ಪದ್ಯ ೨೦: ದುರ್ಯೋಧನನು ಶಕುನಿಗೆ ಏನು ಹೇಳಿದ?

ಎನ್ನ ಬಹುಮಾನಾವಮಾನವು
ನಿನ್ನದೈಸಲೆ ಮಾವ ನೀ ಸಂ
ಪನ್ನ ಕೃತ್ರಿಮವಿದ್ಯನಾದರೆ ತೊಡಚು ಸಾಕದನು
ಅನ್ನಿಗರಿಗರುಹದಿರು ನಮ್ಮವ
ರೆನ್ನದಿರು ವಿದುರಾದಿಗಳನುಪ
ಪನ್ನ ಮಂತ್ರವನರುಹು ಬೊಪ್ಪಂಗೆಂದನವನೀಶ (ಸಭಾ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಮಾವ ನನ್ನ ಗೌರವ, ಅಗೌರವೆರಡೂ ನಿನ್ನದೇ, ನೀನು ಮೋಸದಾಟದಲ್ಲಿ ಪಾರಂಗತನಾದರೆ, ಅದನ್ನು ಈಗಲೇ ಪ್ರಾರಂಭಮಾಡು. ವಿದುರನೇ ಮೊದಲಾದವರು ನಮ್ಮವರೆಂದು ತಿಳಿಯಬೇಡ. ಕೆಲಸವಾಗಲು ಅಗತ್ಯವಾದ ಆಲೋಅನೆಯನ್ನು ತಂದೆಗೆ ಬೋಧಿಸು, ಬೇರೆಯವರಿಗೆ ಹೇಳಬೇಡ ಎಂದು ಶಕುನಿಗೆ ತಿಳಿಸಿದನು.

ಅರ್ಥ:
ಬಹುಮಾನ: ಗೌರವ; ಅವಮಾನ: ಅಗೌರವ; ಐಸಲೆ: ಅಲ್ಲವೆ; ಮಾವ: ತಾಯಿಯ ಸಹೋದರ; ಸಂಪನ್ನ: ಶ್ರೀಮಂತ, ಧನಿಕ; ಕೃತ್ರಿಮ: ಮೋಸ; ತೊಡಚು: ಕಟ್ಟು, ಬಂಧಿಸು; ಸಾಕು: ಬೆಳೆಸು, ಪೋಷಿಸು; ಅನ್ನಿಗರು: ಅನ್ಯರು; ಅರುಹ: ಅರ್ಹ; ಆದಿ: ಮುಂತಾದ; ಉಪಪನ್ನ: ಹಣವಂತ, ಉಂಟಾದ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಅರುಹು: ತಿಳಿಸು, ಹೇಳು; ಬೊಪ್ಪ: ತಂದೆ; ಅವನೀಶ; ರಾಜ;

ಪದವಿಂಗಡಣೆ:
ಎನ್ನ +ಬಹುಮಾನ+ಅವಮಾನವು
ನಿನ್ನದ್+ಐಸಲೆ +ಮಾವ +ನೀ +ಸಂ
ಪನ್ನ +ಕೃತ್ರಿಮವಿದ್ಯನಾದರೆ+ ತೊಡಚು +ಸಾಕದನು
ಅನ್ನಿಗರಿಗ್+ಅರುಹದಿರು +ನಮ್ಮವ
ರೆನ್ನದಿರು+ ವಿದುರಾದಿಗಳನ್+ಉಪ
ಪನ್ನ +ಮಂತ್ರವನ್+ಅರುಹು +ಬೊಪ್ಪಂಗ್+ಎಂದನ್+ಅವನೀಶ

ಅಚ್ಚರಿ:
(೧) ದುರ್ಯೋಧನನು ಶಕುನಿಗೆ ನೀಡಿದ ಸ್ವಾತಂತ್ರ್ಯ – ನೀ ಸಂಪನ್ನ ಕೃತ್ರಿಮವಿದ್ಯನಾದರೆ ತೊಡಚು ಸಾಕದನು; ಅನ್ನಿಗರಿಗರುಹದಿರು ನಮ್ಮವರೆನ್ನದಿರು