ಪದ್ಯ ೨೩: ವನದ ಮೇಲೆ ದಾಳಿಯ ಪರಿಣಾಮ ಹೇಗಿತ್ತು?

ದಾಳಿಯಿಟ್ಟರು ಸುರವನಕೆ ಸುರ
ಜಾಲ ಸರಿಯಿತು ಬೊಬ್ಬೆಯಲಿದೆ
ಖ್ಖಾಳಿಸಿದುದುತ್ಪಾತಶತ ಖಾಂಡವದ ಮಧ್ಯದಲಿ
ಕೂಳಿಗಳ ಕುಡಿ ಮೀನವೋಲ್ವಿಹ
ಗಾಳಿ ಹುದುಗಿತು ನಡುಗಿದರು ವನ
ಪಾಲಕರು ನಿಂದೊಣಗಿದವು ಹರಿಚಂದನಾದಿಗಳು (ಆದಿ ಪರ್ವ, ೨೦ ಸಂಧಿ, ೨೩ ಪದ್ಯ)

ತಾತ್ಪರ್ಯ:
ಕೃಷ್ಣಾರ್ಜುನರು ಖಾಂಡವ ವನಕ್ಕೆ ದಾಳಿಯನ್ನಿಟ್ಟರು, ಅಲ್ಲಿದ್ದ ಸುರರು ಹಿಂದಕ್ಕೆ ಸರಿದರು. ಎಲ್ಲೆಲ್ಲೂ ಆರ್ತಧ್ವನಿಯಾಗಿ ಖಾಂಡವವನದ ನಡುವೆ ನೂರಾರು ಅಶುಭಕರ ಶಕುನಗಳು ಕಂಡು ಬಂದವು. ಮೀನು ಹಿಡಿಯುವ ಬುಟ್ಟಿಯಲ್ಲಿ ಸಿಕ್ಕುಬಿದ್ದು ಒದ್ದಾಡುವ ರೀತಿಯಲ್ಲಿ ಹಕ್ಕಿಗಳು ಸಂಕಟದಿಂದ ನಾಶವಾದವು. ವನಪಾಲಕರು ನಡುಗಿದರು, ಹಸಿರಾಗಿದ್ದ ಚಂದನದ ಮರಗಳು ಬಾಡಿದವು.

ಅರ್ಥ:
ದಾಳಿ: ಮುತ್ತಿಗೆ, ಆಕ್ರಮಣ; ಸುರ: ದೇವತೆ; ವನ: ಕಾಡು; ಜಾಲ:ಸಮೂಹ; ಸರಿಯಿತು: ದಾರಿಮಾಡು, ಹಿಂದಕ್ಕೆ ಹೋಗು; ಬೊಬ್ಬೆ:ಜೋರಾಗಿ ಕೂಗು; ದೆಖ್ಖಾಳಿ:ಗೊಂದಲ; ಉತ್ಪಾತ:ಅಪಶಕುನ;ಮಧ್ಯ: ನಡು; ಕೂಳಿ: ಗುಣಿ; ಕುಡಿ:ವಂಶ;ಮೀನು: ಮತ್ಸ್ಯ; ವಿಹಗ: ಪಕ್ಷಿ; ಹುದುಗು:ಮರೆಯಾಗು; ನಡುಗು: ಹೆದರು; ಪಾಲಕ: ರಕ್ಷಕ; ಒಣಗು: ಬಾಡು; ಚಂದನ: ಶ್ರೀಗಂಧ;

ಪದವಿಂಗಡಣೆ:
ದಾಳಿಯಿಟ್ಟರು+ ಸುರ+ವನಕೆ+ ಸುರ
ಜಾಲ +ಸರಿಯಿತು +ಬೊಬ್ಬೆಯಲಿ+ದೆ
ಖ್ಖಾಳಿಸಿದುದ್+ಉತ್ಪಾತ+ಶತ+ ಖಾಂಡವದ+ ಮಧ್ಯದಲಿ
ಕೂಳಿಗಳ+ ಕುಡಿ +ಮೀನವೋಲ್+ವಿಹ
ಗಾಳಿ+ ಹುದುಗಿತು +ನಡುಗಿದರು +ವನ
ಪಾಲಕರು +ನಿಂದ್+ಒಣಗಿದವು +ಹರಿಚಂದನಾದಿಗಳು

ಅಚ್ಚರಿ:
(೧) ದಾಳಿ, ದೆಖ್ಖಾಳಿ, ಕೂಳಿ, ವಿಹಗಾಳಿ – “ಳಿ” ಇಂದ ಕೊನೆಗೊಳ್ಳುವ ಪದ
(೨) ಬೊಬ್ಬೆ, ನಡುಗು – ನೋವಿನ ಸಂದರ್ಭದದ ಭಾವನೆ