ಪದ್ಯ ೬೪: ದ್ರೋಣನು ಸೇನೆಯ ಮೇಲೆ ಹೇಗೆ ಎಗರಿದನು?

ಬಿಲುದುಡುಕಿ ಬಲುಸರಳ ತಿರುವಾಯ್
ಗೊಳಿಸಿ ಮಲೆತನು ಮಾರ್ಬಲಕೆ ಬಲೆ
ಕಳಚಿದರೆ ಮೃಗ ಬಿದ್ದುದಿರುಬಿನ ಕುಳಿಯೊಳೆಂಬಮ್ತೆ
ತಿಳುಹಿ ಹೋದರು ಮುನಿಗಳೀತನ
ತಿಳಿವು ತೊಟ್ಟುದು ಮರವೆಯನು ಮುಂ
ಕೊಳಿಸಿ ಮೊಗೆದನು ಮತ್ತೆ ಪಾಂಡವಸೈನ್ಯಸಾಗರವ (ದ್ರೋಣ ಪರ್ವ, ೧೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ದ್ರೋಣನು ಬಿಲ್ಲನ್ನು ಹಿಡಿದು ಹೆದೆಗೆ ಬಾನವನ್ನೇರಿಸಿ ಶತ್ರುಸೇನೆಗೆ ಇದಿರಾದನು. ಬಲೆ ಹರಿದ ಮೃಗ ಹೊರಬಂದು ಇಕ್ಕಟ್ಟಾದ ಗುಂಡಿಯಲ್ಲಿ ಬಿದ್ದಂತೆ ಯುದ್ಧತಾಮಸದಿಂದ ಮತಿಗೆಟ್ಟನು. ಮುನಿಗಳು ಬಂದು ಬೋಧಿಸಿ ಹೋದರೂ, ಜ್ಞಾನವನ್ನು ಮರೆವು ಆವರಿಸಲು ಪಾಂಡವ ಸೈನ್ಯ ಸಾಗರವನ್ನು ಸಂಹರಿಸಲು ಆರಂಭಿಸಿದನು.

ಅರ್ಥ:
ದುಡುಕು: ಆಲೋಚನೆ ಮಾಡದೆ ಮುನ್ನುಗ್ಗುವುದು; ಬಲು: ಹೆಚ್ಚು; ಸರಳ: ಬಾಣ; ಮಲೆತ: ಗರ್ವಿಸಿದ, ಸೊಕ್ಕಿದ; ಪ್ರತಿಭಟಿಸಿದ; ಮಾರ್ಬಲ: ಶತ್ರು ಸೈನ್ಯ; ಬಲೆ: ಜಾಲ; ಕಳಚು: ಬೇರ್ಪಡಿಸು; ಮೃಗ: ಪ್ರಾಣಿ; ಬಿದ್ದು: ಬೀಳು; ಇರುಬು: ಇಕ್ಕಟ್ಟು ; ಕುಳಿ: ಗುಂಡಿ, ಗುಣಿ, ಹಳ್ಳ; ಮುನಿ: ಋಷಿ; ತಿಳಿವು: ಅರಿವು; ತೊಟ್ಟು: ಮೊದಲಾಗಿ; ಮರವೆ: ಮರವು, ಜ್ಞಾಪಕವಿಲ್ಲದಿರುವುದು; ಮೊಗೆ: ಮಣ್ಣಿನ ಗಡಿಗೆ; ಸಾಗರ: ಸಮುದ್ರ;

ಪದವಿಂಗಡಣೆ:
ಬಿಲುದುಡುಕಿ +ಬಲುಸರಳ +ತಿರುವಾಯ್
ಗೊಳಿಸಿ +ಮಲೆತನು +ಮಾರ್ಬಲಕೆ +ಬಲೆ
ಕಳಚಿದರೆ+ ಮೃಗ +ಬಿದ್ದುದ್+ಇರುಬಿನ+ ಕುಳಿಯೊಳೆಂಬಂತೆ
ತಿಳುಹಿ +ಹೋದರು +ಮುನಿಗಳ್+ಈತನ
ತಿಳಿವು +ತೊಟ್ಟುದು +ಮರವೆಯನು+ ಮುಂ
ಕೊಳಿಸಿ +ಮೊಗೆದನು +ಮತ್ತೆ +ಪಾಂಡವ+ಸೈನ್ಯ+ಸಾಗರವ

ಅಚ್ಚರಿ:
(೧) ಮ ಕಾರದ ಸಾಲು ಪದಗಳು – ಮರವೆಯನು ಮುಂಕೊಳಿಸಿ ಮೊಗೆದನು ಮತ್ತೆ

ಪದ್ಯ ೧೯: ಕೃಷ್ಣನನ್ನು ಹೇಗೆ ವರ್ಣಿಸಿದ್ದಾರೆ?

ತಿಳಿಯಲೊಬ್ಬನ ರೋಮರೋಮದ
ಕುಳಿಯೊಳಗೆ ಬ್ರಹ್ಮಾಂಡಕೋಟಿಯ
ಸುಳಿವು ಗಡ ಶ್ರುತಿನಿಕರವೊರಲಿದರೊಳಗುದೋರ ಗಡ
ಹಲವು ಮಾತೇನಾತನೀತನ
ಬಳಿಯ ಬಂಡಿಯ ಬೋವನಾಗಿಯೆ
ಸುಳಿವನಾತನ ನೋಡು ಮಗನೇ ವೀರನರಯಣನ (ಭೀಷ್ಮ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಗನೇ ಅರ್ಜುನನ ಸಾರಥಿಯಾದ ಕೃಷ್ಣನನ್ನು ನೋಡು, ವಿಚಾರಿಸಿದರೆ ಈತನ ರೋಮದ ಕುಳಿಗಳಲ್ಲಿ ಅಸಂಖ್ಯಾತ ಬ್ರಹ್ಮಾಂಡಗಳಿವೆ, ವೇದಗಳ ಒರಲಿಕೆಯನ್ನು ಕೇಳಿಯೂ ಅವನು ತನ್ನ ಅಂತರಂಗವನ್ನು ತೋರುವುದಿಲ್ಲ. ಹೆಚ್ಚು ಮಾತೇಕೆ? ಅವನು ಪಾರ್ಥನ ಬಳಿ ಸಾರಥಿಯಾಗಿ ಸುಳಿಯುತ್ತಿದ್ದಾನೆ, ಮಗೂ ಆ ವೀರನಾರಯಣನನ್ನು ನೋಡು ಎಂದು ಭೀಷ್ಮರು ಹೇಳಿದರು.

ಅರ್ಥ:
ತಿಳಿ: ಅರಿ; ರೊಮ: ಕೂದಲು; ಕುಳಿ:ಗುಂಡಿ, ಹಳ್ಳ; ಬ್ರಹ್ಮಾಂಡ: ವಿಶ್ವ, ಜಗತ್ತು; ಕೋಟಿ: ಅಗಣಿತ; ಸುಳಿವು: ಗುರುತು; ಗಡ: ಅಲ್ಲವೆ; ಶ್ರುತಿ: ವೇದ; ನಿಕರ: ಗುಂಪು; ಒರಲು: ಕೂಗು; ಒಳಗು: ಅಂತರಂಗ; ತೋರು: ಗೋಚರಿಸು; ಹಲವು: ಬಹಳ; ಮಾತು: ವಾಣಿ; ಬಳಿ: ಹತ್ತಿರ; ಬಂಡಿ: ರಥ; ಬೋವ: ಸಾರಥಿ; ನೋಡು: ವೀಕ್ಷಿಸು; ಮಗ: ಸುತ;

ಪದವಿಂಗಡಣೆ:
ತಿಳಿಯಲ್+ಒಬ್ಬನ +ರೋಮ+ರೋಮದ
ಕುಳಿಯೊಳಗೆ +ಬ್ರಹ್ಮಾಂಡ+ಕೋಟಿಯ
ಸುಳಿವು+ ಗಡ+ ಶ್ರುತಿ+ನಿಕರವ್+ಒರಲಿದರ್+ಒಳಗು +ತೋರ+ ಗಡ
ಹಲವು+ ಮಾತೇನ್+ಆತನ್+ಈತನ
ಬಳಿಯ+ ಬಂಡಿಯ +ಬೋವನಾಗಿಯೆ
ಸುಳಿವನಾತನ+ ನೋಡು +ಮಗನೇ+ ವೀರ+ನರಯಣನ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಳಿಯ ಬಂಡಿಯ ಬೋವನಾಗಿಯೆ
(೨) ಒಂದೇ ಪದವಾಗಿ ರಚನೆ – ಶ್ರುತಿನಿಕರವೊರಲಿದರೊಳಗುದೋರ

ಪದ್ಯ ೧೫: ಧೃತರಾಷ್ಟ್ರನ ಪುತ್ರ ಪ್ರೇಮ ಎಂತಹುದು?

ಕಲಕಿತರಸನ ಕರಣ ಕಂಗಳ
ಕುಳಿಗಳಲಿ ನೀರೊರೆತವಕಟಕ
ಟೆಲೆಗೆ ಕರೆಯಾ ಪಾಪಿ ಮಗನನು ಕುರುಕುಲಾಂತಕನ
ಸೆಳೆದು ತಂದರು ಕರ್ಣ ಶಕುನಿಗ
ಳಳಲಿಗನ ತೆಗೆದಪ್ಪಿದನು ಕುರು
ತಿಲಕ ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ (ಸಭಾ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ದುರ್ಯೋಧನನು ತನ್ನ ತಂದೆಗೆ ಕರುಣೆ ಬರಲು ಹೊರಹೋಗುವ ನಾಟಕ ಫಲಿಸಿತು, ಧೃತರಾಷ್ಟ್ರನು ಮಗನ ಮಾತುಗಳನ್ನು ಕೇಳಿ, ಅವನ ಮನಸ್ಸು ಕಲಕಿತು, ಕಣ್ಣಿನ ಕುಣಿಗಳಲ್ಲಿ ನೀರು ತುಂಬಿತು, ಅವನು ಗಾಂಧಾರಿಗೆ, ಕರಿಯಾ ಆ ಪಾಪಿ ಮಗನನ್ನು ಕುರುಕುಲಕ್ಕೆ ಯಮನಂತಿರುವವನನ್ನೂ ಎಂದು ಹೇಳಲು, ಕರ್ಣ ಶಕುನಿಗಳು ದುರ್ಯೋಧನನನ್ನು ಕರೆದುಕೊಂಡು ಬಂದರು, ಧೃತರಾಷ್ಟ್ರನು ಅವನನ್ನು ಅಪ್ಪಿಕೊಂಡು ದುಃಖಿಸುತ್ತಾ ಕುರುಕುಲತಿಲಕ ನಿನ್ನನ್ನು ಬಿಟ್ಟು ಈ ದೇಹವನ್ನು ಹೇಗೆ ಹಿಡಿಯಲಿ ಎಂದು ದುಃಖಿಸಿದನು.

ಅರ್ಥ:
ಕಲಕು: ಬೆರಸು; ಅರಸ: ರಾಜ; ಕರಣ: ಕಿವಿ, ಮನಸ್ಸು; ಕಂಗಳು: ನಯನ; ಕುಳಿ:ತಗ್ಗು, ಕುಸಿ; ನೀರು: ಜಲ; ಒರೆ: ಬಳಿ; ಅಕಟಕಟ: ಅಯ್ಯೋ; ಕರೆ: ಬರೆಮಾಡು; ಪಾಪಿ: ದುಷ್ಟ; ಮಗ: ಸುತ; ಕುಲ: ವಂಶ; ಅಂತಕ: ನಾಶಮಾಡುವವ; ಸೆಳೆ: ಎಳೆತ; ಅಳಲು: ಕಣ್ಣೀರಿಡಲು, ದುಃಖಿತನಾಗಿ; ಅಪ್ಪು: ಆಲಿಂಗನ; ತಿಲಕ: ಶ್ರೇಷ್ಠ; ಉಳಿದು: ಬಿಡು, ತೊರೆ; ಒಡಲು: ದೇಹ; ಹೊರೆ: ಪೋಷಿಸು, ಸಲಹು; ಅಂಧ: ಕುರುಡ; ನೃಪ: ರಾಜ;

ಪದವಿಂಗಡಣೆ:
ಕಲಕಿತ್+ಅರಸನ +ಕರಣ +ಕಂಗಳ
ಕುಳಿಗಳಲಿ +ನೀರ್+ಒರೆತವ್+ಅಕಟಕಟ
ಎಲೆಗೆ+ ಕರೆಯಾ +ಪಾಪಿ +ಮಗನನು +ಕುರುಕುಲಾಂತಕನ
ಸೆಳೆದು +ತಂದರು +ಕರ್ಣ +ಶಕುನಿಗಳ್
ಅಳಲಿಗನ+ ತೆಗೆದ್+ಅಪ್ಪಿದನು +ಕುರು
ತಿಲಕ+ ನಿನ್ನುಳಿದ್+ಒಡಲ +ಹೊರೆವೆನೆ+ಎಂದನ್+ಅಂಧನೃಪ

ಅಚ್ಚರಿ:
(೧) ಮಗನನ್ನು ಕರೆದ ಬಗೆ – ಪಾಪಿ ಮಗನನು ಕುರುಕುಲಾಂತಕನ, ಕುರುತಿಲಕ
(೨) ಪುತ್ರಪ್ರೇಮ – ನಿನ್ನುಳಿದೊಡಲ ಹೊರೆವೆನೆಯೆಂದನಂಧನೃಪ