ಪದ್ಯ ೩೫: ಧೃತರಾಷ್ಟ್ರನು ಏನು ಹೇಳಿದನು?

ಆದರವರಂತಿರಲಿ ನಿನಗಿ
ನ್ನೀ ದುರಾಗ್ರಹ ಬೇಡ ನಿನಗಳಿ
ವಾದೋಡೀ ಕುರುವಂಶವಳಿವುದು ಪಟ್ಟವಾವನಲಿ
ಬೀದಿಗಲಹದೊಳೊಮ್ಮೆ ಪೈಸರ
ವಾದಡದು ಪರಿಹರಿಸಿದವರೇ
ಸೋದರರಲಾ ಹೆಚ್ಚುಕುಂದೇನೆಂದನಂಧನೃಪ (ಅರಣ್ಯ ಪರ್ವ, ೨೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನು ಮಗನೊಂದಿಗೆ ಮಾತನಾಡುತ್ತಾ, ನೀನು ಹೇಳಿದವರು ಹಾಗೆಯೇ ಇರಲಿ, ಪ್ರಾಯೋಪವೇಶದ ದುರಾಗ್ರಹವನ್ನು ಬಿಟ್ಟು ಬಿಡು. ನೀನು ಹೋದರೆ ಕುರುವಂಶವೇ ಹೋದಂತೆ, ಪಟ್ಟ ಯಾರಿಗೆ? ಬೀದಿ ಜಗಳದಲ್ಲಿ ಒಮ್ಮೆ ಸೋಲಾದರೆ ಅದೇನೂ ಕುಂದಲ್ಲ. ಗೆದ್ದರೂ ಹೆಚ್ಚಲ್ಲ. ಇಷ್ಟಕ್ಕೂ ನಿನ್ನನ್ನು ಉಳಿಸಿದವರು ನಿನ್ನ ಸೋದರರಲ್ಲವೇ ಎಂದು ಧೃತರಾಷ್ಟ್ರನು ಹೇಳಿದನು.

ಅರ್ಥ:
ದುರಾಗ್ರಹ: ಹಟಮಾರಿತನ; ಬೇಡ: ಸಲ್ಲದು, ಕೂಡದು; ಅಳಿವು: ಸಾವು; ಪಟ್ಟ: ಸ್ಥಾನ; ಬೀದಿಗಲಹ: ಬೀದಿ ಜಗಳ; ಪೈಸರ: ಮಲ್ಲಯುದ್ಧದ ಒಂದು ಪಟ್ಟು; ಪರಿಹರ: ನಿವಾರಣೆ; ಸೋದರ: ಅಣ್ಣ ತಮ್ಮ; ಹೆಚ್ಚು: ಅಧಿಕ; ಕುಂದು: ತೊಂದರೆ; ಅಂಧ: ಕಣ್ಣಿಲ್ಲದವ; ನೃಪ: ರಾಜ;

ಪದವಿಂಗಡಣೆ:
ಆದರ್+ಅವರಂತಿರಲಿ+ ನಿನಗಿ
ನ್ನೀ +ದುರಾಗ್ರಹ +ಬೇಡ +ನಿನಗ್+ಅಳಿ
ವಾದೋಡ್+ಈ+ ಕುರುವಂಶವ್+ಅಳಿವುದು +ಪಟ್ಟವ್+ಆವನಲಿ
ಬೀದಿಗಲಹದೊಳ್+ಒಮ್ಮೆ +ಪೈಸರ
ವಾದಡ್+ಅದು +ಪರಿಹರಿಸಿದವರೇ
ಸೋದರರಲಾ+ ಹೆಚ್ಚು+ಕುಂದೇನ್+ಎಂದನ್+ಅಂಧನೃಪ

ಅಚ್ಚರಿ:
(೧) ದುರ್ಯೋಧನನ ಮೇಲಿನ ಪ್ರೀತಿ – ನಿನಗಳಿವಾದೋಡೀ ಕುರುವಂಶವಳಿವುದು ಪಟ್ಟವಾವನಲಿ

ಪದ್ಯ ೨೯: ದುರ್ಯೋಧನನನ್ನು ಭೂಮಿಯ ಜನರು ಹೇಗೆ ನೋಡುತ್ತಾರೆ?

ಮಾಡಿದೆನು ಸಂಕಲ್ಪವಿದರೊಳು
ಗೂಡ ಕಳಚುವೆನೊಮ್ಮೆ ನೀವೇ
ನೋಡಿ ಸಂತಸಪಡುವುದಾದುಶ್ಯಾಸನಾದಿಗಳ
ಕೇಡಿಗನು ಕುರುವಂಶಕೆಂದಿಳೆ
ಯಾಡುವುದು ತನ್ನೊಬ್ಬನನು ನಾ
ಮೂಡಿದನು ನೆರೆ ಮುಳುಗಿದೊಡೆ ಕುಲಕೆಲ್ಲ ಲೇಸೆಂದ (ಅರಣ್ಯ ಪರ್ವ, ೨೨ ಸಂಧಿ, ೨೯ ಪದ್ಯ)

ತಾತ್ಪರ್ಯ:
ತಾಯೆ, ನಾನು ಸಂಕಲ್ಪ ಮಾಡಿದ್ದೇನೆ, ಅದರಂತೆ ಈ ದೇಹದ ಗೂಡನ್ನು ಒಗೆದು ಬಿಡುತ್ತೇನೆ, ದುಶ್ಯಾಸನನೇ ಮೊದಲಾದವರು ಇರುತ್ತಾರೆ. ಅವರನ್ನು ನೋಡಿ ಸಂತೋಷಪಡಿ, ಕುರುವಂಶಕ್ಕೆ ಇವನೊಬ್ಬ ಕೇಡಿಗ ಎಂದು ಭೂಮಿಯಲ್ಲಿ ಜನರು ನನ್ನ ಬಗ್ಗೆ ಮಾತಾಡುತ್ತಾರೆ, ನಾನು ಹುಟ್ಟಿದೆ ಸತಾರೆ ನಮ್ಮ ಕುಲಕ್ಕೇ ಒಳ್ಳೆಯದು.

ಅರ್ಥ:
ಸಂಕಲ್ಪ: ನಿರ್ಧಾರ, ನಿರ್ಣಯ; ಗೂಡು: ನೆಲೆ, ದೇಹ; ಕಳಚು: ತೊರೆ; ನೋಡು: ವೀಕ್ಷಿಸು; ಸಂತಸ: ಸಂತೋಷ; ಕೇಡು: ಆಪತ್ತು, ಕೆಡಕು; ವಂಶ: ಕುಲ; ಇಳೆ: ಭೂಮಿ; ಮೂಡು: ಹುಟ್ಟು; ನೆರೆ: ಆಧಾರ, ಕಟ್ಟು, ಗುಂಪು; ಮುಳುಗು: ಮರೆಯಾಗು; ಲೇಸು: ಒಳಿತು;

ಪದವಿಂಗಡಣೆ:
ಮಾಡಿದೆನು +ಸಂಕಲ್ಪವ್+ಇದರೊಳು
ಗೂಡ +ಕಳಚುವೆನ್+ಒಮ್ಮೆ+ ನೀವೇ
ನೋಡಿ +ಸಂತಸಪಡುವುದ್+ಆ+ದುಶ್ಯಾಸನಾದಿಗಳ
ಕೇಡಿಗನು +ಕುರುವಂಶಕೆಂದ್+ಇಳೆ
ಯಾಡುವುದು +ತನ್ನೊಬ್ಬನನು +ನಾ
ಮೂಡಿದನು+ ನೆರೆ+ ಮುಳುಗಿದೊಡೆ +ಕುಲಕೆಲ್ಲ+ ಲೇಸೆಂದ

ಅಚ್ಚರಿ:
(೧) ಭೂಮಿಯು ದುರ್ಯೊಧನನನ್ನು ಹೇಗೆ ನೋಡುತ್ತದೆ – ಕೇಡಿಗನು ಕುರುವಂಶಕೆಂದಿಳೆ
ಯಾಡುವುದು
(೨) ವಂಶ, ಕುಲ – ಸಮನಾರ್ಥಕ ಪದ