ಪದ್ಯ ೮೮: ಭೀಮನ ಕೀಚಕನ ಕಾದಾಟ ಹೇಗೆ ಪ್ರಾರಂಭವಾಯಿತು?

ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು (ವಿರಾಟ ಪರ್ವ, ೩ ಸಂಧಿ, ೮೮ ಪದ್ಯ)

ತಾತ್ಪರ್ಯ:
ಕಾಮದಿಂದ ದೀನನಾಗಿದ್ದ ಕೀಚಕನು ಎಲೇ ಚಪಲೆ ಇದೇನು, ಹೋಗು ಎಂದು ಮುಂಗೈಯಲ್ಲಿ ಭೀಮನನ್ನು ಸರಿಸಿದನು. ಭೀಮನು ಕಿಚಕನ ಹಿಂದೆ ನುಗ್ಗಿ ಅವನ ತುರುಬನ್ನು ಹಿಡಿದನು, ಆ ಹಿಡಿತದಿಂದ ಕಳವಳಿಸಿದ ಕೀಚಕನಿಗೆ ಪರಿಸ್ಥಿತಿಯ ಅರಿವಾಯಿತು, ಇದು ಹೆಂಗಸಲ್ಲ, ಯಾರೋ ಮೋಸಗಾರನಾದ ದ್ರೋಹಿ, ಎಂದು ತಿಳಿದು ಕೀಚಕನು ಇವನ ಕರುಳನ್ನು ಬಿಗಿ ಎಂದು ಒಳಹೊಕ್ಕು ಕಾದಿದನು.

ಅರ್ಥ:
ಚಪಳೆ: ಚಂಚಲೆ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಹಾಯ್ದು: ಮೇಲೆ ಬೀಳು; ಕೃಪಣ: ದುಷ್ಟ; ಮತಿ: ಬುದ್ಧಿ; ಮುಂಗೈ: ಮುಂದಿನ ಹಸ್ತ; ಅನಿಲಜ: ವಾಯು ಪುತ್ರ; ಅಪರ: ಬೇರೆಯ; ಭಾಗ: ಅಂಶ, ಪಾಲು; ಹಿಡಿ: ಬಂಧಿಸು; ತುರುಬು: ಕೂದಲಿನ ಗಂಟು, ಮುಡಿ; ವಿಪುಳ: ಹೆಚ್ಚು, ಜಾಸ್ತಿ; ಬಲ: ಶಕ್ತಿ; ವಿಪುಳಬಲ: ಪರಾಕ್ರಮಿ; ಕಳವಳ: ತಳಮಳ, ಗೊಂದಲ; ಕುಪಿತ: ಕೋಪ; ಹೆಂಗುಸು: ಹೆಣ್ಣು; ಅಪಸದ: ನೀಚ; ತೆಗೆ: ಈಚೆಗೆ ತರು, ಹೊರತರು; ಕರುಳು: ಪಚನಾಂಗದ ಭಾಗ; ಹೊಕ್ಕು: ಸೇರು; ಹೆಣಗು: ಹೋರಾಡು, ಕಾಳಗ ಮಾಡು;

ಪದವಿಂಗಡಣೆ:
ಚಪಳೆ +ಫಡ +ಹೋಗೆನುತ +ಹಾಯ್ದನು
ಕೃಪಣಮತಿ +ಮುಂಗೈಯಲ್+ಅನಿಲಜನ್
ಅಪರಭಾಗಕೆ+ ಹಾಯ್ದು +ಹಿಡಿದನು +ಕೀಚಕನ +ತುರುಬ
ವಿಪುಳಬಲ +ಕಳವಳಿಸಿದನು +ಕಡು
ಕುಪಿತನಾದನು +ಹೆಂಗುಸಲ್+ಇವನ್
ಅಪಸದನು +ತೆಗೆ +ಕರುಳನ್+ಎನುತ್+ಒಳಹೊಕ್ಕು +ಹೆಣಗಿದನು

ಅಚ್ಚರಿ:
(೧) ಕೀಚಕನು ಬಯ್ದ ಪರಿ – ಚಪಳೆ ಫಡ ಹೋಗೆನುತ ಹಾಯ್ದನು ಕೃಪಣಮತಿ