ಪದ್ಯ ೩೬: ಚಂದ್ರವಂಶಕ್ಕೆ ಯಾರು ಮೊದಲಿಗರು?

ಆದಿಯಲಿ ಕೃತಯುಗ ಹರಿಶ್ಚಂ
ದ್ರಾದಿಗಳು ಸೂರ್ಯಾನ್ವಯಕೆ ಬುಧ
ನಾದಿ ನಿಮ್ಮನ್ವಯಕೆ ಬಳಿಕ ಪುರೂರವ ಕ್ಷಿತಿಪ
ಮೇದಿನಿಯನಾ ಯುಗದೊಳವರೋ
ಪಾದಿ ಸಲಹಿದರಿಲ್ಲ ಬೆಳಗಿತು
ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ (ಅರಣ್ಯ ಪರ್ವ, ೧೫ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕೃತಯುಗವು ಮೊದಲನೆಯ ಯುಗ. ಹರಿಶ್ಚಂದ್ರನೇ ಮೊದಲಾದವರು ಆಗ ಸೂರ್ಯವಂಶದ ರಾಜರು. ನಿಮ್ಮ ಚಂದ್ರ ವಂಶಕೆ ಬುಧನೇ ಮೊದಲು. ಆನಂತರ ಪುರೂರವ. ಆ ಯುಗದಲ್ಲಿ ಅವರ ಹಾಗೆ ರಾಜ್ಯಭಾರ ಮಾಡಿದವರಾರು ಇಲ್ಲ. ವೈದಿಕ ಧರ್ಮವು ಆಗ ಸೂರ್ಯ ಪ್ರಕಾಶಕ್ಕೆ ಸರಿಯಾಗಿ ಬೆಳಗಿತು.

ಅರ್ಥ:
ಆದಿ: ಮುಂಚೆ, ಮೊದಲು; ಕೃತಯುಗ: ಸತ್ಯಯುಗ; ಯುಗ: ವಿಶ್ವದ ದೀರ್ಘವಾದ ಕಾಲಖಂಡ; ಆದಿ: ಮೊದಲಾದ; ಅನ್ವಯ: ವಂಶ; ಬಳಿಕ: ನಂತರ; ಕ್ಷಿತಿಪ: ರಾಜ; ಮೇದಿನಿ: ಭೂಮಿ; ಉಪಾಧಿ: ಕಾರಣ; ಸಲಹು: ಪೋಷಿಸು; ಬೆಳಗು: ಪ್ರಜ್ವಲಿಸು; ವೇದ: ಶೃತಿ; ಬೋಧಿತ: ಹೇಳಿದ; ಧರ್ಮ: ಧಾರಣ ಮಾಡಿದುದು, ನಿಯಮ; ಸೂರ್ಯ: ರವಿ; ಪ್ರಭೆ: ಕಾಂತಿ, ಪ್ರಕಾಶ; ಸರಿ: ಸಮ;

ಪದವಿಂಗಡಣೆ:
ಆದಿಯಲಿ +ಕೃತಯುಗ +ಹರಿಶ್ಚಂ
ದ್ರಾದಿಗಳು +ಸೂರ್ಯ+ಅನ್ವಯಕೆ+ ಬುಧ
ನಾದಿ +ನಿಮ್ಮ್+ಅನ್ವಯಕೆ +ಬಳಿಕ+ ಪುರೂರವ +ಕ್ಷಿತಿಪ
ಮೇದಿನಿಯನ್+ಆ+ ಯುಗದೊಳ್+ಅವರೋ
ಪಾದಿ +ಸಲಹಿದರಿಲ್ಲ+ ಬೆಳಗಿತು
ವೇದ+ ಬೋಧಿತ+ ಧರ್ಮ +ಸೂರ್ಯಪ್ರಭೆಗೆ+ ಸರಿಯಾಗಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೆಳಗಿತು ವೇದ ಬೋಧಿತ ಧರ್ಮ ಸೂರ್ಯಪ್ರಭೆಗೆ ಸರಿಯಾಗಿ

ಪದ್ಯ ೩೪: ಯಾವುದು ಯುಗಧರ್ಮ?

ಕೃತಯುಗದವರು ತ್ರೇತೆಯವರಿಂ
ದತಿ ಪರಾಕ್ರಮ ಯುಕ್ತರವರದು
ಭುತ ಬಲರು ತ್ರೇತೆಯವರಾ ದ್ವಾಪರ ಸ್ಥಿತಿಗೆ
ವಿತತ ಸತ್ವರು ಕಲಿಯುಗದ ದು
ರ್ಮತಿ ಮನುಷ್ಯವ್ರಾತ ಹೀನಾ
ಕೃತಿ ಕಣಾ ಯುಗ ಧರ್ಮ ಕೃತ ಮೊದಲಾಗಿ ಕಲಿಯುಗಕೆ (ಅರಣ್ಯ ಪರ್ವ, ೧೧ ಸಂಧಿ, ೩೪ ಪದ್ಯ)

ತಾತ್ಪರ್ಯ:
ಹನುಮಂತ ಯುಗಧರ್ಮದ ಬಗ್ಗೆ ತಿಳಿಸುತ್ತಾ, ತ್ರೇತಾಯುಗದವರಿಗೆ ಹೋಲಿಸಿದರೆ ಕೃತಯುಗದವರು ಅದ್ಭುತ ಪರಾಕ್ರಮಶಾಲಿಗಳು, ಬಲಶಾಲಿಗಳು ಆಗಿರುತ್ತಾರೆ. ದ್ವಾಪರ ಯುಗದವರಿಗಿಂತ ತ್ರೇತಾಯುಗದವರು ಮಹಾಪರಾಕ್ರಮಶಾಲಿಗಳು. ಕಲಿಯುಗದ ಮನುಷ್ಯರು ದ್ವಾಪರಯುಗದವರಿಗೆ ಹೋಲಿಸಿದಾಗ ಹೀನ ಸತ್ವರು, ಇದು ಯುಗಧರ್ಮ ಎಂದು ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಅತಿ: ಬಹಳ; ಪರಾಕ್ರಮ: ಶೌರ್ಯ; ಯುಕ್ತ: ಅನುಸರಣೆ, ತರ್ಕವಾದ; ಅದುಭುತ: ಆಶ್ಚರ್ಯ; ಬಲರು: ಬಲಶಾಲಿಗಳು; ಸ್ಥಿತಿ: ಇರವು, ಅಸ್ತಿತ್ವ; ವಿತತ: ವಿಸ್ತಾರವಾದ; ಸತ್ವ: ಸಾರ; ದುರ್ಮತಿ: ಕೆಟ್ಟ ಬುದ್ಧಿ; ವ್ರಾತ: ಗುಂಪು; ಮನುಷ್ಯ: ನರ; ಹೀನಾಕೃತಿ:ಕೀಳಾದ ಕೆಲಸ, ಕೆಟ್ಟ ಕೆಲಸ;

ಪದವಿಂಗಡಣೆ:
ಕೃತಯುಗದವರು+ ತ್ರೇತೆಯವರಿಂದ್
ಅತಿ +ಪರಾಕ್ರಮ+ ಯುಕ್ತರ್+ಅವರ್+ಅದು
ಭುತ+ ಬಲರು+ ತ್ರೇತೆಯವರಾ+ ದ್ವಾಪರ +ಸ್ಥಿತಿಗೆ
ವಿತತ+ ಸತ್ವರು +ಕಲಿಯುಗದ +ದು
ರ್ಮತಿ +ಮನುಷ್ಯ+ವ್ರಾತ+ ಹೀನಾ
ಕೃತಿ +ಕಣಾ +ಯುಗ +ಧರ್ಮ +ಕೃತ+ ಮೊದಲಾಗಿ +ಕಲಿಯುಗಕೆ

ಅಚ್ಚರಿ:
(೧) ಕಲಿಯುಗದ ಗುಣಧರ್ಮ – ಕಲಿಯುಗದ ದುರ್ಮತಿ ಮನುಷ್ಯವ್ರಾತ ಹೀನಾಕೃತಿ ಕಣಾ

ಪದ್ಯ ೩೩: ಹನುಮನು ಯುಗದ ಗುಣಧರ್ಮದ ಬಗ್ಗೆ ಏನು ಹೇಳಿದನು?

ಈ ಯುಗದ ಗುಣಧರ್ಮವಾ ತ್ತೇ
ತಾಯುಗದವರಿಗಿಅದದಾ ತ್ರೇ
ತಾಯುಗವು ಸರಿಯಲ್ಲ ಕೃತಯುಗದೇಕ ದೇಶದಲಿ
ಆ ಯುಗದಲಾ ಮನುಜರಾ ಸ
ತ್ವಾಯುವಾ ಸಾಮರ್ಥ್ಯವಾತರು
ವಾಯ ಯುಗದಲಿ ಸಲ್ಲದೆಂದನು ನಗುತ ಹನುಮಂತ (ಅರಣ್ಯ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಹನುಮಂತನು ಭೀಮನ ಕೋರಿಕೆಯನ್ನು ಕೇಳಿ, ಈ ದ್ವಾಪರ ಯುಗದ ಗುಣಧರ್ಮಗಳು ತ್ರೇತಾಯುಗದ ಗುಣಧರ್ಮಗಳಿಗೆ ಸಮನಲ್ಲ. ಕೃತಯುಗದ ಒಂದು ಪಾದದ ಗುಣ ಧರ್ಮಗಳು ತ್ರೇತಾಯುಗದವರಲ್ಲಿ ಕಡಿಮೆ, ಆಯಾ ಯುಗದ ಮನುಷ್ಯರ ಸತ್ವ, ಆಯಸ್ಸು, ಸಾಮರ್ಥ್ಯಗಳು ಮುಂದಿನ ಯುಗದವರಲ್ಲಿರುವುದಿಲ್ಲ ಎಂದು ಯುಗಗಳ ಗುಣಧರ್ಮದ ಬಗ್ಗೆ ತಿಳಿಸಿದನು.

ಅರ್ಥ:
ಯುಗ: ಕಾಲವನ್ನು ಅಳೆಯುವ ಪ್ರಮಾಣ; ಗುಣ: ನಡತೆ, ಸ್ವಭಾವ; ಧರ್ಮ: ಧಾರಣೆ ಮಾಡಿದುದು; ಐದೆ: ವಿಶೇಷವಾಗಿ; ದೇಶ: ರಾಷ್ಟ್ರ; ಮನುಜ: ಮನುಷ್ಯ; ಸತ್ವ: ಶಕ್ತಿ, ಬಲ; ಸಾಮರ್ಥ್ಯ: ದಕ್ಷತೆ, ಯೋಗ್ಯತೆ; ತರುವಾಯ: ರೀತಿ, ಕ್ರಮ; ಸಲ್ಲು: ನೆರವೇರು; ನಗುತ: ಸಂತಸ;

ಪದವಿಂಗಡಣೆ:
ಈ +ಯುಗದ +ಗುಣಧರ್ಮವಾ+ ತ್ರೇ
ತಾ+ಯುಗದವರಿಗ್+ಐದದ್+ಆ+ ತ್ರೇ
ತಾ+ಯುಗವು+ ಸರಿಯಲ್ಲ+ ಕೃತ+ಯುಗದೇಕ+ ದೇಶದಲಿ
ಆ +ಯುಗದಲಾ +ಮನುಜರಾ +ಸತ್ವ
ಆಯುವ್+ಆ+ ಸಾಮರ್ಥ್ಯವ್+ಆ+ತರು
ವಾಯ +ಯುಗದಲಿ+ ಸಲ್ಲದೆಂದನು +ನಗುತ +ಹನುಮಂತ

ಅಚ್ಚರಿ:
(೧) ಯುಗ – ೧-೪ ಸಾಲಿನ ೨ ಪದವಾಗಿ ಬಳಕೆ
(೨) ೧-೨ ಸಾಲಿನ ಕೊನೆ ಪದ ತ್ರೇ ಆಗಿರುವುದು

ಪದ್ಯ ೨೬: ಶಿವನು ಯಾರನ್ನು ಪಶುಗಳೆಂದು ಕರೆದನು?

ಕರ್ಮಕಿಂಕರರಾಗಿ ಕೃತದು
ಷ್ಕರ್ಮವಾಸನೆವಿಡಿದು ತಾನೇ
ಕರ್ಮಕರ್ತನು ಭೋಗಿ ತಾನೇ ದುಃಖಿಸುಖಿಯೆಂದು
ನಿರ್ಮಳಾತ್ಮನೊಳೀಯಹಂಕೃತಿ
ಧರ್ಮವನೆ ನೇವರಿಸಿ ಮರುಗುವ
ದುರ್ಮತಿಗಳನು ಪಶುಗಳೆಂದರೆ ಖೇದವೇಕೆಂದ (ಕರ್ಣ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ದೇವತೆಗಳು ದುಃಖತಪ್ತರಾಗಿರುವುದನ್ನು ಕಂಡು ಶಿವನು ಪಶುಗಳಾರು ಎಂದು ಉತ್ತರಿಸಿದನು. ಕರ್ಮಕ್ಕೆ ಸೇವಕರಾಗಿ ಮಾಡಿದ ಪಾಪಕರ್ಮಗಳ ವಾಸನೆಯಿಂದ ನಾನೇ ಕರ್ಮವನ್ನು ಮಾಡಿದವನು, ನಾನೇ ಫಲವನ್ನನುಭವಿಸುವವನು, ನಾನೇ ಸುಖಿ, ನಾನೇ ದುಃಖಿ ಎಂದು ತಿಳಿದು, ನಿರ್ಮಲನಾದ ಆತ್ಮನಲ್ಲಿ ಅಹಂಕಾರವನಾರೋಪಿಸಿ ದುಃಖಿಸುವವರನ್ನು ಪಶುಗಳೆಂದರೆ ನೀವೇಕೆ ದುಃಖ ಪಡುವಿರಿ ಎಂದು ದೇವತೆಗಳಿಗೆ ಶಿವನು ಪ್ರಶ್ನಿಸಿದನು.

ಅರ್ಥ:
ಕರ್ಮ: ಕೆಲಸ; ಕಿಂಕರ: ಆಳು, ಸೇವಕ; ಕೃತ: ಮಾಡಿದ, ಮುಗಿಸಿದ; ದುಷ್ಕರ್ಮ: ಕೆಟ್ಟ ಕೆಲಸ; ವಾಸನೆ: ಹಿಂದಿನ ಸ್ಮರಣೆಯಿಂದ ಉಂಟಾಗುವ ತಿಳಿವಳಿಕೆ; ಹಿಡಿ: ಬಂಧನ, ಸೆರೆ; ಕರ್ತ: ಮಾದುವವ; ಭೋಗಿ: ಅನುಭವಿಸುವವ; ದುಃಖ: ಖೇದ, ಅಳಲು; ಸುಖಿ: ಆನಂದಿಸು; ನಿರ್ಮಳ: ಶುದ್ಧ; ಆತ್ಮ: ಪರಬ್ರಹ್ಮ; ಅಹಂಕೃತಿ: ಅಹಂಕಾರ, ಗರ್ವ; ಧರ್ಮ: ಧಾರಣ ಮಾಡಿದುದು; ನೇವರಿಸು: ಮೃದುವಾಗಿ – ಸವರು; ಮರುಗು: ತಳಮಳ, ಸಂಕಟ; ದುರ್ಮತಿ: ಕೆಟ್ಟಬುದ್ಧಿ; ಪಶು: ಮೃಗ; ಖೇದ: ದುಃಖ;

ಪದವಿಂಗಡಣೆ:
ಕರ್ಮಕಿಂಕರರಾಗಿ+ ಕೃತ+ದು
ಷ್ಕರ್ಮ+ವಾಸನೆವಿಡಿದು +ತಾನೇ
ಕರ್ಮಕರ್ತನು+ ಭೋಗಿ +ತಾನೇ +ದುಃಖಿ+ಸುಖಿಯೆಂದು
ನಿರ್ಮಳ+ಆತ್ಮನೊಳ್+ಈ+ಅಹಂಕೃತಿ
ಧರ್ಮವನೆ+ ನೇವರಿಸಿ+ ಮರುಗುವ
ದುರ್ಮತಿಗಳನು+ ಪಶುಗಳೆಂದರೆ+ ಖೇದವೇಕೆಂದ

ಅಚ್ಚರಿ:
(೧) ಕೃತ, ಕರ್ಮ, ದುಷ್ಕರ್ಮ, ಕರ್ತ, ಧರ್ಮ, ದುರ್ಮತಿ, ಭೋಕ್ತ – ಪದಗಳ ಬಳಕೆ
(೨) ಪಶುಯಾರೆಂದು/ಲಕ್ಷಣವನ್ನು ತಿಳಿಸುವ ಪದ್ಯ

ಪದ್ಯ ೧೨: ಪಾಂಡವರ ವೈಭವ ಹೇಗಿತ್ತು?

ವಿತತ ವಿಭವದಲಿಂದ್ರನಮರಾ
ವತಿಯ ಹೊಗುವಂದದಲಿ ದ್ರುಪದಾ
ಚ್ಯುತರು ಸಹಿತವನೀಶ ಹೊಕ್ಕನು ರಾಜಮಂದಿರವ
ಕೃತಯುಗದಲಾ ತ್ರೇತೆಯಲಿ ಭೂ
ಪತಿಗಳಾದರನಂತ ಕುಂತೀ
ಸುತರ ಸಿರಿಗೆಣೆಯಾದುದಿಲ್ಲವನೀಶ ಕೇಳೆಂದ (ಆದಿ ಪರ್ವ, ೧೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಶ್ರೇಷ್ಠವಾದ ಮಹಾವೈಭವದಿಂದ ಇಂದ್ರನು ಅಮರಾವತಿಯನ್ನು ಪ್ರವೇಶಿಸುವಂತೆ, ಧರ್ಮಜನು ದ್ರುಪದ, ಕೃಷ್ಣರೊಡನೆ ಇಂದ್ರಪ್ರಸ್ಥದ ಅರಮನೆಯನ್ನು ಹೊಕ್ಕನು. ಕೃತ, ತ್ರೇತಾಯುಗಗಳಲ್ಲಿ ಲೆಕ್ಕವಿಲ್ಲದಷ್ಟು ರಾಜರಿದ್ದರು, ಆದರೆ ಅವರಾರ ವೈಭವವು ಪಾಂಡವರ ವೈಭವಕ್ಕೆ ಸರಿಸಾಟಿಯಲ್ಲ.

ಅರ್ಥ:
ವಿತತ:ವಿಸ್ತಾರವಾದ, ಶ್ರೇಷ್ಠವಾದ; ವಿಭವ: ವೈಭವ, ಸಿರಿ, ತೋರಿಕೆ; ಇಂದ್ರ: ದೇವೆಂದ್ರ; ಹೊಗು: ಪ್ರವೇಶಿಸು; ಅಚ್ಯುತ: ಕೃಷ್ಣ; ಸಹಿತ: ಜೊತೆ; ಅವನೀಶ: ರಾಜ; ಹೊಕ್ಕನು: ಸೇರಿದನು; ರಾಜ: ನೃಪ; ರಾಜಮಂದಿರ: ಅರಮನೆ; ಯುಗ: ದೀರ್ಘವಾದ ಕಾಲದಂಡ; ಭೂಪತಿ: ರಾಜ; ಆದರ:ಗೌರವ; ಸುತ: ಮಗ; ಸಿರಿ: ಸಂಪತ್ತು, ಐಶ್ವರ್ಯ; ಎಣೆ:ಸಮ, ಸಾಟಿ;

ಪದವಿಂಗಡಣೆ:
ವಿತತ +ವಿಭವದಲ್+ಇಂದ್ರನ್+ಅಮರಾ
ವತಿಯ+ ಹೊಗುವಂದದಲಿ+ ದ್ರುಪದ
ಅಚ್ಯುತರು +ಸಹಿತ್+ಅವನೀಶ+ ಹೊಕ್ಕನು +ರಾಜಮಂದಿರವ
ಕೃತಯುಗದಲಾ+ ತ್ರೇತೆಯಲಿ+ ಭೂ
ಪತಿಗಳ್+ಆದರನಂತ+ ಕುಂತೀ
ಸುತರ +ಸಿರಿಗ್+ಎಣೆ+ಯಾದುದ್+ಇಲ್ಲ+ಅವನೀಶ+ ಕೇಳೆಂದ

ಅಚ್ಚರಿ:
(೧) ಅವನೀಶ – ೨ ಬಾರಿ ಪ್ರಯೋಗ, ಒಂದು ಧರ್ಮರಾಜನನ್ನು ಮತ್ತೊಂದು ಜನಮೇಜಯನನ್ನು ಕರೆಯಲು
(೨) ವಿಭವ, ಸಿರಿ – ಸಮಾನ ಅರ್ಥಕೊಡುವ ಪದ