಂತೆ ಅವನ ಮುಖ ಕಪ್ಪಾಯಿತು. ಅವನು ಕೈಯನ್ನು ಕೆನ್ನೆಯಮೇಲಿಟ್ಟು ತೊದಲುತ್ತಾ ದ್ರೌಪದಿಗೆ ಹೀಗೆ ನುಡಿದನು.

ಅರ್ಥ:
ಅರಸಿ: ರಾಣಿ; ಆರೋಗಿಸು: ಸೇವಿಸು; ಹದ: ಸ್ಥಿತಿ; ಬರುವು: ಆಗಮನ; ನೃಪ: ರಾಜ; ತಿಳಿ: ಅರ್ಥೈಸು; ಅಂತಃಕರಣ: ಮನಸ್ಸು; ಕಳವಳ: ಗೊಂದಲ; ಸುರಿದು: ಹರಿಸು; ನಯನ: ಕಣ್ಣು; ಜಲಧಾರೆ: ವರ್ಷ, ಮಳೆ; ಉರಿ: ಹೊಗೆ; ಕೆಂದಾವರೆ: ಕೆಂಪಾವದ ಕಮಲ; ಮುಖ: ಆನನ; ಕಪಾಲ: ಕೆನ್ನೆ; ಕರುಕು: ಕಪ್ಪು; ಕರ: ಹಸ್ತ; ಮಹೀಶ: ರಾಜ; ತೊನಹುತ: ತೊದಲುತ್ತ; ನುಡಿ: ಮಾತಾಡು;

ಪದವಿಂಗಡಣೆ:
ಅರಸಿ+ಆರೋಗಿಸಿದ +ಹದನನು
ಬರವಿನಲಿ +ನೃಪ +ತಿಳಿಯಲ್+ಅಂತಃ
ಕರಣ+ ಕಳವಳಗೊಳಲು +ಸುರಿದುದು +ನಯನ +ಜಲಧಾರೆ
ಉರಿಹೊಡೆದ+ ಕೆಂದಾವರೆಯ +ವೊಲ್
ಕರುಕುವರಿಯಲು+ ಮುಖ +ಕಪಾಲದಿ
ಕರವನಿಟ್ಟು +ಮಹೀಶ +ತೊನಹುತ +ನುಡಿದನ್+ಇಂತೆಂದು

ಅಚ್ಚರಿ:
(೧) ಮನಸ್ಸು ನೊಂದಿತು ಎಂದು ಹೇಳಲು – ಅಂತಃಕರಣ ಕಳವಳಗೊಳಲು ಸುರಿದುದು ನಯನ ಜಲಧಾರೆ
(೨) ಉಪಮಾನದ ಪ್ರಯೋಗ – ಉರಿಹೊಡೆದ ಕೆಂದಾವರೆಯ ವೊಲ್ಕರುಕುವರಿಯಲು ಮುಖ

ಪದ್ಯ ೨೬: ಅರ್ಜುನನು ವೃಷಸೇನನಿಗೆ ಏನು ಹೇಳಿದ?

ಎಸುಗೆ ಚೆಲುವದು ಹಾಲುಗಲ್ಲದ
ಹಸುಳೆಯಂಗವಿದಲ್ಲ ತುಂಬಿಯ
ದೆಸೆಗೆ ಕೆಂದಾವರೆಯ ಬನವೇ ವನದವಾನಳನು
ಉಸುರದೀ ಜಯದೊಪ್ಪದಲಿ ಜಾ
ಳಿಸುವರೊಳ್ಳಿತು ತೊಲಗೆನುತ ನಿ
ಪ್ಪಸರದಲಿ ತೆಗೆದೆಚ್ಚನರ್ಜುನನಿನಸುತನಸುತನ (ಕರ್ಣ ಪರ್ವ, ೨೦ ಸಂಧಿ, ೨೬ ಪದ್ಯ)

ತಾತ್ಪರ್ಯ:
ಇನ್ನೂ ಚಿಕ್ಕ ಮಗುವಿನ ಹಾಗೆ ಕಂಡರೂ ಇವನ ಬಾಣಪ್ರಯೋಗದ ಭಂಗಿಯೇ ಚೆಂದ, ಇದು ಮಗುವಿನ ರೀತಿಯಲ್ಲ. ಕೇಳು ಕೆಂದಾವರೆಯ ವನವೇ ದುಂಬಿಕೆ ಬೆಂಕಿಯಾಗಬಲ್ಲದು, ಇದುವರೆಗೆ ನೀನು ಸಾಧಿಸಿದ ಗೆಲುವನ್ನುಳಿಸಿಕೊಂಡು ಹೋದರೆ ಒಳ್ಳೆಯದು ತೊಲಗು ಎಂದು ಅರ್ಜುನನು ವೃಷಸೇನನಿಗೆ ಹೇಳುತ್ತಾ ಬಾಣವನ್ನು ಹೂಡಿದನು.

ಅರ್ಥ:
ಎಸು:ಬಾಣ ಪ್ರಯೋಗ ಮಾಡು; ಚೆಲುವು: ಸುಂದರ; ಹಾಲುಗಲ್ಲ: ಬಾಲ್ಯ, ಎಳೆತನ; ಹಸುಳೆ: ಚಿಕ್ಕಮಗು, ಶಿಶು; ತುಂಬಿ: ದುಂಬಿ; ದೆಸೆ: ದಿಕ್ಕು; ಕೆಂದಾವರೆ: ಕೆಂಪು ತಾವರೆ; ಬನ: ಕಾಡು; ದವಾನಳ: ಬೆಂಕಿ; ಉಸುರು: ಮಾತನಾಡು; ಜಯ: ಗೆಲುವು; ಒಪ್ಪ: ಮೆರಗು; ಜಾಳಿಸು: ಚಲಿಸು, ನಡೆ; ಒಳ್ಳಿತು: ಸರಿಯಾದ; ತೊಲಗು: ಹೊರಹೋಗು; ನಿಪ್ಪಸರ: ಅತಿಶಯ, ಹೆಚ್ಚಳ; ತೆಗೆ: ಹೊರ ಸೂಸು; ಎಚ್ಚನು: ಬಾಣಬಿಡು; ಇನ: ಸೂರ್ಯ; ಸುತ: ಮಗ;

ಪದವಿಂಗಡಣೆ:
ಎಸುಗೆ +ಚೆಲುವದು +ಹಾಲುಗಲ್ಲದ
ಹಸುಳೆ+ಅಂಗವಿದಲ್ಲ +ತುಂಬಿಯ
ದೆಸೆಗೆ+ ಕೆಂದಾವರೆಯ +ಬನವೇ +ವನ+ದವಾನಳನು
ಉಸುರದೀ +ಜಯದೊಪ್ಪದಲಿ+ ಜಾ
ಳಿಸುವರ್+ಒಳ್ಳಿತು +ತೊಲಗ್+ಎನುತ +ನಿ
ಪ್ಪಸರದಲಿ +ತೆಗೆದ್+ಎಚ್ಚನ್+ಅರ್ಜುನನ್+ಇನ+ಸುತನ+ಸುತನ

ಅಚ್ಚರಿ:
(೧) ವೃಷಸೇನನನ್ನು ಇನಸುತನಸುತ ಎಂದು ಕರೆದಿರುವುದು
(೨) ಬನ, ವನ – ಸಮನಾರ್ಥಕ ಪದ
(೩) ವೃಷಸೇನನನ್ನು ಕರೆದ ಪರಿ – ಹಾಲುಗಲ್ಲದ ಹಸುಳೆ
(೪) ಉಪಮಾನದ ಪ್ರಯೋಗ – ತುಂಬಿಯ ದೆಸೆಗೆ ಕೆಂದಾವರೆಯ ಬನವೇ ವನದವಾನಳನು

ಪದ್ಯ ೨೫: ಭೀಮನ ಬಾಣಗಳಿಗೆ ಅಶ್ವತ್ಥಾಮನ ಸ್ಥಿತಿ ಹೇಗಾಯಿತು?

ಈತನೆಚ್ಚನು ಮತ್ತೆ ಶರ ಸಂ
ಘಾತವೋ ಗುರುಸುತನ ತನುವೋ
ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
ಭೀತಿ ಬಿಗಿದುದು ದಿಟ್ಟತನದನು
ಧಾತುಗೆಟ್ಟುದು ನೋಡಿ ಕಂಗಳು
ಸೋತು ಮರಳಿದನಿತ್ತಲಶ್ವತ್ಥಾಮ ಮೈಮರೆದ (ಕರ್ಣ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಮನು ಮತ್ತೆ ಬಾಣಗಳನ್ನು ಬಿಟ್ಟನು, ಆ ಬಾಣಗಳು ಅಶ್ವತ್ಥಾಮನನ್ನು ತಾಗಿ, ಇದು ಅಶ್ವತ್ಥಾಮನ ದೇಹವೋ, ಬಾಣಗಳ ಗುಂಪೋ, ಹೂಬಿಟ್ಟ ಮುತ್ತುಗದ ಮರವೋ, ಅರಳಿದ ಕೆಂದಾವರೆಯ ವನವೋ ಅಥವ ಅಶ್ವತ್ಥಾಮನ ದೇಹವೋ ಎಂಬಂತಿತ್ತು. ಭಯವು ಹೆಚ್ಚುತ್ತಿರಲು ಪರಾಕ್ರಮವು ಕುಂದಿದ ಸ್ಥಿತಿಯನ್ನು ನೋಡಿ ಭೀಮನು ಬೇರೆ ಕಡೆಗೆ ಹೊರಟನು, ಅಶ್ವತ್ಥಾಮನು ಮೂರ್ಛಿತನಾದನು.

ಅರ್ಥ:
ಎಚ್ಚು: ಬಾಣ ಬಿಡು;ಮತ್ತೆ: ಪುನಃ; ಶರ: ಬಾಣ; ಸಂಘಾತ: ಗುಂಪು, ಸಮೂಹ, ಹೊಡೆತ; ಗುರುಸುತ: ಆಚಾರ್ಯರ ಮಗ (ಅಶ್ವತ್ಥಾಮ); ತನು: ದೇಹ; ಪೂತ: ಪವಿತ್ರವಾದುದು; ಮುತ್ತ:ಮುತ್ತುಗದ ಮರ, ಪಲಾಶ; ತಳಿತ: ಚಿಗುರಿದ; ಎಸೆವ: ಶೋಭಿಸು, ಬಾಣ ಬಿಡು;ಕೆಂದಾವರೆ: ಕೆಂಪು ಕಮಲ; ಬನ: ಕಾಡು; ಭೀತಿ: ಭಯ; ಬಿಗಿದು: ಕಟ್ಟು, ಬಂಧಿಸು; ದಿಟ್ಟ: ಧೈರ್ಯಶಾಲಿ, ಸಾಹಸಿ; ಧಾತು: ಮೂಲವಸ್ತು; ಕಂಗಳು: ಕಣ್ಣುಗಳು; ಸೋತು: ಪರಾಭವ; ಮರಳು: ಹಿಂದಿರುಗು; ಮೈಮರೆದ: ಮೂರ್ಛಿತ; ಕೆಟ್ಟುದು: ಹಾಳಾದ;

ಪದವಿಂಗಡಣೆ:
ಈತನ್+ಎಚ್ಚನು +ಮತ್ತೆ+ ಶರ+ ಸಂ
ಘಾತವೋ +ಗುರುಸುತನ+ ತನುವೋ
ಪೂತ+ ಮುತ್ತವೊ +ತಳಿತೆಸೆವ+ ಕೆಂದಾವರೆಯ +ಬನವೊ
ಭೀತಿ +ಬಿಗಿದುದು +ದಿಟ್ಟತನದನು
ಧಾತುಗೆಟ್ಟುದು +ನೋಡಿ +ಕಂಗಳು
ಸೋತು +ಮರಳಿದನ್+ಇತ್ತಲ್+ಅಶ್ವತ್ಥಾಮ +ಮೈಮರೆದ

ಅಚ್ಚರಿ:
(೧) ಉಪಮಾನಗಳ ಬಳಕೆ – ಶರ ಸಂಘಾತವೋ ಗುರುಸುತನ ತನುವೋ ಪೂತ ಮುತ್ತವೊ ತಳಿತೆಸೆವ ಕೆಂದಾವರೆಯ ಬನವೊ
(೨) ಜೋಡಿ ಪದಗಳು – ಭೀತಿ ಬಿಗಿದುದು, ದಿಟ್ಟತನದನು ಧಾತುಗೆಟ್ಟುದು
(೩) ಗುರುಸುತ, ಅಶ್ವತ್ಥಾಮ – ಒಬ್ಬರನ್ನು ಉದ್ದೇಶಿಸಲು ಬಳಸಿದ ಪದ