ಪದ್ಯ ೬೭: ಭೀಮನು ದ್ರೌಪದಿಗೆ ಹೇಗೆ ಅಭಯವನ್ನು ನೀಡಿದನು?

ಕುರುಳ ನೇವರಿಸಿದನು ಗಲ್ಲವ
ನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ
ಅರಸಿ ಬಿಡುಬಿಡು ಖಾತಿಯನು ವಿ
ಸ್ತರಿಸಲೇಕಿನ್ನಣ್ಣನಾಜ್ಞೆಯ
ಗೆರೆಯದಾಂಟಿದೆ ದಾಂಟಿದೆನು ಹೋಗೆಂದನಾ ಭೀಮ (ವಿರಾಟ ಪರ್ವ, ೩ ಸಂಧಿ, ೬೭ ಪದ್ಯ)

ತಾತ್ಪರ್ಯ:
ದ್ರೌಪದಿಯನ್ನು ಆಲಂಗಿಸಿ, ಭೀಮನು ಆಕೆಯ ಮುಂಗುರುಳನ್ನು ಮೃದುವಾಗಿ ಸವರಿದನು, ಗಲ್ಲವನ್ನೊರೆಸಿ, ತಲೆಯ ಮೇಲೆ ಕೈಯಾಡಿಸಿ ಸಮಾಧಾನ ಪಡಿಸಿದನು, ಮಂಚದ ಬಳಿಯಿದ್ದ ಪಾತ್ರೆಯಿಂದ ನೀರನ್ನು ತೆಗೆದು ಅವಳು ಮುಖಕಮಲವನ್ನು ತೊಳೆದು, ರಾಣಿ, ಇನ್ನ ಸಿಟ್ಟನ್ನು ಬಿಡು, ಹೆಚ್ಚಿಗೆ ಹೇಳಲಾರೆ, ನಮ್ಮಣ್ಣನ ಆಜ್ಞೆಯ ಗೆರೆಯನ್ನು ನಾನು ದಾಟಿದೆ ದಾಟಿದೆ, ನೀನಿನ್ನು ತೆರಳು ಎಂದು ಅಭಯವನ್ನು ನೀಡಿದನು.

ಅರ್ಥ:
ಕುರುಳು: ಗುಂಗುರು ಕೂದಲು; ನೇವರಿಸು: ಮೃದುವಾಗಿ ಸವರು; ಗಲ್ಲ: ಕೆನ್ನೆ; ಒರಸು: ಸಾರಿಸು; ಮುಂಡಾಡು: ಮುದ್ದಾಡು, ಪ್ರೀತಿಸು; ಮಂಚ: ಪಲ್ಲಂಗ; ಹೊರೆ: ಹತ್ತಿರ, ಸಮೀಪ; ಗಿಂಡಿ: ಕಿರಿದಾದ ಬಾಯುಳ್ಳ ಪಾತ್ರೆ; ನೀರು: ಜಲ; ತೊಳೆ: ಶುದ್ಧಗೊಳಿಸು; ಮುಖಾಂಬುಜ: ಮುಖಕಮಲ; ಮುಖ: ಆನನ; ಅಂಬುಜ: ಕಮಲ; ಅರಸಿ: ರಾಣಿ; ಬಿಡು: ತೊರೆ; ಖಾತಿ: ಕೋಪ; ವಿಸ್ತರಿಸು: ಹರಡು; ಅಣ್ಣ: ಹಿರಿಯ ಸಹೋದರ; ಆಜ್ಞೆ: ಅಪ್ಪಣೆ; ಗೆರೆ: ರೇಖೆ; ದಾಟು: ಮೀರು; ಹೋಗು: ತೆರಳು;

ಪದವಿಂಗಡಣೆ:
ಕುರುಳ +ನೇವರಿಸಿದನು +ಗಲ್ಲವನ್
ಒರಸಿ+ ಮುಂಡಾಡಿದನು+ ಮಂಚದ
ಹೊರೆಯ +ಗಿಂಡಿಯ +ನೀರಿನಲಿ+ ತೊಳೆದನು+ ಮುಖಾಂಬುಜವ
ಅರಸಿ+ ಬಿಡು+ಬಿಡು+ ಖಾತಿಯನು+ ವಿ
ಸ್ತರಿಸಲೇಕ್+ಇನ್ನ+ಅಣ್ಣನ+ಆಜ್ಞೆಯ
ಗೆರೆಯ+ದಾಂಟಿದೆ+ ದಾಂಟಿದೆನು+ ಹೋಗೆಂದನಾ +ಭೀಮ

ಅಚ್ಚರಿ:
(೧) ಭೀಮನ ಪ್ರೀತಿಯ ಅಭಿವ್ಯಕ್ತಿ – ಕುರುಳ ನೇವರಿಸಿದನು ಗಲ್ಲವನೊರಸಿ ಮುಂಡಾಡಿದನು ಮಂಚದ
ಹೊರೆಯ ಗಿಂಡಿಯ ನೀರಿನಲಿ ತೊಳೆದನು ಮುಖಾಂಬುಜವ

ಪದ್ಯ ೬: ಭೀಮನು ದ್ರೌಪದಿಗೆ ಏನು ಹೇಳಿದನು?

ಹಿರಿದು ಸೊಗಸಾಯ್ತೆನಗಪೂರ್ವದ
ಪರಿಮಳದ ಕೇಳಿಯಲಿ ನೀನಾ
ಸರಸಿಜವ ತಂದಿತ್ತು ತನ್ನ ಮನೋಗತ ವ್ಯಥೆಯ
ಪರಿಹರಿಪುದೆನಲಬುಜವದನೆಯ
ಕುರುಳನಗುರಲಿ ತಿದ್ದಿದನು ತ
ತ್ಸರಸಿಜವ ತಹೆನೆನುತ ಕೊಂಡನು ನಿಜ ಗದಾಯುಧವ (ಅರಣ್ಯ ಪರ್ವ, ೧೧ ಸಂಧಿ, ೬ ಪದ್ಯ)

ತಾತ್ಪರ್ಯ:
ದ್ರೌಪದಿಯು ಭೀಮನ ಬಳಿ ಬಂದು, ಈ ಪುಷ್ಪದ ಅಪೂರ್ವ ಪರಿಮಳವು ನನಗೆ ಬಹಳ ಇಷ್ಟವಾಗಿದೆ. ಅದನ್ನು ತಂದು ಕೊಟ್ಟು ನನ್ನ ಮನಸ್ಸಿನ ಇಚ್ಛೆಯನ್ನು ಪೂರೈಸಲೆಂದು ಕೇಳಲು, ಭೀಮನು ಪ್ರೀತಿಯಿಂದ ತನ್ನು ಉಗುರಿನಿಂದ ಆಕೆಯ ಮುಂಗುರುಳನ್ನು ಸರಿಪಡಿಸಿ, ಆ ಪದ್ಮವನ್ನು ತರುವೆನೆಂದು ಹೇಳಿ ತನ್ನ ಗದೆಯನ್ನು ತೆಗೆದುಕೊಂಡು ಹೊರಟನು.

ಅರ್ಥ:
ಹಿರಿದು: ದೊಡ್ಡದು, ಶ್ರೇಷ್ಠ; ಸೊಗಸು: ಚೆಲುವು; ಪೂರ್ವ: ಮೂಡಣ; ಪರಿಮಳ: ಸುಗಂಧ; ಕೇಳಿ:ವಿನೋದ; ಸರಸಿಜ: ಕಮಲ; ತಂದು: ಪಡೆದು; ಮನೋಗತ: ಮನಸ್ಸಿನಲ್ಲಿರುವ, ಅಭಿಪ್ರಾಯ; ವ್ಯಥೆ: ಯಾತನೆ; ಪರಿಹರಿಸು: ನಿವಾರಿಸು; ಅಬುಜ: ಕಮಲ; ವದನ: ಮುಖ; ಕುರುಳ: ಮುಂಗುರುಳು; ಉಗುರು: ನಖ; ತಿದ್ದು: ಸರಿಪಡಿಸು; ಸರಸಿಜ: ಕಮಲ; ತಹೆ: ತರುವೆ; ಕೊಂಡು: ತೆಗೆದುಕೊ; ಗಧೆ: ಮುದ್ಗರ;

ಪದವಿಂಗಡಣೆ:
ಹಿರಿದು +ಸೊಗಸಾಯ್ತ್+ಎನಗ್+ಪೂರ್ವದ
ಪರಿಮಳದ+ ಕೇಳಿಯಲಿ +ನೀನ್ +ಆ
ಸರಸಿಜವ +ತಂದಿತ್ತು +ತನ್ನ +ಮನೋಗತ+ ವ್ಯಥೆಯ
ಪರಿಹರಿಪುದ್+ಎನಲ್+ಅಬುಜವದನೆಯ
ಕುರುಳನ್+ಉಗುರಲಿ +ತಿದ್ದಿದನು +ತತ್
ಸರಸಿಜವ +ತಹೆನೆನುತ +ಕೊಂಡನು +ನಿಜ +ಗದಾಯುಧವ

ಅಚ್ಚರಿ:
(೧) ಭೀಮನ ಪ್ರೀತಿಯನ್ನು ತೋರುವ ಪರಿ – ಅಬುಜವದನೆಯ ಕುರುಳನಗುರಲಿ ತಿದ್ದಿದನು
(೨) ಸರಸಿಜ, ಅಬುಜ – ಸಮನಾರ್ಥಕ ಪದ

ಪದ್ಯ ೩೫:ಉತ್ತರೆಯ ಸೌಂದರ್ಯ ವಿಟಜನರ ಮೇಲೆ ಯಾವ ಪ್ರಭಾವ ಬೀರಿತು?

ಅರಳುಗಂಗಳ ಬೆಳಗು ಹೊಯ್ದು
ಬ್ಬರಿಸೆ ಚಿತ್ತದ ತಿಮಿರ ಹೆಚ್ಚಿತು
ಕುರುಳ ಕಾಳಿಕೆಯಿಂದ ಮುಖ ಬಿಳುಪೇರಿ ವಿಟಜನದ
ಸರಸತರ ಲಾವಣ್ಯರಸದಿಂ
ದುರಿಮಸಗೆ ಜನಹೃದಯದಲಿ ಮೈ
ಪರಿಮಳದ ಪಸರದಲಿ ಪದ್ಮಿನಿ ಬಂದಳೊಲವಿನಲಿ (ವಿರಾಟ ಪರ್ವ, ೬ ಸಂಧಿ, ೩೫ ಪದ್ಯ)

ತಾತ್ಪರ್ಯ:
ಉತ್ತರೆಯ ಆಗಮನವನ್ನು ನೋಡಿದ ವಿಟಜನರು ಅವಳ ಸೌಂದರ್ಯಕ್ಕೆ ಮಾರುಹೋದರು. ತಾವರೆಯ ಅಗಲವಾದ ದಳಗಳನ್ನು ಹೋಲವು ಆಕೆಯ ನಯನಗಳಿಂದ ಹೊರಹೊಮ್ಮಿದ ಕಾಂತಿಯು ನೋಟಕರ ಮನಸ್ಸಿನಲ್ಲಿ ಅಂಧಕಾರವನ್ನು ಕವಿಯಿತು. ಮುಂಗುರುಳುಗಳ ಕಪ್ಪನ್ನು ನೋಡಿದ ವಿಟರ ಮುಖ ಬಿಳುಪೇರಿತು. ಅವಳ ಸರಸಲಾವಣ್ಯದಿಂದ ಹೃದಯದಲ್ಲಿ ಉರಿಹತ್ತಿತು. ಅವಳ ಮೈಯ ಪರಿಮಳವು ಸುತ್ತೆತ್ತಲೂ ಹಬ್ಬಲು ಪದ್ಮಿನಿಯು ಸಂತಸದಿಂದ ಬಂದಳು.

ಅರ್ಥ:
ಅರಳು: ದೊಡ್ಡದಾದ; ಕಂಗಳು: ಕಣ್ಣು, ನಯನ; ಹೊಯ್ದು: ಹೊಡೆದು; ಉಬ್ಬರಿಸು:ಅತಿಶಯ , ಹೆಚ್ಚಳ; ಚಿತ್ತ: ಮನಸ್ಸು; ತಿಮಿರ: ಅಂಧಕಾರ; ಹೆಚ್ಚು: ಜಾಸ್ತಿ; ಕುರುಳ:ಗುಂಗುರು ಕೂದಲು; ಕಾಳಿಕೆ: ಕಪ್ಪು; ಮುಖ: ಆನನ; ಬಿಳುಪು: ಶ್ವೇತ; ವಿಟ: ನಾಲ್ಕು ವರ್ಗದ ಪುರುಷರಲ್ಲಿ ಶ್ರೇಷ್ಠನಾದವ; ಸರಸ:ವಿನೋದ, ಚೆಲುವು; ಲಾವಣ್ಯ:ಚೆಲುವು; ರಸ: ಸಾರ; ಉರಿ: ಸಂಕಟ; ಮಸಗು:ಹರಡು; ಹೃದಯ: ವಕ್ಷಸ್ಥಳ; ಮೈ: ತನು; ಪರಿಮಳ: ಸುಗಂಧ; ಪಸರ: ಹರಡು; ಪದ್ಮಿನಿ: ಸ್ತ್ರೀಯರ ನಾಲ್ಕು ವರ್ಗದಲ್ಲಿ ಶ್ರೇಷ್ಠರಾದವರು; ಬಂದಳು: ಆಗಮಿಸು; ಒಲವು: ಪ್ರೀತಿ, ಮೋಹ;

ಪದವಿಂಗಡಣೆ:
ಅರಳು+ಕಂಗಳ +ಬೆಳಗು +ಹೊಯ್ದ್
ಉಬ್ಬರಿಸೆ +ಚಿತ್ತದ +ತಿಮಿರ +ಹೆಚ್ಚಿತು
ಕುರುಳ +ಕಾಳಿಕೆಯಿಂದ +ಮುಖ +ಬಿಳುಪೇರಿ +ವಿಟ+ಜನದ
ಸರಸತರ+ ಲಾವಣ್ಯ+ರಸದಿಂದ್
ಉರಿಮಸಗೆ+ ಜನಹೃದಯದಲಿ +ಮೈ
ಪರಿಮಳದ +ಪಸರದಲಿ +ಪದ್ಮಿನಿ +ಬಂದಳ್+ಒಲವಿನಲಿ

ಅಚ್ಚರಿ:
(೧) ಉತ್ತರೆಯ ಸೌಂದರ್ಯ ಬೇರೆಯವರ ಮೇಲೆ ಯಾವ ಪರಿಣಾಮ ಬೀರಿತು ಎಂದು ತೋರಿಸುತ್ತಾ ಆಕೆಯ ಸೌಂದರ್ಯವನ್ನು ಓದುಗರಿಗೆ ಊಹಿಸಲು ಬಿಟ್ಟಿರುವುದು
(೨) ಕಣ್ಣ ನೋಟ, ಮುಂಗುರುಳು, ಲಾವಣ್ಯನಡಿಗೆ, ಪರಿಮಳ – ಈ ನಾಲ್ಕು ಬಗೆಯಲ್ಲಿ ಸೌಂದರ್ಯದ ವರ್ಣನೆ