ಪದ್ಯ ೬೪: ಸೂರ್ಯನ ರಥದ ವಿಸ್ತಾರವೆಷ್ಟು?

ಉರಗನಾಳದ ಹೊರಜೆ ನವ ಸಾ
ಸಿರದ ಕುರಿಗುಣಿಯೀಸುಗಳು ತಾ
ವೆರಡುಮಡಿತೊಂಬತ್ತುವೊಂದು ಸಹಸ್ರದರ್ಧವದು
ಪರಿಯನೊಗನದರನಿತು ಸಂಖ್ಯೆಗೆ
ಸರಿಯೆನಿಪ ಮೇಲಚ್ಚು ಮಂಗಳ
ತರವೆನಿಪ ನವರತ್ನ ರಚನೆಯ ಚಿತ್ರರಥವೆಂದ (ಅರಣ್ಯ ಪರ್ವ, ೮ ಸಂಧಿ, ೬೪ ಪದ್ಯ)

ತಾತ್ಪರ್ಯ:
ಈ ರಥವನ್ನು ಆದಿಶೇಷನೆಂಬ ಹಗ್ಗದಿಂದ ಬಿಗಿದಿದೆ. ಕುರಿಗುಣಿಗಳು ಒಂಬತ್ತು ಸಾವಿರ ಈಚುಗಳಿವೆ. ತೊಂಬತ್ತೊಂದು ಸಾವಿರದ ಅರ್ಧ ಯೋಜನ ಉದ್ದದ ನೊಗ, ಅಷ್ಟೇ ಉದ್ದದ ಅಚ್ಚು ಮಂಗಳಕರವಾದ ನವರತ್ನ ಖಚಿತವಾದ ರಥವದು.

ಅರ್ಥ:
ಉರಗ: ಹಾವು; ನಾಳ: ಒಳಗೆ ಟೊಳ್ಳಾಗಿರುವ ದಂಟು; ಹೊರಜೆ: ದಪ್ಪವಾದ ಹಗ್ಗ; ನವ: ಒಂಬತ್ತು; ಸಾವಿರ: ಸಹಸ್ರ; ಕುರಿಗುಣಿ: ಚಿಕ್ಕದಾದ ಹಗ್ಗ, ದಾರ; ಮಡಿ: ಸಲ, ಬಾರಿ, ಪಟ್ಟು; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಪರಿ: ರೀತಿ; ನೊಗ: ಬಂಡಿಯನ್ನು ಎಳೆಯಲು ಕುದುರೆಗಳ ಕತ್ತಿನ ಮೇಲೆ ಇಡುವ ಉದ್ದವಾದ ಮರದ ದಿಂಡು; ಅದರನಿತು: ಅಷ್ಟೇ ಸಮನಾದ; ಸಂಖ್ಯೆ: ಎಣಿಕೆ; ಸರಿ: ಸಮನಾದ; ಅಚ್ಚು: ನಡುಗೂಟ, ಕೀಲು; ಮಂಗಳ: ಶುಭ; ನವರತ್ನ: ವಜ್ರ, ವೈಡೂರ್ಯ, ಗೋಮೇದಕ, ಪುಷ್ಯರಾಗ, ನೀಲ, ಮರಕತ, ಮಾಣಿಕ್ಯ, ಹವಳ ಮತ್ತು ಮುತ್ತು ಎಂಬ ಒಂಬತ್ತು ಮಣಿಗಳು; ರಚನೆ: ನಿರ್ಮಿಸು; ಚಿತ್ರ: ಚಮತ್ಕಾರ ಪ್ರಧಾನವಾದ; ರಥ: ಬಂಡಿ; ಈಸು: ಗಾಡಿಯ ಮೂಕಿ, ಗಾಡಿ ಹೊಡೆಯುವವನು ಕೂಡುವ ಗಾಡಿಯ ಮುಂಭಾಗದ ಮರ;

ಪದವಿಂಗಡಣೆ:
ಉರಗನಾಳದ+ ಹೊರಜೆ +ನವ +ಸಾ
ಸಿರದ +ಕುರಿಗುಣಿ+ಈಸುಗಳು +ತಾವ್
ಎರಡು+ಮಡಿ+ತೊಂಬತ್ತುವೊಂದು+ ಸಹಸ್ರದ್+ಅರ್ಧವದು
ಪರಿಯ+ ನೊಗನ್+ಅದರನಿತು +ಸಂಖ್ಯೆಗೆ
ಸರಿಯೆನಿಪ +ಮೇಲಚ್ಚು +ಮಂಗಳ
ತರವೆನಿಪ +ನವರತ್ನ+ ರಚನೆಯ +ಚಿತ್ರರಥವೆಂದ

ಅಚ್ಚರಿ:
(೧) ನವಸಾವಿರ, ೪೫.೫ ಸಾವಿರ – ಸಂಖ್ಯೆಗಳ ಬಳಕೆ