ಪದ್ಯ ೧೮: ಭೀಮನು ಧರ್ಮಜನಿಗೆ ಏನು ಹೇಳಿದ?

ಏನಿದೇನೆಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯೇಕೈ ಸುಡುವೆನೀಗಳೆ ಸುರಪತಿಯ ಪುರವ
ತಾನೆ ಪದವಿಡಿದೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ್ತ ಕೃ
ಶಾನುಸಖಸುತ ಗದೆಯ ಕೊಂಡನು ಬೇಗ ಬೆಸಸೆನುತ (ಅರಣ್ಯ ಪರ್ವ, ೧೭ ಸಂಧಿ, ೧೮ ಪದ್ಯ)

ತಾತ್ಪರ್ಯ:
ಧರ್ಮಜನ ಮನಸ್ಸಿನ ತಳಮಳವನ್ನರಿತ ಭೀಮನು, ಇದೇನು ಮನಸ್ಸಿನ ಚಿಂತೆಯನ್ನು ಬಿಡು. ನಿನ್ನ ಮಾತು ಹೇಗೆ ಸುಳ್ಳಾಗಲು ಸಾಧ್ಯ? ನಾನು ಈಗಲೇ ಹೋಗಿ ಅಮರಾವತಿಯನ್ನು ಧ್ವಂಸ ಮಾಡಿ, ಕಾಮಧೇನುವನ್ನು ಕಾಲು ಹಿಡಿದು ನಿನ್ನ ಬಳಿಗೆ ಎಳೆ ತರುತ್ತೇನೆ ಎಂದು ಗದೆಯನ್ನು ಹಿಡಿದು ಅಪ್ಪಣೆಯನ್ನು ನೀಡು ಎಂದು ಹೇಳಿದನು.

ಅರ್ಥ:
ನೃಪತಿ: ರಾಜ; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಿಡು: ತೊರೆ; ವಚನ: ಮಾತು; ಹಾನಿ: ಹಾಳು; ಸುಡು: ದಹಿಸು; ಸುರಪತಿ: ಇಂದ್ರ; ಪುರ: ಊರು; ಪದ:ಕಾಲು; ಎಳೆ: ಸೆಳೆ; ತಹ: ತರುವ; ಸುರಧೇನು: ಕಾಮಧೇನು; ಕೃಶಾನು: ಅಗ್ನಿ, ಬೆಂಕಿ; ಸಖ: ಮಿತ್ರ; ಸುತ: ಮಗ; ಗದೆ: ಮುದ್ಗರ; ಬೆಸ: ಕೆಲಸ, ಕಾರ್ಯ;

ಪದವಿಂಗಡಣೆ:
ಏನಿದೇನ್+ಎಲೆ+ ನೃಪತಿ+ ಚಿತ್ತ
ಗ್ಲಾನಿಯನು +ಬಿಡು +ನಿನ್ನ +ವಚನಕೆ
ಹಾನಿಯೇಕೈ+ ಸುಡುವೆನ್+ಈಗಳೆ +ಸುರಪತಿಯ +ಪುರವ
ತಾನೆ +ಪದವಿಡಿದ್+ಎಳೆದು +ತಹೆ +ಸುರ
ಧೇನುವನು +ನಿಮ್ಮಡಿಗ್+ಎನುತ್ತ +ಕೃ
ಶಾನುಸಖ+ಸುತ+ ಗದೆಯ +ಕೊಂಡನು +ಬೇಗ +ಬೆಸಸೆನುತ

ಅಚ್ಚರಿ:
(೧) ಭೀಮನನ್ನು ಕೃಶಾನುಸಖಸುತ, ಅಗ್ನಿಯ ಮಿತ್ರನ ಮಗ (ವಾಯು ಪುತ್ರ) ಎಂದು ಕರೆದಿರುವುದು
(೨) ಸುರಧೇನು, ಸುರಪತಿ – ಪದಗಳ ಬಳಕೆ