ಪದ್ಯ ೫: ಸಂಜಯನು ಯಾರನ್ನು ನೋಡಲು ಹೋದನು?

ಸೆಳೆದುಕೊಂಡನು ಮೃತ್ಯುವಿನ ಹೆಡ
ತಲೆಯನೊದೆದು ಕೃಪಾಳು ತನ್ನನು
ತಲೆಬಳಿಚಿ ಕಳುಹಿದರೆ ಬಂದೆನು ರಾಯನರಕೆಯಲಿ
ಬಳಲಿ ಬೀಳುತ್ತೇಳುತೊಬ್ಬನೆ
ತಲೆಮುಸುಕಿನಲಿ ನಡೆಯೆ ಕಂಡೆನು
ನೆಲನೊಡೆಯನಹುದಲ್ಲೆನುತ ಸುಳಿದೆನು ಸಮೀಪದಲಿ (ಗದಾ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಸಾತ್ಯಕಿಯು ನನ್ನ ಹೆಡತಲೆಗೆ ಹೂಡಿದ್ದ ಕತ್ತಿಯಿಂದ ಅವರು ನನ್ನನ್ನುಳಿಸಿ ಕಳಿಸಿದರು. ಕೌರವನನ್ನು ಹುಡುಕುತ್ತಾ ಬರುತ್ತಿರಲು ತಲೆಗೆ ಮುಸುಕು ಹಾಕಿಕೊಂಡು ಬೀಳುತ್ತಾ ಏಳುತ್ತಾ ಹೋಗುವವನನ್ನು ಕಂಡೆನು. ಇವನು ಅರಸನೋ ಅಲ್ಲವೋ ನೋಡಿ ಬಿಡೋಣವೆಂದು ಹತ್ತಿರಕ್ಕೆ ಹೋದೆನು.

ಅರ್ಥ:
ಸೆಳೆ: ಎಳೆತ, ಸೆಳೆತ; ಮೃತ್ಯು: ಸಾವು; ಹೆಡತಲೆ: ಹಿಂದಲೆ; ಒದೆ: ತಳ್ಳು; ಕೃಪೆ: ಕರುಣೆ; ತಲೆಬಳಿಚು: ತಲೆ ಕತ್ತರಿಸು; ಕಳಿಸು: ತೆರಳು; ಬಂದು: ಆಗಮಿಸು; ಅರಕೆ: ಕೊರತೆ, ನ್ಯೂನತೆ; ಬಳಲು: ಆಯಾಸ, ದಣಿವು; ಬೀಳು: ಎರಗು; ಏಳು: ಹತ್ತು; ತಲೆ: ಶಿರ; ಮುಸುಕು: ಹೊದಿಕೆ; ನಡೆ: ಚಲಿಸು; ಕಂಡು: ನೊಡು; ನೆಲ: ಭೂಮಿ; ಒಡೆಯ: ರಾಜ; ಸುಳಿ: ಬೀಸು, ತೀಡು; ಸಮೀಪ: ಹತ್ತಿರ;

ಪದವಿಂಗಡಣೆ:
ಸೆಳೆದುಕೊಂಡನು +ಮೃತ್ಯುವಿನ +ಹೆಡ
ತಲೆಯನ್+ಒದೆದು +ಕೃಪಾಳು +ತನ್ನನು
ತಲೆಬಳಿಚಿ +ಕಳುಹಿದರೆ +ಬಂದೆನು+ ರಾಯನ್+ಅರಕೆಯಲಿ
ಬಳಲಿ +ಬೀಳುತ್+ಏಳುತ್+ಒಬ್ಬನೆ
ತಲೆಮುಸುಕಿನಲಿ +ನಡೆಯೆ +ಕಂಡೆನು
ನೆಲನೊಡೆಯನ್+ಅಹುದಲ್ಲೆನುತ +ಸುಳಿದೆನು +ಸಮೀಪದಲಿ

ಅಚ್ಚರಿ:
(೧) ದುರ್ಯೋಧನನನ್ನು ನೆಲನೊಡೆಯ ಎಂದು ಕರೆದಿರುವುದು
(೨) ದುರ್ಯೋಧನನು ನಡೆಯುತ್ತಿದ್ದ ಪರಿ – ಬಳಲಿ ಬೀಳುತ್ತೇಳುತೊಬ್ಬನೆ ತಲೆಮುಸುಕಿನಲಿ ನಡೆಯೆ ಕಂಡೆನು

ಪದ್ಯ ೨೯: ಭೀಷ್ಮನು ದುರ್ಯೋಧನನಿಗೆ ಏನು ಹೇಳಿದನು?

ತಂದೆ ಕಂಡೈ ಕೌರವೇಶ ಪು
ರಂದರಾತ್ಮ ಜನತಿಬಳವ ನೀ
ನಿಂದೆ ಕಾಣಲುಬೇಹುದೈ ಹಲವಂಗದಲಿ ನರನ
ಹಿಂದೆ ಬಲ್ಲರು ದ್ರೋಣ ಕೃಪ ಗುರು
ನಂದನಾದಿಗಳೆಲ್ಲ ಕೇಳೈ
ಮಂದಮತಿತನ ಬೇಡವಿನ್ನು ಕೃಪಾಳುವಾಗೆಂದ (ಭೀಷ್ಮ ಪರ್ವ, ೧೦ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಷ್ಮನು ಅಪ್ಪಾ, ದುರ್ಯೋಧನ, ಅರ್ಜುನನ ಅತಿಶಯ ಬಲವನ್ನು ಈಗ ನೋಡಿದೆಯಲ್ಲಾ, ಹೀಗೆಯೇ ಅವನ ಹಲವು ಗುಣಗಳನ್ನು ಈಗಲೇ ಗುರುತಿಸು. ದ್ರೋಣ, ಕೃಪ, ಅಶ್ವತ್ಥಾಮರು ಬಲು ಹಿಮ್ದಿನಿಂದಲೂ ಅವನ್ನು ಗುರುತಿಸಿದ್ದಾರೆ. ಇನ್ನು ನಿನ್ನ ಮಮ್ದ ಮತಿಯನ್ನು ಬಿಟ್ಟು ಕೃಪಾಳುವಾಗು ಎಂದನು.

ಅರ್ಥ:
ತಂದೆ: ಅಪ್ಪ, ಪಿತ; ಕಂಡು: ನೋಡು; ಪುರಂದರ: ಇಂದ್ರ; ಆತ್ಮಜ: ಮಗ; ಅತಿಬಳವ: ಅತಿಶಯ ಶಕ್ತಿ; ನಿಂದು: ನಿಲ್ಲು; ಕಾಣು: ತೋರು; ಹಲವಂಗ: ಬಹಳ ರೀತಿ; ನರ: ಅರ್ಜುನ; ಹಿಂದೆ: ಪುರಾತನ; ಬಲ್ಲರು: ತಿಳಿದವರು; ನಂದನ: ಮಕ್ಕಳು; ಆದಿ: ಹಲವಾರು; ಕೇಳು: ತಿಳಿಸು; ಮಂದಮತಿ: ದಡ್ಡ; ಬೇಡ: ಸಲ್ಲದು; ಕೃಪಾಳು: ದಯೆ;

ಪದವಿಂಗಡಣೆ:
ತಂದೆ +ಕಂಡೈ +ಕೌರವೇಶ+ ಪು
ರಂದರ+ಆತ್ಮಜನ್+ಅತಿಬಳವ +ನೀನ್
ಇಂದೆ+ ಕಾಣಲುಬೇಹುದೈ +ಹಲವಂಗದಲಿ +ನರನ
ಹಿಂದೆ +ಬಲ್ಲರು +ದ್ರೋಣ +ಕೃಪ +ಗುರು
ನಂದನ+ಆದಿಗಳೆಲ್ಲ+ ಕೇಳೈ
ಮಂದಮತಿತನ +ಬೇಡವಿನ್ನು +ಕೃಪಾಳುವಾಗೆಂದ

ಅಚ್ಚರಿ:
(೧) ಅರ್ಜುನನನ್ನು ಪುರಂದರಾತ್ಮಜ ಎಂದು ಕರೆದಿರುವುದು
(೨) ದುರ್ಯೋಧನನನ್ನು ಮಂದಮತಿ ಎಂದು ಬಯ್ದಪರಿ

ಪದ್ಯ ೧೨೦: ದ್ರೌಪದಿಯು ಕೃಷ್ಣನನ್ನು ಹೇಗೆ ಪ್ರಾರ್ಥಿಸಿದಳು – ೯?

ಒದೆದೊಡೊಲಿದವರುಂಟೆ ಬೈದೊಡೆ
ಪದವನಿತ್ತವರುಂಟೆ ಕರುಣಾ
ಸ್ಪದರನಾ ಕೇಳ್ದರಿಯೆನೇ ಕಮಲಾಸನಾದ್ಯರಲಿ
ಪದವ ಸೋಂಕಿದ ಮೂಹೊರಡು ತಿ
ದ್ದಿದುದು ಗಡ ಹೆಂಗುಸಿನ ಹೇರಾ
ಳದ ಕೃಪಾಳುವೆ ಕೃಷ್ಣ ಸಲಹೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೨೦ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ಒದ್ದರೂ ಪ್ರೀತಿಸುವರುಂಟೆ? ನಿನನ್ನು ಕಾಲಿನಿಂದ ಒದ್ದ ಭೃಗು ಮಹರ್ಷಿಯನ್ನು ನೀನು ಪ್ರೀತಿಸಿದೆ, ಬೈದರೂ ದಯೆ ತೋರುವವರುಂಟೆ? ಶಿಶುಪಾಲನು ನಿನಗೆ ಎಷ್ಟೆ ಬೈದರು ಅವನಿಗೆ ಸದ್ಗತಿಯನ್ನು ನೀಡಿದೆ, ಬ್ರಹ್ಮಾದಿಗಳಲ್ಲೂ ನಿನ್ನಂತಹ ಕರುಣಾಶಾಲಿಗಳಿಲ್ಲ. ನಿನ್ನ ಪಾದದ ಸೋಂಕಿನಿಂದ ಕುಬ್ಜೆಯ ಗೂನುಬೆನ್ನು ನೆಟ್ಟಗಾಯಿತು. ಹೆಂಗಸರಿಗೆ ನೀನು ಅತೀವ ಕರುಣೆಯನ್ನು ತೋರಿಸುವವನು, ಹೇ ಕೃಷ್ಣ ನನ್ನನ್ನು ಕಾಪಾಡು ಎಂದು ದ್ರೌಪದಿ ಕೃಷ್ಣನಲ್ಲಿ ಮೊರೆಯಿಟ್ಟಳು.

ಅರ್ಥ:
ಒದೆ: ಕಾಲಿನಿಂದ ನೂಕು; ಒಲಿ: ಪ್ರೀತಿಸು; ಬೈದು: ಜರೆ, ಹೀಯಾಳಿಸು; ಪದ: ಪದವಿ, ಸ್ಥಾನ; ಕರುಣಾ: ದಯೆ; ಕೇಳು: ಆಲಿಸು; ಅರಿ: ತಿಳಿ; ಕಮಲಾಸನ: ಕಮಲವನ್ನು ಆಸನವನ್ನಾಗಿಸಿದವನು (ಬ್ರಹ್ಮ); ಆದಿ: ಮುಂತಾದ; ಪದ: ಪಾದ; ಸೊಂಕು: ತಾಗು, ಮುಟ್ಟು; ಮೂಹೊರಡು: ಮೂರು ಡೊಂಕು; ತಿದ್ದು: ಸರಿಪಡಿಸು; ಗಡ: ಅಲ್ಲವೆ; ಹೆಂಗಸು: ಸ್ತ್ರೀ; ಹೇರಾಳ: ಹೆಚ್ಚು; ಕೃಪಾಳು: ದಯೆ, ಕರುಣೆ; ಸಲಹು: ರಕ್ಷಿಸು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಒದೆದೊಡ್+ಒಲಿದವರುಂಟೆ+ ಬೈದೊಡೆ
ಪದವನ್+ಇತ್ತವರುಂಟೆ +ಕರುಣಾ
ಸ್ಪದರನಾ+ ಕೇಳ್ದ್+ಅರಿಯೆನೇ +ಕಮಲಾಸನಾದ್ಯರಲಿ
ಪದವ+ ಸೋಂಕಿದ +ಮೂಹೊರಡು +ತಿ
ದ್ದಿದುದು +ಗಡ+ ಹೆಂಗುಸಿನ+ ಹೇರಾ
ಳದ +ಕೃಪಾಳುವೆ +ಕೃಷ್ಣ +ಸಲಹೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ಪದ – ೨ ಅರ್ಥದಲ್ಲಿ ಬಳಕೆ
(೨) ಕರುಣಾಸ್ಪದ, ಕೃಪಾಳು – ಕೃಷ್ಣನ ಗುಣಗಾನದ ಪದಗಳು

ಪದ್ಯ ೧೬: ಧೃತರಾಷ್ಟ್ರನು ವಿದುರನಿಗೆ ಏನು ಹೇಳಿದನು?

ಕೇಳಿದನು ಧೃತರಾಷ್ಟ್ರನಾಗ ಕೃ
ಪಾಳುವಿನ ಗಮನವನು ಚಿತ್ತವ
ಹೂಳಿ ಹೆಚ್ಚಿದ ಹರುಷದಲಿ ಉಬ್ಬೆದ್ದನಡಿಗಡಿಗೆ
ಹೇಳಿದನು ವಿದುರಂಗೆ ಭಂಡಾ
ರಾಲಯದೊಳುಳ್ಳಮಳ ಮೌಕ್ತಿಕ
ಜಾಳಿಗೆಯ ಪೆಟ್ಟಿಗೆಯೊಳಾಯಿಸು ವರ ಸುರತ್ನಗಳ (ಉದ್ಯೋಗ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ದಯಾಪರನಾದ ಶ್ರೀಕೃಷ್ಣನ ಆಗಮನವನ್ನು ಕೇಳಿ ಧೃತರಾಷ್ಟ್ರನು ಸಂತಸಗೊಂಡನು, ತನ್ನ ಮನಸ್ಸಿನಲ್ಲಿ ಅವನಿಗೆ ಅಪರಿಮಿತ ಆನಂದವಾಯಿತು. ತಕ್ಷಣವೇ ವಿದುರನನ್ನು ಕರೆದು ಭಂಡಾರದ ಪೆಟ್ಟಿಗಲ್ಲಿದ್ದ ಶ್ರೇಷ್ಠವಾದ ರತ್ನ, ಮೌಕ್ತಿಕ, ಮಣಿಗಳನ್ನು ತೆಗೆಯಲು ಹೇಳಿದನು.

ಅರ್ಥ:
ಕೇಳು: ಆಲಿಸು; ಕೃಪಾಳು: ದಯಾಳು, ಕರುಣಿ; ಗಮನ: ಆಗಮನ; ಚಿತ್ತ: ಮನಸ್ಸು; ಹೂಳು: ಮುಚ್ಚು; ಹೆಚ್ಚು: ಅಧಿಕ; ಹರುಷ: ಸಂತೋಷ; ಉಬ್ಬು:ಹಿಗ್ಗು, ಎದ್ದು: ಎದ್ದೇಳು; ಅಡಿಗಡಿಗೆ: ಮತ್ತೆ ಮತ್ತೆ; ಹೇಳು: ಮಾತಾಡು, ನುಡಿ; ಭಂಡಾರ: ಬೊಕ್ಕಸ, ಖಜಾನೆ; ಆಲಯ: ಮನೆ; ಉಳ್ಳ: ಇರುವ; ಅಮಳ: ಪರಿಶುದ್ಧ; ಮೌಕ್ತಿಕ:ಮುತ್ತು; ಜಾಳಿಗೆ: ಹಬ್ಬುವಿಕೆ; ಪೆಟ್ಟಿಗೆ: ಸಂದೂಕ, ಕರಂಡಕ; ಆಯಿಸು: ಆರಿಸು; ವರ: ಶ್ರೇಷ್ಠ; ಸುರತ್ನ: ಒಳ್ಳೆಯ ರತ್ನ, ಮಣಿ; ರತ್ನ: ವಜ್ರ, ಮಾಣಿಕ್ಯ ಮುಂತಾದ ಬೆಲೆ ಯುಳ್ಳ ಮಣಿ;

ಪದವಿಂಗಡಣೆ:
ಕೇಳಿದನು +ಧೃತರಾಷ್ಟ್ರನ್+ಆಗ +ಕೃ
ಪಾಳುವಿನ +ಗಮನವನು +ಚಿತ್ತವ
ಹೂಳಿ +ಹೆಚ್ಚಿದ +ಹರುಷದಲಿ+ ಉಬ್ಬೆದ್ದನ್+ಅಡಿಗಡಿಗೆ
ಹೇಳಿದನು +ವಿದುರಂಗೆ +ಭಂಡಾರ
ಆಲಯದೊಳ್+ಉಳ್ಳ್+ಅಮಳ +ಮೌಕ್ತಿಕ
ಜಾಳಿಗೆಯ +ಪೆಟ್ಟಿಗೆಯೊಳ್+ಆಯಿಸು +ವರ +ಸುರತ್ನಗಳ

ಅಚ್ಚರಿ:
(೧) ಹೂಳಿ ಹೆಚ್ಚಿದ ಹರುಷ – ತುಂಬ ಸಂತಸಪಟ್ಟು ಎಂದು ಹೇಳಲು ಬಳಸಿದ ಪದ
(೨) ಅತ್ಯಂತ ಆನಂದಗೊಂಡನು ಎಂದು ತಿಳಿಸಲು – ಉಬ್ಬೆದ್ದನಡಿಗಡಿಗೆ