ಪದ್ಯ ೪೨: ಚತುರಂಗ ಬಲವು ಹೇಗೆ ನಾಶವಾಯಿತು?

ಕೂಡೆ ಕಟ್ಟಿತು ಕಿಚ್ಚು ತೆರಪಿನ
ಲೋಡುವಡೆ ಗುರುಸುತನ ಶರ ಮಿ
ಕ್ಕೋಡುವಡೆ ಬಾಗಿಲುಗಳಲಿ ಕೃತವರ್ಮ ಕೃಪರೆಸುಗೆ
ಕೂಡೆ ಮುಮ್ಮುಳಿಯೋದುದೀ ಶರ
ಝಾಡಿಯಲಿ ಚತುರಂಗಬಲವ
ಕ್ಕಾಡಿತೇನೆಂಬೆನು ಯುಧಿಷ್ಠಿರನೃಪನ ಪರಿವಾರ (ಗದಾ ಪರ್ವ, ೯ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸುತ್ತಲೂ ಆಯುಧದ ಕಿಚ್ಚು, ಬಿಟ್ಟೋಡಿದರೆ ಅಶ್ವತ್ಥಾಮನ ಬಾಣಗಳು. ತಪ್ಪಿಸಿಕೊಂಡು ಹೋದರೆ ಬಾಗಿಲುಗಳಲ್ಲಿ ಕೃತವರ್ಮ, ಕೃಪರ ಬಾಣ ಪ್ರಯೋಗ. ಬಾಣಗಳ ಹೊಡೆತಕ್ಕೆ ಚತುರಂಗ ಬಲವು ನಾಶವಾಗಿ ಹೋಯಿತು.

ಅರ್ಥ:
ಕೂಡೆ: ಕೂಡಲೆ; ಕಟ್ಟು: ಬಂಧಿಸು; ಕಿಚ್ಚು: ಬೆಂಕಿ; ತೆರಪು: ಮಯ, ಸಂದರ್ಭ; ಓಡು: ಧಾವಿಸು; ಸುತ: ಮಗ; ಗುರು: ಆಚಾರ್ಯ; ಶರ: ಬಾಣ; ಬಾಗಿಲು: ಕದ; ಮುಮ್ಮುಳಿ: ರೂಪಗೆಟ್ಟು ನಾಶವಾಗು; ಝಾಡಿ: ಕಾಂತಿ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ನೃಪ: ರಾಜ; ಪರಿವಾರ: ಬಂಧುಜನ;

ಪದವಿಂಗಡಣೆ:
ಕೂಡೆ +ಕಟ್ಟಿತು +ಕಿಚ್ಚು +ತೆರಪಿನಲ್
ಓಡುವಡೆ +ಗುರುಸುತನ +ಶರ +ಮಿ
ಕ್ಕೋಡುವಡೆ +ಬಾಗಿಲುಗಳಲಿ +ಕೃತವರ್ಮ +ಕೃಪರೆಸುಗೆ
ಕೂಡೆ +ಮುಮ್ಮುಳಿಯೋದುದ್+ಈ+ ಶರ
ಝಾಡಿಯಲಿ+ ಚತುರಂಗ+ಬಲವ
ಕ್ಕಾಡಿತೇನೆಂಬೆನು +ಯುಧಿಷ್ಠಿರ+ನೃಪನ +ಪರಿವಾರ

ಅಚ್ಚರಿ:
(೧) ಕ ಕಾರದ ತ್ರಿವಳಿ ಪದ – ಕೂಡೆ ಕಟ್ಟಿತು ಕಿಚ್ಚು
(೨) ಓಡು, ಮಿಕ್ಕೋಡು – ಪದಗಳ ಬಳಕೆ

ಪದ್ಯ ೯: ವಿಪ್ರರ ಸಭೆಯಿಂದ ಯಾರು ಎದ್ದರು?

ನೋಡಿದನು ತಮ್ಮನನು ಸನ್ನೆಯ
ಮಾಡಿದಡೆ ಕೈಕೊಂಡನವ ನಿಪ
ಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
ಕೂಡೆ ಕುಳ್ಳಿರ್ದಖಿಳ ವಿಪ್ರರ
ನೋಡಿ ಮೆಲ್ಲನೆ ಧೋತ್ರ ದರ್ಭೆಯ
ಗೂಡ ಸಂವರಿಸುತ್ತ ಸಭೆಯಿಂದೆದ್ದನಾ ಪಾರ್ಥ (ಆದಿ ಪರ್ವ, ೧೫ ಸಂಧಿ, ೯ ಪದ್ಯ)

ತಾತ್ಪರ್ಯ:
ಬ್ರಾಹ್ಮಣರ ಮಾತುಗಳನ್ನು ಕೇಳಿ, ಅವರ ಮಧ್ಯದಲ್ಲಿದ್ದ ಧರ್ಮರಾಯ ಅರ್ಜುನನ ಕಡೆ ನೋಡಿ, ಕಣ್ಣಿನಲ್ಲೇ ಸನ್ನೆಯನ್ನು ಮಾಡಿದನು. ಅರ್ಜುನನು ಆ ಸನ್ನೆಗೆ ಸ್ಪಂದಿಸಿ, ತಾಯಿ ಕುಂತಿ, ಅಣ್ಣಂದಿರಾದ ಧರ್ಮರಾಯ, ಭೀಮರಿಗೆ ಮನಸ್ಸಿನಲ್ಲೇ ನಮಸ್ಕರಿಸಿ, ಕೂಡಲೆ, ತನ್ನ ಸುತ್ತವಿದ್ದ ವಿಪ್ರರ ಗುಂಪನ್ನು ನೋದಿ,ತಾನು ಉಟ್ಟಿದ್ದ ಧೋತ್ರ, ದರ್ಭೆಗಳನ್ನು ಜೋಡಿಸಿಕೊಳುತ್ತಾ ಸಭೆಯ ನಡುವೆ ಎದ್ದು ನಿಂತನು.

ಅರ್ಥ:
ನೋಡು: ವೀಕ್ಷಿಸು; ತಮ್ಮ: ಅನುಜ; ಸನ್ನೆ: ಸಂಕೇತ; ಕೈ: ಕರ, ಹಸ್ತ; ನಿಪ: ಕೆಳಕ್ಕೆ; ಎರಗು: ಬೀಳು; ಮನ: ಮನಸ್ಸು; ಕೂಡೆ: ಜೊತೆ; ಅಖಿಳ: ಎಲ್ಲಾ; ವಿಪ್ರ: ಬ್ರಾಹ್ಮಣ; ಮೆಲ್ಲನೆ: ಮೆದು, ಹಗುರ; ಧೋತ್ರ: ಪಂಚೆ;ದರ್ಭೆ: ಹುಲ್ಲು; ಸಂವರಿಸು: ಸಂಗ್ರಹಿಸು; ಸಭೆ: ದರ್ಬಾರು;

ಪದವಿಂಗಡಣೆ:
ನೋಡಿದನು +ತಮ್ಮನನು +ಸನ್ನೆಯ
ಮಾಡಿದಡೆ+ ಕೈಕೊಂಡನವ+ ನಿಪ
ಗೂಡಿ +ಕುಂತಿಗೆ +ಭೀಮಸೇನಂಗ್+ಎರಗಿ +ಮನದೊಳಗೆ
ಕೂಡೆ +ಕುಳ್ಳಿರ್ದ್+ಅಖಿಳ +ವಿಪ್ರರ
ನೋಡಿ +ಮೆಲ್ಲನೆ +ಧೋತ್ರ +ದರ್ಭೆಯ
ಗೂಡ+ ಸಂವರಿಸುತ್ತ+ ಸಭೆಯಿಂದ್+ಎದ್ದನಾ +ಪಾರ್ಥ

ಅಚ್ಚರಿ:
(೧) ನೋಡಿ, ಮಾಡಿ, ಗೂಡಿ, ಗೂಡ, ಕೂಡೆ – “ಡ್” ಕಾರ ದಿಂದ ಕೊನೆಗೊಳ್ಳುವ ಕ್ರಿಯಾ ಪದಗಳು
(೨) ಹಿರಿಯರಿಗೆ ತೋರುವ ಗೌರವ ಮತ್ತು ಆಶೀರ್ವಾದ – ನಿಪಗೂಡಿ ಕುಂತಿಗೆ ಭೀಮಸೇನಂಗೆರಗಿ ಮನದೊಳಗೆ
(೩) ಕೈಕೊಂಡು, ಧೋತ್ರ ದರ್ಭೆ, ಸಂವರಿಸುತ್ತ ಸಭೆಯಿಂದೆದ್ದನು – ಜೋಡಿ ಪದಗಳು