ಪದ್ಯ ೨: ದ್ರೋಣನ ಆಕ್ರಮಣ ಹೇಗಿತ್ತು?

ಏನ ಹೇಳಲುಬಹುದು ಜೀಯ ಕೃ
ಶಾನುವಡವಿಯಲಾಡಿದಂದದಿ
ನಾ ನಿರೂಢಿಯ ಭಟರ ಮುರಿದನು ಮುರಿದ ಮಾರ್ಗದಲಿ
ಸೇನೆ ಕಲಕಿತು ಬತ್ತಿದುದಧಿಯ
ಮೀನಿನಂತಿರೆ ಮರುಗಿದರು ಭಟ
ರಾ ನರೇಂದ್ರನನಳವಿಯಲಿ ಬೆಂಬತ್ತಿದನು ದ್ರೋಣ (ದ್ರೋಣ ಪರ್ವ, ೨ ಸಂಧಿ, ೨ ಪದ್ಯ)

ತಾತ್ಪರ್ಯ:
ಜೀಯಾ ಏನು ಹೇಳಲಿ, ಕಾಳ್ಗಿಚ್ಚು ಅಡವಿಯಲ್ಲಿ ಹಬ್ಬಿದಂತೆ ದ್ರೋಣನು ಪ್ರಖ್ಯಾತರಾದ ಭಟರನ್ನು ಸಂಹರಿಸಿದನು. ಅವನು ಹೋದ ದಾರಿಯಲ್ಲಿ ಪಾಂಡವಸೇನೆ ಕಲುಕಿತು. ಕಡಲು ಬತ್ತಿದರೆ ಮೀನುಗಳು ಮರುಗುವಂತೆ ವೀರರು ಮರುಗಿದರು. ದ್ರೋಣನು ಧರ್ಮಪುತ್ರನ ಬೆನ್ನು ಹತ್ತಿ ಹೋದನು

ಅರ್ಥ:
ಹೇಳು: ತಿಳಿಸು; ಜೀಯ: ಒಡೆಯ; ಕೃಶಾನು: ಅಗ್ನಿ, ಬೆಂಕಿ; ಅಡವಿ: ಕಾದು; ನಿರೂಢಿ: ವಿಶೇಷ ರೂಢಿಯಾದ, ಸಾಮಾನ್ಯ; ಭಟ: ಸೈನಿಕ; ಮುರಿ: ಸೀಳು; ಮಾರ್ಗ: ದಾರಿ; ಸೇನೆ: ಸೈನ್ಯ; ಕಲಕು: ಅಲ್ಲಾಡಿಸು; ಬತ್ತು: ಒಣಗು, ಆರು; ಉದಧಿ: ಸಾಗರ; ಮೀನು: ಮತ್ಸ್ಯ; ಮರುಗು: ತಳಮಳ, ಸಂಕಟ; ಭಟರು: ಸೈನಿಕ; ನರೇಂದ್ರ: ರಾಜ; ಅಳವಿ: ಶಕ್ತಿ; ಬೆಂಬತ್ತು: ಹಿಂಬಾಲಿಸು;

ಪದವಿಂಗಡಣೆ:
ಏನ+ ಹೇಳಲುಬಹುದು +ಜೀಯ +ಕೃ
ಶಾನುವ್+ಅಡವಿಯಲಾಡಿದಂದದಿನ್
ಆ +ನಿರೂಢಿಯ+ ಭಟರ+ ಮುರಿದನು +ಮುರಿದ+ ಮಾರ್ಗದಲಿ
ಸೇನೆ +ಕಲಕಿತು +ಬತ್ತಿದ್+ಉದಧಿಯ
ಮೀನಿನಂತಿರೆ +ಮರುಗಿದರು +ಭಟರ್
ಆ+ ನರೇಂದ್ರನನ್+ಅಳವಿಯಲಿ +ಬೆಂಬತ್ತಿದನು +ದ್ರೋಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೃಶಾನುವಡವಿಯಲಾಡಿದಂದದಿ; ಬತ್ತಿದುದಧಿಯ ಮೀನಿನಂತಿರೆ ಮರುಗಿದರು ಭಟರ್

ಪದ್ಯ ೧೮: ಭಾನುಮತಿಯು ದುರ್ಯೋಧನನಿಗೆ ಏನು ಹೇಳಿದಳು?

ಏನು ದಿಟ ಸಂಕಲ್ಪವಿನಿತಕೆ
ನಾನು ಹೊರಗೇ ಹೊಗುವೆವೇಳು ಕೃ
ಶಾನುವನು ಬೀಳುವೆವು ನಡೆ ಭಾಗೀರಥೀ ಮಡುವ
ಮಾನನಿಧಿಯೇ ವಿವಿಧ ಗರಳ ವಿ
ತಾನವನು ತರಿಸುವೆನು ನಿಶ್ಚಯ
ವೇನು ನಿರಶನ ಮರಣವೇಕೆಂದಳು ಸರೋಜಮುಖಿ (ಅರಣ್ಯ ಪರ್ವ, ೨೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಭಾನುಮತಿಯು ದುರ್ಯೋಧನನ ಬಳಿ ಬಂದು, ಎಲೈ ಮಾನನಿಧಿಯೇ, ಏನಿದು ನಿನ್ನ ದಿಟ್ಟ ನಿರ್ಧಾರ? ಇಷ್ಟಕ್ಕೇ ಏನು ಸಂಕಲ್ಪ ಮಾಡಿರುವೆ? ನನ್ನನ್ನು ಹೊರಗೆ ಇಟ್ಟಿರುವುದೇಕೆ? ಏಳು ಇಬ್ಬರೂ ಬೆಂಕಿಗೆ ಹಾರೋಣ, ಗಂಗಾನದಿಯ ಮಡುವಿನಲ್ಲಿ ಮುಳುಗೋಣ, ಅನೇಕ ವಿಷಗಳನ್ನು ತರಿಸುತ್ತೇನೆ, ಅದನ್ನು ಇಬ್ಬರೂ ಕುಡಿಯೋಣ, ನೀನೇಕೆ ನಿರಶನ ಮರಣದ ಸಂಕಲ್ಪ ಮಾಡಿರುವೆ ಎಂದು ಕೇಳಿದಳು.

ಅರ್ಥ:
ದಿಟ: ಸತ್ಯ; ದಿಟ್ಟ: ಧೈರ್ಯದಿಂದ ಕೂಡಿದ; ಸಂಕಲ್ಪ: ನಿರ್ಧಾರ; ಇನಿತಕೆ: ಇಷ್ಟಕ್ಕೆ; ಹೊರಗೆ: ಆಚೀ; ಕೃಶಾನು: ಅಗ್ನಿ, ಬೆಂಕಿ; ಬೀಳು: ಕುಸಿ; ನಡೆ: ಚಲಿಸು; ಭಾಗೀರಥೀ: ಗಂಗೆ; ಮಡುವು: ಆಳವಾದ ನೀರಿರುವ ಪ್ರದೇಶ; ಮಾನ: ಮರ್ಯಾದೆ, ಗೌರವ; ನಿಧಿ: ಐಶ್ವರ್ಯ; ಮಾನನಿಧಿ: ಮರ್ಯಾದೆಯನ್ನೇ ಐಶ್ವರ್ಯವಾಗಿಟ್ಟುಕೊಂಡಿರುವವನು; ವಿವಿಧ: ಹಲವಾರು; ಗರಳ: ವಿಷ; ವಿತಾನ: ವಿಸ್ತಾರ, ಅಧಿಕ್ಯ; ತರಿಸು: ಬರೆಮಾಡು; ನಿಶ್ಚಯ: ನಿರ್ಧಾರ; ನಿರಶನ: ಊಟವಿಲ್ಲದ ಸ್ಥಿತಿ; ಮರಣ: ಸಾವು; ಸರೋಜಮುಖಿ: ಕಮಲದಂತ ಮುಖವುಳ್ಳವಳು (ಭಾನುಮತಿ);

ಪದವಿಂಗಡಣೆ:
ಏನು+ ದಿಟ+ ಸಂಕಲ್ಪವ್+ಇನಿತಕೆ
ನಾನು +ಹೊರಗೇ +ಹೊಗುವೆವ್+ಏಳು+ ಕೃ
ಶಾನುವನು +ಬೀಳುವೆವು+ ನಡೆ +ಭಾಗೀರಥೀ +ಮಡುವ
ಮಾನನಿಧಿಯೇ +ವಿವಿಧ +ಗರಳ +ವಿ
ತಾನವನು +ತರಿಸುವೆನು +ನಿಶ್ಚಯ
ವೇನು +ನಿರಶನ+ ಮರಣವೇಕೆಂದಳು +ಸರೋಜಮುಖಿ

ಅಚ್ಚರಿ:
(೧) ದುರ್ಯೋಧನನನ್ನು ಕರೆದ ಪರಿ – ಮಾನನಿಧಿ
(೨) ಹಸಿವಿನಿಂದ ಸಾವು ಕಷ್ಟಕರ ಎಂದು ಹೇಳುವ ಪರಿ – ನಿರಶನ ಮರಣವೇಕೆಂದಳು ಸರೋಜಮುಖಿ

ಪದ್ಯ ೨೩: ಯಾವುದರಲ್ಲಿ ಎಲ್ಲವೂ ಮುಳುಗಿತ್ತು?

ಈ ನೆಲನನೀ ಚಂದ್ರ ಸೂರ್ಯ ಕೃ
ಶಾನು ತೇಜವನೀ ಸಮೀರಣ
ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ
ಏನು ಹೇಳುವೆನೆನ್ನ ಚಿತ್ತ
ಗ್ಲಾನಿಯನು ಬಲುತೆರೆಯ ಹೊಯ್ಲಿನೊ
ಳಾನು ಮುಳುಗುತ್ತೇಳುತಿರ್ದೆನು ಭೂಪ ಕೇಳೆಂದ (ಅರಣ್ಯ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಯುಧಿಷ್ಥಿರ ಕೇಳು, ಈ ಭೂಮಿ, ಸೂರ್ಯ, ಚಂದ್ರ, ಅಗ್ನಿ, ವಾಯು, ಆಕಾಶಗಳೊಂದೂ ಆ ನೀರಿನ ದೆಸೆಯಿಂದ ಕಾಣಲಿಲ್ಲ. ನನ್ನ ಚಿತ್ತದ ಚಿಂತೆಯನ್ನು ಏನೆಂದು ಹೇಳಲಿ, ಆ ನೀರಿನಲ್ಲಿ ಮುಳುಗುತ್ತಾ ಏಳುತ್ತಾ ನಾನು ಸಂಕಟ ಪದುತ್ತಿದ್ದೆನು ಹಲುಬುತ್ತಿದ್ದೆನು ಎಂದು ಮುನಿಗಳು ತಿಳಿಸಿದರು.

ಅರ್ಥ:
ನೆಲ: ಭೂಮಿ; ಚಂದ್ರ: ಶಶಿ; ಸೂರ್ಯ: ರವಿ; ಕೃಶಾನು: ಅಗ್ನಿ, ಬೆಂಕಿ; ತೇಜ: ಕಾಂತಿ, ಪ್ರಕಾಶ; ಸಮೀರ: ವಾಯು; ಕಾಣು: ತೋರು; ಸಲಿಲ: ಜಲ; ಸೃಷ್ಟಿ: ಉತ್ಪತ್ತಿ, ಹುಟ್ಟು; ಚಿತ್ತ: ಮನಸ್ಸು; ಗ್ಲಾನಿ: ಬಳಲಿಕೆ, ದಣಿವು; ಬಲು: ಬಹಳ; ತೆರೆ: ತೆರೆಯುವಿಕೆ, ಬಿಚ್ಚುವಿಕೆ; ಹೊಯ್ಲು: ಏಟು, ಹೊಡೆತ; ಮುಳುಗು: ಮಿಂದು; ಏಳು: ಮೇಲೇಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಈ +ನೆಲನನ್+ಈ+ ಚಂದ್ರ +ಸೂರ್ಯ +ಕೃ
ಶಾನು +ತೇಜವನ್+ಈ+ ಸಮೀರಣನ್
ಈ+ನಭವ+ ನಾ+ ಕಾಣೆನ್+ಒಂದೇ +ಸಲಿಲ+ ಸೃಷ್ಟಿಯಲಿ
ಏನು +ಹೇಳುವೆನ್+ಎನ್ನ +ಚಿತ್ತ
ಗ್ಲಾನಿಯನು +ಬಲುತೆರೆಯ+ ಹೊಯ್ಲಿನೊಳ್
ಆನು+ ಮುಳುಗುತ್+ಏಳುತಿರ್ದೆನು+ ಭೂಪ +ಕೇಳೆಂದ

ಅಚ್ಚರಿ:
(೧) ಪಂಚಭೂತಗಳು ನೀರಿನಲ್ಲಿ ಮುಳುಗಿದವು ಎಂದು ಹೇಳುವ ಪರಿ – ಈ ನೆಲನನೀ ಚಂದ್ರ ಸೂರ್ಯ ಕೃಶಾನು ತೇಜವನೀ ಸಮೀರಣ ನೀನಭವ ನಾ ಕಾಣೆನೊಂದೇ ಸಲಿಲ ಸೃಷ್ಟಿಯಲಿ

ಪದ್ಯ ೧೦೮: ಯಾವ ಗುಣಗಳು ರಾಜನಲ್ಲಿರಬೇಕು?

ಶ್ವಾನ ಕುಕ್ಕುಟ ಕಾಕ ಬಕ ಪವ
ಮಾನ ಖಗಪತಿ ದಿವಿಜ ರಜನಿ ಕೃ
ಶಾನುವಿನ ಗಾರ್ಧಭನ ವೃಷಭನ ಶಿಂಶುಮಾರಕನ
ವಾನರನ ಹಯ ಕುಂಜರನ ಪಂ
ಚಾನನನ ಮೃಗ ಪೋತಕನ ಗುಣ
ವಾನರೆಂದ್ರನೊಳಿರಲು ಬೇಹುದು ಭೂಪ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ರಾಜನಾದವನಿಗೆ ಇರಬೇಕಾದ ಗುಣಲಕ್ಷಣಗಳನ್ನು ಹಲವಾರು ಉಪಮಾನಗಳ ಮೂಲಕ ತಿಳಿಸಿದ್ದಾರೆ. ರಾಜನಾದವನಿಗೆ ನಾಯಿಯಂತೆ ಸದಾ ಎಚ್ಚರಿಕೆ, ಕೋಳಿಯಂತೆ ಆಹಾರ ಶೋಧನೆ, ಕಾಗೆಯಂತೆ ಬಾಂಧವರೊಡನೆ ಭೋಜನ, ಕೊಕ್ಕರೆಯಂತೆ ಏಕಾಗ್ರತೆ, ಗಾಳಿಯಂತೆ ಸರ್ವರಿಗೂ ಒಂದೇ ಆಗಿರುವ ಲಕ್ಷಣ, ಗರುಡನಂತೆ ದೂರದೃಷ್ಟಿ, ದೇವತೆಗಳಂತೆ ಆಶ್ರಿತ ರಕ್ಷಣೆ, ರಾತ್ರಿಯಂತೆ ಅಭೇದ್ಯವಾಗಿರುವುದು, ಅಗ್ನಿಯಂತೆ ಉಗ್ರತೆ, ಕತ್ತೆಯ ಸಹಿಷ್ಣುತೆ, ಎತ್ತಿನ ಗಾಂಭೀರ್ಯ, ಮೊಸಳೆಯ ಗೂಢತೆ, ಕಪಿಯಂತೆ ಕಾರ್ಯ ಸಾಧನೆ, ಕುದುರೆಯಂತೆ ಅಲ್ಪ ನಿದ್ರೆ, ಆನೆಯ ಸೂಕ್ಷ್ಮ ದೃಷ್ಟಿ, ಸಿಂಹದ ಶೌರ್ಯಪರಾಕ್ರಮ, ಜಿಂಕೆಯ ಚಟುವಟಿಕೆಯ ಪ್ರವೃತ್ತಿ, ಹೀಗೆ ಈ ಎಲ್ಲಾ ಗುಣಗಳು ರಾಜನಲ್ಲಿರಬೇಕೆಂದು ವಿದುರ ಧೃತರಾಷ್ಟ್ರನಿಗೆ ತಿಳಿಸಿದ.

ಅರ್ಥ:
ಶ್ವಾನ: ನಾಯಿ; ಕುಕ್ಕುಟ: ಕೋಳಿ; ಕಾಕ: ಕಾಗೆ; ಬಕ: ಕೊಕ್ಕರೆ; ಪವಮಾನ: ಗಾಳಿ; ಖಗಪತಿ: ಗರುಡ; ದಿವಿಜ: ದೇವತೆ; ರಜನಿ:ರಾತ್ರಿ; ಕೃಶಾನು: ಅಗ್ನಿ;ಗಾರ್ಧಭ: ಕತ್ತೆ; ವೃಷಭ: ಎತ್ತು; ಶಿಂಶುಮಾರಕ: ಮೊಸಳೆ; ವಾನರ: ಕೋತಿ, ಹಯ: ಕುದುರೆ; ಕುಂಜರ: ಆನೆ; ಪಂಚಾನನ: ಸಿಂಹ; ಮೃಗ: ಜಿಂಕೆ, ಪೋತಕ: ಹರಿಗೋಲು, ದಾಟಿಸುವವ; ಗುಣ:ನಡತೆ, ಸ್ವಭಾವ; ವಾನರ: ಕಪಿ; ನರೇಂದ್ರ: ರಾಜ; ಬೇಹುದು: ಬೇಕು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಶ್ವಾನ +ಕುಕ್ಕುಟ +ಕಾಕ +ಬಕ +ಪವ
ಮಾನ +ಖಗಪತಿ+ ದಿವಿಜ+ ರಜನಿ +ಕೃ
ಶಾನುವಿನ+ ಗಾರ್ಧಭನ +ವೃಷಭನ +ಶಿಂಶುಮಾರಕನ
ವಾನರನ +ಹಯ +ಕುಂಜರನ+ ಪಂ
ಚಾನನನ+ ಮೃಗ +ಪೋತಕನ+ ಗುಣವ್
ಆ+ನರೆಂದ್ರನೊಳ್+ಇರಲು +ಬೇಹುದು +ಭೂಪ +ಕೇಳೆಂದ

ಅಚ್ಚರಿ:
(೧) ೧೭ ರೀತಿಯ ಗುಣಗಳನ್ನು ವಿವರಿಸಿರುವ ಪದ್ಯ
(೨) ವಾನರ, ವಾನರೇಂದ್ರ – ಪದಗಳ ಬಳಕೆಯ ವೈಖರಿ
(೩) ಶ್ವಾನ, ಪವಮಾನ – ಪ್ರಾಸ ಪದ

ಪದ್ಯ ೧೫ : ಅಗ್ನಿಯು ಮಾಹಿಷ್ಮತಿ ನಗರಕ್ಕೆ ಯಾವ ವರವನ್ನು ಕೊಟ್ಟನು?

ಧರಣಿಸುರರಲಿ ಸುಪ್ರಧಾನರು
ವೆರಸಿ ಬಂದಗ್ನಿಯ ಪದತ್ರಯ
ಕೆರಗಿ ಕೋಪಸ್ತಂಭವನು ಮಾಡಿದರು ದೈನ್ಯದಲಿ
ಪುರದೊಳದು ಮೊದಲಾಗಿ ಕಾಮಿನಿ
ಯರಿಗೆ ಹಾದರ ಸಲುವುದಿದು ವಿ
ಸ್ತರಣವೆಂದು ಕೃಶಾನು ವರವನು ಕೊಟ್ಟನಾ ನೃಪಗೆ (ಸಭಾ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ಅಗ್ನಿಯ ಉಗ್ರರೂಪವನ್ನು ನೋಡಿ ಭಯಭೀತರಾಗಿ, ರಾಜನ ಪ್ರಧಾನರೂ, ಬ್ರಾಹ್ಮಣರೂ ಬಂದು ಅಗ್ನಿಯ ಪಾದಗಳಿಗೆ ನಮಸ್ಕರಿಸಿ ದೈನ್ಯದಿಂದ ಪ್ರಾರ್ಥಿಸಿದರು. ಅಗ್ನಿಯ ಕೋಪವು ಶಾಂತವಾಯಿತು. ಅಂದಿನಿಂದ ಆ ನಗರದಲ್ಲಿ ಸ್ತ್ರೀಯರು ವ್ಯಭಿಚಾರ ಮಾಡಿದರೂ ತಪ್ಪಿಲ್ಲವೆಂದು ಅಗ್ನಿಯು ವರವನ್ನು ನೀಡಿದನು.

ಅರ್ಥ:
ಧರಣಿ: ಭೂಮಿ; ಧರಣಿಸುರ: ಬ್ರಾಹ್ಮಣ; ಪ್ರಧಾನ: ಮುಖ್ಯಸ್ಥ; ಬಂದು: ಆಗಮಿಸಿ; ಅಗ್ನಿ: ಹವ್ಯವಾಹನ, ಪಾವಕ; ಪದ: ಚರಣ; ಕೆರಗಿ: ನಮಸ್ಕರಿಸಿ; ಕೋಪ: ರೋಷ; ಸ್ತಂಭ:ಸ್ಥಿರವಾಗಿರುವಿಕೆ, ತಡೆ; ದೈನ್ಯ:ದೀನತೆ; ಪುರ: ಊರು; ಕಾಮಿನಿ: ಸ್ತ್ರೀ; ಹಾದರ: ವ್ಯಭಿಚಾರ; ವಿಸ್ತರಣ: ಬೆಳೆಸುವುದು; ಕೃಶಾನು: ಬೆಂಕಿ; ವರ: ಅನುಗ್ರಹ; ನೃಪ: ರಾಜ;

ಪದವಿಂಗಡಣೆ:
ಧರಣಿಸುರರಲಿ+ ಸುಪ್ರಧಾನರು
ವೆರಸಿ+ ಬಂದ್+ಅಗ್ನಿಯ+ ಪದತ್ರಯಕ್
ಎರಗಿ+ ಕೋಪಸ್ತಂಭವನು+ ಮಾಡಿದರು+ ದೈನ್ಯದಲಿ
ಪುರದೊಳ್+ಅದು +ಮೊದಲಾಗಿ +ಕಾಮಿನಿ
ಯರಿಗೆ +ಹಾದರ +ಸಲುವುದ್+ಇದು+ ವಿ
ಸ್ತರಣವೆಂದು +ಕೃಶಾನು +ವರವನು +ಕೊಟ್ಟನಾ +ನೃಪಗೆ

ಅಚ್ಚರಿ:
(೧) ಅಗ್ನಿ, ಕೃಶಾನು – ಸಮನಾರ್ಥಕ ಪದ