ಪದ್ಯ ೬೦: ಯುಧಿಷ್ಠಿರನೇಕೆ ಧನ್ಯನಾಗಿರುವನು?

ಅರಸ ಕೇಳೈ ಕ್ಷಾತ್ರ ತೇಜವ
ಹೊರೆವುದೇ ಬ್ರಾಹ್ಮಣ್ಯ ಶಕ್ತಿ
ಸ್ಫುರಣ ನೀನೀ ಬ್ರಹ್ಮವರ್ಗದ ಸಾರ ಸೌಖ್ಯದಲಿ
ಮೆರೆದೆಲಾ ವಿಪ್ರಾವಮಾನವೆ
ಸಿರಿಗೆ ನಂಜುಕಣಾ ಮಹೀಸುರ
ವರರುಪಾಸನೆ ನಿನಗೆ ನೀ ಕೃತಕೃತ್ಯನಹೆಯೆಂದ (ಅರಣ್ಯ ಪರ್ವ, ೧೪ ಸಂಧಿ, ೬೦ ಪದ್ಯ)

ತಾತ್ಪರ್ಯ:
ರಾಜ ಧರ್ಮಜ ಕೇಳು, ಕ್ಷಾತ್ರ ತೇಜಸ್ಸನ್ನು ಬ್ರಾಹ್ಮಣ್ಯದ ಶಕ್ತಿಯೇ ಕಾಪಾಡುತ್ತದೆ. ಇಷ್ಟು ಜನ ಬ್ರಾಹ್ಮಣರ ಸಮೂಹದಲ್ಲಿ ನೀನು ಶೋಭಿಸುತ್ತಿರುವೆ. ವಿಪ್ರರನ್ನು ಅವಮಾನಿಸುವುದೇ ಐಶ್ವರ್ಯಕ್ಕೆ ವಿಷ ಸಮಾನ. ನೀನು ಬ್ರಾಹ್ಮಣರನ್ನು ಸೇವಿಸುತ್ತಿರುವುದರಿಂದ ಧನ್ಯನಾಗಿರುವೆ ಎಂದು ನಹುಷನು ನುಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಕ್ಷಾತ್ರ: ಕ್ಷತ್ರಿಯ; ತೇಜ: ಕಾಮ್ತಿ; ಹೊರೆ:ಕಾಪಾಡು; ಬ್ರಾಹ್ಮಣ್ಯ: ಬ್ರಾಹ್ಮಣನ ಕರ್ಮಗಳು; ಶಕ್ತಿ: ಬಲ; ಸ್ಫುರಣ: ಕಂಪನ, ಹೊಳಪು; ಬ್ರಹ್ಮ: ಬ್ರಾಹ್ಮಣ; ವರ್ಗ: ಗುಂಪು; ಸಾರ: ಶ್ರೇಷ್ಠವಾದ; ಸೌಖ್ಯ: ಸುಖ, ನೆಮ್ಮದಿ; ಮೆರೆ: ಶೋಭಿಸು; ವಿಪ್ರ: ಬ್ರಾಹ್ಮಣ; ಅವಮಾನ: ನಿಂದಿಸು, ಅಗೌರವ; ಸಿರಿ: ಐಶ್ವರ್ಯ; ನಂಜು: ವಿಷ; ಮಹೀಸುರ: ಬ್ರಾಹ್ಮಣ; ವರ: ಶ್ರೇಷ್ಠ; ಉಪಾಸನೆ: ಪೂಜೆ; ಕೃತಕೃತ್ಯ: ಧನ್ಯ, ಕೃತಾರ್ಥ;

ಪದವಿಂಗಡಣೆ:
ಅರಸ +ಕೇಳೈ +ಕ್ಷಾತ್ರ +ತೇಜವ
ಹೊರೆವುದೇ +ಬ್ರಾಹ್ಮಣ್ಯ +ಶಕ್ತಿ
ಸ್ಫುರಣ+ ನೀನ್+ಈ+ ಬ್ರಹ್ಮವರ್ಗದ +ಸಾರ +ಸೌಖ್ಯದಲಿ
ಮೆರೆದೆಲಾ+ ವಿಪ್ರ+ಅವಮಾನವೆ
ಸಿರಿಗೆ+ ನಂಜುಕಣಾ +ಮಹೀಸುರ
ವರರ್+ಉಪಾಸನೆ +ನಿನಗೆ+ ನೀ +ಕೃತಕೃತ್ಯನಹೆಯೆಂದ

ಅಚ್ಚರಿ:
(೧) ಯಾವುದು ವಿಷಕ್ಕೆ ಸಮಾನ – ವಿಪ್ರಾವಮಾನವೆ ಸಿರಿಗೆ ನಂಜುಕಣಾ
(೨) ಮಹೀಸುರ, ಬ್ರಹ್ಮವರ್ಗ, ಬ್ರಾಹ್ಮಣ್ಯ, ವಿಪ್ರ – ಸಮನಾರ್ಥಕ ಪದಗಳು

ಪದ್ಯ ೪೪: ಕೃಷ್ಣನ ಮಹಿಮೆಯನ್ನು ಸಹದೇವ ಹೇಗೆ ನುಡಿದನು?

ದೇವ ನಿಮ್ಮಡಿಯಂಘ್ರಿ ಕಮಲವ
ನಾವ ನೆನೆವನವಂಗೆ ಜಪತಪ
ಸಾವು ಹುಟ್ಟಿಲ್ಲೆಂಬುದೈ ವರವೇದಶಾಸ್ತ್ರಗಳು
ನಾವಲೇ ಕೃತಕೃತ್ಯರಿಂದೀ
ದೇವ ಸಾಕ್ಷಾತ್ಕಾರ ದರ್ಶನ
ಭಾವವೋಯಿದು ನಮಗೆನುತ ಹೊಗಳಿದನು ಸಹದೇವ (ಅರಣ್ಯ ಪರ್ವ, ೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಸಹದೇವನು ಶ್ರೀಕೃಷ್ಣನನ್ನು ಹೊಗಳುತ್ತಾ, ದೇವ ನಿಮ್ಮ ಪಾದಕಮಲಗಳನ್ನು ಯಾರು ನೆನೆಯುತ್ತಾರೋ ಅವನಿಗೆ ಹುಟ್ಟು ಸಾವುಗಳಿಲ್ಲ, ಅವನು ಜಪತಪಗಳನ್ನು ಮಾಡಬೇಕಿಲ್ಲ ಎಂದು ವೇದಗಳೂ, ಶಾಸ್ತ್ರಗಳೂ ಹೇಳುತ್ತವೆ. ನಿಮ್ಮ ಸಾಕ್ಷಾತ್ ದರ್ಶನದ ಫಲದಿಂದ ನಾವು ಕೃತಾರ್ಥರಾಗಿದ್ದೇವೆ ಎಂದು ಶ್ರೀಕೃಷ್ಣನನ್ನು ಹೊಗಳಿದನು.

ಅರ್ಥ:
ದೇವ: ಭಗವಂತ; ನಿಮ್ಮಡಿ: ನಿಮ್ಮ ಪಾದ; ಅಂಘ್ರಿ: ಪಾದ; ಕಮಲ: ತಾವರೆ; ನೆನೆ; ಜ್ಞಾಪಿಸು; ಜಪ: ದೇವರ ನಾಮದ ಪಠಣ; ತಪ: ಧ್ಯಾನ; ಸಾವು: ಮರಣ; ಹುಟ್ಟು: ಜನನ; ವರ: ಶ್ರೇಷ್ಠ; ವೇದ: ಆಗಮ, ಜ್ಞಾನ; ಶಾಸ್ತ್ರ: ಧಾರ್ಮಿಕ ವಿಷಯಗಳ ಬಗೆಗೆ ಬರೆದ ಪ್ರಮಾಣ ಗ್ರಂಥ, ದರ್ಶನ; ಕೃತಕೃತ್ಯ: ಧನ್ಯ, ಕೃತಾರ್ಥ; ಸಾಕ್ಷಾತ್ಕಾರ: ಜ್ಞಾನದ ಅನುಭವ, ಅರಿವು; ದರ್ಶನ: ನೋಟ; ಭಾವ: ಭಕ್ತಿಯ ರಹಸ್ಯ, ಜ್ಞಾನ; ಹೊಗಳು: ಪ್ರಶಂಶಿಸು;

ಪದವಿಂಗಡಣೆ:
ದೇವ +ನಿಮ್ಮಡಿ+ಅಂಘ್ರಿ +ಕಮಲವನ್
ಆವ +ನೆನೆವನ್+ಅವಂಗೆ +ಜಪತಪ
ಸಾವು +ಹುಟ್ಟಿಲ್+ಎಂಬುದೈ+ ವರ+ವೇದ+ಶಾಸ್ತ್ರಗಳು
ನಾವಲೇ+ ಕೃತಕೃತ್ಯರಿಂದೀ
ದೇವ+ ಸಾಕ್ಷಾತ್ಕಾರ+ ದರ್ಶನ
ಭಾವವೋಯಿದು +ನಮಗೆನುತ+ ಹೊಗಳಿದನು+ ಸಹದೇವ

ಅಚ್ಚರಿ:
(೧) ಶ್ರೀಕೃಷ್ಣನ ಮಹಿಮೆಯನ್ನು ಹೇಳುವ ಪರಿ – ನಿಮ್ಮಡಿಯಂಘ್ರಿ ಕಮಲವನಾವ ನೆನೆವನವಂಗೆ ಜಪತಪ ಸಾವು ಹುಟ್ಟಿಲ್ಲೆಂಬುದೈ ವರವೇದಶಾಸ್ತ್ರಗಳು

ಪದ್ಯ ೬೬: ದುರ್ಯೋಧನನು ಎಂದು ಕೃತಕೃತ್ಯನಾಗುವೆನೆಂದ?

ನೀ ಕರುಣದಲಿ ನಮ್ಮ ಸಲಹುವ
ಡಾ ಕುಮಾರರ ಕರೆಸಿಕೊಟ್ಟರೆ
ಸಾಕು ಮತ್ತೊಂದಿಹುದಲೇ ಪಾಂಚಾಲನಂದನೆಯ
ನೂಕಿ ಮುಂದಲೆವಿಡಿದು ತೊತ್ತಿರೊ
ಳಾಕೆಯನು ಕುಳ್ಳಿರಿಸಿದಂದು ವಿ
ಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ (ಸಭಾ ಪರ್ವ, ೧೩ ಸಂಧಿ, ೬೬ ಪದ್ಯ)

ತಾತ್ಪರ್ಯ:
ದುರ್ಯೋಧನನು ತಂದೆಯ ನುಡಿಗಳನ್ನು ಕೇಳಿ, ಅಪ್ಪಾ ನೀನು ಕರುಣೆಯಿಂದ ಪಾಂಡವರನ್ನು ಕರೆಸಿದರೆ ಸಾಕು. ಆದರೆ ನನ್ನ ಇನ್ನೊಂದು ಅಭಿಲಾಷೆಯಿದೆ, ದ್ರೌಪದಿಯ ಮುಂದಲೆಯನ್ನು ಹಿಡಿದೆಳೆದು, ದಾಸಿಯರೊಡನೆ ಕೂಡಿಸಿದ ದಿನ ನಾನು ಶೋಕವನ್ನು ಕಳೆದುಕೊಂಡು ಕೃತಕೃತ್ಯನಾಗುತ್ತೇನೆ ಎಂದನು.

ಅರ್ಥ:
ಕರುಣ: ದಯೆ; ಸಲಹು: ರಕ್ಷಿಸು; ಕುಮಾರ: ಮಕ್ಕಳು; ಕರೆಸು: ಬರೆಮಾಡು; ಸಾಕು: ಕೊನೆ, ಪೂರೈಸು; ಮತ್ತೊಂದು: ಇನ್ನೊಂದು; ನಂದನೆ: ಮಗಳು; ನೂಕು: ತಳ್ಳು; ಮುಂದಲೆ: ಮುಂಗುರುಳು, ಕೂದಲು; ವಿಡಿದು: ಹಿಡಿದು; ತೊತ್ತು: ದಾಸಿ, ಸೇವಕಿ; ಕುಳ್ಳಿರಿಸು: ಕೂರಿಸು; ವಿಶೋಕ: ಶೋಕರಹಿತ; ದಿವಸ: ದಿನ; ಕೃತಕೃತ್ಯ: ಧನ್ಯ, ಕೃತಾರ್ಥ;

ಪದವಿಂಗಡಣೆ:
ನೀ+ ಕರುಣದಲಿ +ನಮ್ಮ +ಸಲಹುವಡ್
ಆ+ ಕುಮಾರರ+ ಕರೆಸಿಕೊಟ್ಟರೆ
ಸಾಕು +ಮತ್ತೊಂದ್+ಇಹುದಲೇ +ಪಾಂಚಾಲ+ನಂದನೆಯ
ನೂಕಿ +ಮುಂದಲೆವಿಡಿದು +ತೊತ್ತಿರೊಳ್
ಆಕೆಯನು +ಕುಳ್ಳಿರಿಸಿದ್+ಅಂದು +ವಿ
ಶೋಕನಹೆನ್+ಆ+ ದಿವಸದಲಿ +ಕೃತಕೃತ್ಯ +ತಾನೆಂದ

ಅಚ್ಚರಿ:
(೧) ದ್ರೌಪದಿಯನ್ನು ಅಪಮಾನ ಮಾಡುವ ಹುನ್ನಾರ – ಪಾಂಚಾಲನಂದನೆಯ ನೂಕಿ ಮುಂದಲೆವಿಡಿದು ತೊತ್ತಿರೊಳಾಕೆಯನು ಕುಳ್ಳಿರಿಸಿದಂದು ವಿಶೋಕನಹೆನಾ ದಿವಸದಲಿ ಕೃತಕೃತ್ಯ ತಾನೆಂದ

ಪದ್ಯ ೪೧: ಶಿಶುಪಾಲನು ಹೇಗೆ ಕೃತಾರ್ಥನಾಗಲು ಇಚ್ಛಿಸಿದನು?

ನುಡಿಗಳಲಿ ಸದ್ಧರ್ಮ ಸಂಗತಿ
ನಡವಳಿಯಲನ್ಯಾಯವೆಂದೇ
ಕೆಡಹಿದವು ಹಂಸೆಯನು ನಾನಾ ವಿಹಗ ಸಂದೋಹ
ನುಡಿವುದಲ್ಲದೆ ಮೇಣುನಯದಲಿ
ನಡೆದುದಿಲ್ಲೆಲೆ ಭೀಷ್ಮ ನಿನ್ನನು
ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ (ಸಭಾ ಪರ್ವ, ೧೧ ಸಂಧಿ, ೪೧ ಪದ್ಯ)

ತಾತ್ಪರ್ಯ:
ಮಾನಸ ತೀರದ ಪಕ್ಷಿಗಳು, ಈ ಹಂಸವು ಮಾತಿನಲ್ಲಿ ಧರ್ಮವನ್ನು ಹೇಳುತ್ತದೆ, ನಡವಳಿಕೆಯೆಲ್ಲಾ ಅನ್ಯಾಯ ಎಂದು ಅದನ್ನು ಹೊಡೆದು ಕೆಡವಿದವು. ಭೀಷ್ಮ ನೀನು ಸಹ ಧರ್ಮವನ್ನು ಹೇಳುತ್ತಿರುವೆ, ಆದರೆ ಧರ್ಮಕ್ಕನುಸಾರವಾಗಿ ನಡೆಯಲಿಲ್ಲ. ನಿನ್ನನ್ನು ಕಡಿದು ಭೂತಗಳಿಗೆ ಬಲಿಕೊಟ್ಟರೆ ನಾನು ಕೃತಾರ್ಥನಾಗುತ್ತೇನೆ ಎಂದು ಶಿಶುಪಾಲನು ನುಡಿದನು.

ಅರ್ಥ:
ನುಡಿ: ಮಾತು; ಧರ್ಮ:ಧಾರಣೆ ಮಾಡಿದುದು; ಸಂಗತಿ: ವಿಚಾರ; ನಡವಳಿ: ಆಚರಣೆ; ಅನ್ಯಾಯ: ಯೋಗ್ಯವಲ್ಲದ, ಸರಿಯಲ್ಲದ; ಕೆಡಹು: ತಳ್ಳು; ಹಂಸ: ಒಂದು ಜಾತಿಯ ಪಕ್ಷಿ; ವಿಹಗ: ಪಕ್ಷಿ; ಸಂದೋಹ: ಗುಂಪು, ಸಮೂಹ; ಮೇಣ್: ಅಥವ; ನಯ: ನುಣುಪು, ಮೃದುತ್ವ; ನಡೆ: ನಡಿಗೆ; ಕಡಿ: ಸೀಳು; ಭೂತ: ದೆವ್ವ, ಪಿಶಾಚಿ; ಬಡಿಸು: ಉಣಿಸು, ಹಾಕು; ಕೃತಕೃತ್ಯ: ಕೃತಾರ್ಥ;

ಪದವಿಂಗಡಣೆ:
ನುಡಿಗಳಲಿ +ಸದ್ಧರ್ಮ +ಸಂಗತಿ
ನಡವಳಿಯಲ್+ಅನ್ಯಾಯವೆಂದೇ
ಕೆಡಹಿದವು+ ಹಂಸೆಯನು +ನಾನಾ +ವಿಹಗ +ಸಂದೋಹ
ನುಡಿವುದಲ್ಲದೆ +ಮೇಣು+ನಯದಲಿ
ನಡೆದುದಿಲ್+ಎಲೆ +ಭೀಷ್ಮ+ ನಿನ್ನನು
ಕಡಿದು+ ಭೂತಕೆ +ಬಡಿಸಿದರೆ+ ಕೃತಕೃತ್ಯನಹೆನೆಂದ

ಅಚ್ಚರಿ:
(೧) ನುಡಿ, ನಡೆ – ೧,೨,೪,೫ ಸಾಲಿನ ಮೊದಲ ಪದಗಳಾಗಿ ಬಳಕೆ